ಕನ್ನಡ ರಾಜ್ಯೋತ್ಸವ ನಿಮಿತ್ತ ಕಿರು ಲೇಖನ* *ಕನ್ನಡ ಸಾಹಿತ್ಯಕ್ಕೆ ಮಾಧ್ವ ಪರಂಪರೆಯ ಕಾಣಿಕೆ*

*ಕನ್ನಡ ರಾಜ್ಯೋತ್ಸವ ನಿಮಿತ್ತ ಕಿರು ಲೇಖನ* 

 *ಕನ್ನಡ ಸಾಹಿತ್ಯಕ್ಕೆ ಮಾಧ್ವ ಪರಂಪರೆಯ ಕಾಣಿಕೆ* 
 *ಆಚಾರ್ಯ ಮಧ್ವರು* ಹನ್ನೆರಡನೇ ಶತಮಾನದಲ್ಲಿ ನೆಲೆಸಿದ್ದು ಉಡುಪಿಯಲ್ಲಿ.  ಸುಂದರ ಸೊಬಗಿನ ಆ ಉಡುಪಿಯಲ್ಲಿ ಕಡುಗೋಲು ಕೃಷ್ಣನ ಪ್ರತಿಮೆಯ ಪ್ರತಿಷ್ಠಾಪಿಸಿ, ಅಷ್ಟಮಠಗಳ ಯತಿಗಳು ಮತ್ತು ಪದ್ಮನಾಭಾದಿ ಯತಿಗಳ ಸಮೂಹವನ್ನೇ ನೀಡಿ ಧರ್ಮ ಪ್ರಚಾರ ಮಾಡಲು ಆರಂಭಿಸಿದರು.  

ಹರಿದಾಸ ಸಾಹಿತ್ಯದ ಮೂಲ ಪುರುಷರು *ಶ್ರೀ*  *ಮಧ್ವಾಚಾರ್ಯರು*  ಎಂದೇ  ಹೇಳಬಹುದು. ಕನ್ನಡದಲ್ಲಿ ಆಚಾರ್ಯರು ಯಾವ ಕೃತಿಗಳನ್ನೂ ರಚಿಸದಿದ್ದರೂ ಅವರ ಪ್ರಭಾವಕ್ಕೆ ಸಿಕ್ಕ ಅವರ ನೇರ ಶಿಷ್ಯರಾದ ನರಹರಿ ತೀರ್ಥರು ಕನ್ನಡದಲ್ಲಿ ಮೊದಲ ದೇವರನಾಮವನ್ನು ರಚಿಸಿದರು

ಆಚಾರ್ಯ ಮಧ್ವರ ನೇರ ಶಿಷ್ಯರಲ್ಲಿ ಒಬ್ಬರಾದ ಹಂಪಿಯಲ್ಲಿ ವಿರಾಜಮಾನರಾಗಿರುವ ಶ್ರೀ *ನರಹರಿ ತೀರ್ಥರು* "ಹರಿಯೇ ಇದು ಸರಿಯೇ",. "ಎಂತು ಮರುಳಾದೆ ಹರಿಯೇ" " ತಿಳಿಕೋ ನಿನ್ನೊಳಗೆ ನೀನೇ" ಮುಂತಾದ ಕೃತಿಗಳ ಮೂಲಕ ದಾಸಸಾಹಿತ್ಯಕ್ಕೆ ಬುನಾದಿ ಹಾಕಿದರು.


ಕಾಗಿಣೀತೀರ ಮಳಖೇಡ ನಿವಾಸಿ ಅಕ್ಷೋಭ್ಯರ ತನಯ *ಶ್ರೀ ಜಯತೀರ್ಥರೂ* ಸಮಗ್ರ ಆಚಾರ್ಯರ ಸರ್ವಮೂಲ ಟೀಕೆಯನ್ನು ದೇವಭಾಷೆಯಲ್ಲಿ ಬರೆದರೂ , "ರಾಮವಿಠಲ" ಅಂಕಿತದಲ್ಲಿ "ನೀಲ ಮೇಘ ಶ್ಯಾಮನ ಕೋಮಲಾಂಗನ ಕಂಡೆ"  ಎಂಬ ಕೃತಿಯ ರಚಿಸಿದ್ದಾರೆ.

