ಪೌರಾಣಿಕವಾಗಿ, ಶ್ರೀ ಕೃಷ್ಣನು ಮತ್ತು ತನ್ನ ಮಡದಿ ಸತ್ಯಭಾಮೆಯೊಡಗೂಡಿ, ಅಶ್ವಯುಜ ಮಾಸದ, ಕೃಷ್ಣ ಪಕ್ಷ ಚತುರ್ದಶಿಯ ಹಿಂದಿನ ದಿನ, ಅಂದರೆ ತ್ರಯೋದಶಿಯಂದು, ಲೋಕಕಂಟಕನಾಗಿದ್ದ ನರಕಾಸುರನನ್ನು ಮತ್ತು ಆತನ ಅನುಯಾಯಿಗಳನ್ನು ಸಂಹಾರ ಮಾಡಿದನು. ನಂತರ ಶ್ರೀಕೃಷ್ಣನು ನರಕಾಸುರನು ಸೆರೆಮನೆಯಲ್ಲಿಟ್ಟಿದ್ದ 16,100 ರಾಜಕುಮಾರಿಯರನ್ನು ಬಂಧನದಿಂದ ಮುಕ್ತಗೊಳಿಸಿದನು. ಅದುವರೆಗೂ ಮಾನಸಿಕ ಹಿಂಸೆಯನ್ನನುಭವಿಸುತ್ತಿದ್ದ ರಾಜಕುಮಾರಿಯರ ತಂದೆ-ತಾಯಂದಿರು, ತಮ್ಮ ಪುತ್ರಿಯರು ಬಿಡುಗಡೆಗೊಂಡ ಸಂತೋಷಕ್ಕಾಗಿ ಮತ್ತು ನರಕಾಸುರನ ಅಂತ್ಯವಾದ ಕಾರಣವಾಗಿ ಸಿಡಿಮದ್ದುಗಳನ್ನು ಸಿಡಿಸಿ, ಅರಮನೆ, ಪಟ್ಟಣ, ರಾಜಧಾನಿಗಳ ಮುಖ್ಯರಸ್ತೆಗಳು ಹಾಗು ದೇವಸ್ಥಾನಗಳನ್ನು ತಳಿರುತೋರಣ ಮತ್ತು ಪುಷ್ಪಗಳಿಂದ ಅಲಂಕರಿಸಿ, ಹಬ್ಬವನ್ನಾಚರಿಸಿ, ಶ್ರೀ ಕೃಷ್ಣನನ್ನು ಪೂಜಿಸಿ ಆರಾಧಿಸುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಅಂದು ರಾಜಮನೆತನದವರು ಮತ್ತು ಪುರಜನರು ಅಡಿಯಿಂದ ಮುಡಿಯವರೆಗೂ ಎಳ್ಳೆಣ್ಣೆಯನ್ನು ಹಚ್ಚಿಕೊಂಡು, ಅಭ್ಯಂಗ ಸ್ನಾನವನ್ನು ಮಾಡಿದರಲ್ಲದೆ, ಶ್ರೀಕೃಷ್ಣನಿಗೂ ಅಭ್ಯಂಗ ಸ್ನಾನವನ್ನು ಮಾಡಿಸಿ, ಪೂಜಿಸಿದರು. ಆದ್ದರಿಂದ, ನರಕಚತುರ್ದಶಿಯಂದು ಅಭ್ಯಂಗ ಸ್ನಾನಮಾಡುವುದು ಅತ್ಯಂತ ಔಚಿತ್ಯಪೂರ್ಣವಾದುದು, ಪುಣ್ಯಕರವಾದುದು ಮತ್ತು ಪರಮ ಕರ್ತವ್ಯವಾದುದು.
Vasu
Post a Comment