*ಗ್ರಾಮ ಒನ್: ಫೆಬ್ರವರಿ ಅಂತ್ಯದೊಳಗೆ ರಾಜ್ಯಾದ್ಯಂತ ವಿಸ್ತರಿಸಲು ಮುಖ್ಯಮಂತ್ರಿಗಳ ಸೂಚನೆ*
ಬೆಂಗಳೂರು,ಜನವರಿ 29 :
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಹತ್ವಾಕಾಂಕ್ಷಿ
ಯೋಜನೆ ‘ಗ್ರಾಮ ಒನ್’ ಜನವರಿ 26 ರಂದು ಲೋಕಾರ್ಪಣೆಗೊಂಡಿದ್ದು, ಫೆಬ್ರವರಿ ಅಂತ್ಯದೊಳಗೆ ಗ್ರಾಮ ಒನ್ ರಾಜ್ಯದಾದ್ಯಂತ ವಿಸ್ತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಈ ಕುರಿತು ಇ-ಆಡಳಿತ, ಆರ್ ಡಿ ಪಿ ಆರ್, ಕಂದಾಯ ಇಲಾಖೆಗಳ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರಮುಖೇನ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಗ್ರಾಮ ಒನ್ ಪರಿಶೀಲನೆಗೆ ವಾರಕ್ಕೊಮ್ಮೆ ಖುದ್ದು ಗ್ರಾಮ ಒನ್ ಆಪರೇಟರ್ ಗಳು, ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
*ಗ್ರಾಮ ಒನ್ ಅರ್ಜಿಗಳ ಶೀಘ್ರ ವಿಲೇವಾರಿ:*
ಗ್ರಾಮ ಒನ್ ನಿಂದ ಸ್ವೀಕರಿಸಿದ ಅರ್ಜಿಗಳ ಶೀಘ್ರ ವಿಲೇವಾರಿ , ಅರ್ಜಿಗಳ ತಿರಸ್ಕಾರಕ್ಕೆ ಕಾರಣಗಳನ್ನು ಎಲ್ಲಾ ಇಲಾಖೆಗಳ ಡ್ರಾಪ್ ಡೌನ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸಿ, ತಪ್ಪಾಗಿ ತಿರಸ್ಕೃತ ಮಾಡುತ್ತಿರುವ ಅಧಿಕಾರಿ/ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಹಾಗು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ಎಂಪಿಕ್/ ಕೆಡಿಪಿ ಸಭೆಯಲ್ಲಿ ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.
*ಗ್ರಾಮ ಒನ್ ಆಪರೇಟರ್ ಗಳಿಗೆ ಅನ್ವಯಿಸುವ ನೀತಿಸಂಹಿತೆಯ ಕಡ್ಡಾಯ ಪಾಲನೆ :*
ಎಲ್ಲಾ ಗ್ರಾಮ ಒನ್ ಆಪರೇಟರ್ ಗಳಿಗೆ ಅನ್ವಯಿಸುವಂತೆ ಇ-ಆಡಳಿತ ಇಲಾಖೆಯಿಂದ ನೀತಿ ಸಂಹಿತೆ ಪ್ರಕಟಿಸಿ, ಇದರ ಕಡ್ಡಾಯ ಪಾಲನೆಯನ್ನು ಜಿಲ್ಲಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ತಾಂತ್ರಿಕ, ಆಡಳಿತಾತ್ಮಕ ಮತ್ತು ಕಾನೂನು ಸಮಸ್ಯೆಗಳ ಬಗ್ಗೆ ಗ್ರಾಮ ಒನ್ ಆಪರೇಟರ್ ಗಳಿಗೆ ತರಬೇತಿ ನೀಡಬೇಕು.ಸೇವೆಗಳನ್ನು ವಿತರಿಸುವ ಆಡಳಿತಾತ್ಮಕ ಕಾರ್ಯವಿಧಾನ, ಕಾನೂನು ಪರಂತುಕಗಳ ತಿಳುವಳಿಕೆ ಇರಬೇಕು. ಇದರಿಂದ ಗ್ರಾಮ ಒನ್ ಆಪರೇಟರ್ ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ ಅಲ್ಲದೇ ಗ್ರಾಮಒನ್ ಹೆಚ್ಚು ಜನಪ್ರಿಯ ಮತ್ತು ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ.
*ಗ್ರಾಮ ಒನ್ ಆಪರೇಟರ್ ಗಳಿಗೆ ತರಬೇತಿ:*
ಗ್ರಾಮ ಒನ್ ಆಪರೇಟರ್ ಗಳಿಗೆ ಕಾಲಕಾಲಕ್ಕೆ ತರಬೇತಿ ಆಯೋಜಿಸಿ, ಅವರ ಪ್ರಾವೀಣ್ಯತೆಯನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಅಸಮರ್ಥ ಆಪರೇಟರ್ ಗಳ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
*ಗ್ರಾಮ ಒನ್ ಅನುಷ್ಠಾನಕ್ಕಾಗಿ ಇ-ಆಡಳಿತ ಸಭೆ :*
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇ-ಆಡಳಿತ ಇಲಾಖೆ ಕನಿಷ್ಠ ಮುಂದಿನ 2 ತಿಂಗಳವರೆಗೆ ಪ್ರತಿ ವಾರ ಸಭೆಯನ್ನು ಆಯೋಜಿಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
Post a Comment