ಅಕಸ್ಮಾತ್ ಕನ್ನಡದಲ್ಲಿ ಮಾತನಾಡಿದರೆ ಮೈಲಿಗೆಯಾಯಿತು ಎಂದು ಕೊಂಡು, ಮತ್ತೆ ಸ್ನಾನ ಮಾಡಿ  ತಮ್ಮ ಕಾರ್ಯಗಳನ್ನು ಮುಂದುವರೆಸುತ್ತಿದ್ದ  ಕಾಲದಲ್ಲಿ ಆಚಾರ್ಯ  ಕರಾರ್ಚಿತ ವಿಗ್ರಹಗಳನ್ನು ಮುಟ್ಟಿ ಪೂಜೆ ಮಾಡಿ , ಕನ್ನಡದಲ್ಲಿ ದೇವರನಾಮ ಗಳನ್ನು ರಚಿಸುವ ಸಂಕಲ್ಪ ಮಾಡಿದ್ದು ಆಗಿನ ಕಾಲಕ್ಕೆ ಒಂದು ಸಾಹಸವೇ ಸರಿ.  *ಶ್ರೀ ಶ್ರೀಪಾದರಾಜರು* "ರಂಗವಿಠಲ" ಅಂಕಿತದಿಂದ ನೂರಾರು ದೇವರ ನಾಮಗಳು, ಉಗಾಭೋಗಗಳನ್ನು ರಚಿಸಿದ್ದಾರೆ.  ಅಲ್ಲಿಯವರೆಗೂ ಸಂಸ್ಕೃತ ಕೃತಿಗಳನ್ನು ಮಾತ್ರ ಅಧ್ಯಯನ ಪಾರಾಯಣ ಮಾಡುವ ಪರಿಪಾಠವನ್ನು ದೂರವಿಕ್ಕಿ ಭಕುತಿಯಲಿ ಗಾಯನ ಮಾಡುವವರೂ ಧರ್ಮಗಳನ್ನು ಅರಿಯಬಹುದು ಎಂದು ತಿಳಿಸಿದರು.   ಮಕ್ಕಳ ಆಡುಭಾಷೆಯಲ್ಲಿ "ಪೋಪು ಹೋಗೋಣ ಬಾರೋ" ಕೃತಿ ಅಮೋಘವಾಗಿದೆ, ಹಲವಾರು ಸುಳಾದಿಗಳನ್ನೂ ರಚಿಸಿದ್ದಾರೆ.  ಶ್ರೀಪಾದರಾಜ ಮಠದಿಂದ "ರಂಗವಿಠಲ" ಮಾಸಿಕ ಪ್ರಕಟಣೆಯಾಗುತ್ತಿದೆ.
 *ಶ್ರೀ ವ್ಯಾಸರಾಜರು* ಇದೇ ಮಾರ್ಗದಲ್ಲಿ ಮುಂದುವರಿದು ತಾವೂ ನೂರಾರು ಕೀರ್ತನೆಗಳನ್ನು ರಚಿಸಿ ಪುರಂದರದಾಸರು ಮತ್ತು ಕನಕದಾಸರಿಗೆ ದಾಸ ದೀಕ್ಷೆ ಇತ್ತು ಸಾವಿರಾರು ದೇವರನಾಮಗಳನ್ನು ಪ್ರಚರಪಡಿಸಿದರು.   ವ್ಯಾಸರಾಯರು ಕನ್ನಡ ದೇವರನಾಮಗಳನ್ನು ರಚಿಸಿದ್ದಲ್ಲದೆ,  ಚಂದ್ರಿಕಾ, ತರ್ಕತಾಂಡವಾದಿ ಹಲವಾರು ಕೃತಿಗಳನ್ನು ರಚಿಸಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ಎತ್ತಿ ಹಿಡಿದಿದ್ದಾರೆ.  ಇದೇ ರೀತಿ ವ್ಯಾಸರಾಜ ಮಠದ ಮೂಲಕ "ತತ್ವಚಂದ್ರಿಕಾ" ಎಂಬ ಮಾಸಿಕ ಪ್ರಕಟಣೆಯಾಗುತ್ತಿದೆ.

