||ಶ್ರೀನಿವಾಸ ಕಲ್ಯಾಣ ಮಹಾತ್ಮೆ||ವಿವಾಹ ಸಂಸ್ಕಾರ

 ||ಶ್ರೀನಿವಾಸ ಕಲ್ಯಾಣ ಮಹಾತ್ಮೆ|| Day# 10 part*#1

ವೆಂಕಟೇಶನೆ ನಮೊ ವೆಂಕಟೇಶನೆ ನಮೊ|

ಸಂಕಟ ಪರಿಹರಿಸು ವಿಜಯವಿಠ್ಠಲ ರೇಯಾ||

✍ಆಕಾಶರಾಜನು ಬಕುಲದೇವಿಯು ಬಂದುದನ್ನು ಕಂಡು ಗುರುಗಳಾದ ಬೃಹಸ್ಪತ್ತ್ಯಾಚಾರ್ಯರನ್ನು,

ಶುಕಾಚಾರ್ಯರನ್ನು ಬರಮಾಡಿಕೊಂಡು ವಿವಾಹ ಸಂಸ್ಕಾರಕ್ಕೆ ಅವಶ್ಯವಾಗಿ ಬೇಕಾಗುವ ಘಟಿತಾರ್ಥ ನಿರ್ಣಯಗಳನ್ನು ತಮ್ಮ ಕುಲಗೋತ್ರಾ-ಬಕುಲಮಾಲಿಕೆಯ ಕುಲ-ಗೋತ್ರಾದಿಗಳನ್ನು ಕೂಡಿಸಿ ನೋಡುವುದರ ಮೂಲಕ ನಿಶ್ಚಯ ಪತ್ರವನ್ನು ಬರೆಯಲು ನಿರ್ಧರಿಸಿ,ಆ ಪತ್ರನ್ನು ಶ್ರೀನಿವಾಸನಿಗೆ ತಲುಪಿಸಲು ಶುಕಾಚಾರ್ಯರಿಗೆ ವಿಜ್ಞಾಪಿಸಿದನು.ಅದರಂತೆ ರಾಜನು ತಮ್ಮಬಂಧು-ಬಾಂಧವರನ್ನು ಕೂಡಿಕೊಂಡು,ತಮ್ಮ ಕುಲ ಗುರುಗಳ ಸಮ್ಮುಖದಲ್ಲಿ ವಿವಾಹ ನಿಶ್ಚಯ ಪತ್ರ ಬರೆದು ಶುಕಾಚಾರ್ಯರೊಂದಿಗೆ ಶ್ರೀನಿವಾಸದೇವರಿಗೆ ಕಳುಹಿಸಿಕೊಟ್ಟನು.

ಅದನ್ನು ಶುಕಾಚಾರ್ಯರು ತಮ್ಮ ಶಿರಸ್ಸಿನಲ್ಲಿಟ್ಟಕೊಂಡು ಸ್ವಾಮಿಗೆ ತಲುಪಿಸಿ,ಇಲ್ಲಿಯ ಒಪ್ಪಿಗೆಯನ್ನು ರಾಜನಿಗೆ ಹೇಳಿ,ಮುಂದಿನ ವಿವಾಹ ಕಾರ್ಯಾರಂಭಗಳನ್ನು ಮಾಡಲು ಅನುಮತಿ ಕೊಟ್ಟರು.

ಆ ನಂತರ ಶ್ರೀನಿವಾಸನು ತನ್ನ ತಾಯಿಯಾದ ಬಕುಳೆಗೆ 

ನನಗೀ ವಿವಾಹವು ಬೇಡವೆನಿಸಿದೆ.ನನಗೆ ಯಾರು ಬಂಧು, ಬಳಗ ಇಲ್ಲ.ಏಕಾಂಗಿ ನಾನು. ಮದುವೆ ನಿಬ್ಬಣಕ್ಕೆ ನಾವಿಬ್ಬರೇ ಹೋಗುವದು ಸರಿಯೇ!!.ಆಕಾಶರಾಜ ಮಹಾರಾಜ. ಅವನಿಗೆ ಬಂಧು ಬಳಗ ಎಲ್ಲಾ ಇದೆ.ಬಂಧು ಬಳಗ ಇಲ್ಲದ ನಾನು ಹೇಗೆ ಸಂಬಂಧ ಬೆಳೆಸಲಿ??ಅದಕ್ಕೆ ಚಿಂತೆ ಆಗಿದೆ ಎಂದು ಸಾಮಾನ್ಯ ಮಾನವನಂತೆ ನಟಿಸುತ್ತಾ ಹೇಳಿದ.

