ರಾಜ್ಯೋತ್ಸವದ ಮುನ್ನಾ ದಿನ ಕಳೆದು ಹೋದ "ರಾಜ್ಯ ಕಳೆ " .......ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮರೆಯಾದದ ಪುನೀತ್ ರಾಜಕುಮಾರ್

ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಲ್ಲಿ ಮಣ್ಣಾದ ಪುನೀತ್ ರಾಜಕುಮಾರ್

ಬೆಂಗಳೂರು, ಅಕ್ಟೋಬರ್ 31( ಕರ್ನಾಟಕ ವಾರ್ತೆ ) : 

ಮೇರು ನಟ ಡಾ ರಾಜ್ ಕುಮಾರ್ ಅವರ ಕಿರಿಯ ಪುತ್ರ ಸುಪ್ರಸಿದ್ಧ ನಟ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಶ್ರೀ ಕಂಠೀರವ ಸ್ಟುಡಿಯೋಸ್ ಆವರಣದಲ್ಲಿರುವ ಡಾ ರಾಜ್ ಕುಮಾರ್ ಅವರ ಸಮಾಧಿಯ ಸಮೀಪವೇ ಇಂದು ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಭದ್ರತಾ ಕಾರಣಗಳು ಹಿನ್ನೆಲೆಯಲ್ಲಿ ಕುಟುಂಬಸ್ಥರ ಸಹಮತಿ ಪಡೆದು ಪ್ರಕಟಿಸಿದ ಸಮಯಕ್ಕೆ ಮೊದಲೇ ಶುಕ್ರವಾರ ಹಠಾತ್ ನಿಧನರಾದ ಈ ಯುವ ನಟನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಮೊದಲು ಗಣ್ಯಾತಿ ಗಣ್ಯರು ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪ ಗುಚ್ಛ ಅರ್ಪಿಸಿದ ನಂತರ ಪೊಲೀಸ್ ವಾದ್ಯಗೋಷ್ಠಿಯಿಂದ ರಾಷ್ಟ್ರ ಗೀತೆ ಮೊಳಗಿತು. 

ಅಲ್ಲದೆ, ಅದೇ ಸಂದರ್ಭದಲ್ಲಿ ಪೊಲೀಸರು ಮೂರು ಬಾರಿ ಕುಶಾಲ ತೋಪು ಸಿಡಿಸಿದರು.

ತದ ನಂತರ, ಎರಡು ನಿಮಿಷಗಳ ಮೌನ ಆಚರಿಸಲಾಯಿತು. 

ಇದಾದ ಕೂಡಲೇ, ಪುನೀತ್ ರಾಜಕುಮಾರ್ ಅವರ  ದೇಹದ ಮೇಲೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಹಸ್ತಾಂತರಿಸಿದರು. 
 
ಪೊಲೀಸರು ಮೊಳಗಿಸಿದ ಶೋಕ ಗೀತೆ ಹಾಗೂ ರಾಷ್ಟ್ರ ಗೀತೆಯ ನಂತರ ಅಗಲಿದ ನಟನಿಗೆ ಸರ್ಕಾರದ ಗೌರವ ಸಮರ್ಪಣಾ ಕಾರ್ಯಕ್ರಮ ಪೂರ್ಣ ಗೊಂಡಿತು.

ನಂತರದಲ್ಲಿ ನಡೆದ ಕೌಟುಂಬಿಕ ಕಾರ್ಯಕ್ರಮದಲ್ಲಿ ಪುಷ್ಪಾಲಂಕೃತ ಹಂಸತೋಲಿಕಾ ಪಲ್ಲಕ್ಕಿಯಲ್ಲಿ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರವನ್ನು ಇರಿಸಿ ಮೂರು ಬಾರಿ ಪ್ರದಕ್ಷಿಣೆ ಮಾಡಿಸಿ, ಗುಂಡಿಯೊಳಗೆ ಶವವನ್ನು ಇಳಿಸಲಾಯಿತು. 

ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಕುಟುಂಬಸ್ಥರ ಜೊತೆಯಲ್ಲಿ ಗಣ್ಯರೂ ಕೂಡಾ ಪುನೀತ್ ರಾಜಕುಮಾರ್ ಅವರ ದೇಹದ ಮೇಲೆ ಉಪ್ಪು ಮತ್ತು ಮಣ್ಣು ಸಮರ್ಪಿಸುವುದರೊಂದಿಗೆ ಪುನೀತ್ ರಾಜಕುಮಾರ್ ಎಂಬ ಕಲಾಲೋಕದ ತಾರೆ ಮಣ್ಣಲ್ಲಿ ಮಣ್ಣಾಗಿ ಬೆರೆತಾಗ, ಎಲ್ಲರ ಕಣ್ಣಾಲಿಗಳು ತುಂಬಿದ್ದವು ಹಾಗೂ ಹೃದಯ ಭಾರವಾಗಿದ್ದವು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಹೋದ್ಯೋಗಿಗಳಾದ ಕೆ ಗೋಪಾಲಯ್ಯ, ಆರ್ ಅಶೋಕ್, ಮುನಿರತ್ನ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ, ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ ಮತ್ತು ವಂದಿತಾ, ಸೋದರರಾದ ಶಿವ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್, ಕುಟುಂಬಸ್ಥರಲ್ಲಿ ಪ್ರಮುಖರಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ, ಚಿತ್ರ ರಂಗದ ಹೆಸರಾಂತ ಕಲಾವಿದರಾದ ವಿ. ರವಿಚಂದ್ರನ್, ಶಶಿಕುಮಾರ್, ಉಪೇಂದ್ರ, ಜಗ್ಗೇಶ್, ಸುದೀಪ್, ದುನಿಯಾ ವಿಜಿ, ಗಣೇಶ್, ವಿಜಯ ರಾಘವೇಂದ್ರ, ಶ್ರೀ ಮುರಳಿ, ಸಾಧು ಕೋಕಿಲ, ಉಮಾಶ್ರೀ, ತಾರಾ ಅನುರಾಧಾ, ಶೃತಿ, ರಶ್ಮಿಕಾ ಮಂದಣ್ಣ, ರಚಿತಾ ರಾಮ್, ಚಿತ್ರೋದ್ಯಮದ ಗಣ್ಯರಾದ ಸಾ ರಾ ಗೋವಿಂದು, ರಾಕ್ ಲೈನ್ ವೆಂಕಟೇಶ್, ಅಭಿಮಾನಿಗಳ ಸಾಗರವೇ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಂಡರು.

ಲೋಹಿತ್ ಎಂಬ ಹೆಸರಿನಲ್ಲಿ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ  ಪುನೀತ್ ರಾಜಕುಮಾರ್ ಎಂಬ ತಾರೆ ಮಿಂಚಿ ಮರೆಯಾದರೂ, ಕನ್ನಡಿಗರ ಹೃದಯದಲ್ಲಿ ಮಾತ್ರ ಚಿರಸ್ಥಾಯಿಯಾಗಿ ನೆಲೆಸುತ್ತಾರೆ ಎಂಬುದಂತೂ ನಿಶ್ಚಿತ.

Post a Comment

Previous Post Next Post