ಇದೇ ರೀತಿ ಸೋಂದಾ ಶ್ರೀ *ವಾದಿರಾಜ ಶ್ರೀಪಾದರು* ಹಲವು ಕನ್ನಡ ಗ್ರಂಥಗಳನ್ನು, ದೇವರನಾಮಗಳನ್ನು ರಚಿಸಿ ಉಪಕರಿಸಿದ್ದಾರೆ,. ಅವರ ಲಕ್ಷ್ಮೀ ಶೋಭಾನೆ ಅತ್ಯಂತ ಮಂಗಳಕರವೆಂದು ಪ್ರಸಿದ್ಧಿ ಪಡೆದಿದೆ ಮತ್ತು ಯಾವುದೇ ಶುಭಕಾರ್ಯಗಳಲ್ಲಿ ಪಾರಾಯಣ ಮಾಡುವ ಪರಿಯಿದೆ.   ವಾದಿರಾಜರು ಪ್ರತಿಯೊಬ್ಬ ದೇವತೆಗಳ ಬಗ್ಗೆಯೂ ಕೃತಿಗಳನ್ನು ರಚಿಸಿದ್ದಾರೆ.
 *ಶ್ರೀ ವಿಜಯೇಂದ್ರ ತೀರ್ಥರು* ,- "ವಿಜಯೇಂದ್ರ ರಾಮ" ಅಂಕಿತದಲ್ಲಿ ರಚಿಸಿದ್ದಾರೆ.  

 *ವ್ಯಾಸತತ್ವಜ್ಞ ತೀರ್ಥರು* - "ವಾಸುದೇವ ವಿಠಲ" ಅಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.

 *ಶ್ರೀ ರಾಘವೇಂದ್ರ ಸ್ವಾಮಿಗಳು* ಧೀರ ವೇಣುಗೋಪಾಲ ಅಂಕಿತದಲ್ಲಿ  "ಇಂದು ಎನಗೆ ಗೋವಿಂದ", ಮತ್ತು ಸುಳಾದಿಗಳ ರಚಿಸಿದ್ದಾರೆ.
 *ಶ್ರೀ ವಿದ್ಯಾರತ್ನಾಕರ ತೀರ್ಥರು* ಹಲವು ಕೃತಿಗಳನ್ನು ರಚಿಸಿದ್ದಾರೆ.

 *ಶ್ರೀ ಪ್ರಸನ್ನ ತೀರ್ಥರು* ನೂರಾರು ದೇವರನಾಮಗಳು ರಚಿಸಿದ್ದಾರೆ.  

ಪ್ರಸ್ತುತ ಶ್ರೀ ಭಂಡಾರಕೇರಿ ಶ್ರೀ *ವಿದ್ಯೇಶ ತೀರ್ಥರೂ* ನೂರಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ.