ಅದಕ್ಕೆ ಬಕುಳೆಯು 

ಇದೆಂತಹ ಮಾತು!!ನಿನ್ನಂತಹ ಪುರುಷರು ಸುಳ್ಳು ಹೇಳಬಾರದು..

ನೀನು ಹೇಳುವದೆಲ್ಲ ಸುಳ್ಳು. 

ನೀನು ಜಗತ್ಕುಟುಂಬಿ. ರಮಾ,ಬ್ರಹ್ಮ ರುದ್ರಾದಿ ದೇವತೆಗಳೇ ನಿನಗೆ ಪರಿವಾರ.ಜಗತ್ತಿನ ಸುಜೀವರೆಲ್ಲರೂ ನಿನ್ನ ಬಂಧುಗಳು.ಇಂತಹ ನೀನು ನಾನು ಒಬ್ಬೊಂಟಿಗ.ನನಗಾರು ಇಲ್ಲ ಅಂತ ಏಕೆ ನಟಿಸುವಿ??..

ನಿನ್ನ ಕಪಟನಾಟಕವನ್ನು ಸಾಕುಮಾಡು.ಬ್ರಹ್ಮ,ವಾಯು,ರುದ್ರಾದಿ ದೇವತೆಗಳನ್ನು, ಮತ್ತು ನಿನ್ನ ಸೊಸೆಯರು,ಮೊಮ್ಮಕ್ಕಳು, ಮರಿ ಮಕ್ಕಳು ಇವರೆನೆಲ್ಲ ಸ್ಮರಿಸು ಅಂತ ಪ್ರಾರ್ಥನೆ ಮಾಡಿದಾಗ ತಕ್ಷಣ ಗರುಡ,ಶೇಷರನ್ನು ಸ್ಮರಿಸಿದನು.

ಅವರಿಬ್ಬರೂ ಬಂದ ಕೂಡಲೆ ಗರುಡನಿಗೆ ಬ್ರಹ್ಮ ದೇವರನ್ನು,ಶೇಷನಿಗೆ ರುದ್ರ ದೇವರನ್ನು ನನ್ನ ವಿವಾಹ ಕಾರ್ಯಕ್ರಮಕ್ಕೆ ಬರಲು ಅವರ ಮುಖಾಂತರ ಪತ್ರ ಮುಖೇನ ಆಹ್ವಾನವನ್ನು ನೀಡಿದನು.

ಬ್ರಹ್ಮ ದೇವರು ತನ್ನ ತಂದೆಯು ಬರೆದ ಪತ್ರ ವನ್ನು ಓದಿ ಕೇಳಿ ತನ್ನ ಸತಿಯರಾದ ಸರಸ್ವತಿ, ಗಾಯತ್ರಿ, ಸಾವಿತ್ರಿ ದೇವಿಯರೊಡನೆ ,ತನ್ನ ಮಕ್ಕಳು ಮೊಮ್ಮಕ್ಕಳು ಅವರ ಪರಿವಾರದೊಡನೆ ಶೇಷಗಿರಿ ಕಡೆ ಪಯಣ ಬೆಳೆಸಿದನು.

ಅದೇ ಕಾಲಕ್ಕೆ ವಾಯುದೇವರು ಭಾರತಿದೇವಿಯರ ಸಹಿತವಾಗಿ,ರುದ್ರದೇವರು ಪಾರ್ವತಿ ಸಹಿತವಾಗಿ ಇಂದ್ರಾದಿ ದೇವತೆಗಳು ತಮ್ಮ ಪತ್ನಿಯರು ಸಮೇತವಾಗಿ, ಸಕಲ ಋಷಿಗಳು ಅವರ ಪರಿವಾರ ಸಮೇತರಾಗಿ ವೆಂಕಟಾದ್ರಿ ಗೆ ಬಂದರು.

