*ಸಿಂದಗಿ ವಿಧಾನಸಭಾ ಕ್ಷೇತ್ರದ ಬಳಗನೂರು, ಚಾಂದಕವಠೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಚುನಾವಣೆ ಪ್ರಚಾರ ಭಾಷಣದ ಸಾರಾಂಶ:*

*ಸಿಂದಗಿ ವಿಧಾನಸಭಾ ಕ್ಷೇತ್ರದ ಬಳಗನೂರು, ಚಾಂದಕವಠೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಚುನಾವಣೆ ಪ್ರಚಾರ ಭಾಷಣದ ಸಾರಾಂಶ:*

ನೀವೆಲ್ಲ ಎಂ.ಸಿ. ಮನಗೂಳಿ ಅವರನ್ನು 5 ವರ್ಷಕ್ಕೆ ಗೆಲ್ಲಿಸಿದ್ದಿರಿ. ಆದರೆ ಅವರು ವಿಧಿವಶರಾಗಿದ್ದು, ಈಗ ನಡೆಯುತ್ತಿರುವ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದೆ.

ಈ ಚುನಾವಣೆಯನ್ನು ನಾವು ಬಯಸಿರಲಿಲ್ಲ. ಮನಗೂಳಿ ಅವರು ಕಾಲವಾಗುವ ಮುನ್ನ ನನ್ನನ್ನು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಮುಂದಿನ ದಿನಗಳಲ್ಲಿ ನನ್ನ ಮಗ ಕಾಂಗ್ರೆಸ್ ಸೇರಿ ಈ ಕ್ಷೇತ್ರದ ಸೇವೆ ಮಾಡಬೇಕು. ಅವನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ ಎಂದು ಹೇಳಿದ್ದರು. ಅವರ ಮಾತಿನಂತೆ ನಾವೆಲ್ಲ ಚರ್ಚೆ ಮಾಡಿ ಒಮ್ಮತದಿಂದ ಅವರನ್ನು ಕಣಕ್ಕಿಳಿಸಿದ್ದೇವೆ.

ನೀವು ಬಹಳ ಉತ್ಸಾಹದಿಂದ ಇಲ್ಲಿಗೆ ಬಂದಿದ್ದೀರಿ. ನಿಮ್ಮ ಉತ್ಸಾಹ ನೋಡಿದರೆ, ಮನಗೂಳಿ ಅವರ ಸ್ಥಾನಕ್ಕೆ ಅಶೋಕ ಮನಗೂಳಿಯವರನ್ನು ಗೆಲ್ಲಿಸಲು ತೀರ್ಮಾನಿಸಿರುವುದು ಸ್ಪಷ್ಟವಾಗಿದೆ. ನಿಮ್ಮ ಪ್ರೀತಿ, ಅಭಿಮಾನ ನೋಡಿದರೆ ಅವರ ಗೆಲುವು ಶತಸಿದ್ಧ.

ಆಯುಧಪೂಜೆ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಸಮವಸ್ತ್ರ ಕಳಚಿ ಕೇಸರಿ ಬಟ್ಟೆ ಧರಿಸಿದ್ದನ್ನು ನೀವೆಲ್ಲ ನೋಡಿದ್ದೀರಿ. ಇದು ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದ ಮುಖ್ಯಮಂತ್ರಿಗಳು, ಗೃಹ ಸಚಿವರು, ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯನ್ನೂ ಕೇಸರಿಕರಣ ಮಾಡಲು ಹೊರಟಿದ್ದಾರೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. 

ಇದು ದೇಶದ ಪ್ರತಿಯೊಬ್ಬ ಭಾರತೀಯನನ್ನು ಕೆರಳಿಸುವ ವಿಚಾರ. ಉಪಚುನಾವಣೆ ಇಲ್ಲದಿದ್ದರೆ, ನಾನೇ ಹೋಗಿ ಪೊಲೀಸ್ ಠಾಣೆ ಮುಂದೆ ರಾಷ್ಟ್ರಧ್ವಜ ಹಾರಿಸುತ್ತಿದ್ದೆ. ಉಪಚುನಾವಣೆ ಮುಗಿದ ಬಳಿಕ ರಾಷ್ಟ್ರಧ್ವಜ ಹಾಗೂ ಖಾಕಿ ಬಟ್ಟೆಯನ್ನು ಆ ಪೊಲೀಸ್ ಅಧಿಕಾರಿಗಳಿಗೆ ಉಡುಗೊರೆಯಾಗಿ ನೀಡುತ್ತೇವೆ. 

ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ಸಂವಿಧಾನದಲ್ಲಿ ಪೊಲೀಸರಿಗೆ ಅಧಿಕಾರ ನೀಡಿದ್ದಾರೆ. ಆದರೆ ಅದಕ್ಕೆ ಅಗೌರವ ತರುವಂತೆ ಪೊಲೀಸರು ವರ್ತಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದಾಗ ಅದನ್ನು ನೋಡಿಕೊಂಡು ಕೂರಲು ಹೇಗೆ ಸಾಧ್ಯ?

ಪ್ರಜಾಪ್ರಭುತ್ವದಲ್ಲಿ ಮತದಾರರೇ ಮಾಲೀಕರು. ಅವರ ತೀರ್ಮಾನವೇ ದೇಶದ ತೀರ್ಮಾನ.  ನಿಮ್ಮ ಒಂದು ಮತ, ಆಚಾರ ವಿಚಾರ, ಭಾವನೆಗೆ ಅದರದೇ ಆದ ಬೆಲೆ ಇದೆ. ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶದ ಸಂವಿಧಾನ ಕೊಟ್ಟಾಗ ಯಾರು ಯಾವ ಕೆಲಸ ಮಾಡಬೇಕು ಎಂದು ಮಾರ್ಗಸೂಚಿ ಹಾಕಿಕೊಟ್ಟಿದ್ದಾರೆ. ನಾವದನ್ನು ರಕ್ಷಿಸಬೇಕು.

ದೇಶದಲ್ಲಿ ಯುವಕರು ಕೆಲಸ ಕಳೆದುಕೊಂಡಿದ್ದಾರೆ. ಕೇಂದ್ರ ಸರಕಾರದವರು ಕೊಟ್ಟ ಮಾತಿನಂತೆ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಸರ್ಕಾರಿ ಉದ್ಯೋಗವಲ್ಲದಿದ್ದರೂ ಖಾಸಗಿ ಉದ್ಯೋಗವನ್ನಾದರೂ ನೀಡಬೇಕಿತ್ತು. ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ಇರುವ ಉದ್ಯೋಗವೂ ಕಳೆದುಕೊಳ್ಳುವಂತಾಗಿದೆ. 

ಬಿಜೆಪಿ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವಾಗ ಕೊರೋನಾ ರೋಗವನ್ನೂ ತೆಗೆದುಕೊಂಡು ಬಂದಿತು. ರೋಗ ಬಂದಾಗ ಪ್ರಧಾನಿ ಮೋದಿ ಅವರು ಎಲ್ಲ ಬೀಗ ಹಾಕಿಕೊಂಡು ಭಜನೆ ಮಾಡಲು ಹೇಳಿದರು. ಅವರು ಲಾಕ್ ಡೌನ್, ಸೀಲ್ ಡೌನ್ ಮಾಡಿ ಎಂದಾಗ ಮಾಡಿದ್ದೇವೆ. ಅವರು ಹೇಳಿದಂತೆ ಕೇಳಿದೆವು. ಆದರೆ ಕಾರ್ಮಿಕರಿಗೆ, ರೈತರಿಗೆ ವೃತ್ತಿಪರರಿಗೆ ತೊಂದರೆಯಾಯಿತು. ನಾವೆಲ್ಲ ಯಡಿಯೂರಪ್ಪನವರ ಬಳಿ ಹೋಗಿ ಬಡವರ ಜೀವ ಉಳಿಸಿ ಎಂದು ಮನವಿ ಮಾಡಿದೆವು. ಆದರೆ ಕೋವಿಡ್ ನಿಂದ ಬಳಲಿದವರಿಗೆ ಆಸ್ಪತ್ರೆ ಬೆಡ್, ಔಷಧಿ, ಆಕ್ಸಿಜನ್, ಕೊನೆಗೆ ಅಂತ್ಯಸಂಸ್ಕಾರ ಮಾಡಲೂ ಆಗಲಿಲ್ಲ.