ಪ್ರಾತಃ:ಸ್ಮರಣೀಯ ಶ್ರೀ *ವಿಶ್ವೇಶತೀರ್ಥ ಶ್ರೀಪಾದರು* ತಮ್ಮ ಸಂಸ್ಥೆಯ ಮೂಲಕ ಹಲವಾರು ಸಂಸ್ಕೃತ ಗ್ರಂಥಗಳನ್ನು ಕನ್ನಡಕ್ಕೆ ತಮ್ಮ ಶಿಷ್ಯರ ಮೂಲಕ ಅನುವಾದಿಸಿ ಪ್ರಕಟಿಸಿ ಅನುಕೂಲ ಮಾಡಿದ್ದಾರೆ. ಜೊತೆಗೆ ಹಲವಾರು ವರ್ಷಗಳಿಂದ "ತತ್ವವಾದ" ಎಂಬ ಮಾಸಿಕ ಪ್ರಕಟಣೆಯಾಗುತ್ತಿದೆ.
ಪರಮಪೂಜ್ಯ ಶ್ರೀ *ಸತ್ಯಾತ್ಮತೀರ್ಥರು* ವಿಶ್ವಮಧ್ವ ಮಹಾಪರಿಷತ್ ಮೂಲಕ ನೂರಾರು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.  ತಮ್ಮ ಶಿಷ್ಯರ ಮೂಲಕ ಹಲವಾರು ಕನ್ನಡ ಕೃತಿಗಳನ್ನು ಹೊರತಂದಿದ್ದಾರೆ ಜೊತೆಗೆ "ಶ್ರೀ ಸುಧಾ" ಎಂಬ ಹೆಸರಿನಿಂದ ಮಾಸಿಕವನ್ನು ಪ್ರಕಟಿಸುತ್ತಿದ್ದಾರೆ .
ಪರಮಪೂಜ್ಯ ಶ್ರೀ *ಸುಬುಧೇಂದ್ರತೀರ್ಥರು* ಮಂತ್ರಾಲಯ ಮಠದ ಆಶ್ರಯದಲ್ಲಿ ಸಮಗ್ರ ರಾಯರ ಗ್ರಂಥಗಳನ್ನೂ ಕನ್ನಡಕ್ಕೆ ತಂದಿದ್ದಾರೆ, ಅವರ ಕನ್ನಡ ಸೇವೆ ಅನರ್ಘ್ಯ.  ಅಲ್ಲದೆ ದಾಸಸಾಹಿತ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಮಂತ್ರಾಲಯದಲ್ಲಿ ವಿಶೇಷ ದಾಸಕೂಟಗಳನ್ನೂ, ಭಜನಾ ಮಂಡಳಿಗಳನ್ನೂ ಪ್ರೋತ್ಸಾಹಿಸಿದ್ದಾರೆ.   ಅದರಲ್ಲೂ ಹೆಚ್ಚಾಗಿ ಮಹಿಳೆಯರ ಭಜನಾ ಮಂಡಳಿಗಳನ್ನೂ ಉತ್ತೇಜಿಸಿ ದಾಸಸಾಹಿತ್ಯ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದ್ದಾರೆ.  ಜೊತೆಗೆ ಮಂತ್ರಾಲಯ ಮಠದಿಂದ "ಗುರು ಸಾರ್ವಭೌಮ" ಮಾಸಿಕವೂ ನಿರಂತರ ಪ್ರಕಟಣೆಯಾಗುತ್ತಿದೆ.
ಇದೇ ರೀತಿ ಪರಮಪೂಜ್ಯ ಶ್ರೀ ಫಲಿಮಾರು *ವಿದ್ಯಾಧೀಶ* *ತೀರ್ಥರೂ* ಕೂಡ ಕನ್ನಡದಲ್ಲಿ ತಮ್ಮ ಸಂಸ್ಥೆಯ ಮೂಲಕ ಹಲವಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ.  ಜೊತೆಗೆ "ಸರ್ವಮೂಲ" ಎಂಬ ಮಾಸಿಕವನ್ನು ತಂದಿದ್ದಾರೆ.

