ಹಾನಗಲ್ ನ ಶಿರಗೋಡ, ಕೊಂಡೋಜಿ, ಅರಳೇಶ್ವರದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಚಾರ ಭಾಷಣದ ಮುಖ್ಯಾಂಶಗಳು:

ಹಾನಗಲ್ ನ ಶಿರಗೋಡ, ಕೊಂಡೋಜಿ, ಅರಳೇಶ್ವರದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಚಾರ ಭಾಷಣದ ಮುಖ್ಯಾಂಶಗಳು:
ಬಿಜೆಪಿ ಪಕ್ಷ ಎಂದರೆ ಬೇಕಾದಾಗ ಬಳಸಿಕೊಂಡು ನಂತರ ಮೂಲೆಗುಂಪು ಮಾಡುತ್ತಾರೆ. ಸಿಎಂ ಉದಾಸಿ ಅವರು ಬದುಕಿದ್ದಾಗ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈಗ ಅವರು ಸತ್ತ ನಂತರ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರು 300-400 ರೂಪಾಯಿಗೆ ಅಡುಗೆ ಸಿಲಿಂಡರ್ ಪಡೆಯುತ್ತಿದ್ದರು. ಆದರೆ ಈಗ 1000 ರೂ. ಆಗಿದೆ. ನಿಮ್ಮ ಖಾತೆಗೆ ಸಬ್ಸಿಡಿ ಹಣ ಬರುತ್ತಿದೆಯಾ? ಇದೆನಾ ಸರ್ಕಾರ ನಿಮಗೆ ನೀಡುವ ಬೆಂಬಲ? ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರಿಗೆ ತಾವು ಮಾಡಿರುವ ಅಭಿವೃದ್ಧಿ ನೋಡಿ ಎಂದು ಹೇಳಿದ್ದಾರೆ. ನಾನು ಪ್ರತಿ ಹಳ್ಳಿಯನ್ನು ನೋಡಿಕೊಂಡು ಬರುತ್ತಲೇ ಇದ್ದೇನೆ. ರಸ್ತೆಗಳಲ್ಲಿ ಬಹಳ ಚೆನ್ನಾಗಿ ಗುಂಡಿಗಳ ಅಭಿವೃದ್ಧಿಯಾಗಿದೆ. ಯುವಕರಲ್ಲಿ ನಿರುದ್ಯೋಗ ಅಭಿವೃದ್ಧಿಯಾಗಿದೆ. ಪಾಪ, ಅವರ ಅಭಿವೃದ್ಧಿಯನ್ನು ನಾವು ನೋಡುತ್ತಲೇ ಇದ್ದೇವೆ. ಇಲ್ಲಿನ ಜನ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದು, ಈಗ ಬಿಜೆಪಿ ಸರ್ಕಾರ ಅವರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಶ್ರೀನಿವಾಸ ಮಾನೆ ಅವರನ್ನು ಶಾಸಕರನ್ನಾಗಿ ಮಾಡಿ, ಅವರು ನಿಮ್ಮ ಪರ ಹೋರಾಟ ಮಾಡಿ ನಿಮ್ಮ ಜಮೀನು ನಿಮ್ಮ ಬಳಿಯೇ ಇರುವಂತೆ ಮಾಡಲಿದ್ದಾರೆ. ಬಂಗಾರಪ್ಪನವರು