ಭಗವಂತನನ್ನು ಕಂಡು ಬ್ರಹ್ಮ ದೇವನು ಪಾದಕ್ಕೆ ಎರಗಿದಾಗ ಪ್ರೀತಿಯಿಂದ ಆಲಂಗಿಸಿ 

ಕುಮಾರ!! ನಿನಗೆ ಮಂಗಳವಾಗಲಿ.ಬಹುಕಾಲವಾದ ಮೇಲೆ ನನ್ನ ನೋಡಲು ಬಂದಿರುವೆಯಲ್ಲ.ಒಮ್ಮೆ ಯಾದರು ನನ್ನನ್ನು ನೋಡಬೇಕು ಎಂಬ ಕೂತುಹಲ ನಿನಗೆ ಬರಲಿಲ್ಲ ವಲ್ಲ!ಇವಾಗ ಬಂದೆಯಲ್ಲ! ಅದೇ ದೊಡ್ಡದು. ನಿನ್ನನ್ನು ಬಿಟ್ಟು ನನಗೆ ಜಗತ್ತಿನಲ್ಲಿ ಯಾವುದು ಇಲ್ಲ ಅಂತ ಕಣ್ಣೀರು ಹಾಕುತ್ತಾ ಆಲಂಗಿಸಿಕೊಂಡನು..

ಸಕಲ ದೇವತೆಗಳು ಈ ಲೀಲೆಯನ್ನು ನೋಡಿ ಆನಂದ ಭರಿತರಾದರು.

ಆನಂತರ ಮಗನನ್ನು ಕೂಡಿಸಿಕೊಂಡು ಹಿಂದೆ ನಡೆದ ವಿಷಯವನ್ನು ಹೇಳಿ ನನ್ನ ಸಲುಹಿದ ಈ ತಾಯಿ ಯಾದ ಬಕುಳೆಗೆ ನಮಸ್ಕಾರ ಮಾಡು ಎಂದು ಹೇಳುತ್ತಾನೆ.


ಆ ಸಮಯದಲ್ಲಿ ಸಕಲ ವಾಧ್ಯಗಳ ಧ್ವನಿ ಕೇಳಲು ಬಂದವರು ಯಾರು?? ಎಂದು ಕೇಳಲು

ಜಿಂಕೆಯನ್ನು ಏರಿಕೊಂಡು ಸುವಾಸನೆಯನ್ನು ಬೀರುತ್ತಾ ಭಾರತಿಪತಿಯಾದ ಮುಖ್ಯ ಪ್ರಾಣದೇವರು ತಮ್ಮ ಸತಿಯಾದ ಭಾರತಿದೇವಿಯರೊಡನೆ ಅಲ್ಲಿಗೆ ಬರುತ್ತಾರೆ..

ತನ್ನ ಮಗನಾದ ವಾಯುದೇವರ ಆಗಮನದಿಂದ ಸಂತಸ ಗೊಂಡಂತೆ ನಟಿಸಿದ.ನಂತರ ಕೆಲ ಕ್ಷಣದಲ್ಲಿ ರುದ್ರ ದೇವರು ಸಹ ಅಲ್ಲಿ ಗೆ ಬರುತ್ತಾರೆ.ಹೀಗೆ ಸಕಲ ದೇವತಾ ಪರಿವಾರದವರು ಬಂದಾಗ ಸಂತೋಷ ದಿಂದ ಎಲ್ಲರನ್ನೂ ಆದರಿಸಿ ಭಗವಂತನು ಸತ್ಕಾರ ಮಾಡುತ್ತಾನೆ.

ನಂತರ ದೇವಶಿಲ್ಪಿಯಾದ ವಿಶ್ವ ಕರ್ಮನ ಮೇಲೆ ಸಿಟ್ಟು ಬಂದಂತೆ ನಟಿಸಿ ಆನಂತರ ಅನುಗ್ರಹಿಸಿ ಇಂದ್ರದೇವರ ಮುಖಾಂತರ ನಾರಾಯಣ ಪುರದಲ್ಲಿ ಉಳಿದುಕೊಳ್ಳಲು ದೊಡ್ಡ ಸೌಧವನ್ನು ನಿರ್ಮಿಸಿದನು.ಸಕಲ ದೇವತೆಗಳಿಗೆ ಅವರವರ ಯೋಗ್ಯತೆ ಅನುಗುಣವಾಗಿ ಕಾರ್ಯವನ್ನು ಒಪ್ಪಿಸಿದನು.