ಇನ್ನು ದಾಸರುಗಳ ಪೈಕಿ ಅಗ್ರಗಣ್ಯರು  *ಶ್ರೀ ಪುರಂದರದಾಸರು* - ನಾಲ್ಕು ಲಕ್ಷಕ್ಕೂ ಹೆಚ್ಚಿನ ದೇವರನಾಮಗಳನ್ನು,  ಉಗಾಭೋಗಗಳನ್ನು, ಮುಂಡಿಗೆಗಳು, ಸುಳಾದಿಗಳನ್ನೂ ರಚಿಸಿದ್ದಾರೆ, ಕರ್ನಾಟಕ ಸಂಗೀತ ಪಿತಾಮಹನೆನೆಸಿ,  ಶ್ರೀ ವ್ಯಾಸರಾಯರಿಂದ ಅವರ ಕೀರ್ತನೆಗಳು "ಪುರಂದರೋಪನಿಷತ್" ಎಂದು ಆಚಾರ್ಯ ಮಧ್ವರ "ಸರ್ವಮೂಲ"ದೊಂದಿಗೆ ಗೌರವಿಸಲ್ಪಟ್ಟಿದೆ.
*ಶ್ರೀ ಕನಕದಾಸರು* - ಜಾತಿಯಲ್ಲಿ ಕುರುಬನಾಗಿ ಹುಟ್ಟಿದರೂ ಶ್ರೀ ವ್ಯಾಸರಾಜರಿಂದ ಅತ್ಯುನ್ನತ ಗೌರವ ಮತ್ತು ದಾಸಧೀಕ್ಷೆ ಪಡೆದು, ಪುರಂದರದಾಸರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವರನಾಮಗಳನ್ನು ರಚಿಸಿದ್ದಾರೆ.  ಅವರ ಕೃತಿಗಳು ಕಬ್ಬಿಣದ ಕಡಲೆಯಿದ್ದಂತೆ.  ಅವರ ಪದ ಜೋಡಣೆ, ಸಾಹಿತ್ಯ ಚಿಂತನೆ ಶೈಲಿ, ಮುಂಡಿಗೆಗಳನ್ನು ಅರ್ಥಮಾಡಿಕೊಳ್ಳಲು ವ್ಯಾಸಸಾಹಿತ್ಯದ ಆಸರೆ ಕೂಡ ಬೇಕು.  ಅವರು ಪ್ರತಿಯೊಂದು ಪದದಲ್ಲೂ ವಿಶೇಷ ಅರ್ಥಗಳನ್ನು ಹುಡುಕುವಂತೆ ಮಾಡುತ್ತಾರೆ.  "ಅಂಧಕನನುಜನ ಕಂದನ ತಂದೆಯ", "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ",  "ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ", "ಕುಲ ಕುಲ ಕುಲವೆಂದು ಹೊಡೆದಾಡದಿರಿ",.  "ಏನೆ ಮನವಿತ್ತೆ ಲಲಿತಾಂಗಿ"  ಇತ್ಯಾದಿ ಹಲವಾರು ಗಂಭೀರ ಅರ್ಥಗರ್ಭಿತ ಸಾಹಿತ್ಯ ರಚಿಸಿದ್ದಾರೆ.  ಅವರ ಅಂಕಿತ  "ಕಾಗಿನೆಲೆ ಆದಿ ಕೇಶವ".  ಇವರ ಇತರ ಪ್ರಸಿದ್ಧ ಕೃತಿಗಳು - ಮೋಹನತರಂಗಿಣಿ, ನಳಚರಿತ್ರೆ, ಮುಂಡಿಗೆ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ದಂಡಕಗಳು, ಉಗಾಭೋಗ, ಸುಳಾದಿಗಳು, ಇತ್ಯಾದಿ.

 *ಕುಮಾರವ್ಯಾಸರು* ಇಡೀ ಮಹಾಭಾರತವನ್ನು ಕನ್ನಡದಲ್ಲಿ  ಕಾವ್ಯಮಯವಾಗಿ ನೀಡಿದ್ದಾರೆ.
 *ಶ್ರೀ ಪ್ರಸನ್ನ ವೆಂಕಟ ದಾಸರು* - ಪ್ರಸನ್ನ ವೆಂಕಟ ಅಂಕಿತದಿಂದ ಸಾಕಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ.  ಇವರ ವಿಶೇಷತೆಯೆಂದರೆ ಕ್ಲಿಷ್ಟ ಪದಲಾಲಿತ್ಯದ  ಕೀರ್ತನೆಗಳು ಅಷ್ಟು ಸುಲಭವಾಗಿ ಅರ್ಥವಾಗುವುದು ಕಠಿಣ.
 