ಪಕ್ಕದ ಜಿಲ್ಲೆ ಸಂಸದರಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್ ನಿಂದ ಸತ್ತಾಗ ಅವರ ಹೆಣವನ್ನು ಹೇಗೆ ಬಿಸಾಡಿದರು ಎಂದು ನೀವು ಟಿವಿಯಲ್ಲಿ ನೋಡಿದ್ದೀರಿ. ಬಳ್ಳಾರಿಯಲ್ಲಿ ಸತ್ತವರನ್ನು ಹೇಗೆ ಎಸೆದರು ಅಂತಾ ನೋಡಿದ್ದೀರಿ. ಇದೇನಾ ಭಾರತದ ಸಂಸ್ಕೃತಿ? ಇದು ಈ ಸರ್ಕಾರದ ಸಂಸ್ಕೃತಿ, ನೀತಿ? ಇದನ್ನು ಮೆಚ್ಚಿ ನೀವು ಅವರಿಗೆ ಮತ ನೀಡುತ್ತೀರಾ?

ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರು. ಪ್ಯಾಕೇಜ್ ನಲ್ಲಿ ನಿಮಗೇನಾದರೂ ಹಣ ಬಂತಾ, ರೈತರ ಬೆಳೆಗೆ ಬೆಂಬಲ ಬೆಲೆ ಸಿಕ್ಕಿತಾ? ನಿಮ್ಮ ಖಾತೆಗೆ ಹಣ ಬಂತಾ? ನೀವು ಉದ್ಯೋಗ, ವ್ಯಾಪಾರ, ಬದುಕು ಕಳೆದುಕೊಂಡಿದ್ದೀರಿ. ಎಲ್ಲ ವರ್ಗದವರೂ ಇಲ್ಲಿದ್ದೀರಿ. ಯಾರಿಗಾದರೂ ಸರ್ಕಾರದಿಂದ ಸಹಾಯವಾಯ್ತಾ? ಇಲ್ಲ. ಆದರೂ ಅವರು ನಿಮ್ಮನ್ನು ಹೇಗೆ ಮತ ಕೇಳುತ್ತಿದ್ದಾರೆ? ನೀವು ಪ್ರಶ್ನೆ ಮಾಡಬೇಕು.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನಾನು ಇಂಧನ ಸಚಿವನಾಗಿದ್ದಾಗ ರಾಜ್ಯದಲ್ಲಿ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದೆವು. ಆದರೆ ಕಳೆದ ಒಂದು ವಾರದಿಂದ ಪತ್ರಿಕೆಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೊರಿದೆ ಎಂಬ ವರದಿಗಳು ಬರುತ್ತಿವೆ. 

ನಮ್ಮ ರಾಜ್ಯದಿಂದ ಆಯ್ಕೆಯಾದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿಯಾಗಿದ್ದಾರೆ. ಆದರೂ ರಾಜ್ಯದಲ್ಲಿ ಕಲ್ಲಿದ್ದಲ ಕೊರತೆ. ನಮ್ಮ ರಾಜ್ಯದವರೇ ರಸಗೊಬ್ಬರ ಸಚಿವರಾಗಿದ್ದಾರೆ. ಆದರೂ ಗೊಬ್ಬರ ಬೆಲೆ ಗಗನಕ್ಕೇರಿದ್ದು, ಸರಿಯಾಗಿ ಪೂರೈಕೆಯಾಗದೇ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ನಮ್ಮಿಂದ ರಾಜ್ಯಸಭೆಗೆ ಹೋದವರೇ ಹಣಕಾಸು ಮಂತ್ರಿಯಾಗಿದ್ದಾರೆ. ಆದರೂ ರಾಜ್ಯಕ್ಕೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಬರಬೇಕಾದ ಜಿಎಸ್ಟಿ  ಬಾಕಿಯೂ ಬರುತ್ತಿಲ್ಲ. ಇವರೆಲ್ಲ ನಮ್ಮ ನಾಯಕರಾ?

ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಲಾಗಿತ್ತು. ಒಬ್ಬರೂ ಪ್ರಧಾನಿ ಬಳಿ ಹೋಗಿ ರಾಜ್ಯದ ಕಷ್ಟದ ಬಗ್ಗೆ ಮನವಿ ಮಾಡಲಿಲ್ಲ, ಧ್ವನಿ ಎತ್ತಲಿಲ್ಲ. ನೀರಾವರಿ, ಹಣಕಾಸಿನ ವಿಚಾರದಲ್ಲಿ ಆಸಕ್ತಿ ತೋರಲಿಲ್ಲ. ನಮ್ಮ ಸರ್ಕಾರ ಇದ್ದಾಗ ಹಲವು ಯೋಜನೆಗಳನ್ನು ತಂದೆವು.

