ರಾಜ್ಯಪಾಲರು, ಮುಖ್ಯ ಮಂತ್ರಿ ಶೋಕ

ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ನಿಧನಕ್ಕೆ ಗೌರವಾನ್ವಿತ ರಾಜ್ಯಪಾಲರ ಸಂತಾಪ

ಬೆಂಗಳೂರು ಅಕ್ಟೋಬರ್ 29(ಕರ್ನಾಟಕ ವಾರ್ತೆ):

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಸಂತಾಪ ಸೂಚಿಸಿದ್ದಾರೆ.  ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಇವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರಿಗೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬಸ್ಥರು ಹಾಗೂ ನಾಡಿನ ಜನತೆಗೆ ಈ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಗೌರವಾನ್ವಿತ ರಾಜ್ಯಪಾಲರು ಸಂತಾಪ ಸೂಚಿಸಿದ್ದಾರೆ.

ಪುನೀತ್ ರಾಜಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ;  
ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಬೆಂಗಳೂರು ಅಕ್ಟೋಬರ್ 29(ಕರ್ನಾಟಕ ವಾರ್ತೆ): 

ವರನಟ ಡಾ.ರಾಜಕುಮಾರ್ ಸುಪುತ್ರ, ಖ್ಯಾತ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹೊಂದಿರುವುದು ಅತೀವ ಆಘಾತವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಕಿರಿಯ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಜನಪ್ರಿಯ ಮೇರು ನಟ, ಯುವಜನತೆಯ ಕಣ್ಮಣಿ, ಯೂಥ್ ಐಕಾನ್ ಆಗಿದ್ದ ಪುನೀತ್ ನಿಧನ ಹೊಂದಿರುವುದು ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ, ವಿಧಿಯ ಕ್ರೂರ ಆಟ” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

"ವೈಯಕ್ತಿಕವಾಗಿ ಅತ್ಯಂತ ಆತ್ಮೀಯ ಸಹೃದಯ ಬಂಧುವನ್ನು ಕಳೆದುಕೊಂಡಿದ್ದೇನೆ. ಅವರ ಉತ್ಸಾಹ, ಪ್ರತಿಭೆ, ಅವರ ಅನೇಕ ಅತ್ಯುತ್ತಮ ಚಲನಚಿತ್ರಗಳನ್ನು, ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ನಾಡಿನ ಸಮಸ್ತ ಜನತೆಯ ಮನೆ, ಮನ ತಲುಪಿದ್ದ ಅವರ ವ್ಯಕ್ತಿತ್ವವನ್ನು ಮರೆಯುವುದು ಸಾಧ್ಯವೇ ಇಲ್ಲ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ."

ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

*ಸಂಯಮದಿಂದ ವರ್ತಿಸಿಅಭಿಮಾನಿಗಳಿಗೆ ಮನವಿ

 ಈ ದುಃಖಕರ ಸನ್ನಿವೇಶದಲ್ಲಿ, ಭಾವಾವೇಶಕ್ಕೆ ಒಳಗಾಗಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ, ಶಾಂತಿ, ಸಂಯಮದಿಂದ ವರ್ತಿಸಿ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿಗಳು ಪುನೀತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.




ಪುನೀತ ರಾಜಕುಮಾರ ಅವರ ನಿಧನಕ್ಕೆ ಸಭಾಪತಿ ಬಸವರಾಜ ಹೊರಟ್ಟಿ  ತೀವ್ರ ಸಂತಾಪ

ಬೆಂಗಳೂರು, ಅಕ್ಟೋಬರ್ 29 (ಕರ್ನಾಟಕ ವಾರ್ತೆ):  

ಕನ್ನಡದ ಚಿತ್ರರಂಗದ ಉದಯೋನ್ಮುಖ ನಾಯಕ ನಟ, ಪವರ್ ಸ್ಟಾರ್ ಪುನೀತ ರಾಜಕುಮಾರ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಬ್ಬ ಬಾಲ ನಟನಾಗಿ ಕನ್ನಡ ಚಿತ್ರ ರಂಗ ಪ್ರವೇಶಿಸಿದ ಪುನೀತ ರಾಜಕುಜಮಾರ ಅವರು,  ಡಾ|| ರಾಜಕುಮಾರ ರವರಂತೆಯೇ ಕನ್ನಡ ಚಿತ್ರರಂಗದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದರು.
ಬಾಲ ನಟನಾಗಿ ರಾಜಕುಮಾರ ಅಭಿನಯದ ‘ಬೆಟ್ಟದ ಹೂವು’ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದು ಇಡೀ ಕನ್ನಡ ಚಿತ್ರರಂಗದ ಗಮನ ಸೆಳೆದದ್ದು ಇನ್ನೂ ಜನಮಾನಸದಲ್ಲಿ ಉಳಿದಿದೆ.
ನಾಯಕ ನಟನಾಗಿ ಪುನೀತ ರಾಜಕುಮಾರ ಅಭಿನಿಯಿದ್ದ ‘ವೀರ ಕನ್ನಡಿಗ’ ‘ರಾಜಕುಮಾರ’ ‘ನಟಸಾರ್ವಭೌಮ’ ಸೇರಿದಂತೆ ಅನೇಕ ಚಿತ್ರಗಳಲ್ಲಿಯ ಅವರ ಅದ್ಭುತ  ನಟನಾ ಪ್ರತಿಭೆ ಕನ್ನಡಿಗರ ಮನಸೂರೆಗೊಂಡಿತ್ತು.
ಪುನೀತ ರಾಜಕುಮಾರ್ ಅವರ ಸಾಮಾಜಿಕ ಕಳಕಳಿ,  ನೊಂದವರಿಗೆ ನೆರವು ನೀಡುವ ಮಾನವೀಯ ಗುಣಗಳು ಎಲ್ಲರಿಗೂ ಮಾದರಿಯಾಗಿವೆ.

ಪುನೀತ ರಾಜಕುಮಾರ ಅವರ ಅಕಾಲಿಕ ನಿಧನ ಸಮಸ್ತ  ಚಿತ್ರರಂಗ ಮತ್ತು ಇಡೀ ಕನ್ನಡ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು  ಕಂಬನಿ ಮಿಡಿದಿರುವ ಸಭಾಪತಿ ಬಸವರಾಜ ಹೊರಟ್ಟಿ, ಪುನೀತ ರಾಜಕುಮಾರ್ ನಿಧನದಿಂದ ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿ ಬಳಗಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ  ನೀಡಲಿ ಎಂದು   ಪ್ರಾರ್ಥಿಸಿದ್ದಾರೆ.

ಸಂತಾಪ ಸಂದೇಶ

ಬೆಂಗಳೂರು, ಅಕ್ಟೋಬರ್ 29 (ಕರ್ನಾಟಕ ವಾರ್ತೆ):

ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತರಾಗಿದ್ದ, ಚಿಕ್ಕಮಗಳೂರಿನ ಅಳಿಯ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನ ಸುದ್ದಿ ತಿಳಿದು ಅತೀವ ದುಃಖ ಉಂಟಾಗಿದೆ.
ಅವರ ಕುಟುಂಬಕ್ಕೆ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಜಗನ್ಮಾತೆ ಶ್ರೀ ದೇವಿರಮ್ಮ ಹಾಗೂ ಉಡುಪಿ ಶ್ರೀ ಕೃಷ್ಣ ದಯಪಾಲಿಸಲಿ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಬಾ ಕರಂದ್ಲಾಜೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post