ಕೋಜಾಗರಿ_ಹುಣ್ಣಿಮೆ (ಶರದ ಪೂರ್ಣಿಮೆ)ಈ ದಿನವೇ ಶ್ರೀಕೃಷ್ಣನು ವ್ರಜಮಂಡಲದಲ್ಲಿ ರಾಸಕ್ರೀಡೆಯನ್ನಾಡಿದನೆಂದು ಶ್ರೀಮದ್‌ಭಾಗವತದಲ್ಲಿ ಹೇಳಲಾಗಿದೆ.

ಕೋಜಾಗರಿ_ಹುಣ್ಣಿಮೆ (ಶರದ ಪೂರ್ಣಿಮೆ)
ಈ ದಿನವೇ ಶ್ರೀಕೃಷ್ಣನು ವ್ರಜಮಂಡಲದಲ್ಲಿ ರಾಸಕ್ರೀಡೆಯನ್ನಾಡಿದನೆಂದು ಶ್ರೀಮದ್‌ಭಾಗವತದಲ್ಲಿ ಹೇಳಲಾಗಿದೆ. 

ಮಹತ್ವ 

 ಈ ದಿನ ಚಂದ್ರನು ಭೂಮಿಗೆ ಅತ್ಯಂತ ಸಮೀಪ ಬಂದಿರುತ್ತಾನೆ, ಆದುದರಿಂದ ಅವನು ದೊಡ್ಡದಾಗಿ ಕಾಣಿಸುತ್ತಾನೆ. ಮೂಲ ಚಂದ್ರತತ್ತ್ವದ ಅಂದರೆ, ‘ಚಂದ್ರಮ’ನನ್ನು ಪ್ರತಿನಿಧಿಸುವ ಮತ್ತು ನಮಗೆ ಕಾಣಿಸುವ ಚಂದ್ರನು, ‘ಚಂದ್ರಮ’ನಂತೆಯೇ ಶೀತಲ ಹಾಗೂ ಆಹ್ಲಾದದಾಯಕವಾಗಿದ್ದಾನೆ. 

ಸಾಧಕರು ಚಂದ್ರನ ಶೀತಲತೆಯನ್ನು ಈಶ್ವರನ ಅವತಾರಗಳಿಂದ ಅನುಭವಿಸಬಲ್ಲರು. ಆದುದರಿಂದಲೇ ರಾಮಚಂದ್ರ, ಕೃಷ್ಣಚಂದ್ರ ಎನ್ನುವ ಹೆಸರುಗಳನ್ನು ರಾಮ-ಕೃಷ್ಣರಿಗೆ ಕೊಡಲಾಗಿದೆ. ಚಂದ್ರನ ಈ ಗುಣದಿಂದಲೇ ‘ನಕ್ಷತ್ರಾಣಾಮಹಂ ಶಶಿ’ ಅಂದರೆ ‘ನಕ್ಷತ್ರಗಳಲ್ಲಿ ನಾನು ಚಂದ್ರನಾಗಿದ್ದೇನೆ’ ಎಂದು ಭಗವಾನ ಶ್ರೀಕೃಷ್ಣನು ಶ್ರೀಮದ್‌ಭಗವದ್ಗೀತೆ ಯಲ್ಲಿ (೧೦:೨೧) ಹೇಳಿದ್ದಾನೆ.
 
 ಮಧ್ಯರಾತ್ರಿಯಲ್ಲಿ ಶ್ರೀ ಲಕ್ಷ್ಮೀಯು ಚಂದ್ರಮಂಡಲದಿಂದ ಭೂಮಂಡಲಕ್ಕೆ ಬಂದು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದಾರೆ?’, ಎಂದು ಕೇಳಿ ಎಚ್ಚರವಾಗಿರುವವರನ್ನು ಧನಧಾನ್ಯಗಳಿಂದ ಸಂತುಷ್ಟರನ್ನಾಗಿ ಮಾಡುತ್ತಾಳೆ. 