ಕೋವಿಡ್ ಬಂದಾಗ ಈ ಭಾಗದ ಹಲವು ಮಂದಿ ಬೆಂಗಳೂರು ಹಾಗೂ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದರು. ಏಕಾಏಕಿ ಲಾಕ್ಡೌನ್ ಹೇರಿದ  ಸರ್ಕಾರ 25 ದಿನಗಳ ನಂತರ ನಿಮ್ಮವರು ಮನೆಗೆ ವಾಪಸ್ ಮರಳಲು ಮುಂದಾದಾಗ ಅವರಿಂದ ಮೂರು ಪಟ್ಟು ಹಣ ಸುಲಿಗೆಗೆ ಮುಂದಾದರು. ಈ ವಿಚಾರ ತಿಳಿದ ತಕ್ಷಣವೇ ನಾನು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಿ ನಿಮ್ಮವರ ಕಷ್ಟ ಆಲಿಸಿ ಅವರ ಪರವಾಗಿ ಧ್ವನಿ ಎತ್ತಿದೆ. ಈ ಜನ ಕೇವಲ ಕೂಲಿ ಮಾಡುವವರಲ್ಲ, ಅವರು ಈ ದೇಶ ಕಟ್ಟುತ್ತಿರುವವರು ಎಂದು ಹೇಳಿದೆ. ನಾನು, ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಜತೆ ಚರ್ಚೆ ಮಾಡಿ ಸರ್ಕಾರಕ್ಕೆ ಪಕ್ಷದ ವತಿಯಿಂದ 1 ಕೋಟಿ ರು. ಚೆಕ್ ಕೊಡಲು ಮುಂದಾದಾಗ ಸರ್ಕಾರ ಒಂದು ವಾರ ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಿತು. ರಾಷ್ಟ್ರಮಟ್ಟದಲ್ಲಿ ಸೋನಿಯಾ ಗಾಂಧಿ ಅವರು ಹೋರಾಟ ಮಾಡಿದಾಗ ಕೇಂದ್ರ ಸರ್ಕಾರವೂ ಹೆದರಿ ಉಚಿತ ರೈಲ್ವೇ ಸೇವೆ ಕಲ್ಪಿಸಿತು. 

ಕಾಂಗ್ರೆಸ್ ಬಡವರ ಪರವಾಗಿ ನಿಂತಿದೆ. 2 ಕೋಟಿಯಷ್ಟು ಆಹಾರ ಕಿಟ್ ಕೊಟ್ಟಿದ್ದೇವೆ. ತರಕಾರಿ ಬೆಲೆ ಕುಸಿದಾಗ ನಮ್ಮ ನಾಯಕರೇ ಸ್ವಂತ ಹಣದಲ್ಲಿ ಖರೀದಿ ಮಾಡಿ ಸುಮಾರು 100 ಕೋಟಿ ರು.ಯಷ್ಟು ತರಕಾರಿ ಖರೀದಿ  ಮಾಡಿ ರೈತರಿಗೆ ನೆರವಾದರು. ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರ ತಾಂಡವವಾಡಿತು. ಬೆಡ್ ನಿಂದ ಔಷಧಿವರೆಗೂ ಎಲ್ಲ ಹಂತದಲ್ಲೂ ಲಂಚ ಹೊಡೆದರು. ವೆಂಟಿಲೇಟರ್ ನಿಂದ ಹಿಡಿದು ಮಾಸ್ಕ್ ವರೆಗೂ ಎಲ್ಲದರಲ್ಲೂ ಭ್ರಷ್ಟಾಚಾರ. ಇದನ್ನು ಬಯಲು ಮಾಡಿದರೂ ಅವರು ಮಾನಮರ್ಯಾದೆ ಇಲ್ಲದೆ ಅಧಿಕಾರದಲ್ಲಿ ಕೂತಿದ್ದಾರೆ. ಆಸ್ಪತ್ರೆ ಸೇರಲು, ಔಷಧಿ ಪಡೆಯಲು, ಆಕ್ಸಿಜನ್ ಗಾಗಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಬಂತು. ಕೊನೆಗೆ ಸತ್ತವರನ್ನು ಅಂತ್ಯಸಂಸ್ಕಾರ ಮಾಡಲೂ ಕ್ಯೂ ನಿಲ್ಲಬೇಕಾಯಿತು.