 *ವಿಜಯದಾಸರು* - ೨೫೦೦೦ಕ್ಕೂ ಹೆಚ್ಚು ಕೀರ್ತನೆಗಳು, ಸುಳಾದಿಗಳು, ಮುಂಡಿಗೆ, ಉಗಾಭೋಗ, ಇತ್ಯಾದಿ  ಪ್ರತಿಯೊಂದು ವಿಷಯದಲ್ಲೂ ಸುಳಾದಿಗಳನ್ಧು ರಚಿಸಿದ್ದಾರೆ - ಹಬ್ಬ ಸುಳಾದಿ, ನೈವೇದ್ಯ ಸುಳಾದಿ, ಧನ್ವಂತರಿ ಸುಳಾದಿ, ಇತ್ಯಾದಿ ಹಲವಾರು.
 *ಗೋಪಾಲದಾಸರು* - ಜಗನ್ನಾಥದಾಸರಿಗೆ ವಿಜಯದಾಸರ ಆಜ್ಞೆಯಂತೆ ಆಯುರ್ದಾನ ಮಾಡಿದ್ದಲ್ಲದೆ, ಹಲವಾರು ಕೀರ್ತನೆಗಳು ರಚಿಸಿದ್ದಾರೆ.
 *ಜಗನ್ನಾಥದಾಸರು* - ಹರಿಕಥಾಮೃತಸಾರ, ತತ್ವಸುವ್ವಾಲಿ, ದೇವರನಾಮಗಳು, ಉಗಾಭೋಗ, ಇತ್ಯಾದಿ
 *ಮೋಹನದಾಸರು* - ಕೋಲುಪದ ಎಂಬ ದೀರ್ಘ ಕೃತಿ ಮತ್ತು ಹಲವಾರು ದೇವರನಾಮಗಳನ್ನು ನೀಡಿದ್ದಾರೆ.

ಇದಲ್ಲದೆ ಇನ್ನೂ ಹಲವಾರು ದಾಸಶ್ರೇಷ್ಟರು ಇದ್ದಾರೆ
ಪ್ರಾಣೇಶದಾಸರು, 
ಗುರು ಪ್ರಾಣೇಶದಾಸರು, 
ಗುರುಗೋಪಾಲದಾಸರು, 
ಗುರು ಜಗನ್ನಾಥದಾಸರು,  
ಮಹಿಪತಿದಾಸರು, 
ಮೊದಲಕಲ್ಲು ಶೇಷದಾಸರು, 
ಗುರುಪುರಂದರ ದಾಸರು, 
ತಂದೆ ಪುರಂದರದಾಸರು, 
ಶ್ಯಾಮಸುಂದರ ದಾಸರು, 
ವರದೇಶವಿಠಲರು, 
ಭೂಪತಿವಿಠಲದಾಸರು,  
ಕಾಖಂಡಕಿ ಕೃಷ್ಣ ದಾಸರು, 
ಶ್ರೀದವಿಠಲದಾಸರು,     
ಅಚಲಾನಂದ ದಾಸರು, 
ಶ್ರೀ ಪ್ರಸನ್ನ ಶ್ರೀನಿವಾಸ ದಾಸರು,
ವೇಣುಗೋಪಾಲ ದಾಸರು, 
ಶ್ರೀ ಗೋವಿಂದ ವಿಠಲ ದಾಸರು, 
ಮೈಸೂರಿನ ಸುಬ್ಬರಾಯರು, 
ಗುರುಗೋವಿಂದ ವಿಠಲ ದಾಸರು, ವರದವಿಠಲದಾಸರು, 
ಉರಗಾದ್ರಿ ವಿಠಲದಾಸರು, 
ಅಸ್ಕಿಹಾಳ ಗೋವಿಂದದಾಸರು, 
ಸದಾನಂದ ದಾಸರು, 
ಅಹೋಬಲ ದಾಸರು, 
ಹನುಮೇಶವಿಠಲದಾಸರು, 
ಅಭಿನವ ಜನಾರ್ಧನ ವಿಠಲದಾಸರು
ಗೋಕಾವಿ ಅನಂತಾಧೀಶರು, 
ಜಯೇಶವಿಠಲದಾಸರು,
ಜನಾರ್ಧನವಿಠಲದಾಸರು,
ಕಾರ್ಪರ ನರಸಿಂಹ ದಾಸರು,
ಶ್ರೀಪತಿವಿಠಲದಾಸರು
ಶ್ರೀ ವಿಠಲ ದಾಸರು, 
ಭೂಪತಿವಿಠಲದಾಸರು, 
ರಂಗೇಶವಿಠಲದಾಸರು, 
ತುಳಸಿರಾಮದಾಸರು, 
ಹೆಳವನಕಟ್ಟೆ ಗಿರಿಯಮ್ಮ, 
ಹರಪನಹಳ್ಳಿ ಭೀಮವ್ವ, 
ನಂಜನಗೂಡು ತಿರುಮಲಾಂಬ, 
ಗಲಗಲಿ ಅವ್ವ,
ಯದುಗಿರಿಯಮ್ಮ.