🌸🌸🌸🌸🌸🌸
*ಕೋಜಾಗರ ವ್ರತ*
🌸🌸🌸🌸🌸🌸

ಶ್ರೀಮಹಾಲಕ್ಷ್ಮಿ ಮಂತ್ರ-

ನಮಸ್ತೇ ಸರ್ವದೇವಾನಾಂ ವರದಾಸಿ ಹರಿಪ್ರಿಯೇ | 
ಯಾ ಗತಿಸ್ತ್ವತ್ ಪ್ರಪನ್ನಾನಾಂ ಸಾ ಮೇ ಭೂಯಾತ್ ತ್ವದರ್ಚನಾತ್ || 

ಶ್ರೀ ಇಂದ್ರಮಂತ್ರ- 
ಚತುರ್ದಂತ ಸಮಾರೂಢೋ ವಜ್ರಪಾಣೀ ಪುರಂದರಃ |ಶಚಿಪತಿಶ್ಚ ಧಾತವ್ಯೋ ನಾನಾಭರಣ ಭೂಷಿತಃ||

ಕೋಜಾಗರಿ ವ್ರತ ಎಂದರೇನು? 

ಹಾಲು ಚೆಲ್ಲಿದಂತಹ ಬೆಳದಿಂಗಳು. ಆಕಾಶ ತಂಬ ನಕ್ಷತ್ರ ರಾಶಿ. ನಡುವೆ ಬೆಳ್ಳಿತಟ್ಟೆಯಂತೆ ಹೊಳೆವ ಶರತ್ ಚಂದಿರ. ಸುಮನೋಹರ ವಾತಾವರಣದಲ್ಲಿ ಶ್ರೀಶಂಕರ-ಪಾರ್ವತಿಯರು  ಪುತ್ರನಾದ ಕಾರ್ತಿಕೇಯನೊಂದಿಗೆ ಭೂಲೋಕಕ್ಕೆ ಬರುವ ದಿನ ಶೀಗಿ ಹುಣ್ಣಿಮೆ. 

ಇಂದು ಯಾರು ಉಪವಾಸ ಮತ್ತು ರಾತ್ರಿ ಜಾಗರಣೆ ಮಾಡಿ ವ್ರತ ಆಚರಿಸುವರೋ ಅವರಿಗೆ ಶ್ರೀಗೌರಿ ಶ್ರೀಮಹಾಲಕ್ಷ್ಮೀ ದೇವಿಯರು ಸಕಲ ಸೌಖ್ಯವನ್ನು ಕರುಣಿಸುತ್ತಾರೆ. 

ಯಾರು ರಾತ್ರಿ ಜಾಗರಣೆ ಮಾಡಿ ಶಾರದೀಯ ಪೂರ್ಣಚಂದ್ರ ದರ್ಶನ ಮಾಡುತ್ತಾರೆ ಎಂದು ದೇವಿ ನೋಡುತ್ತಾಳೆ. ಆದ್ದರಿಂದ ಈ ವ್ರತ "ಕೋ-ಜಾಗರ".

ಇದು ಇಂದ್ರ-ಇಂದ್ರಾಣಿಯ ವಿಶೇಷ ಪೂಜೆ ಇರುವ ಈ ವ್ರತವನ್ನು ನಿಷ್ಠೆಯಿಂದ ಮಾಡಿದರೆ ಇಷ್ಟ ಫಲ ಲಭಿಸುವದು. ಕಾರ್ತಿಕೇಯ ಪೂಜೆಯ ಮಹತ್ವವೂ ಇರುವದರಿಂದ  ಕುಮಾರ-ಕೌಮುದಿ  ಪೂರ್ಣಿಮಾ ಎಂದೂ ಕರೆಯುತ್ತಾರೆ.
 