ಕೋವಿಡ್ ನಿಂದ ಸತ್ತವರಿಗೂ ಸರ್ಕಾರ ಯಾವುದೇ ನೆರವು ನೀಡಲಿಲ್ಲ. ಆದರೆ ಮನಗೂಳಿ ಕುಟುಂಬದವರು 50 ಹಾಸಿಗೆಗಳ ಸಣ್ಣ ಆಸ್ಪತ್ರೆ ಇಟ್ಟುಕೊಂಡು ಈ ತಾಲೂಕಿನ ಬಡ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. 

ಎಂ.ಬಿ ಪಾಟೀಲ್ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಶಾಮನೂರು ಶಿವಶಂಕರಪ್ಪನವರು ರಾಜ್ಯದಲ್ಲೇ ದಾಖಲೆ ಮಟ್ಟದಲ್ಲಿ ಕೋವಿಡ್ ಲಸಿಕೆ ಹಾಕಿಸಿದ್ದಾರೆ. ಡಾ. ಪರಮೇಶ್ವರ್ ಅವರು ತಮ್ಮ ಆಸ್ಪತ್ರೆಲ್ಲಿ, ಖರ್ಗೆ ಅವರ ಅಳಿಯ ಜನರ ಸೇವೆ ಮಾಡಿದ್ದಾರೆ. ಶಿವಶಂಕರಪ್ಪನವರು 3 ಲಕ್ಷ ಜನರಿಗೆ ಲಸಿಕೆ ನೀಡಿದರು. ಖರ್ಗೆ ಅವರು ಪುಣೆಯಿಂದ ಲಸಿಕೆ ತರಿಸಿ ಕೊಟ್ಟರು. ಆದರೆ ಬಿಜೆಪಿಯವರು ಅದನ್ನು ವ್ಯಾಪಾರಕ್ಕೆ ಇಟ್ಟಿದ್ದರು. ನಿಮಗೆ ಇಂದು ಉಚಿತ ಲಸಿಕೆ ಸಿಕ್ಕಿದೆ ಎಂದರೆ ಅದು ಕಾಂಗ್ರೆಸ್ ಹೋರಾಟದ ಫಲ.

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಮಂದಿ ಇಲಿಗಳು ವಿಲವಿಲಲನೆ ಒದ್ದಾಡಿ ಸತ್ತಂತೆ ಪ್ರಾಣಬಿಟ್ಟರು. ಆದರೆ ಮಂತ್ರಿಗಳು ಕೇವಲ 3 ಜನ ಮಾತ್ರ ಸತ್ತರು ಎಂದರು. ಹೈಕೋರ್ಟ್ ಛಿಮಾರಿ ಹಾಕಿತು. ನಾನು ಸಿದ್ದರಾಮಯ್ಯನವರು ಅಲ್ಲಿ ಹೋಗಿ ಅವರಿಗೆ ಸಾಂತ್ವಾನ ಹೇಳಿದೆವು. ನಂತರ ನಾವು ಹೋಗಿ ಸತ್ತವರ ಕುಟುಂಬಕ್ಕೆ ತಲಾ 1 ಲಕ್ಷ ನೆರವು ನೀಡಿದೆವು. ಕೇಂದ್ರಕ್ಕೆ ನೀಡಿದ ವರದಿಯಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಯಾರು ಸತ್ತೇ ಇಲ್ಲ ಎಂದಿದ್ದಾರೆ. 

ಕೇವಲ ಚಾಮರಾಜನಗರ ಮಾತ್ರವಲ್ಲ, ಇಡೀ ರಾಜ್ಯದೆಲ್ಲೆಡೆ ನಮ್ಮ ನಾಯಕರು ಕಾರ್ಯಕರ್ತರು ಸತ್ತವರ ಮನೆಗೆ ಹೋಗಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಿಜೆಪಿಯ ಯಾವುದಾದರು ಒಬ್ಬ ನಾಯಕ ಸತ್ತವರ ಮನೆಗೆ ಹೋಗಿ ಧೈರ್ಯ ತುಂಬಿದ್ದಾರಾ? 

