ಮುಂದಿನ ವರ್ಷದಿಂದ ಕಬ್ಬು ಅರೆಯಲಿರುವ ಮೈಶುಗರ್- ಮುಖ್ಯಮಂತ್ರಿಗಳನ್ನು ಮನವೊಲಿಸುವಲ್ಲಿ ಸಫಲರಾದ ಸಚಿವ ಡಾ.ನಾರಾಯಣ ಗೌಡ

ಮುಂದಿನ ವರ್ಷದಿಂದ ಕಬ್ಬು ಅರೆಯಲಿರುವ ಮೈಶುಗರ್- ಮುಖ್ಯಮಂತ್ರಿಗಳನ್ನು ಮನವೊಲಿಸುವಲ್ಲಿ ಸಫಲರಾದ ಸಚಿವ ಡಾ.ನಾರಾಯಣ ಗೌಡ
ಬೆಂಗಳೂರು, ಅ.18: ಮೈಶುಗರ್ ಕಾರ್ಖಾನೆ ಪುನಾರಂಭ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ ಅವರು ಪಾಲ್ಗೊಂಡಿದ್ದರು. ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕಾ, ಬೇಡ್ವಾ ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಯಿತು. ಸರ್ಕಾರದಿಂದ ನಡೆಸುವದರಿಂದ ರೈತರಿಗೆ ಆಗುವ ಲಾಭ ನಷ್ಟದ ಬಗ್ಗೆ ಜನಪ್ರತಿನಿಧಿಗಳು, ರೈತ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಯಾವ ರೀತಿ ಆರಂಭಿಸಬೇಕು ಎಂದು ತಾಂತ್ರಿಕವಾಗಿ ವರದಿ ನೀಡಲು ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ಸಮಿತಿ ನೀಡುವ ವರದಿ ಅನ್ವಯ, ಸಚಿವ ಸಂಪುಟ ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರಾಯೋಗಿಕವಾಗಿ ಕಾರ್ಖಾನೆ ನಡೆಸಲು ಸರ್ಕಾರ ಸಿದ್ದವಿದ್ದು, ಮುಂದಿನ ವರ್ಷದಿಂದಲೇ ಕಬ್ಬು ಅರೆಯಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಮೈಶುಗರ್ ಆರಂಭ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಂಡ್ಯ ಉಸ್ತುವಾರಿ ಸಚಿವರಾದ ಡಾ.ನಾರಾಯಣ ಗೌಡ ಅವರು ಸುದೀರ್ಘವಾಗಿ ಚರ್ಚೆ ನಡೆಸಿದ್ದರು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಂಡು ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನ ನಿವಾರಿಸುವಂತೆ ಮನವಿ ಮಾಡಿದ್ದರು. ಇವತ್ತಿನ ಸಭೆಯಲ್ಲಿ ಮುಂದಿನ ವರ್ಷದಿಂದಲೇ ಕಬ್ಬು ಅರೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಿಎಂ ಭರವಸೆ ನೀಡಿರುವುದು ಸಂತೋಷದ ವಿಷಯ‌. ನಾಲ್ಕು ವರ್ಷದಿಂದ ಸ್ಥಗಿತವಾಗಿರುವ ಕಾರ್ಖಾನೆಯು ಮುಂದಿನ ವರ್ಷದಿಂದಲೇ ಕಬ್ಬು ಅರೆಯುವುದಕ್ಕೆ ಶುರು ಮಾಡಿದರೇ ಮಂಡ್ಯ ಭಾಗದ ಕಬ್ಬು ಬೆಳೆಗಾರರಿಗೆ ತುಂಬಾ ಅನುಕೂಲ ಆಗಲಿದೆ ಎಂದು ನಾರಾಯಣ ಗೌಡ ಅವರು ತಿಳಿಸಿದರು. ಮುಂದಿನ ವರ್ಷದಿಂದ ಕಬ್ಬು ಅರೆಯುವ ಭರವಸೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಡಾ. ನಾರಾಯಣ ಗೌಡ ಅವರು ಧನ್ಯವಾದ ತಿಳಿಸಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಹೋದ್ಯೋಗಿಗಳನ್ನು ಭೇಟಿ ಮಾಡಿದ್ದ ಸಚಿವ ಡಾ.ನಾರಾಯಣ ಗೌಡ ಅವರು, ಸರ್ಕಾರದ ತೀರ್ಮಾನವನ್ನು ಇವತ್ತಿನ ಸಭೆಯಲ್ಲೇ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದರು.

Post a Comment

Previous Post Next Post