ಶ್ರೀ ತಿರುಪತಿ ದಾಸಸಾಹಿತ್ಯ ಪ್ರಾಜೆಕ್ಟಿನ ವಿಶೇಷ ಅಧಿಕಾರಿಗಳಾಗಿದ್ದಾಗ ತಮ್ಮ ಸಂಘಟನಾ ಚಾತುರ್ಯದಿಂದ  *ಅಪ್ಪಣ್ಣಾಚಾರ್ಯರು*  ಮಹಿಳಾ ಭಜನಾ ಮಂಡಳಿಗಳನ್ನೂ ಬೆಳೆಸಿದ ಪ್ರಮುಖರು. 

*ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು* ತಮ್ಮ ವ್ಯಾಸಮಧ್ವ ಸಂಸ್ಥೆಯಿಂದ ನೂರಾರು ಕನ್ನಡ ಕೃತಿಗಳನ್ನು ಹೊರತಂದಿದ್ದಾರೆ.
 *ಶ್ರೀ ವಿಶ್ವನಂದನತೀರ್ಥ ಶ್ರೀಗಳು* ಹಲವಾರು ಕನ್ನಡ ಕೃತಿಗಳನ್ನು ಹೊರತಂದಿದ್ದಾರೆ.  ಸುಮಧ್ವವಿಜಯ, ವಾಯು ಸ್ತುತಿ, ಭಾಗವತ, ರಾಮಾಯಣ ಮುಂತಾದ ಕೃತಿಗಳ ಸರಳ ಕನ್ನಡ ಸಾಹಿತ್ಯದಲ್ಲಿ ಕಾವ್ಯಮಯವಾಗಿ ನೀಡಿದ್ದಾರೆ.

ಶ್ರೀ *ಬೆಮ್ಮತ್ತಿ ವೆಂಕಟೇಶಾಚಾರ್ಯರು* ಪರಿಪೂರ್ಣ ಚಂದ್ರಿಕಾ, ಮೂಲಕ ತತ್ವಪ್ರಕಾಶಿಕಾ ಗ್ರಂಥಕ್ಕೆ ಕನ್ನಡ ಅನುವಾದ, ಸಮಗ್ರ ಟೀಕೆಗಳಿಗೆ ಕನ್ನಡದಲ್ಲಿ ಅನುವಾದಿಸಿದ್ದಾರೆ.

 *ಶ್ರೀ ಹೊಳವನಹಳ್ಳಿ ಶ್ರೀನಿವಾಸಾಚಾರ್ಯರು* ಶಾಕಾಂಬರಿನಗರದ ರಾಯರ ಮಠದಲ್ಲಿ ರಾಯರ ಸಮಗ್ರ ದಶಪ್ರಕರಣ ಟೀಕೆಯ ಕನ್ನಡಾನುವಾದವನ್ನೂ, ದ್ವೈತ ದುಂದುಭಿ ಮಾಸಿಕ ಮೂಲಕ ಹಲವಾರು ಲೇಖನಗಳು ಹೊರತಂದಿದ್ದಾರೆ.

