ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿಂದಗಿ ವಿಧಾನಸಭೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರ ಚುನಾವಣೆ ಪ್ರಚಾರ

: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿಂದಗಿ ವಿಧಾನಸಭೆ ಕ್ಷೇತ್ರದ ಅಲಮೇಲುವಿನ ಗುಂದಗಿಯಲ್ಲಿ ಪಕ್ಷದ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಭಾನುವಾರ ಭಾಗವಹಿಸಿದ್ದರು. ವಿಧಾನ ಪರಿಷತ್ ಪ್ರತಿಪಕ್ಷ ಮುಖಂಡ ಆರ್.ಎಸ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಧೃವನಾರಾಯಣ್, ಮಾಜಿ ಸಚಿವರಾದ ಆರ್.ಬಿ. ತಿಮ್ಮಾಪುರ, ಶಿವಾನಂದ ಪಾಟೀಲ್, ಶಾಸಕರಾದ ಯಶವಂತರಾಯಗೌಡ ಪಾಟೀಲ್, ಅಮರೇಗೌಡ ಬಯ್ಯಾಪುರ, ಬಸನಗೌಡ ತುರುವಿಹಾಳ್, ಎಂಎಲ್ಸಿ ಎಸ್. ರವಿ ಮತ್ತಿತರರು ಭಾಗವಹಿಸಿದ್ದರು.
: ಸಿಂದಗಿ ವಿಧಾನಸಭೆ ಕ್ಷೇತ್ರದ ಗುಂದಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮಾಡಿದ ಚುನಾವಣೆ ಪ್ರಚಾರ ಭಾಷಣ...
 ಸಿಂದಗಿಯ ಅಲಮೇಲುವಿನಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಸಚಿವ ಶಿವಾನಂದ ಪಾಟೀಲ್, ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಅಭ್ಯರ್ಥಿ ಅಶೋಕ್ ಮನಗೂಳಿ ಮತ್ತಿತರರು ಇದ್ದರು.

 *ಸಿಂದಗಿಯ ಗುಂದಗಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಚಾರ ಭಾಷಣದ ಮುಖ್ಯಾಂಶಗಳು*

ರಾಮನ ತಂದೆ ದಶರಥ ಮಹಾರಾಜನ ವಿಗ್ರಹ ಎಲ್ಲೂ ಇಲ್ಲ. ಆದರೆ ರಾಮನ ಭಂಟ ಆಂಜನೇಯನ ವಿಗ್ರಹ ಎಲ್ಲೆಡೆ ಕಾಣುತ್ತೇವೆ. ಏಕೆಂದರೆ ಆಂಜನೇಯ ಒಬ್ಬ ತ್ಯಾಗಿ. ನಿಷ್ಠೆ, ಸೇವೆಗೆ ಹೆಸರಾದವನು. ಹೀಗಾಗಿ ಎಲ್ಲೆಡೆ ಆತನ ದೇವಾಲಯಗಳಿವೆ.

ನಾವು ಕೂಡ ಆಂಜನೆಯನಂತೆ ನಿಮ್ಮ ಸೇವೆ ಮಾಡುತ್ತೇವೆ. ನಮಗೆ ಆಶೀರ್ವಾದ ಮಾಡಿ, ಒಂದು ಅವಕಾಶ ನೀಡಿ ಎಂದು ಕೇಳುತ್ತಿದ್ದೇವೆ.

ನಾವು ಇಲ್ಲಿಗೆ ನಿಮ್ಮಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ನಾವೆಲ್ಲ ನಿಮ್ಮ ಜತೆ ಹಾಗೂ ಅಶೋಕ ಮನಗೂಳಿ ಅವರ ಜತೆ ಇದ್ದೇವೆ ಎಂದು ಹೇಳಲು ಬಂದಿದ್ದೇವೆ.

