*ಸಿಂದಗಿಯಲ್ಲಿ ಮಾದಿಗರ/ದಂಡೋರಾ ಸಮುದಾಯದ ಮುಖಂಡರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

*ಸಿಂದಗಿಯಲ್ಲಿ ಮಾದಿಗರ/ದಂಡೋರಾ ಸಮುದಾಯದ ಮುಖಂಡರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*

ನಾವಿಲ್ಲಿ ಕೇವಲ ಪ್ರಚಾರಕ್ಕಾಗಿ ಬಂದಿಲ್ಲ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಲು ಬಂದಿದ್ದೇವೆ.
 
ಇದು ಕೇವಲ ಉಪ ಚುನಾವಣೆಯಲ್ಲ. ಇದು ಸುಳ್ಳು ಹಾಗೂ ಸತ್ಯದ ನಡುವಿನ ಯುದ್ಧ. ಬಿಜೆಪಿಯವರು ಸುಳ್ಳಿನ ಮೇಲೆ ಮನೆ ಕಟ್ಟಲು ಹೊರಟಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಒಂದು ವೇಳೆ ಬಿಜೆಪಿಯವರು ಜನರಿಗೆ ಏನಾದರೂ ನೆರವು ನೀಡಿದ್ದರೆ ಅದರ ಪಟ್ಟಿ ನೀಡಲಿ.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವರ ಸಂಪುಟದಲ್ಲಿ ಎಚ್. ಆಂಜನೇಯ ಅವರನ್ನು ಸಚಿವರನ್ನಾಗಿ ಮಾಡಿ ಭಾರತ ಸಂವಿಧಾನದ ಆಶಯದಂತೆ ನಡೆದುಕೊಂಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳಿಗೆ ಜನಗಣತಿ ಆಧಾರದ ಮೇಲೆ ಅನುದಾನ ನೀಡಬೇಕು ಎಂಬ ಕಾನೂನು ದೇಶದಲ್ಲಿ ತಂದಿದ್ದರೆ ಅದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ.
ಬಿಜೆಪಿಯವರು ಇಂತಹ ಒಂದು ತೀರ್ಮಾನ ಮಾಡಿದ್ದರೆ ಹೇಳಲಿ. ಒಂದು ವೇಳೆ ಅವರು ಮಾಡಿದ್ದರೆ ಚುನಾವಣಾ ಭಾಷಣವೇ ಅಗತ್ಯವಿಲ್ಲ. ಬಾಬು ಜಗಜೀವನ್ ರಾಮ್ ಅವರಂತಹ ಮಹಾನ್ ನಾಯಕರು ಕಾಂಗ್ರೆಸ್ ನಲ್ಲಿ ಬೆಳೆದವರು. ಅವರ ಪುತ್ರಿ ಮೀರಾ ಕುಮಾರ್ ಅವರು ಲೋಕಸಭೆ ಸ್ಪೀಕರ್ ಆಗಿದ್ದವರು. ನಾವು ಎಲ್ಲ ವರ್ಗದವರಿಗೆ ಅಧಿಕಾರ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುತ್ತಿದ್ದೇವೆ. 

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 7 ವರ್ಷವಾಗಿದ್ದು, ಕೇಂದ್ರ ಸರ್ಕಾರದ ಸಚಿವರು ನಿಮಗೆ ಕಷ್ಟದ ಸಮಯದಲ್ಲಿ ಏನಾದರೂ ಶ್ರಮ ವಹಿಸಿದ್ದಾರಾ? ಬಡವರಿಗಾಗಿ ಎಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ?

ಸಿಂದಗಿ ಕ್ಷೇತ್ರದ ಮಹಾಜನತೆ ಪ್ರಜ್ಞಾವಂತ, ಬುದ್ಧಿವಂತರಿದ್ದೀರಿ. ನೀವು ನಿಮ್ಮ ಸ್ವಾಭಿಮಾನದ ಮತವನ್ನು ಹಣಕ್ಕೆ ಮಾರಿಕೊಳ್ಳುವುದಿಲ್ಲ. ಬಿಜೆಪಿ ಶಕ್ತಿ ಕೇವಲ ನೋಟಿನಲ್ಲಿದೆ. ನಿಮ್ಮನ್ನು ಖರೀದಿಸಲು ಮುಂದಾಗುತ್ತಾರೆ. ಅವರು ಉತ್ತಮ ಆಡಳಿತ ನೀಡಿಲ್ಲ. ಬಡವರು, ರೈತರಿಗೆ ನೆರವು ನೀಡಿಲ್ಲ. ರೈತರ ಕೃಷಿಗೆ ಬೇಕಾಗಿರುವ ರಸಗೊಬ್ಬರ ಕೊರತೆ ರಾಜ್ಯದಲ್ಲಿ ತಲೆದೋರಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ಕೋವಿಡ್ ಸಮಯದಲ್ಲಿ ನಷ್ಟ ಅನುಭವಿಸಿದವರಿಗೆ, ಯುವಕರಿಗೆ, ಆಸ್ಪತ್ರೆ ಸೇರಿದವರಿಗೆ, ಸತ್ತವರಿಗೆ ಸರ್ಕಾರ ಪರಿಹಾರದ ಹಣ ಕೊಟ್ಟಿತೇ? ಯಾವುದಾದರೂ ನೆರವು ನೀಡಿದರಾ? ಯಾವುದೂ ಇಲ್ಲ.

