ಶ್ರೀ ವಿಜಯದಾಸಾರ್ಯ ವಿರಚಿತ /// ಶ್ರೀ ವೆಂಕಟೇಶ ದೇವರ ಸುಳಾದಿ // ಅಂದು ನೋಡಿ, ನೆಂದು ನೋಡಿ, ಚೆಂದ ನೋಡಿ...

                                                       ಶ್ರೀ ವಿಜಯದಾಸಾರ್ಯ ವಿರಚಿತ 


                                                      ಶ್ರೀ ವೆಂಕಟೇಶ ದೇವರ ಸುಳಾದಿ 




 ರಾಗ ಆನಂದಭೈರವಿ 


 ಧ್ರುವತಾಳ 


ಸೂರಿಯಾ ಪುಟದಂತೆ ಝಗಝಗಿಸುವ ದಿವ್ಯ 

ಕಿರೀಟ ಕೀಲಿಸಿದ ಮಣಿ ಪ್ರಕಾಶ 

ಸಾರ ಕಸ್ತೂರಿ ತಿಲಕ ಫಾಲ ಕಪೋಲ ಶ್ರೀ -

ನಾರಿಯೊಡೆದ ಕುಸುಮ ನಯನ ಚಲುವ 

ಕಾರುಣ್ಯಾಮೃತ ಸುರಿವ ನೋಟ ವೊಪ್ಪುವ ಮಾಟ 

ಮಾರ ಕಾರ್ಮುಖ ಪುಬ್ಬು ಪರಿಮಳನಾಸ 

ಸ್ಮೇರಾನನ ಮುದ್ದು ಮಂದರೋದ್ಧಾರ ವಿ -

ಸ್ತಾರ ಚಂದ್ರಿಕೆ ಕಾಂತಿ ದಿಗ್ಗೊಳಿಪಾಭ ಸ - 

ಚಾರು ಕುಂಡಲಕರ್ನ ಸಮದಂತ ಪಙ್ತಿಯು 

ಭಾರಿ ಭಾರಿಗೆ ನುಡಿವಾಶ್ಚರ್ಯ ಸೊಲ್ಲು 

ಹೀರ ಥೋರ ಹಾರ ಸರಿಗೆ ಬಂ -

ಗಾರಮಣಿ ವನಮಾಲೆ ವೈಜಯಂತಿ 

ಊರುವರಿತ ವರ್ನ ಕೌಸ್ತುಭ ವೇದೋ -

ಚ್ಚಾರ ಕಂಧರ ನವವಾರಿಜ ಪೋಲುವ 

ಪೇರೂರದಲಿ ಲಕುಮಿ ನಾನಾ ಶ್ರೀಗಂಧ ಶೃಂ -

ಗಾರ ಪದಕ ಪರಮಪುರುಷ ಸರ್ವಾ - 

ಧಾರ ನಿಗೂಢ ಜಠರ ನಾಭಿ ತ್ರಿವಳಿ 

ಸಾರಿ ಸಾರಿಗೆ ಪೊಳೆವಾ ತ್ರಿಗಂಗಿಯೋ 

ವೈರಿದಲ್ಲಣ ಚಕ್ರ ವೇದಮಯದ ಶಂಖ 

ತೋರುವ ವರ ಅಭಯ ಚತುರ ಹಸ್ತ 

ಈರೈದು ಹಸ್ತಾಂಗುಲಿ ಮುದ್ರೆ ಕಂಕಣ ಕೇ -

ಯೂರ ಕೀರುತಿ ಚಿತ್ರಕರ ತಳಕೆಂಪು 

ಮೀರಿದ ನಖರ ಪ್ರತಿಬಿಂಬ ಕಾಣಿಸುತಿರೆ 

ಹಾರೈಸುವ ಮನಕಾಗೋಚರನೊ 

ವೀರಾಜಿಸುವ ಪೀತಾಂಬರ ಕಟಿಸ್ವರ್ಣಾ ಮುಂ - 

ಜೀರ ಜಘನ ಊರು ಜಾನು ಜಂಘೆ 

ವೀರ ಪೆಂಡಿಯೂ ಕಡಗ ಪೊಂಗೆಜ್ಜೆ ಸರಪಳೆ 

ಧಾರುಣಿ ಪಾವನ ಹೆಜ್ಜೆ ಸೊಬಗೂ 

ವಾರಿಜ ಧ್ವಜಾಂಕುಶ ವಜ್ರರೇಖ ಅ -

ಪಾರ ಮಹಿಮ ದೇವಾ ದೇವಾ ವಂದ್ಯಾ 

ಜಾರ ನಾರಿಯರೊಡನೆ ನಲಿದಾಡಿದಾ ನಿರುತ 

ಜಾರ ಭಕ್ತರ ಮಾತಿಗೆ ಎಂದೆಂದಿಗೇ 

ಘೋರಾದುರಿತಹಾರಿ ವೆಂಕಟಾಚಲ ವಿಹಾರ ವಿಜಯವಿಠಲ 

ಸಾರಿದವರ ಮನೋಹರ ಮಾಡಿದ ಕರುಣಿ ॥ 1 ॥