ಶ್ರೀ ಎ.ಬಿ.ಶ್ಯಾಮಾಚಾರ್ಯರು ತಮ್ಮ ಮಾಸಿಕ " *ಹರಿದಾಸ ವಾಹಿನಿ"* ಮೂಲಕ ದಾಸಸಾಹಿತ್ಯವನ್ನು ಪ್ರಚುರಪಡಿಸುತ್ತಿದ್ದಾರೆ.

 *ದಿವಂಗತ ಶ್ರೀ ಬನ್ನಂಜೆ ಗೋವಿಂದಾಚಾರ್ಯರು* ಹಲವಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ.

 *ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯರು* ನೂರಾರು ವಿಶಿಷ್ಟ ದಾಸಸಾಹಿತ್ಯದ ವಿಶೇಷ ಅರ್ಥಗಳನ್ನು ಬಿಡಿಸಿ ಸುಲಭವಾಗಿ ಅರ್ಥವಾಗುವಂತೆ ಮಾಡಿದ್ದಾರೆ.  

 *ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ* ಅವರು ತಮ್ಮ ವಾಗ್ವೈಖರಿಯಿಂದ ಮತ್ತು ಶ್ರೀ ಹ.ರಾ. ನಾಗರಾಜಾಚಾರ್ಯರು ವಿಶಿಷ್ಟ ಸಂಗ್ರಹಗಳಿಂದ, ಮತ್ತು ಶ್ರೀಮತಿ ಸುಧಾ ಆದಿಶೇಷ್ ಅವರು ಹರಿಕಥಾಮೃತಸಾರದಲ್ಲಿ  ಡಾಕ್ಟರೇಟ್ ಪಡೆದಿದ್ದಾರೆ.
ರಾವ್ಸ ಕಲೆಕ್ಷನ್.ಬ್ಲಾಗಸ್ಪಾಟ್,  ಸುಮಧ್ವಸೇವಾ.ಕಾಂ,  ದಾಸಸಾಹಿತ್ಯ.ನೆಟ್,  ಮುಂತಾದ ಹಲವಾರು ವೆಬ್ಸೈಟ್ಗಳು ಕೀರ್ತನೆ ಸಂಗ್ರಹದಲ್ಲಿ ತೊಡಗಿವೆ.   

ಇಂದು ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಮಾಧ್ವ ವಾಜ್ಮಯ ಪ್ರಪಂಚವನ್ನು ಯಥಾಶಕ್ತಿ ನೆನೆದಿದ್ದೇನೆ.  

ಇಷ್ಟೆ ಅಲ್ಲ, ಇನ್ನೂ ಹಲವಾರು .ಸಂಗ್ರಹಕಾರರೂ, ಚಿಂತನಕಾರರೂ, ಉಪನ್ಯಾಸಕರು, ಇದ್ದಾರೆ.   ಇತ್ತೀಚೆಗೆ ಫೇಸ್ಬುಕ್ ಲೈವ್ ಮೂಲಕ ದೇವರನಾಮ ಗಾಯನಗಳೂ ನಡೆಯುತ್ತಿದೆ.  

ಎಲ್ಲರ ಹೆಸರು ಇಲ್ಲಿ ನನ್ನ ನೆನಪಿನಲ್ಲಿ ಬರದೇ ಇರಬಹುದು.  ಅವರೆಲ್ಲರನ್ನೂ ಸ್ಮರಿಸೋಣ

ಹರೇ ಶ್ರೀನಿವಾಸ

 *ನರಹರಿ ಸುಮಧ್ವ* 
ಸುಮಧ್ವಸೇವಾ

Post a Comment

Previous Post Next Post