ನಾವು ಜಾತಿಗಳ ಸಭೆ ಮಾಡಿ ನಿಮ್ಮ ಜತೆ ಇದ್ದೇವೆ ಎಂದು ಧೈರ್ಯ ತುಂಬುತ್ತಿದ್ದೇವೆ ಹೊರತು, ವಿಭಜನೆ ಮಾಡುತ್ತಿಲ್ಲ. ನಾವು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೇವೆ.

ಈ ಚುನಾವಣೆಯಲ್ಲಿ ಅಶೋಕ ಮನಗೂಳಿ ಅವರು ಮಾತ್ರ ಅಭ್ಯರ್ಥಿಯಲ್ಲ. ನಾವೆಲ್ಲ ನಿಮ್ಮ ಅಭ್ಯರ್ಥಿಗಳು. ಇಡೀ ಕಾಂಗ್ರೆಸ್ ನಿಮ್ಮ ಬಗ್ಗೆ ಕಾಳಜಿ ಹೊಂದಿದೆ. ಕಾಂಗ್ರೆಸ್ ಇತಿಹಾಸ ನಿಮ್ಮ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವೆಲ್ಲ ಅಧಿಕಾರಕ್ಕೆ ಬಂದಹಾಗೆ.

ಇಂದಿರಾ ಗಾಂಧಿ ಅವರು ಕೊಟ್ಟ ಈ ಹಸ್ತ, ನಿಮಗೆ ಪಿಂಚಣಿ, ಭೂಮಿ, ಅಕ್ಕಿ, ಹಲವು ಭಾಗ್ಯಗಳನ್ನು ಕೊಟ್ಟಿದೆ. ಈ ಗುರುತಿಗೆ ಮತ ಹಾಕಿ, ನೀವು ಗೆಲ್ಲಬೇಕು ಎಂದು ಮನವಿ ಮಾಡುತ್ತೇನೆ.

*ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ:*

ರಾಜ್ಯದಲ್ಲಿ ರಸಗೊಬ್ಬರ ಅಭಾವವಿದ್ದು, ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಸರ್ಕಾರ ರೈತರ ಪರಿಸ್ಥಿತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿ ಅವರು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಗೆ ನಮಸ್ಕರಿಸಿ ಹೋಗಿ ಮತದಾನ ಮಾಡಿ ಎಂದಿದ್ದರು.

ಇಂದು ನಾನು ಕೂಡ ಅದನ್ನೇ ಹೇಳುತ್ತಿದ್ದೇನೆ. ಮತದಾರರು ಮತ ಹಾಕುವ ಮುನ್ನ ಅಡುಗೆ ಅನಿಲದಿಂದ ಬೈಕ್, ಕಾರು, ಆಟೋ, ಟ್ರಾಕ್ಟರ್ ಗೆ ನಮಸ್ಕರಿಸಿ ಮತ ಹಾಕಲಿ.

ಚುನಾವಣೆ ಪ್ರಚಾರದ ವೇಳೆ ಹಣದ ಚೀಲದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಚುನಾವಣಾ ಪ್ರಚಾರಕ್ಕೆ ಬರಿಗೈಲಿ ಬಂದಿದ್ದೇನೆ. ನಾನು ಈಗಲೂ ಬರುವಾಗ ಚುನಾವಣಾ ಆಯೋಗ ಅಧಿಕಾರಿಗಳು ತಪಾಸಣೆ ಮಾಡಿಯೇ ಬಿಟ್ಟಿದ್ದಾರೆ. ನಾನು ಖಾಲಿ ಕೈಯಲ್ಲೇ ಬಂದಿದ್ದೇನೆ’ ಎಂದು ಉತ್ತರಿಸಿದರು.

Post a Comment

Previous Post Next Post