ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಜಂಟಿ ಸಭೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಸಲಹೆ

ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಜಂಟಿ ಸಭೆ 

ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಸಲಹೆ

ಬೆಂಗಳೂರು ಅ.29 (ಕರ್ನಾಟಕ ವಾರ್ತೆ):
 

ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಮಾಡುವ ಬದಲು ಪರಸ್ಪರ‌ ಮಾತುಕತೆ ನಡೆಸುವ ಮೂಲಕ ಸಮಸ್ಯೆಗೆ‌ ಪರಿಹಾರ ಕಂಡುಕೊಳ್ಳಬೇಕು ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೂಟ್ ಅವರು ಸಲಹೆ ಮಾಡಿದರು.

ಇಂದು ರಾಜಭವನದ ಸ್ವಾಮಿ ವಿವೇಕಾನಂದ ಭವನದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟಿಲ್ ಮತ್ತು ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ, ಶಿಕ್ಷಕರ ಕಲ್ಯಾಣ ಸಂಘದ ಪ್ರತಿನಿಧಿಗಳು, ರಾಜ್ಯ ಸರ್ಕಾರ ಹಾಗೂ ಯುಜಿಸಿಯ ಅಧಿಕಾರಿಗಳ ಜಂಟಿ ಸಭೆ ನಡೆಯ ಅಧ್ಯಕ್ಷತೆ ವಹಿಸಿ‌ ಅವರು ಮಾತನಾಡಿದರು.

ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಬೇಡಿಕೆಗಳನ್ನು ಪರಿಗಣಿಸಿ, ಕಾನೂನು ಚೌಕಟ್ಟಿನಲ್ಲಿ ಅವುಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಶಿಕ್ಷಕರು ಮುಷ್ಕರ ಕೈಗೊಳ್ಳುವ ಬದಲಾಗಿ, ಸರ್ಕಾರ ಮತ್ತು ಆಡಳಿತ ಮಂಡಳಿ ಗಮನಕ್ಕೆ ತಂದು ಹಾಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
 
ಸಭೆಯಲ್ಲಿ ಬಡ್ತಿ, ಜೇಷ್ಠತಾ ಪಟ್ಟಿ, ಪಿಂಚಣಿ, ಇತರೆ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆ ಪರಿಗಣನೆ, ನಿವೃತ್ತಿ ವಯೋಮಿತಿ  ಏರಿಕೆ, ಸೇರಿದಂತೆ ಹಲವು ಬೇಡಿಕೆಗಳ ಕುರಿತು ಶಿಕ್ಷಕರ ಕಲ್ಯಾಣ ಸಂಘದ ಡಾ.ಮಹಾಂತೇಶ ನಾಯಕ ಅವರು ಪ್ರಸ್ತಾಪಿಸಿದರು. ಸಹಾನುಭೂತಿಯಿಂದ ಬೇಡಿಕೆಗಳನ್ನು ಆಲಿಸಿದ ಘನತೆವೆತ್ತ ರಾಜ್ಯಪಾಲರು ಕೆಲವು ಬೇಡಿಕೆಗಳಿಗೆ ಸ್ಥಳದಲ್ಲೇ ಪರಿಹಾರದ ಮಾರ್ಗಗಳನ್ನು ತಿಳಿಸಿದರು. ಅಲ್ಲದೇ ಕಾನೂನಿನ ಚೌಕಟ್ಟಿನಲ್ಲಿ ಹಾಗೂ ಶಿಕ್ಷಕರ ಅನುಕೂಲವಾಗುವ ನಿಟ್ಟಿನಲ್ಲಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
 
ಸನ್ಮಾನ್ಯ ಕೃಷಿ ಸಚಿವರಾದ ಬಿ ಸಿ ಪಾಟೀಲ್ ಅವರು ಮಾತನಾಡಿ, ಘನತೆವೆತ್ತ ರಾಜ್ಯಪಾಲರು ಶಿಕ್ಷಕರ ಮನವಿಯನ್ನು ಪರಿಗಣಿಸಿ ಈ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕಾನೂನಿನ ಪ್ರಕಾರ ಹಾಗೂ ಗೌರವಾನ್ವಿತ ರಾಜ್ಯಪಾಲರ ಮಾರ್ಗದರ್ಶನದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
 
ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕೃಷಿ ಇಲಾಖೆಯ ಡಾ.ರಾಜಕುಮಾರ್ ಖಟ್ರಿ, ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ಪದ್ಮಾವತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದ ಪ್ರತಿನಿಧಿಗಳು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸೇರಿದಂತೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಹಿಂದೆ ಪರಿಹಾರ ಭರವಸೆ:
ಅಕ್ಟೋಬರ್ 18 ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿ ಶಿಕ್ಷಕರ ಸಂಘ ಮುಷ್ಕರ ಕೈಗೊಂಡಿತ್ತು. ಧಾರವಾಡದ ಪ್ರವಾಸದಲ್ಲಿದ್ದ ಘನೆತೆವೆತ್ತ ರಾಜ್ಯಪಾಲರು ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕರ ಕಲ್ಯಾಣ ಸಂಘದ ಬೇಡಿಕೆಗಳನ್ನು ಪರಿಗಣಿಸಿ, ಕಾನೂನು ಚೌಕಟ್ಟಿನಲ್ಲಿ ಅವುಗಳ ಪರಿಹಾರಕ್ಕೆ ಕ್ರಮವಹಿಸಲಾಗುವುದು.10 ರಿಂದ 12 ದಿನಗಳ ಅವಧಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಈ ಕುರಿತು ಪರಿಹಾರಕ್ಕೆ ಸೂತ್ರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಸಂಬಂಧಿತ ಇಂದು ರಾಜಭವನದಲ್ಲಿ ಘನತೆವೆತ್ತ ರಾಜ್ಯಪಾಲರು ಸಭೆ ನಡೆಸಿದರು. 

Post a Comment

Previous Post Next Post