ವಿವಾಹಾಂಗವಾಗಿ ಪುಣ್ಯಾಹ,ನಾಂದೀ ಮುಂತಾದ ಶುಭಕಾರ್ಯಗಳನ್ನು ಮಾಡುವ ಸಮಯದಲ್ಲಿ ತನ್ನ ಪತ್ನಿ ಯಾದ ಲಕ್ಷ್ಮೀ ದೇವಿಯನ್ನು ನೆನೆಸಿ ಕೊಂಡು  ಸಾಮಾನ್ಯ ಮಾನವನಂತೆ ಶೋಕಿಸತೊಡಗಿದ..

ನಂತರ ಬ್ರಹ್ಮ ದೇವನ ಕುರಿತು

ಸಿರಿ ಇಲ್ಲದ ಸಭೆಯು ಸರಿಬಾರದಯ್ಯ.ಗಗನದಲ್ಲಿ ನಕ್ಷತ್ರಗಳು ,ಚಂದ್ರ ಇಲ್ಲದೇ ಹೇಗೆ ಶೋಭಿಸದೋ,ಮರಗಳು ಇಲ್ಲದ ಅರಣ್ಯ,ರೆಕ್ಕೆ ಇಲ್ಲದ ಪಕ್ಷಿಗಳು, ಅದೇ ರೀತಿ ಲಕ್ಷ್ಮೀ ದೇವಿ ಇಲ್ಲದ ಈ ಸಭೆ ಶೋಭಿಸದು ಅಂತ ಹೇಳಿದನು.

ಅದಕ್ಕೆ ರುದ್ರ ದೇವನು ಭಗವಂತನಿಗೆ ಹೇಳುವರು. ನೀನು ಸ್ವರಮಣನು,ಸಂಗ ರಹಿತನು.ಕ್ಲೇಶವೆಂಬುವದೇ ನಿನ್ನ ಬಳಿ ಇಲ್ಲ.ಯಾಕೆ ಈ ರೀತಿಯಲ್ಲಿ ಕಣ್ಣೀರು ಹಾಕುವದು?? ಅಂತ ಕೇಳಿದಾಗ

ನೀನಿನ್ನು ಬಾಲಕ!!.ನಿನಗೇನು ತಿಳಿಯದು.ಪ್ರಳಯ ಕಾಲದಲ್ಲಿ ನನ್ನ ಜೊತೆಯಲ್ಲಿ ನನಗೆ ಹಾಸಿಗೆಯಾಗಿ,ಆಭರಣವಾಗಿ ಗೆಳತಿಯಾಗಿ ನನ್ನೊಡನೆ ಸದಾ ಇರುವಂತಹ ಲಕ್ಷ್ಮೀ ಯನ್ನು ಬಿಟ್ಟು ನನಗೆ ಇರಲು ಆಗುವುದಿಲ್ಲ ಅಂತ ಹೇಳಿ

ಸೂರ್ಯದೇವನನ್ನು ಕರೆದು ಕೊಲ್ಹಾಪುರಕ್ಕೆ ಲಕ್ಷ್ಮೀ ಯನ್ನು ಕರೆತರಲು ಹೇಳುತ್ತಾನೆ.

ಅದಕ್ಕೆ ಸೂರ್ಯನು 

ನಾನು ಕರೆದರೆ ಹೇಗೆ ಜಗನ್ಮಾತೆ ಬರುವಳು ಪ್ರಭು!!?? ಎನ್ನುವನು.ಅದಕ್ಕೆ ಭಗವಂತನು ಯುಕ್ತಿಯನ್ನು ಹೇಳುವ..

ನೀನು ಕಣ್ಣೀರು ಸುರಿಸುತ್ತಾ,ಒರೆಸಿಕೊಳ್ಳುತ್ತಾ ರಮಾದೇವಿಯ ಮನೆ ಬಾಗಿಲಲ್ಲಿ ನಿಂತು ಕರೆದಾಗ ಬಂದು ಸಮಾಧಾನ ಮಾಡುವಳು..


ಅವಾಗ ನೀನು

 ತಾಯಿ! ನಿನ್ನ ಪತಿಯಾದ ನಾರಾಯಣ ನು ಹಾಸಿಗೆ ಹಿಡಿದು ಮಲಗಿದ್ದಾನೆ.ಬದುಕುವನೋ ಅಥವಾ ಇಲ್ಲವೊ ತಿಳಿಯದು ಬಹಳ ಅಶಕ್ತನಾಗಿದ್ದಾನೆ ಬೇಗ ಹೊರಡು ಅಂತ ಅವಸರಿಸು.. ಎಂದು ಹೇಳುವನು.