 ಮಟ್ಟತಾಳ 


ಈಶ ನಿನ್ನಯ ಪಾದ ನೋಡದವನು ಪಾಪಿ 

ಈಶರೆಂಬುವರೆಲ್ಲ ನಿನ್ನ ತರುವಾಯ 

ಈಶ ಈಷಣತ್ರಯವೆಂಬೊ ಮಹಾ ಮಮತೆಯನ್ನು 

ಈ ಶರೀರದಲಿ ಬಿಡಿಸು ಮುಂತೆ ಇಂತು 

ಈಶವಂದಿತ ಪಾದ  ವಿಜಯವಿಠಲ ವೆಂಕಟ 

ಲೇಶವಾದರು ನಿನ್ನ ಬಿಡದಿಪ್ಪನೆ ಧನ್ಯಾ ॥ 2 ॥


 ತ್ರಿವಿಡಿತಾಳ 


ಕಣ್ಣೀಗೆ ಕಾಣಿಸದ ಪರುಸ ಕಂಡಲಿದ್ದ 

ಅನಂತವಾಗಿಪ್ಪ ಲೋಹ ಖಣಿಗೇ 

ಮುನ್ನೆ ಸಂಬಂಧವಾದದೆಂತೂ ತಿಳಿಯದು 

ಘನ್ನತೆ ಏನೆಂಬೆ ವಿಚಾರಿಸೆ 

ನಿನ್ನ ಸರಿ ಕೃಪಾಂಬುಧಿ ಇನ್ನಿಲ್ಲ ಇನ್ನಿಲ್ಲ 

ಎನ್ನಂಥ ಪಾಪಾತ್ಮ ಮುನ್ನಿಲ್ಲ ಅವಲ್ಲಿ 

ಇನ್ನೀತೀರ್ವರಿಗೆ ಘಟನೆ ಮಾಡಿದ ಬುದ್ಧಿ ಸಂ -

ಪನ್ನ ಗುರುಗಳ ಕರುಣಕ್ಕೆ ಎಣೆಗಾಣಿನೋ 

ಘನ್ನ ಮಹಿಮ ನಮ್ಮ ವಿಜಯವಿಠಲರೇಯ 

ಧನ್ಯನಾದೆ ನಿನ್ನ ಪಾದದ್ವಯವ ಕಂಡೂ ॥ 3 ॥


 ಅಟ್ಟತಾಳ 


ನರಿ ಮೇರು ಗಿರಿ ಶಿಖರಾಗ್ರದಿ ಕುಳಿತು 

ಕರದಲ್ಲಿ ಪೀಯೂಷ ಪಾತ್ರಿಯ ಪಿಡಿದು 

ಸುರಿದು ಸುಖಿಸುವ ತೆರದಂತೆ ಎನಗಿಂದು 

ದೊರಕಿತು ಹರಿಯ ಚರಣ ನಾಮಾಮೃತ 

ಸುರಿದು ಸುಖಿಸೀದೆ ಗುರುಗಳನುಗ್ರಹ 

ಪಿರಿದಾಗಿ ಸಿದ್ಧಿಸಿತು ವೆಂಕಟ ಸಂಕಟ -

ಹರಣಾ ಹರಿ ಹರಿಣಾಂಕ ಗಿರಿರಾಯ 

ನರಿಗೆ ವಂಚಕನಾಮ ಉಂಟಾಗಿದ್ದದ್ದು 

ಪರಿಹಾರ ವಾಯಿತು ನೋಡಿ ನೋಡಿರೋ 

ಧರೆಯೊಳು ನಾನೊಬ್ಬ ವಂಚಕನಾಗಿದ್ದೆ 

ಕರುಣ ಮಾಡಿದ ಹರಿ ತನ್ನವನಿವನೆಂದು 

ಸುರಪಾಲಕ ನಮ್ಮ ವಿಜಯವಿಠಲರೇಯನ 

ನಿರೀಕ್ಷಿಸಿ ಕೊಂಡಾಡಿ ಭವತಾರಕನಾದೆ ॥ 4 ॥


 ಆದಿತಾಳ 


ಪರಮ ಪುರುಷ ಪರಂಜ್ಯೋತಿ 

ಪರಮ ಬ್ರಹ್ಮನಾಯಕ ಪರಮಾತ್ಮ 

ಪರಮಪೂಜ್ಯಾ ಪರತರ ತಮ ಗುಣ -

ಪರಿಪೂರ್ಣ ಪರಮ ಮುಖ್ಯ ಪರಮೋದ 

ಪರಮೇಶ ಪರಮಾಶ್ಚರ್ಯ ಪರಮತತ್ವ 

ಪರಮ ಶರೀರ ಪರಮ ಪಾವನ 

ಪರಮ ಸುಹೃತ ಪರಮ ಮಂಗಳ ಮೂರ್ತಿ 

ಪರಮ ವೈಚಿತ್ರ ವಿಜಯವಿಠಲ |

ವರದ ವೆಂಕಟಗಿರಿರಾಯ ಶರಣರ ಮನೋರಥ ಸಂತತ ॥ 5 ॥


 ಜತೆ 


ಗಿರಿರಾಯ ಸುರರಾಯ ಸುಖಪೂರ್ಣ ಮಹಾರಾಯ 

ಉರಗಾದ್ರಿವೆಂಕಟ ವಿಜಯವಿಠಲ ವೊಲಿದ ॥

Post a Comment

Previous Post Next Post