# **
ದೀಪಾವಳಿ ಪಟಾಕಿ ಸಿಡಿಸುವದು ಶಾಸ್ತ್ರೀಯವೇ ? **
ಇಲ್ಲಿ ಕೆಲವು ಹಿಂದೂ ಮುಖಂಡರೇ ದೀಪಾವಳಿ ಪಟಾಕಿ ಸಿಡಿಸುವದು ಯಾವ ಶಾಸ್ತ್ರಗಳಲ್ಲಿಯೂ ಹೇಳಿಲ್ಲ , ಇದು ತಪ್ಪು ಎಂದು ಹೇಳುತ್ತಾರೆ. ಆದರೆ ದೀಪಾವಳಿ ಪಟಾಕಿ ಸಿಡಿಸುವದು ಶಾಸ್ತ್ರೀಯವಾಗಿದೆ. ಸ್ಕಂದ ಪುರಾಣದಲ್ಲಿ ಸ್ಪಷ್ಟ ಉಲ್ಲೇಖ ಸಿಗುತ್ತದೆ.
--------------------------------------
ಮಹಾಲಯ ಅಮಾವಾಸ್ಯೆಗಾಗಿ ಭೂಲೋಕಕ್ಕೆ ಬಂದ ಪಿತೃಗಳು ದೀಪಾವಳಿಯ ಸಮಯದಲ್ಲಿ ಮತ್ತೆ ತಮ್ಮ ಲೋಕಕ್ಕೆ ತೆರಳಲು ದಾರಿ ತೋರುವುದಕ್ಕಾಗಿ ಪಟಾಕಿಗಳ ಬಳಕೆಯನ್ನು ಸ್ಕಂದಪುರಾಣದಲ್ಲಿ ತಿಳಿಸಲಾಗಿದೆ.
**उल्काहस्ता** नराः कुर्युः पितॄणां मार्गदर्शनम्
स्कन्दपुराणम्/खण्डः २ (वैष्णवखण्डः)/कार्तिकमासमाहात्म्यम्/अध्यायः ०९
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ |
ಉಜ್ಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ ||
**ಉಲ್ಕಾಹಸ್ತಾ** ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಂ ||
--------------------------------------
ಇಲ್ಲಿ ಕೆಲವರು **ಉಲ್ಕಾ** ಎಂದರೆ "**ಕೇವಲ ದೀಪ**" ಪಟಾಕಿಗಳಲ್ಲ ಎಂದು ಹೇಳುತ್ತಾರೆ. ಆದರೆ ಇದು ಸರಿಯಲ್ಲ. ಉಲ್ಕಾ ಶಬ್ದಕ್ಕೂ ದೀಪ ಶಬ್ದಕ್ಕೂ ವ್ಯತ್ಯಾಸ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿದೆ. "ಉಲ್ಕಾಪಾತ" ಇತ್ಯಾದಿ ಶಬ್ದಗಳನ್ನು ನಾವು ಕೇಳಿದ್ದೇವೆ. ಉಲ್ಕಾ ಶಬ್ದಕ್ಕೆ ಬೆಂಕಿಯ ಕಿಡಿಗಳಿಂದ ಕೂಡಿದ ದೀಪ ಎಂಬರ್ಥವಿದೆ. ಮಹಾಭಾರತದ ಆದಿಪರ್ವದಲ್ಲಿ ಗರುಡನ ಕಥೆಯನ್ನು ತಿಳಿಸುವಾಗ
अभूतपूर्वं संग्रामे तदा देवासुरेऽपि च।
ववुर्वाताः सनिर्घाताः **पेतुरुल्काः** **सहस्रशः**।।
ಅಭೂತಪೂರ್ವವಾದ ದೇವಾಸುರರ ಸಂಗ್ರಾಮದಲ್ಲಿ ಅನೇಕ ಉಲ್ಕೆಗಳು ಭೂಮಿಯಲ್ಲಿ ಬಿದ್ದವು ಎಂದು ತಿಳಿಸುವಲ್ಲಿ ನೀಲಕಂಠವ್ಯಾಖ್ಯಾನದಲ್ಲಿ
**उल्काः** **वन्हिविस्फुलिङ्गसंघाः**
ಉಲ್ಕೆಗಳೆಂದರೆ "ಬೆಂಕಿಯ ಕಿಡಿಗಳ ಸಂಘ" ಎಂದು ತಿಳಿಸಲಾಗಿದೆ.
