ಕೆ ಆರ್ ಎಸ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ
ಮಂಡ್ಯ.ನ.02 (ಕರ್ನಾಟಕ ವಾರ್ತೆ):- ಕೆಆರ್‌ಎಸ್ ಡ್ಯಾಂ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಮೊದಲ ಬಾರಿಗೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.
ಭಾನುಪ್ರಕಾಶ್ ನೇತೃತ್ವದಲ್ಲಿ ಪೂಜೆ ನಡೆದಿದ್ದು, ಸಿಎಂ ಬೊಮ್ಮಾಯಿ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿ ಸಂತೋಷ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಿಎಂ, ಮೊದಲ ಬಾರಿಗೆ ಬಂದು ನಾನು ಕೆಆರ್‌ಎಸ್‌ಗೆ ಬಾಗಿನ ನೀಡಿದ್ದೇನೆ. ಇದು ನನ್ನ ಸೌಭಾಗ್ಯವಾಗಿದೆ. ಪ್ರತಿ ವರ್ಷವೂ ಇದೇ ರೀತಿ ಕಾವೇರಿ ತುಂಬಿ ಹರಿಯಲಿ. ಈ ನಾಡಿನ ರೈತರಿಗೆ ಅನುಕೂಲವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಕೆ.ಆರ್.ಎಸ್ ಗೆ ಒಂದು ಇತಿಹಾಸ ಇದೆ, ಅವತ್ತಿನ ಮಹಾರಾಜರು, ಮತ್ತು ಆಡಳಿತದವರು ಉತ್ತಮ ಕೆಲಸವನ್ನು ಮಾಡಿದ್ದಾರೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಮನಸ್ಸು ಮಾಡದಿದ್ರೆ, ಮಂಡ್ಯ ಮೈಸೂರು ಇಷ್ಟರ ಮಟ್ಟಿಗೆ ಇರುತ್ತಿರಲಿಲ್ಲ ಎಂದರು.
ದಶಕಗಳಿಂದ ಅನ್ನವನ್ನು ಕಾವೇರಿ ಮಾತೆ ಕೊಡ್ತಿದ್ದಾಳೆ,ಕೆ.ಆರ್.ಎಸ್ ಡ್ಯಾಂ ಅನ್ನು ನಾವು ಮುಂಬರುವ 100 ವರ್ಷ ಉಳಿಸಿಕೊಳ್ಳಲು, ಸಂಪೂರ್ಣ ಅಧುನೀಕರಣ ಮಾಡಬೇಕು ಎಂದರು.
ನೀರಾವರಿ ಸಚಿವನಾಗಿದ್ದಾಗ, ಗೇಟ್ ನೋಡಿದೆ, ಗೇಟ್ ನಲ್ಲಿ ರಂದ್ರಗಳಿದ್ದವು, ಡ್ಯಾಂ ಗೆ 75 ವರ್ಷವಾಗಿದೆ, ಗೇಟ್ ಬದಲಾವಣೆ ಮಾಡಿಲ್ಲ, ಎರಡು ದಿನ ನನಗೆ ನಿದ್ದೆ ಬರಲಿಲ್ಲ, ಎಲ್ಲಾ ಮ್ಯಾಪ್ ತಯಾರು ಮಾಡಿ ಎಂದು ಹೇಳಿದ್ದೆ ಎಂದರು.
ಡ್ಯಾಂ ಸುರಕ್ಷಿತೆಯಾಗಬೇಕಾದರೇ, ಗೇಟ್ ಸುರಕ್ಷತೆ ಮಾಡಬೇಕು ಎಂದು ಅವರು ಹೇಳಿದರು.
ಮಹಾರಾಜರ ಕಾಲದಲ್ಲಿ ಕಟ್ಟಿದ ಅಣೆಕಟ್ಟೆ ಗಳಲ್ಲಿ, 14 ಅಣೆಕಟ್ಟುಗಳು ನೆಲಸಮವಾಗಿವೆ,11 ಅಣೆಕಟ್ಟುಗಳನ್ನು ಅಧುನೀಕರಣ ಮಾಡಲಾಗಿದೆ ಎಂದರು.
1600ಕೋಟಿ ವೆಚ್ಚದಲ್ಲಿ ವಿಸಿ ನಾಲೆ ಅಧುನೀಕರಣ ಮಾಡಲು, ಕೆಲಸ ಕೈಗೆತ್ತಿಕೊಳ್ಳುತ್ತಿದ್ದೇವೆ, ಅನ್ನ ಕೊಡುವ ನೀರಾವರಿ ಯೋಜನೆ, ಎಲ್ಲದಕ್ಕೂ ನಮ್ಮ ಸರ್ಕಾರ ಸಹಕಾರ ಕೊಡುತ್ತದೆ ಎಂದರು.