ವಲಿತನ ಕಥೆ: 
ಈ ವ್ರತಾಚರಣೆ ಕುರಿತು ಸನತ್ಕುಮಾರ ಸಂಹಿತೆಯಲ್ಲಿ ವಾಲಕಿಲ್ಹ ಋಷಿಗಳು ಒಂದು ದೃಷ್ಟಾಂತದ ಮೂಲಕ ಕೋಜಾಗೌರಿ ಮಹತ್ವ ಹೇಳುತ್ತಾರೆ.
ಮಗಧ ದೇಶದಲ್ಲಿ (ಈಗಿನ ಬಂಗಾಲ) ವಲಿತನೆಂಬ ಬಡ ಬ್ರಾಹ್ಮಣನಿರುತ್ತಾನೆ. 
ಆತನಿಗೆ ಸಾಕಷ್ಟು ವಿದ್ಯೆಯಿದ್ದರೂ ಬಡತನವಿತ್ತು. ಇದೇ ಕಾರಣಕ್ಕೆ ಆತನ ಹೆಂಡತಿ ಅವನೊಂದಿಗೆ ಚಿಕ್ಕ ಚಿಕ್ಕ ವಿಷಯಕ್ಕೂ ಜಗಳವಾಡುತ್ತಿದ್ದಳು. ಒಮ್ಮೆ ಅವಳು ಸಿಟ್ಟಿನ ಭರದಲ್ಲಿ ಪಿತೃಶ್ರಾದ್ಧವಿದ್ದಾಗ ಪಿಂಡಕ್ಕೆ ಸಮರ್ಪಿಸಬೇಕಾದ ಅನ್ನವನ್ನು ಗಂಗಾನದಿಯ ಸಮೀಪದಲ್ಲಿರುವ ತಿಪ್ಪೆಗೆ ಎಸೆದು ಬಿಡುತ್ತಾಳೆ. 
ಇದರಿಂದ ಮನನೊಂದ ವಲಿತ ಮನೆಬಿಟ್ಟು ಹೋಗುತ್ತಾನೆ. ಅಡವಿಯಲ್ಲಿ ಆತನಿಗೆ ನಾಗಕನ್ನಿಕೆಯರು ಭೆಟ್ಟಿಯಾಗುತ್ತಾರೆ. ಅವರು ಕೋಜಾಗರಿ ವ್ರತ ಆಚರಿಸುತ್ತಿರುತ್ತಾರೆ. ರಾತ್ರಿಯೆಲ್ಲ ಜಾಗರಣೆ ಮಾಡುವುದಕ್ಕಾಗಿ ಅವರು ಆಟವಾಡಲು ಆರಂಭಿಸುತ್ತಾರೆ. 

ಆಗ ಆಕಸ್ಮಿಕವಾಗಿ ಅವರು ವಲಿತನನ್ನು ನೋಡಿ ತಮ್ಮೊಂದಿಗೆ ಆಟಕ್ಕೆ ಕರೆಯುತ್ತಾರೆ. ಅಂದು ಅಶ್ವಿನ ಪೌರ್ಣಿಮೆ, ಕೋಜಾಗರಿ ವ್ರತ ಇರುವದರಿಂದ ಶ್ರೀಮಹಾಲಕ್ಷ್ಮೀ ದೇವಿಯು ಆಕಾಶಮಾರ್ಗವಾಗಿ ಸಂಚಾರದಲ್ಲಿರುತ್ತಾಳೆ. 

ವಲಿತ ತನಗೆ ತಿಳಿಯದೆ ಅಂದು ಜಾಗರಣೆ ಮಾಡುತ್ತಾನೆ. ಅದರ ಫಲವಾಗಿ ವಲಿತ ಸುರಸುಂದರನಾಗಿ ಮನ್ಮಥನಂತೆ ಕಂಗೊಳಿಸುತ್ತಾನೆ. ನಾಗ ಕನ್ನಿಕೆಯರು ಅವನಿಗೆ ಒಲಿಯುತ್ತಾರೆ. ಅಲ್ಲದೇ ಬಹು ಸಂಪತ್ತನ್ನು ಅವನಿಗೆ ಕೊಡುತ್ತಾರೆ. ಮುಂದೆ ವಲಿತ ಪತ್ನಿ ಸಹಿತನಾಗಿ ಸಂತೋಷದಿಂದ ವ್ರತವನ್ನು ಆಚರಿಸುತ್ತಾ ಬಹುಕಾಲ ಬಾಳುತ್ತಾನೆ. 

ಉತ್ತರ ಕರ್ನಾಟಕದಲ್ಲಿ ಶೀಗಿಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯವಿದೆ. ಇಂದ್ರ-ಇಂದ್ರಾಣಿ, ಶಿವ-ಪಾರ್ವತಿ, ಶ್ರೀಮಹಾಲಕ್ಷ್ಮಿ ಸಹಿತ ಶ್ರೀಕರ ಪೂಜೆ ಮಾಡುತ್ತಾರೆ. ದೇವರ ಭಜನೆ, ಸ್ತೋತ್ರಗಳಿಂದ ವ್ರತ ಆಚರಿಸುತ್ತಾರೆ. ಪಗಡೆ ಆಡುತ್ತಾರೆ.