ಅದೇ ರೀತಿಯಾಗಿ ಸಾಮಾನ್ಯ ದೀಪಕ್ಕೆ ಶಬ್ದವಿರುವದಿಲ್ಲ , ಆದರೆ ಉಲ್ಕೆಯು ಶಬ್ದ ಮಾಡುವದು ಎಂದು ಹರಿವಂಶದಲ್ಲಿ ತಿಳಿಸುತ್ತಾರೆ
**उल्का** **निर्घातनादेन** पपात धरणीतले
ಹೀಗೆ ಸಾಮಾನ್ಯ ದೀಪಕ್ಕೂ ಮತ್ತು ಉಲ್ಕೆಗೂ ವ್ಯತ್ಯಾಸವಿದೆ. ಹಾಗಾಗಿ ಸ್ಕಂದ ಪುರಾಣದಲ್ಲಿ "ಉಲ್ಕಾಹಸ್ತಾ ನರಾಃ ಕುರ್ಯುಃ ಪಿತೃಣಾಂ ಮಾರ್ಗದರ್ಶನಂ" ಎಂಬುದಕ್ಕೆ ಶಬ್ದವನ್ನು ಮಾಡುವ , ಬೆಂಕಿಯ ಕಿಡಿಗಳನ್ನು ಹೊರಸೂಸುವ ದೀಪಗಳಿಂದ ಪಿತೃಗಳಿಗೆ ಮಾರ್ಗ ತೋರಿಸಬೇಕು ಎಂದರ್ಥ. ಹಾಗಾದರೆ ಏನರ್ಥ ? ಪಟಾಕಿಗಳನ್ನು ಸಿಡಿಸಬೇಕು ಎಂದಲ್ಲವೇ ?
--------------------------------------
ಪರಿಸರ ಮತ್ತು ವಾತಾವರಣವನ್ನು ಮಾಲಿನ್ಯಗೊಳಿಸಬಾರದು ಎಂಬುದು ಸ್ವಾಗತಾರ್ಹ. ಆದರೆ ಪಟಾಕಿ ಸಿಡಿಸಬೇಕೆಂದು ಯಾವ ಶಾಸ್ತ್ರವೂ ಹೇಳಿಲ್ಲ ಎನ್ನುವದು ಸರಿಯಲ್ಲ. ಪರಿಸರ ಮತ್ತು ವಾತಾವರಣವನ್ನು ಮಾಲಿನ್ಯಗೊಳಿಸದಂತೆ ಪಟಾಕಿ ಸಿಡಿಸಿದಲ್ಲಿ ಏನು ಸಮಸ್ಯೆ ಇದೆ ? ಇವತ್ತು ನಮಗೆ ಪರಿಸರಸ್ನೇಹಿ ಹಸಿರು ಪಟಾಕಿಗಳೂ ಕೂಡ ಸಿಗುತ್ತವೆ.
ವಾತಾವರಣವನ್ನು ಮಾಲಿನ್ಯಗೊಳಿಸದಂತೆ , ಪರರಿಗೆ ನೋವಾಗದಂತೆ ಪಟಾಕಿ ಸಿಡಿಸಲು ಸಾಧ್ಯವಿದೆ , ಆದರೆ ಅಮಾಯಕಮೂಕ ಪ್ರಾಣಿಗಳನ್ನು ಕೊಲ್ಲದಂತೆ ಕೆಲವರು ಹಬ್ಬಗಳನ್ನು ಆಚರಿಸಲು ಸಾಧ್ಯವಿದೆಯೇ ?
--------------------------------------
Post a Comment