ಬಿಜೆಪಿ ಸರ್ಕಾರ ಬಂದು 2 ವರ್ಷ ಆಗಿದೆ. ಸಿ.ಎಸ್. ಮನಗೂಳಿ ಅವರು ಐಕ್ಯರಾಗಿ 8 ತಿಂಗಳಾಗಿವೆ. ಚುನಾವಣೆ ಬರುತ್ತದೆ ಎಂದು ಎಲ್ಲರಿಗೂ ಗೊತ್ತಿತ್ತು ಅಲ್ಲವೇ? ಮುಂದೆ ಆಗೋದು ಬಿಡಿ, ಈ ಚುನಾವಣೆಗಾಗಿಯಾದರೂ ಈ ಕ್ಷೇತ್ರಕ್ಕೆ ಬಿಜೆಪಿಯವರು ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ?

ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ, ಪರಿಹಾರ ಕೊಟ್ಟರಾ? ಕೂಲಿ ಕಾರ್ಮಿಕರು, ಚಾಲಕರು, ಬಟ್ಟೆ ಹೊಲಿಯುವವರು, ಕೋವಿಡ್ ನಿಂದ ಸತ್ತವರಿಗೆ ಪರಿಹಾರ ಕೊಟ್ಟರಾ? ಮತ್ತೇಕೆ ಮತ ಕೇಳಲು ಬರುತ್ತಿದ್ದಾರೆ? ಇದನ್ನು ನೀವು ಕೇಳಬೇಕು.

ಕೋವಿಡ್ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಲು, ಚಿಕಿತ್ಸೆ, ಆಕ್ಸಿಜನ್, ಲಸಿಕೆ ಪಡೆಯಲು ಕ್ಯೂ ನಿಲ್ಲುವುದರ ಜತೆಗೆ ಸತ್ತಮೇಲೆ ಶವಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು. ನಮ್ಮ ಅಭ್ಯರ್ಥಿ ಅಶೋಕ ಮನಗೂಳಿ ಕಷ್ಟದ ಸಮಯದಲ್ಲಿ ಜನಕ್ಕೆ ಸ್ವಲ್ಪವಾದರೂ ಸಹಾಯ ಮಾಡಿದರೋ ಇಲ್ಲವೋ?

ಆದರೆ ಬಿಜೆಪಿ ಅವರು ಸಹಾಯ ಮಾಡಿದರಾ? ಅವರು ಬಂದು ನಿಮ್ಮ ಕಷ್ಟ ಕೇಳಿದರಾ? ಮತ ಕೇಳುವಾಗ ಹೃದಯ ಶ್ರೀಮಂತಿಕೆ ಇರಬೇಕು. ಬರೀ ಸುಳ್ಳು ಹೇಳಿಕೊಂಡು 20 ಲಕ್ಷ ಕೋಟಿ ರುಪಾಯಿ ಕೊಟ್ಟೆ ಎಂದರು. ಯಡಿಯೂರಪ್ಪ ಅವರು 1800 ಕೋಟಿ ರುಪಾಯಿ ಕೊಡುತ್ತೇನೆ ಎಂದರು. ಖಾಸಗಿ ಶಿಕ್ಷಕರಿಗೆ ಹಣ ನೀಡುತ್ತೇವೆ ಎಂದರು. ಆದರೆ ಯಾರಿಗಾದರೂ ಬಂತಾ?

ಅವರು ಹಣ ಕೊಟ್ಟಿದ್ದನ್ನು ಕಣ್ಣಲ್ಲೂ ನೋಡಲಿಲ್ಲ, ಕಿವಿಯಲ್ಲೂ ಕೇಳಲಿಲ್ಲ. ಮೋದಿ ಅವರು ಎಲ್ಲ ಬಂದ್ ಮಾಡಿ, ದೀಪ ಹಚ್ಚಿ, ಮಹಾಭಾರತ ಯುದ್ಧ 18 ದಿನಗಳಲ್ಲಿ ಮುಕ್ತಾಯವಾದರೆ, ಕೋವಿಡ್ ವಿರುದ್ಧದ ಯುದ್ಧವನ್ನು 21 ದಿನಗಳಲ್ಲಿ ಮುಕ್ತಾಯ ಮಾಡುತ್ತೇವೆ ಎಂದರು. ನಾವು ಚಪ್ಪಾಳೆ, ಜಾಗಟೆ ಹೊಡೆದೆವು.

ನಾನು, ಸಿದ್ದರಾಮಯ್ಯ, ಎಸ್.ಆರ್ ಪಾಟೀಲ್ ಎಲ್ಲರೂ ಮನವಿ ಕೊಟ್ಟು, ಸದನದಲ್ಲಿ ಧ್ವನಿ ಎತ್ತಿದರೂ ಬಿಜೆಪಿ ಕೇಳಲಿಲ್ಲ. ಬೆಡ್, ಚಿಕಿತ್ಸೆ, ಆಕ್ಸಿಜನ್ ಎಲ್ಲದರಲ್ಲೂ ದುಡ್ಡು ಹೊಡೆದರು.

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಮಂದಿ ಇಲಿಗಳು ಒದ್ದಾಡಿ ಸತ್ತಂತೆ ಸತ್ತರು. ಒಬ್ಬ ಸಚಿವ ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಒಬ್ಬ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಳ್ಳಲಿಲ್ಲ.

ಕಾಂಗ್ರೆಸ್ ನಾಯಕರು ದೇಶದುದ್ದಗಲಕ್ಕೆ ಸತ್ತವರ ಮನೆಗೆ ಹೋಗಿ, ಸಾಧ್ಯವಾದಷ್ಟು ಸಹಾಯ ಮಾಡಿ, ಕನಿಷ್ಠ ಪಕ್ಷ ಸಾಂತ್ವನ ಹೇಳಿದೆವು. ಇದೆ ಕಾಂಗ್ರೆಸ್ ಪಕ್ಷದ ಇತಿಹಾಸ, ಶಕ್ತಿ. 

ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ಮಾಡುತ್ತೇವೆ. ಮನಗೂಳಿ ಅವರು ಸಾಯುವ ಮುನ್ನ ನನ್ನ ಮಗ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನಲ್ಲಿ ಇರಬೇಕು, ಜನರ ಸೇವೆ ಮಾಡಬೇಕು ಎಂದು ಹೇಳಿದರು. ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕುತ್ತೇವೆ ಎಂದು ಹೇಳಿ ಹೋದರು.

ಇಂದು ಕಾಂಗ್ರೆಸ್ ಅಶೋಕ ಮನಗೂಳಿ ಅವರಿಗೆ ಟಿಕೆಟ್ ನೀಡಿದೆ. ಯಾರೇ ಬೆನ್ನಿಗೆ ಚೂರಿ ಹಾಕಲು ಪ್ರಯತ್ನ ಮಾಡಿದರೂ, ಈ ಕ್ಷೇತ್ರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. 

ಇದು ಅಶೋಕನ ಚುನಾವಣೆ ಮಾತ್ರ ಅಲ್ಲ. ಇಲ್ಲಿ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಇಲ್ಲಿರುವ ಎಲ್ಲ ನಾಯಕರೂ ಅಭ್ಯರ್ಥಿಗಳೇ. 

ನೀವು ಕಾಂಗ್ರೆಸ್ ಗೆ ಮತ ಹಾಕುತ್ತೀರಿ ಅಂತಾ ಗೊತ್ತಿದೆ. ಆದರೆ ನೀವು ಒಬ್ಬೊಬ್ಬ ಐದು ಮಂದಿಯ ಮತವನ್ನು ಹಾಕಿಸಿದರಷ್ಟೇ ಅಶೋಕ್ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲು ಸಾಧ್ಯ.

ನಮ್ಮ ಮುಸಲ್ಮಾನ ಸ್ನೇಹಿತರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ. ಜೆಡಿಎಸ್ ಅವರು ಯಾರನ್ನಾದರೂ ನಿಲ್ಲಿಸಲಿ. ಅದು ಅವರ ತಂತ್ರ. ಆದರೆ ಈ ದೇಶಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳ್ಳೆಯದಾ ಅಥವಾ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯದಾ ಎಂಬಿದನ್ನು ಆಲೋಚಿಸಿ. 

