ಕನ್ನಡದ ಅಂತರ್ಗತ ಶಕ್ತಿಯೇ ಪ್ರೀತಿ ವಿಶ್ವಾಸ :ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

 ಕನ್ನಡದ ಅಂತರ್ಗತ ಶಕ್ತಿಯೇ ಪ್ರೀತಿ ವಿಶ್ವಾಸ :


ಬೆಂಗಳೂರು, ನವೆಂಬರ್ 01: ಕನ್ನಡದ ಅಂತರ್ಗತ ಶಕ್ತಿಯೇ ಪ್ರೀತಿ ವಿಶ್ವಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಣ್ಣಿಸಿದರು.  


ಅವರು  ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ 2021 ರಲ್ಲಿ ಮಾತನಾಡುತ್ತಿದ್ದರು. 



ಕನ್ನಡ ನಾಡಿನ  ಶ್ರೀಮಂತ ನಿಸರ್ಗ, ಅರಣ್ಯ ಸಂಪತ್ತು, ವಿವಿಧ ಕೃಷಿ,  ಋತುಗಳು, ನದಿಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ.  ಇವನ್ನು ಉಳಿಸಿ ಬೆಳೆಸಬೇಕು ಎಂದರು. 



ಹೃದಯ ವೈಶಾಲ್ಯತೆ, ಸ್ವಾಭಿಮಾನಿ, ಕಠಿಣ ಪರಿಶ್ರಮದ ಗುಣಗಳನ್ನು ಕನ್ನಡಿಗರು ಉಳಿಸಿ ಬೆಳೆಸಿ ಕರ್ನಾಟಕವನ್ನು ಸಮೃದ್ಧ ರಾಜ್ಯವನ್ನಾಗಿಸಲು ಬಳಸಬೇಕು.  ನಾಡಿನ ಜನ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ,ಶೈಕ್ಷಣಿಕವಾಗಿ ಶ್ರೀಮಂತರಾದರೆ ರಾಜ್ಯ ಶ್ರೀಮಂತವಾಗುತ್ತದೆ ಎಂದರು.


ಸಮಾಜದಿಂದ ಪಡೆದು ಸಮಾಜಕ್ಕೆ ಮರಳಿ ನೀಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ 

ಸಾಹಿತ್ಯ,ಕಲೆ, ಸಂಸ್ಕೃತಿ, ನೃತ್ಯ, ಹಾಡುಗಾರಿಕೆ ಎಲ್ಲಾ ರಂಗಗಳನ್ನು ಸಾಧನೆ ಮಾಡಿದ ಸಾಧಕರು, ಉತ್ತಮ ಸಮಾಜ ನಿರ್ಮಾಣಕ್ಕೆ ನಿರ್ಲಿಪ್ತ ಭಾವನೆಯಿಂದ ಸೇವೆ ಮಾಡಿದ್ದಾರೆ.  ಒಂದು ಧ್ಯೇಯಕ್ಕೆ ಇಡೀ ಬದುಕನ್ನು ಮೀಸಲಿಡುವುದು ಸುಲಭದ ಮಾತಲ್ಲ.ಮನುಷ್ಯ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಹಜ.ನಮ್ಮ ಆಸೆಗಳು ಬದಲಾಗುತ್ತದೆ. ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿದವರು  ಉದಾತ್ತತನ, ಪರೋಪಕಾರದ ಭಾವನೆಯಿಂದ ದುಡಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಬದುಕು ಒಂದು ಬ್ಯಾಲೆನ್ಸ್ ಶೀಟ್. ಗುರುಹಿರಿಯರ, ತಂದೆತಾಯಿಗಳ ಸಮಾಜದಿಂದ ಪ್ರೀತಿ ವಿಶ್ವಾಸ, ಮಾರ್ಗದರ್ಶನ ನಮ್ಮ ಬಂಡವಾಳ. . ಮಾನವ ಕುಲ ವಿಜ್ಞಾನ , ಜ್ಞಾನದಲ್ಲಿ ಅಭಿವೃದ್ಧಿ ಹೊಂದಿದಂತೆ ಮಾನವೀಯತೆಯಲ್ಲೂ ಮುಂದುವರೆಯಬೇಕು ಎಂದು ಮುಖ್ಯಮಂತ್ರಿಗಳು  ಕಿವಿಮಾತು ಹೇಳಿದರು.



ಕನ್ನಡ ಪರ್ವ ಪ್ರಾರಂಭಿಸುವ ಸರ್ಕಾರದ ಗುರಿ:

ಮುಂದಿನ ದಿನಗಳಲ್ಲಿ ಕನ್ನಡದ ಪರ್ವ ಪ್ರಾರಂಭವಾಗಬೇಕು. ಎಲ್ಲ ರಂಗದಲ್ಲಿ ನಮ್ಮ ದೇಶದಲ್ಲಿ ಮೊದಲನೇ ಸ್ಥಾನ ಕನ್ನಡ, ಕನ್ನಡಿಗರಿಗೆ ಇರಬೇಕು ಎಂದ ಮುಖ್ಯಮಂತ್ರಿಗಳು,  8 ಜ್ಞಾನಪೀಠ ಪ್ರಶಸ್ತಿ ಪಡೆದ ಇನ್ನೊಂದು ಭಾಷೆ ಇಲ್ಲ.  ಬೆಂಗಳೂರಿನಲ್ಲಿ ಜ್ಞಾನ, ತಂತ್ರಜ್ಞಾನದ ಬೆಳವಣಿಗೆ ಬಗ್ಗೆ ಬೇಡಿಕೆ ಇದೆ. ಕರ್ನಾಟಕದಲ್ಲಿ ಬೆಳೆಯುವ ಮಲೆನಾಡಿನ ಕಾಫಿ, ಮೆಣಸು, ಮೆಣಸಿನಕಾಯಿ,ರೇಶ್ಮೆ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳಿಗೆ ವಿದೇಶದಲ್ಲಿ ಬಹಳ ಬೇಡಿಕೆ ಇದೆ. 


ಈ ರೀತಿ ಜನರ ಆರ್ಥಿಕ ಚಟುವಟಿಕೆ ಹೆಚ್ಚಾದಾಗ, ಶೈಕ್ಷಣಿಕ, ಸಾಂಸ್ಕೃತಿಕ ಬೆಳವಣಿಗೆಯೂ ಆಗುತ್ತದೆ. ನಮ್ಮ ಶಕ್ತಿಗಳು, ಕೊರತೆಗಳನ್ನು ಗುರುತಿಸಬೇಕು. ಕನ್ನಡಿಗರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. 



ಈ ನಿಟ್ಟಿನಲ್ಲಿ ಸರ್ಕಾರ ಹೊಸ ಚಿಂತನೆ ನಡೆಸಿದೆ. ನವಭಾರತದ ನಿರ್ಮಾಣ ನವಕರ್ನಾಟಕದ ಬಹುದೊಡ್ಡ ಕೊಡುಗೆ ನೀಡುವ ಗುರಿ ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು

Post a Comment

Previous Post Next Post