ಸಿಎಂ ಆಗಿದ್ದಾಗ ಫಾರಂ 53 ಮಾಡಿ ಬಡವರಿಗೆ ಜಮೀನು ನೀಡಿದ್ದರು. ಬಿಜೆಪಿ ಹಾಗೂ ದಳ ಇದ್ದಾಗ ನಿಮಗೆ ಒಂದು ಎಕರೆ ಜಮೀನು ಕೊಟ್ಟಿದ್ದಾರಾ? ಕಾಗೋಡು ತಿಮ್ಮಪ್ಪ ಅವರು ಮತ್ತೆ ಹೊಸದಾಗಿ ಅರ್ಜಿ ಪಡೆದು ರೈತರನ್ನು ಒಕ್ಕಲೆಬ್ಬಿಸಬೇಡಿ, ಉಳುವವನಿಗೆ ಭೂಮಿ ಸಿಗಬೇಕು ಎಂದು ತೀರ್ಮಾನ ಮಾಡಿದರು. ಈಗ ಹೇಳಿ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೋ ಬೇಡವೋ ಎಂದು. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ. ರೈತನಿಗೆ ಸಂಬಳವಿಲ್ಲ, ಬಡ್ತಿ, ಲಂಚವಿಲ್ಲ. ಅವರಿಗೆ ಯಾವುದಾದರೂ ನೆರವು ನೀಡಿದ್ದಾರಾ? ಎಲ್ಲ ಬರೀ ಬುರುಡೆ, ಸುಳ್ಳು. ಸುಳ್ಳಿಗೆ ಯಾವುದಾದರೂ ಪಕ್ಷ ಇದೆ ಎಂದರೆ ಅದು ಬಿಜೆಪಿ. ನಿಮ್ಮ ಭಾಗದ ಅನೇಕರು ಬೆಂಗಳೂರಿನಲ್ಲಿ ಕೂಲಿಗೆ ಹೋಗಿದ್ದಾಗ ಕೋವಿಡ್ ಸಮಯದಲ್ಲಿ ಅವರು ತಮ್ಮ ಊರಿಗೆ ಮರಳುವಾಗ ಅವರಿಂದ ಮೂರುಪಟ್ಟು ಹಣ ಪಡೆದು ಸುಲಿಗೆ ಮಾಡಲು ಮುಂದಾದರು. ನಾನು ಅಲ್ಲಿಗೆ ಹೋಗಿ 1 ಕೋಟಿ ರು. ಚೆಕ್ ಕೊಟ್ಟ ನಂತರ ರಾಜ್ಯ ಸರ್ಕಾರ ಒಂದು ವಾರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದರು. ಕಷ್ಟದಲ್ಲಿದ್ದಾಗ ಕಾಂಗ್ರೆಸ್ ನಿಮಗೆ ಸಹಾಯ ಮಾಡಿದೆ. ಶ್ರೀನಿವಾಸ ಮಾನೆಗೆ ಅಧಿಕಾರ ಇಲ್ಲ. ಆದರೂ ಕಷ್ಟದ ಸಮಯದಲ್ಲಿ ಬಡವರಿಗೆ, ವೃತ್ತಿ ಉಳಿಸಿಕೊಂಡು ಬಂದವರಿಗೆ ಚೆಕ್ ಬರೆದು ಕೊಟ್ಟು ನಿಮ್ಮ ಪಾಲಿನ ಆಪದ್ಭಾಂದವರಾಗಿದ್ದಾರೆ. ಇದರಿಂದ ನಿಮ್ಮ ಬದುಕು ಸಾಗುತ್ತದೆ ಎಂದು ಹೇಳುವುದಿಲ್ಲ. ಆದರೆ ಒಂದು ಹೊತ್ತಿನ ಗಂಜಿಗಾದರೂ ನೆರವು ನೀಡಿದ್ದಾರೆ. ಮಾನೆ ಅವರು ನಮ್ಮ ಪಕ್ಷದ ಮಾನ ಉಳಿಸಿದ್ದು, ಅವರಿಗೆ ಧನ್ಯವಾದಗಳು. ಬಿಜೆಪಿಯವರು ಸರ್ಕಾರದ ಆಹಾರ ಕಿಟ್ ಗೆ ತಮ್ಮ ಫೋಟೋ ಹಾಕಿ ಹಂಚಿದರೆ, ಕಾಂಗ್ರೆಸ್ ನಾಯಕರು ತಮ್ಮ ಶ್ರಮದ ಸಂಪಾದನೆ ಹಣದಲ್ಲಿ ಹಂಚಿದ್ದಾರೆ. ಇದೆ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಇರುವ ವ್ಯತ್ಯಾಸ. ಕಷ್ಟಕ್ಕೆ ಆದವರಿಗೆ ನಿಮ್ಮ ಸ್ವಾಭಿಮಾನದ ಮತ ಸಿಗುತ್ತದೆಯೋ? ಅಥವಾ ಖಾಲಿ ಮಾತಿಗೆ ನಿಮ್ಮ ಮತ ಹಾಕುತ್ತೀರೋ? ಪ್ರಜಾಪ್ರಭುತ್ವದಲ್ಲಿ ಅಧಿಕಾರ ನಶ್ವರ, ಮತದಾರನೇ ಈಶ್ವರ. ನೀವು ಮಾನೆ ಅವರನ್ನು ಗೆಲ್ಲಿಸಬೇಕು ಎಂದು ತೀರ್ಮಾನಿಸಿದರೆ ಯಾರೂ ತಡೆಯಲು ಆಗುವುದಿಲ್ಲ. ಮಾನೆ ಅವರು ನೀಡಿರುವ ನೆರವನ್ನು ಕಣ್ಣಾರೆ ನೋಡಿದ್ದೀರಿ. ಆದರೆ ಬಿಜೆಪಿಯ 20 ಲಕ್ಷ ಕೋಟಿ, ರಾಜ್ಯದ 1900 ಕೋಟಿ ಪ್ಯಾಕೇಜ್ ಕೇವಲ ಕಿವಿಯಲ್ಲಿ ಕೇಳುತ್ತಿದ್ದೀರಿ. ಸತ್ಯ ಕಣ್ಣಿಗೆ ಕಾಣುತ್ತದೆ, ಸುಳ್ಳು ಕೇವಲ ಕಿವಿಯಲ್ಲಷ್ಟೇ ಕೇಳುತ್ತದೆ. ಇದೇ ಸತ್ಯ ಹಾಗೂ ಸುಳ್ಳಿನ ನಡುವಣ ವ್ಯತ್ಯಾಸ. ಬಿಜೆಪಿಯಿಂದ ನಿಮಗೆ ಉಪಯೋಗವಾಗಿದ್ದರೆ ಅವರಿಗೆ ಮತ ಹಾಕಿ. ಯಾವುದೇ ಸಹಾಯ ಮಾಡಿಲ್ಲ ಎಂದರೆ ನೀವು ಯಾಕೆ ಮತ ಹಾಕುತ್ತೀರಿ? ಬಿಜೆಪಿಯವರು ಹಣ ಸುರಿಯುತ್ತಾರೆ. ಯಾರೂ ಬೇಡ ಎನ್ನಬೇಡಿ, ತಗೊಳ್ಳಿ. ಬಿಜೆಪಿ ನೋಟು, ಕಾಂಗ್ರೆಸ್ ಗೆ ವೋಟು. ಮಸ್ಕಿಯಲ್ಲಿ ಬಿಜೆಪಿ ಹಣ ಹಂಚಿದ್ದರೂ, ಆದರೂ ಜನ ಮಾತ್ರ ಮತ ಹಾಕಿದ್ದು ಕಾಂಗ್ರೆಸ್ ಹಸ್ತದ ಗುರುತಿಗೆ. ನಿಮ್ಮದು ಸ್ವಾಭಿಮಾನ ಮತವಾಗಿದ್ದು, ಅದನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿ ಶ್ರೀನಿವಾಸ ಮಾನೆ ಅವರನ್ನು ವಿಧಾನಸೌಧದಲ್ಲಿ ನನ್ನ ಪಕ್ಕದಲ್ಲಿ ಕೂರಿಸಬೇಕು. ಶ್ರೀನಿವಾಸ ಮಾನೆ ಅವರಿಗೆ ನೀಡುವ ಮತ ಈ ಕ್ಷೇತ್ರದ ಸ್ವಾಭಿಮಾನಿ ಮತದಾರನಿಗೆ ನೀಡುವ ಮತವಾಗಲಿದೆ.

Post a Comment

Previous Post Next Post