ಒಬ್ಬ ಎಂಪಿ ನಿಮ್ಮ ಸಮುದಾಯವನ್ನು ಪಂಚರ್ ಹಾಕುವವರು ಎಂದ. ಕೋವಿಡ್ ನಿಂದ ಜನ ಸತ್ತಾಗ ಮುಸಲ್ಮಾನ ಬಾಂಧವರು ಹೆಣ ಹೊತ್ತಿದ್ದಾರೆ. ಅಂತ್ಯಕ್ರಿಯೆ ಮಾಡಿದ್ದಾರೆ. ಆದರೆ ಅವರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ.

ರಾಜ್ಯದಲ್ಲಿ ಜನರ ಹಸಿವು ನೀಗಿಸಲು ಕಾಂಗ್ರೆಸ್ ಪಕ್ಷ ಶ್ರಮಿಸಿದೆ. ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಪ್ರತಿ ಕೆ.ಜಿ ಅಕ್ಕಿಗೆ 25 ರೂ. ಕೊಟ್ಟರೆ, ಸಿದ್ದರಾಮಯ್ಯ ಅವರು ಇನ್ನೂ ಹಣ ಸೇರಿಸಿ ನಿಮಗೆ 7 ಕೆ.ಜಿ ಅಕ್ಕಿ ಉಚಿತವಾಗಿ ಕೊಟ್ಟರು. ಈ ಸರ್ಕಾರ ಇದನ್ನು 5 ಕೆ.ಜಿಗೆ ಇಳಿಸಿದ್ದಾರೆ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬಂದ ನಂತರ 10 ಕೆ.ಜಿ ಅಕ್ಕಿ ನೀಡುತ್ತೇವೆ.

ಯುವಕರು ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಎಂದರು. ಸರ್ಕಾರಿ ಕೆಲಸ ಇರಲಿ ಖಾಸಗಿ ಕೆಲಸವೂ ಇಲ್ಲವಾಗಿದೆ. ನಂತರ ಪಕೋಡಾ ಮಾರಿಕೊಂಡು ಇರಿ ಅಂದರು. ಅದನ್ನು ಮಾಡೋಣ ಎಂದರೆ ಅಡುಗೆ ಎಣ್ಣೆ 200 ರೂ. ಆಗಿದೆ. ಒಬ್ಬ ರೈತ, ಯುವಕ, ಮಹಿಳೆಗೆ ಸಹಾಯ ಮಾಡಲು ಈ ಸರ್ಕಾರಕ್ಕೆ ಆಗಿಲ್ಲ.

350 ರೂ.ನಿಂದ 400 ರೂ.ಗೆ ಅಡುಗೆ ಅನಿಲ ಸಿಲಿಂಡರ್ ಪಡೆಯುತ್ತಿದ್ದ ಮಹಿಳೆಯರು ಈಗ 900 ರೂ. ನೀಡಬೇಕಾಗಿದೆ. ಇಷ್ಟಾದರೂ ಅವರಿಗೆ ಮತ ಹಾಕುತ್ತೀರಾ?

ಆಗ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡಿದ್ದ ಶೋಭಕ್ಕ, ಯಡಿಯೂರಪ್ಪ ಇಂದು ಮೌನವಾಗಿರುವುದೇಕೆ? ರಾಜ್ಯದಿಂದ 25 ಬಿಜೆಪಿ  ಸಂಸದರಿದ್ದಾರೆ. ಯುಕೆಪಿ, ಮಹದಾಯಿ, ಮೇಕೆದಾಟು ಯೋಜನೆ ವಿಚಾರವಾಗಿ ಯಾರಾದರೂ ಒಬ್ಬ ಸಂಸದ ಪ್ರಧಾನಿ ಭೇಟಿ ಮಾಡಿ ಮನವಿ ಮಾಡಿದ್ದಾರಾ? 