ರಾತ್ರಿಯ ವೇಳೆ ಮನೆಯ ಹೊರಗೆ ದೊಡ್ಡಪಾತ್ರೆಯಲ್ಲಿ ಹಾಲುಇಟ್ಟು ಆ ಹಾಲಿನಲ್ಲಿ ಚಂದ್ರಬಿಂಬ ದರ್ಶನ ಮಾಡಿ, ಚಂದ್ರಪ್ರಾರ್ಥನೆ ಯೊಂದಿಗೆ ದೇವರಿಗೆ ಹಾಲನ್ನು ನೈವೇದ್ಯ ಮಾಡುತ್ತಾರೆ.

ಗುಜರಾತದಲ್ಲಿ ಶರದ್ ಪೌರ್ಣಿಮೆಯಂದು ಗರ್ಬಾನೃತ್ಯ ಮಾಡುತ್ತ ಜಾಗರಣೆ ಮಾಡುವುದು ವಾಡಿಕೆ.

ಬಂಗಾಲದಲ್ಲಿ ಇದನ್ನು `ಲೋಕ್ಹಿ ಪೂಜೋ' ಎನ್ನುತ್ತಾರೆ. ಅಂದು ಶ್ರೀಮಹಾಲಕ್ಷ್ಮೀ ದೇವಿಗೆ ಅನೇಕ ತರಹದ ತಿಂಡಿ-ತಿನಿಸುಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.
 
ಮಿಥಿಲಾ ಪ್ರದೇಶದಲ್ಲಿ ಇದನ್ನು ಕೋಜಾಗರ ವ್ರತ ಎಂದೇ ಕರೆಯುವರು. ಅಂದು ಮನೆಯನ್ನು ಚೆನ್ನಾಗಿ ಅಲಂಕರಿಸಿ. ಅಂಗಳವನ್ನು ತಳಿರು ತೋರಣಗಳಿಂದ ಸಿಂಗರಿಸಿ ಅಕ್ಕಿ ಹಿಟ್ಟಿನ ಪೇಸ್ಟಿನಿಂದ ರಂಗವಲ್ಲಿ ಇಟ್ಟು ಎಲ್ಲ ದೇವ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸುವರು. 

ದೇವರಿಗೆ ಪ್ರಾರ್ಥನೆ ಸಲ್ಲಿಸಿ ಖೀರು, ಪಾಯಸ, ಬೆಣ್ಣೆ, ತಾಂಬೂಲ ಸಹಿತ ನೈವೇದ್ಯ ಅರ್ಪಿಸುವರು. ರಾತ್ರಿಯೆಲ್ಲ ದೇವರ ವಿಗ್ರಹಗಳು ಅಲ್ಲಿಯೇ ಇರುತ್ತವೆ. ಅವರು ಶರತ್ ಪೌರ್ಣಿಮೆಯನ್ನು `ಅಮೃತ ಬರ್ಖಾ' ಎನ್ನುತ್ತಾರೆ.

ಮದುವೆಯಾದ ಮೊದಲವರ್ಷ ನವದಂಪತಿಗಳು ವ್ರತವನ್ನು ಆಚರಿಸಿ ವರವನ್ನು ಬೇಡುವರು. ಹೆಣ್ಣಿನ ಮನೆಯನ್ನು ಅಕ್ಕಿಹಿಟ್ಟಿನ ಪೇಸ್ಟಿನಿಂದ ಸಿಂಗರಿಸಿ ಯಥಾವತ್ತಾಗಿ ದೇವರನ್ನು ಪೂಜಿಸುವರು. ರಾತ್ರಿಹೊತ್ತು ಆಟವಾಡುತ್ತ ಜಾಗರಣೆ ಮಾಡುತ್ತಾರೆ. ಸಿಹಿ ತಾಂಬೂಲ ಹಾಗೂ ಬೆಣ್ಣೆಯನ್ನು ಸವಿಯುತ್ತಾರೆ. 
ಅಳಿಯನಿಗೆ ಹಣ್ಣು ಹಂಪಲು, ಜನಿವಾರ, ಲವಂಗ, ಯಾಲಕ್ಕಿ, ಬೆಳ್ಳಿ ನಾಣ್ಯ, ಬೆಳ್ಳಿ ಆಮೆ, ಮೀನು, ಮಿಥಿಲಾ ಪೇಂಟಿಂಗ್ಸ್, ಅಕ್ಕಿ ಮುಂತಾದ ಸಾಮಗ್ರಿಗಳನ್ನು ಒಂದು ದೊಡ್ಡ ಬುಟ್ಟಿಯಲ್ಲಿ ತುಂಬಿ ಕೊಡುತ್ತಾರೆ. ಅಳಿಯ ತನ್ನ ಪತ್ನಿಯ ಎಲ್ಲ ಸಂಬಂಧಿಗಳಿಗೆ  ಹೊಸಬಟ್ಟೆ ಇತ್ಯಾದಿ ಉಡುಗೊರೆ ಕೊಡುತ್ತಾನೆ. ಇದು ಒಂದು ರೀತಿ ಅಳಿಯತನ ಇದ್ದಂತೆ. 