2012 ರಲ್ಲಿ 14 ಟಿಎಂಸಿ ನೀರು ಬಿಡಬೇಕೆಂದು ಕೊರ್ಟ್ ಆದೇಶ ಇತ್ತು, ಕೋರ್ಟ್ ಹೋಗಿದ್ದೆ , ಬಳಿಕ ಮಳೆಯಾಗಿ ರೈತರಿಗೆ ಬೇಸಿಗೆ ಕಾಲದಲ್ಲಿ ರೈತರಿಗೆ ನೀರು ಒದಗಿಸುವ ಕೆಲಸವಾಯಿತು ಎಂದರು.
ಮಹಾರಾಜರು ಮಾಡಿರು ಆಸ್ತಿ, ಇದನ್ನ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕಾವೇರಿ ಪೂಜೆ ಮಾಡುವಾಗ ಎಲ್ಲ ಶಾಸಕರು, ಮಂತ್ರಿಗಳು ಬಂದಿದ್ದಾರೆ, ತುಂಬಾ ಸಂತೋಷವಾಗಿದೆ, ಹಲವು ಯೋಜನೆಗಳನ್ನ ಪೂರ್ಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇವೆ ಎಂದರು.
ಕುಡಿಯುವ ನೀರಿನ ಸಮಸ್ಯೆಗಳ ಬಗೆಹರಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಂಡಿದ್ದೇವೆ, ತಮಿಳುನಾಡಿನವರು ಕ್ಯಾತೆ ತೆಗೆದಿದ್ದಾರೆ, ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದರು.
ನಾವು ನಮ್ಮ ಯೋಜನೆ ಪೂರ್ಣಗೊಳಿಸಲು ಬದ್ದರಾಗಿದ್ದೇವೆ, ನ್ಯಾಯ ಸಮ್ಮತ್ತ ಯೋಜನೆ,
ಎರಡೂ ರಾಜ್ಯ ಗಳ ಮಧ್ಯೆ ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು, ಈ ಯೋಜನೆಯನ್ನ ಪೂರ್ಣಗೊಳಿಸುತ್ತೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಮಾತನಾಡಿ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಲು ಹಣದ ಕೊರತೆ ಉಂಟಾದ ಸಂದರ್ಭದಲ್ಲಿ ಮಹಾರಾಜರು ಸಂಸ್ಥಾನದ ಚಿನ್ನಾಭರಣಗಳನ್ನು ಮುಂಬೈನಲ್ಲಿ 9 ಕೋಟಿಗೆ ಮಾರಿ, ಸರ್ ಎಂ ವಿಶ್ವೇಶ್ವರಯ್ಯ ರವರ ನೇತೃತ್ವದಲ್ಲಿ ಕನ್ನಂಬಾಡಿ ನಿರ್ಮಾಣ ಮಾಡಿರುವುದು ರೈತರಿಗೆ ಹಾಗೂ ಈ ಭಾಗದ ಜನರಿಗೆ ಸೌಭಾಗ್ಯವಾಗಿದೆ ಎಂದರು.
ಕೃಷ್ಣರಾಜಸಾಗರ ರಾಜ್ಯದ 8 ಜಿಲ್ಲೆಗಳ 38 ಲಕ್ಷ ಎಕರೆ ಪ್ರದೇಶಕ್ಕೆ ತಾಯಿ ಕಾವೇರಿ ಮಾತೆ ನೀರನ್ನು ಕೊಟ್ಟು ಅನ್ನ ನೀಡುತ್ತಿದ್ದಾಳೆ, ಕನ್ನಂಬಾಡಿ ಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ ಕಾರಜೋಳ, ಸಹಕಾರ ಸಚಿವರಾದ ಎಸ್.ಟಿ ಸೋಮಶೇಖರ್, ಶ್ರೀರಂಗಪಟ್ಟಣ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಮಂಡ್ಯ ಲೋಕಸಭಾ ಸದಸ್ಯರಾದ ಸುಮಲತಾಅಂಬರೀಶ್, ಮೈಸೂರು,ಕೊಡಗು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಶಾಸಕರಾದ , ಸಿ.ಎಸ್ ಪುಟ್ಟರಾಜು, ತನ್ವೀರ್ ಸೇಠ್, ಎಂ.ಶ್ರೀನಿವಾಸ್, ಕೆ.ಅನ್ನದಾನಿ,ಸುರೇಶ್ ಗೌಡ, ಅಶ್ವಿನ್ ಕುಮಾರ್, ಹೆಚ್.ಬಿ ಮಂಜುನಾಥ್,ಜಿ.ಟಿ ದೇವೇಗೌಡ, ಎಲ್ ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಮರಿತಿಬ್ಬೆಗೌಡ, ಎನ್.ಅಪ್ಪಾಜಿಗೌಡ, ಆರ್ ಧರ್ಮಸೇನ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ ಸಿಇಒ ದಿವ್ಯಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ಹಾಗೂ ಮತ್ತಿತರರು ಭಾಗವಹಿಸಿದ್ದರು.
Post a Comment