ಮಸ್ಕಿಯಲ್ಲಿ ಜನ ಬಸನಗೌಡ ತುರುವಿಹಾಳ್ ಅವರನ್ನು ಗೆಲ್ಲಿಸಿ ಇಡೀ ದೇಶಕ್ಕೆ ಗೌರವ ಕೊಟ್ಟಿದ್ದರು. ಒಂದೊಂದು ಮತವೂ ಮುಖ್ಯ. ಕಾಂಗ್ರೆಸ್, ದಳದ ಮತಗಳು ವ್ಯರ್ಥವಾಗಬಾರದು. ನಿಮ್ಮ ಮತ ಸ್ವಾಭಿಮಾನದ ಮತ ಆಗಬೇಕು. ಈಗ ನಿಮ್ಮ ಮುಂದೆ ಅವಕಾಶ ಇದೆ. ಅದನ್ನು ನಮಗೆ ಕೊಡಿ ಎಂದು ಕೇಳಲು ಬಂದಿದ್ದೇವೆ.

ಇತ್ತೀಚೆಗೆ ನಾಮಪತ್ರ ಸಲ್ಲಿಸುವಾಗ ನಾನು ನೋಡಿದ ಪ್ರೋತ್ಸಾಹ ಅಭೂತಪೂರ್ವ. ಆ ಶಕ್ತಿಯನ್ನು ಕಡೇ ಘಳಿಗೆವರೆಗೂ ಉಳಿಸಿಕೊಂಡು ನೀವು ಮತ ಹಾಕಲು ಬಟನ್ ಒತ್ತಿದ ತಕ್ಷಣ ಸಿಎಂ ಬೊಮ್ಮಾಯಿ ಅವರಿಗೆ ಸಂದೇಶ ಹೋಗಬೇಕು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಹಾಗೆ. ನಿಮ್ಮನ್ನು ನೀವೇ ಮನಗೂಳಿ ಎಂದು ಭಾವಿಸಿ, ನಿಮ್ಮ ಅಭ್ಯರ್ಥಿ ಗೆಲ್ಲಿಸಿ, ನಮ್ಮನ್ನು ಸೇವಕರನ್ನಾಗಿ ಆಯ್ಕೆ ಮಾಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
ಸಿಂದಗಿಯ ಕನ್ನೋಳಿ ಹಿರೇಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ರಾತ್ರಿ ಭೇಟಿಯಾಗಿ ಆಶೀರ್ವಾದ ಪಡೆದರು. ಶಾಸಕ ಆನಂದ ನ್ಯಾಮಗೌಡ ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿಂದಗಿಯ ಕನ್ನೋಳಿಯಲ್ಲಿ ಭಾನುವಾರ ಚುನಾವಣೆ ಪ್ರಚಾರಸಭೆ ನಡೆಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ವಿಧಾನಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ಅಜಯ್ ಸಿಂಗ್, ಮಾಜಿ ಸಚಿವ ಶಿವಾನಂದ ಪಾಟೀಲ್, ಶಾಸಕರಾದ ಅಮರೇಗೌಡ ಬಯ್ಯಾಪುರ, ಆನಂದ ನ್ಯಾಮಗೌಡ ಮುಖಂಡರಾದ ಅಪ್ಪಾಜಿ ನಾಡಗೌಡ, ಸುಭಾಶ್ ಚಾಯಗೊಳ್, ನಾಗರಾಜ್ ಛಬ್ಬಿ, ಗುರನಗೌಡ, ರಾಜು ತಾಳಿಕೋಟೆ, ಗೊಳ್ಳಲಪ್ಪ ಗೌಡ ಪಾಟೀಲ್, ಬಾಪುಗೌಡ ಪಾಟೀಲ್, ಸಂಗನಗೌಡ ಪಾಟೀಲ್, ಯೋಗಪ್ಪಗೌಡ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.

Post a Comment

Previous Post Next Post