ಬಿಬಿಎಂಪಿ ವ್ಯಾಪ್ತಿಯಲ್ಲಿ ೪೦೦ಕ್ಕು ಹೆಚ್ಚು ಶಿಥಿಲ ಕಟ್ಟಡಗಳು

ಬಿಬಿಎಂಪಿ ವ್ಯಾಪ್ತಿಯಲ್ಲಿ ೪೦೦ಕ್ಕು ಹೆಚ್ಚು ಶಿಥಿಲ ಕಟ್ಟಡಗಳು ಬೆಂಗಳೂರು ಅ. ೧೯: ಮನೆಗಳ ಕುಸಿತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಬೆಚ್ಚಿ ಬಿದ್ದಿದೆ. ಕಳೆದ ಒಂದು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಏಳಕ್ಕೂ ಹೆಚ್ಚಿನ ಕಟ್ಟಡಗಲು ಧರೆಗುರುಳಿರುವುದು ಈ ಆತಂಕಕ್ಕೆ ಪ್ರಮುಖ ಕಾರಣ. ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ೪೦೦ಕ್ಕೂ ಹೆಚ್ಚಿನ ಹಳೆಯ ಕಟ್ಟಡಗಳು ಬೀಳುವ ಹಂತದಲ್ಲಿ ಇವೆ. ಕೆಲವು ಬಹು ಅಂತಸ್ಥಿನ ಕಟ್ಟಡಗಳೂ ಕೂಡ ಸೇಫಲ್ಲಾ ಎನ್ನುವ ಮಾಹಿತಿಯೂ ಕೂಡ ಲಭ್ಯವಾಗಿದೆ. ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ನೆಲಕ್ಕೆ ಉರುಳಿ ಬಿದ್ದಿತ್ತು. ಅದಾದ ಬಳಿಕ ಬಸವೇಶ್ವರ ನಗರ ಸಮೀಪದ ಕರುಬರಹಳ್ಳಿಯಲ್ಲಿಯಲ್ಲಿ ಬೃಹತ್ ಕಟ್ಟಡ ಕುಸಿದು ಬಿದ್ದಿತ್ತು. ಡೈರಿ ಸರ್ಕಲ್ ಸಮೀಪದ ಮಿಲ್ಕ್ ಕಾಲೋನಿಯಲ್ಲಿ ಮನೆಯೊಂದು ಧರೆಗೆ ಬಿದ್ದಿತ್ತು. ಕಳಪೆ ಕಾಮಗಾರಿ ಹಾಗೂ ಅಕ್ರಮವಾಗಿ ಹೆಚ್ಚುವರಿ ಮಹಡಿ ನಿರ್ಮಿಸಿ ಜನರ ಜೀವಕ್ಕೆ ಅಪಾಯ ತಂದೊಡ್ಡಿರುವ ಕಟ್ಟಡಗಳ ಸಮೀಕ್ಷೆ ನಡೆಸಿರುವ ಬೆಂಗಳೂರು ಮಹಾನಗರ ಪಾಲಿಕೆ ಅಪಾಯದಲ್ಲಿರುವ ೪೦೪ ಕಟ್ಟಡಗಳನ್ನು ಗುರುತಿಸಿದೆ. ಈ ಕಟ್ಟಡಗಳು ಕುಸಿದು ಬೀಳುವ ಅಪಾಯದಲ್ಲಿದ್ದು, ಕಟ್ಟಡಗಳ ಸದೃಢತೆ ಬಗ್ಗೆ ಪರೀಕ್ಷಿಸಿ ವರದಿ ನೀಡಲು ತಜ್ಞ ಇಂಜಿನಿಯರ್ ಗಳಿಗೆ ಸೂಚಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ೨೦೧೮ ರಲ್ಲಿಯೇ ಕುಸಿಯುವ ಹಂತದಲ್ಲಿ ಇರುವ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಿತ್ತು. ಈ ವೇಳೆ ೧೯೫ ಕಳಪೆ ಕಟ್ಟಡಗಳನ್ನು ಇಂಜಿನಿಯರ್‌ಗಳು ಪತ್ತೆ ಮಾಡಿದ್ದರು. ಅಕ್ರಮ ಹಾಗೂ ಕಳಪೆ ಕಟ್ಟಡಗಳನ್ನು ಪತ್ತೆ ಮಾಡುವ ಸರ್ವೆಗೆ ಬೆಂಗಳೂರು ಪಾಲಿಕೆಯ ಕಾರ್ಪೋರೇಟರ್‌ಗಳೇ ಅಡ್ಡಿ ಪಡಿಸಿದ್ದರು. ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ ಗುಪ್ತಾ ಅವರ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎಂಟು ವಲಯದಲ್ಲಿ ೪೦೫ ಕಳಪೆ ಕಟ್ಟಡಗಳನ್ನು ಗುರುತಿಸಿದ್ದು, ನೆಲಸಮ ಮಾಡಲು ಚಿಂತನೆ ಮಾಡಲಾಗಿದೆ. ನೆಲಸಮಕ್ಕೂ ಮೊದಲು ಕಟ್ಟಡಗಳ ಸದೃಢತೆ ಬಗ್ಗೆ ಪರೀಕ್ಷಿಸಿ ವರದಿ ಆಧರಿಸಿ ಬಿಬಿಎಂಪಿ ನೆಲಸಮ ಮಾಡಲಿದೆ ಎಂದು ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಬಿಬಿಎಂಪಿ ಕಾಯ್ದೆ ಸೆಕ್ಷನ್ ೨೫೬ ರ ಪ್ರಕಾರ ಅಪಾಯಕಾರಿ ಕಟ್ಟಡಗಳನ್ನು ನೆಲಸಮ ಮಾಡಿ ಕ್ರಮ ಕೈಗೊಳ್ಳುವ ಅಧಿಕಾರ ಪಾಲಿಕೆ ಆಯುಕ್ತರಿಗೆ ಇದೆ. ಶಿಥಿಲ ವ್ಯವಸ್ಥೆ ತಲುಪಿರುವ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಬೇಕು. ಕೂಡಲೇ ಕಟ್ಟಡಗಳನ್ನು ಸರಿಪಡಿಸಬೇಕು, ಇಲ್ಲವೇ ನೆಲಸಮಾ ಮಾಡಬೇಕು. ಅಕ್ರಮವಾಗಿ ತಲೆಯೆತ್ತಿರುವ ಕಟ್ಟಡ ಹಾಗೂ ಶಿಥಿಲ ವ್ಯವಸ್ಥೆಯಲ್ಲಿರುವ ಕಟ್ಟಡಗಳ ವಿರುದ್ಧ ಕ್ರಮ ಜರುಗಿಸಲು ಬಿಬಿಎಂಪಿ ಹಾಗೂ ಮುನಿಸಿಪಲ್ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ಇದೆ. ಹೀಗಿದ್ದರೂ ಕೂಡ ಪಾಲಿಕೆಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶ. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವ ಪಾಲಿಕೆ ಅಧಿಕಾರಿಗಳು ಕಟ್ಟಡಗಳನ್ನು ಸರಿಯಾಗಿ, ಕಾನೂನು ಬದ್ದವಾಗಿ ನಿರ್ಮಿಸಲಾಗುತ್ತಿದೆಯೇ ಎನ್ನುವ ಬಗ್ಗೆ ಯಾವುದೇ ತಪಾಸಣೆ ನಡೆಸುತ್ತಿಲ್ಲ, ಪರಿಣಾಮ, ನಿಯಮ ಬಾಹಿರವಾಗಿ ಕಟ್ಟಡಗಳು ತಲೆ ಎತ್ತುತ್ತಿವೆ. ೨ ಅಥವಾ ೩ ಅಂತಸ್ತಿನ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದಕ್ಷಿಣ ವಲಯದಲ್ಲಿ- ೧೩೬, ಪಶ್ಚಿಮ ವಲಯದಲ್ಲಿ - ೧೨೯, ಪೂರ್ವ ವಲಯದಲ್ಲಿ - ೧೧೩, ಮಹದೇವಪುರ ವಲಯದಲ್ಲಿ ೨೭, ರಾಜ ರಾಜೇಶ್ವರಿ ನಗರ ವಲಯದಲ್ಲಿ ೧೨, ಬೊಮ್ಮನಹಳ್ಳಿಯಲ್ಲಿ ೯, ಯಲಹಂಕದಲ್ಲಿ ೧೪೪,ದಾಸರಹಳ್ಳಿಯಲ್ಲಿ ೧೨ ಕಟ್ಟಡಗಳನ್ನು ಶಿಥಿಲ ಕಟ್ಟಡಗಳನ್ನು ಗುರುತಿಸಲಾಗಿದೆ.

Post a Comment

Previous Post Next Post