ಅದಕ್ಕೆ ಸೂರ್ಯನು 

ಸ್ವಾಮಿ!! ಸಕಲಲೋಕಗಳಲ್ಲಿಯು ಸರ್ವಜ್ಞೆಯಾದ ಸಕಲವನ್ನು ತಿಳಿದ ಆ ತಾಯಿ ನನ್ನ ಮಾತನ್ನು ಹೇಗೆ ನಂಬುವಳು??

ಯಾವಾತನ ನಾಮ ಸ್ಮರಣೆ ಇಂದ ಸಕಲ ರೋಗ ನಿವಾರಣೆ ಆಗುವದೋ ಅವನು ರೋಗಗ್ರಸ್ಥ ಅಂತ ಹೇಳಿದರೆ ತಾಯಿ ನಂಬುವಳೇ?? ಎಂದಾಗ ವತ್ಸ!!ಸೂರ್ಯನೇ ಚಿಂತಿಸಬೇಡ.ನನ್ನ ಮಾಯೆಇಂದ ಲಕ್ಷ್ಮೀ ದೇವಿಯು ಮೋಹಿತಳಾಗಿ ನಿನ್ನ ಜೊತೆ ಬರುವಳು ಎಂದು ಹೇಳಿ ರಥವನ್ನು ಕೊಟ್ಟು ಕಳುಹಿಸುವನು.

ಅದರಂತೆ ಲಕ್ಷ್ಮೀ ದೇವಿಯು

ಶ್ರೀಹರಿಯ ಆದೇಶದಂತೆ ದೇಶ ಕಾಲಗಳಿಗೆ ತಕ್ಕಂತೆ ಶ್ರೀ ಹರಿಯ ಆಚರಣೆಗೆ ತಕ್ಕಂತೆ ತಾನು ಸಹ ಅವನ ಮಾತನ್ನು ನಂಬಿದವಳಂತೆ ನಟಿಸುತ್ತಾ ಶೀಘ್ರವಾಗಿ ರಥದಲ್ಲಿ ಕುಳಿತು ಬರುವಳು.

ರಮಾದೇವಿ ಬಂದ ವಿಚಾರವನ್ನು ತಿಳಿದು ಭಗವಂತನು ಅಶಕ್ತನು, ರೋಗಗ್ರಸ್ತ ನು ಆದವನಂತೆ ಆಕಾರಧರಿಸಿ ತನ್ನ ಬಲತೋಳನ್ನು ಬ್ರಹ್ಮ ದೇವನಮೇಲೆ,ಎಡತೋಳನ್ನು ರುದ್ರ ದೇವನ ಮೇಲೆ ಇಟ್ಟು ಕೊಂಡು ಮೆಲ್ಲಗೆ ಹೆಜ್ಜೆಗಳನ್ನು ಇಡುತ್ತಾ ಬಂದನು..

ತನಗೆ ಬೇಕಾದ ಹಾಗೆ ರೂಪಧಾರಣೆ ಮಾಡುವ ಭಗವಂತನ ಈ ನಾಟಕವು ಸಕಲ ದೇವತೆಗಳಿಗು ಋಷಿಗಳಿಗು ಆಶ್ಚರ್ಯಕರವಾಗಿ ತೋರಿತು.

ಬಂದ ರಮಾದೇವಿ ಈ ರೂಪ ವನ್ನು ಕಂಡು ಭಗವಂತನಿಗೆ ನಮಸ್ಕರಿಸಿ ಅವನನ್ನು ಆಲಂಗಿಸಿಕೊಂಡಳು.ಕೆಲ ಕ್ಷಣದಲ್ಲಿ ಭಗವಂತನುಅತೀ ಪುಷ್ಟಿ ಉಳ್ಳವನಾಗಿ ಸುಂದರವಾಗಿ ಪತ್ನಿ ಸಮೇತ ಸಿಂಹಾಸನದ ಮೇಲೆ ಕುಳಿತನು. 

🙏ಶ್ರೀ ಕೃಷ್ಣಾರ್ಪಣಮಸ್ತು🙏

ತಿಳಿಯದೊ‌ ನಿನ್ನಾಟ|

ತಿರುಪತಿ ಯ ವೆಂಕಟ|

🙏ಹರೇ ಶ್ರೀನಿವಾಸ🙏

Post a Comment

Previous Post Next Post