ಈ ವ್ರತದ ಕುರಿತು ಮಿಥಿಲೆಯಲ್ಲಿ ಒಂದು ಕಥೆ ಜನಜನಿತವಾಗಿದೆ. ಶ್ರೀಲಕ್ಷ್ಮೀ-ಅಲಕ್ಷ್ಮೀ ಇಬ್ಬರೂ ಅಕ್ಕತಂಗಿಯರು. ಶ್ರೀಲಕ್ಷ್ಮೀಗೆ ಸಿಹಿಖಾದ್ಯ ಇಷ್ಟ(ಸತ್ವ). ಅವಳು  ಅದೃಷ್ಟದ  ಗುರುತು
ಅಲಕ್ಷ್ಮೀಗೆ ಮಸಾಲೆ, ಖಾರ, ಉಪ್ಪು (ರಾಜಸ) ಹೆಚ್ಚಾಗಿ ಬೇಕು. ಅವಳು ಅನಿಷ್ಟದ ಪ್ರತೀಕ. ಅದಕ್ಕೆ ರಾತ್ರಿ ಮಸಾಲೆ ತಿನಿಸುಗಳನ್ನುಗಳನ್ನು ಹೊರಗೆ ಇಡುತ್ತಾರೆ.  ಸಿಹಿತಿನಿಸನ್ನು ಮನೆಯ ಒಳಗೆ ಇಡುವರು. 

ದರಿದ್ರ ಲಕ್ಷ್ಮೀ ಹೊರಗಿರುವ ಮಸಾಲೆ ಖಾದ್ಯ ಮೆದ್ದು ಹೊರಗೇ ಹೋಗುತ್ತಾಳೆ. ಅದೃಷ್ಟ ಲಕ್ಷ್ಮೀ ಒಳಗಿರುವ ಸಿಹಿ ಪದಾರ್ಥಗಳನ್ನು ಮನೆಯೊಳಗೆ ಬಂದು ನೈವೇದ್ಯ ಸ್ವೀಕರಿಸುವಳು.

ಎಲ್ಲರೂ ಜಾಗೃತ(ಕೋ-ಜಾಗರಿ)ರಾಗಿದ್ದರೆ ಯಾವದೇ ಸಮಸ್ಯೆ ಉಂಟಾಗಲಾರದು. ಜಾಗೃತಿಯೇ ಅಭಿವೃದ್ಧಿಯ ಮೊದಲ ಹೆಜ್ಜೆ. ಯಾವುದೇ ಸಾಧನೆಗೆ ಕಠಿಣ ಪರಿಶ್ರಮದೊಂದಿಗೆ ಜಾಗೃತಿ ಅವಶ್ಯ. ಅದಕ್ಕೆ ಅದೃಷ್ಟವೂ ಸೇರಬೇಕು. ಅದಕ್ಕಾಗಿ ಕೋಜಾಗರಿ ವ್ರತ ಆಚರಿಸಬಹುದು.