ನೊಂದ ಜನರ ಬೆನ್ನಿಗೆ ನಿಂತಿದ್ದು ಕಾಂಗ್ರೆಸ್ ಮಾತ್ರ. ನೀವೆಲ್ಲ ರಾಷ್ಟ್ರಕ್ಕೆ ಒಂದು ಸಂದೇಶ ರವಾನಿಸಿ ಎಂದು ಕೇಳಲು ನಾವಿಲ್ಲಿ ಬಂದಿದ್ದೇವೆ. ಮಸ್ಕಿಯ ಜನ ಹೇಗೆ ಇಡೀ ದೇಶಕ್ಕೆ ಸಂದೇಶ ಕೊಟ್ಟಿದ್ದಾರೋ ಅಂತಹ ಸಂದೇಶ ನೀವು ಮತ್ತೆ ನೀಡಬೇಕು. ಇಲ್ಲಿ ಕೇವಲ ಅಶೋಕ ಮನಗೂಳಿ ಮಾತ್ರ ಅಭ್ಯರ್ಥಿಯಲ್ಲ. ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ, ಎಂ.ಬಿ ಪಾಟೀಲ್ ಸೇರಿದಂತೆ ಇಲ್ಲಿರುವ ಎಲ್ಲ ನಾಯಕರು ಅಭ್ಯರ್ಥಿಗಳಾಗಿದ್ದಾರೆ. ನಾವು ನಿಮ್ಮ ಸೇವೆ ಮಾಡಲು ಬಂದಿದ್ದು, ನಮಗೆ ಶಕ್ತಿ ತುಂಬಿ ನಿಮ್ಮ ಸೇವಕರನ್ನಾಗಿ ಮಾಡಿಕೊಳ್ಳಿ. ನಿಮ್ಮ ತೀರ್ಪನ್ನು ರಾಷ್ಟ್ರ ಹಾಗೂ ರಾಜ್ಯ ಎದಿರು ನೋಡುತ್ತಿದೆ. 

ಕಾಂಗ್ರೆಸ್ ಸರ್ಕಾರ ಉಚಿತ ಅಕ್ಕಿಯಿಂದ, ಮಕ್ಕಳಿಗೆ ಹಾಲು, ಜನತೆಗೆ ಸಮರ್ಪಕ ವಿದ್ಯುತ್, ಎಂ.ಬಿ ಪಾಟೀಲ್ ಅವರು ನೀರಾವರಿ ಮಂತ್ರಿಯಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಯೋಜನೆ ಸಿಕ್ಕಿದೆ. ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಕೊಟ್ಟಿದೆ. ನಮ್ಮ ಕೆಲಸಕ್ಕೆ ನೀವು ಬೆಂಬಲ ನೀಡಬೇಕು, ನಮಗೆ ನೀವು ಸಹಾಯ ಮಾಡಬೇಕು. 

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ನಾವು ಜಾತಿ, ಧರ್ಮವನ್ನು ಬಿಟ್ಟು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ.

ಮಸ್ಕಿಯಲ್ಲಿ ಅವರು ಹಣ ಹಂಚಿದಂತೆ ಇಲ್ಲಿಯೂ ಹಂಚುತ್ತಾರೆ. ಯಾವುದೇ ಕಾರಣಕ್ಕೂ ಅವರು ಹಣ ಕೊಟ್ಟರೆ ಬೇಡ ಎನ್ನಬೇಡಿ. ಬಿಜೆಪಿ ನೋಟು, ಕಾಂಗ್ರೆಸ್ ಗೆ ವೋಟು. ನಿಮ್ಮ ಹಸ್ತದಿಂದ ಹಸ್ತದ ಗುರುತಿಗೆ ಮತ ಹಾಕಿದಾಗ ಬರುವ ಶಬ್ಧ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಕೇಳಬೇಕು. ಹೀಗಾಗಿ ನಿಮ್ಮ ಸ್ವಾಭಿಮಾನದ ಮತ ಅಶೋಕ್ ಮನಗೂಳಿ ಅವರಿಗೆ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ.

Post a Comment

Previous Post Next Post