ಬೆಂಗಳೂರು.ಅ.30;ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ರಾಜ್ಯ ಸರ್ಕಾರ ಬೆಂಗಳೂರು ನಗರಾದ್ಯಂತ ಹೆಚ್ಚುವರಿ ಪೊಲೀಸರು ಮತ್ತು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಗೋಪಾಲಯ್ಯ ಮತ್ತು ಸ್ಥಳಿಯ ಕಾರ್ಪೋರೇಟರ್‌ಗಳ ಜೊತೆಯಲ್ಲಿ ನಿಂತು ಕಾರ್ಯಕ್ರಮ ನೆರವೇರಿಸುತ್ತಿದ್ದೇನೆ. ಎಲ್ಲವೂ ಸುಗಮವಾಗಿ ನಡೆಯಲಿ ಎಂಬ ದೃಷ್ಟಿಯಿಂದ ಸರ್ಕಾರ ವಿಶೇಷ ಗಮನ ನೀಡಿದೆ. ಬೆಂಗಳೂರು ನಗರದಲ್ಲಿ 20 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದು ಅಲ್ಲದೇ 1500 ಪೊಲೀಸರನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕರೆಯಿಸಲಾಗಿದೆ.2 ಕೇಂದ್ರಿಯ ಮೀಸಲು ಪೊಲೀಸ್ ಪಡೆ, 50 ತುಕಡಿ ಕೆಎಸ್‌ಆರ್‌ಪಿ ಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.
ಎಂಥಹುದೇ ಅಹಿತರಕರ ಘಟನೆ ನಿಭಾಯಿಸಲು ಪೊಲೀಸರು ಮತ್ತು ಅಧಿಕಾರಿಗಳು ಸಿದ್ದರಾಗಿದ್ದಾರೆ. ಎಷ್ಟೇ ಪೊಲೀಸರನ್ನು ನಿಯೋಜಿಸಿದರು ಕೂಡ ಸಾರ್ವಜನಿಕರು ಎಲ್ಲೆ ಮೀರದಂತೆ ಗೌರವದಿಂದ ನಡೆದುಕೊಳ್ಳಬೇಕಿದೆ. ದೃಶ್ಯ ಮಾಧ್ಯಮಗಳ ಮೂಲಕ ಮನೆಯಲ್ಲಿಯೇ ಕುಳಿತು ನೋಡಬಹುದು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ ಉಪಸ್ಥಿತರಿದ್ದರು.
Post a Comment