ಉತ್ಸವವನ್ನು ಆಚರಿಸುವ ಪದ್ಧತಿ
 ಈ ದಿನ ನವಾನ್ನ (ಹೊಸತಾಗಿ ಬೆಳೆದ ಧಾನ್ಯದಿಂದ) ಊಟವನ್ನು ಮಾಡುತ್ತಾರೆ. ಶ್ರೀ ಲಕ್ಷ್ಮೀ ಮತ್ತು ಐರಾವತದ ಮೇಲೆ ಕುಳಿತ ಇಂದ್ರನ ಪೂಜೆಯನ್ನು ಮಾಡುತ್ತಾರೆ. ಪೂಜೆಯಾದ ಮೇಲೆ ಅವಲಕ್ಕಿ ಮತ್ತು ಎಳನೀರನ್ನು ದೇವರಿಗೆ ಮತ್ತು ಪಿತೃಗಳಿಗೆ ಸಮರ್ಪಿಸಿ ನಂತರ ನೈವೇದ್ಯವೆಂದು ಸೇವಿಸುತ್ತಾರೆ ಮತ್ತು ತಮ್ಮ ಕಡೆಗೆ ಬಂದವರಿಗೆಲ್ಲರಿಗೂ ಪ್ರಸಾದವೆಂದು ಕೊಡುತ್ತಾರೆ. ಶರದ ಋತುವಿನ ಪೂರ್ಣಿಮೆಯ ಸ್ವಚ್ಛ ಬೆಳದಿಂಗಳಿನಲ್ಲಿ ಚಂದ್ರನಿಗೆ ಕುದಿಸಿ ಗಟ್ಟಿ ಮಾಡಿದ ಹಾಲಿನ ನೈವೇದ್ಯವನ್ನು ಮಾಡುತ್ತಾರೆ, ಆಮೇಲೆ ನೈವೇದ್ಯವೆಂದು ಆ ಹಾಲನ್ನು ಸೇವಿಸುತ್ತಾರೆ. ಚಂದ್ರನ ಪ್ರಕಾಶದಲ್ಲಿ ಒಂದು ವಿಧದ ಆಯುರ್ವೇದಿಯ ಶಕ್ತಿಯಿದೆ. ಆದ್ದರಿಂದಾಗಿ ಈ ಹಾಲು ಆರೋಗ್ಯ ದಾಯಕವಾಗಿದೆ. ಈ ರಾತ್ರಿ ಜಾಗರಣೆ ಮಾಡುತ್ತಾರೆ. ಮನೋರಂಜನೆಗಾಗಿ ಕುಳಿತು ಆಡುವ ವಿವಿಧ ಆಟಗಳನ್ನು ಆಡುತ್ತಾರೆ. ಮರುದಿನ ಬೆಳಗ್ಗೆ ಪೂಜೆಯ ಪಾರಣೆ (ಉಪವಾಸವನ್ನು ಬಿಡುವುದು) ಯನ್ನು ಮಾಡುತ್ತಾರೆ. 

ಭಾವಾರ್ಥ: ಕೋಜಾಗರಿಯ ರಾತ್ರಿ ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿರುತ್ತಾರೆಯೋ, ಅವರಿಗೆ ಮಾತ್ರ ಅಮೃತಪ್ರಾಶನದ ಲಾಭವು ದೊರೆಯುತ್ತದೆ!

 ಕೋಜಾಗರ = ಕೋ + ಓಜ + ಆಗರ. ಈ ದಿನದಂದು ಎಲ್ಲರಿಗೂ ಚಂದ್ರನ ಕಿರಣಗಳಿಂದ ಆತ್ಮಶಕ್ತಿರೂಪೀ (ತೇಜಸ್ಸು) ಆನಂದ, ಆತ್ಮಾನಂದ, ಬ್ರಹ್ಮಾನಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ; ಆದರೆ ಈ ಅಮೃತಪ್ರಾಶನ ಮಾಡಲು ‘ಕೋ ಜಾಗ್ರತಿ?’, ಅಂದರೆ ‘ಯಾರು ಜಾಗೃತರಾಗಿದ್ದಾರೆ? ಯಾರು ಎಚ್ಚರಿಕೆಯಿಂದ ಇದ್ದಾರೆ? ಯಾರು ಇದರ ಮಹತ್ವವನ್ನು ಅರಿತಿದ್ದಾರೆ? ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿದ್ದಾರೆಯೋ ಮತ್ತು ಯಾರಿಗೆ ಇದರ ಮಹಾತ್ಮೆಯು ತಿಳಿದಿದೆಯೋ, ಅವರಿಗೆ ಮಾತ್ರ ಈ ಅಮೃತಪ್ರಾಶನದ ಲಾಭ ದೊರೆಯುತ್ತದೆ ಎಂದು ಋಷಿಗಳು ಹೇಳುತ್ತಾರೆ.’

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು
         ಸರ್ವಜನಾಃ ಸುಖಿನೋಭವತು 
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Post a Comment

Previous Post Next Post