ಮಣಿಪುರದಲ್ಲಿ 2ನೇ ಹಂತದ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ

ಮಾರ್ಚ್ 04, 2022

,

8:13PM

ನಾಳೆ ಮಣಿಪುರದಲ್ಲಿ 2ನೇ ಹಂತದ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆದಿದೆ

ಮಣಿಪುರದಲ್ಲಿ ರಾಜ್ಯದ ಹತ್ತು ಜಿಲ್ಲೆಗಳ ಇಪ್ಪತ್ತೆರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಅಂತಿಮ ಹಂತದ ಮತದಾನ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಜಿಲ್ಲೆಗಳೆಂದರೆ- ತೌಬಲ್, ಕಾಕ್ಚಿಂಗ್, ತಮೆಂಗ್ಲಾಂಗ್, ನೋನಿ, ಜಿರಿಬಾಮ್, ಚಾಂಡೆಲ್, ತೆಂಗ್ನೌಪಾಲ್, ಉಖ್ರುಲ್, ಕಾಮ್ಜಾಂಗ್ ಮತ್ತು ಸೇನಾಪತಿ. ಈ ಹಂತದಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಮತ್ತು ಹನ್ನೆರಡು ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ತೊಂಬತ್ತೆರಡು ಅಭ್ಯರ್ಥಿಗಳು ಕಣದಲ್ಲಿದ್ದಾರೆ.


ಮೂವತ್ತೊಂದು ತೃತೀಯಲಿಂಗಿ ಮತದಾರರು ಸೇರಿದಂತೆ ಎಂಟು ಲಕ್ಷದ ಮೂವತ್ತೆಂಟು ಸಾವಿರದ ಏಳು ನೂರಕ್ಕೂ ಹೆಚ್ಚು ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಾರೆ. ಸಾವಿರದ ಇನ್ನೂರ ನಲವತ್ತೇಳು ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸುಮಾರು ಐದು ಸಾವಿರ ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತದಾನವು ಬೆಳಗ್ಗೆ 7.00 ಗಂಟೆಗೆ ಪ್ರಾರಂಭವಾಗಲಿದ್ದು, ಸಂಜೆ 4.00 ಗಂಟೆಗೆ ಮುಕ್ತಾಯಗೊಳ್ಳಲಿದೆ.


ಮಣಿಪುರದಲ್ಲಿ ಅಂತಿಮ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ತೊಂಬತ್ತೆರಡು ಅಭ್ಯರ್ಥಿಗಳ ಪೈಕಿ ಬಿಜೆಪಿ ಇಪ್ಪತ್ತೆರಡು ಅಭ್ಯರ್ಥಿಗಳನ್ನು ಮತ್ತು ಕಾಂಗ್ರೆಸ್ ಹದಿನೆಂಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎನ್‌ಪಿಪಿ ಮತ್ತು ಎನ್‌ಪಿಎಫ್ ಪಕ್ಷಗಳು ತಲಾ ಹತ್ತು ಸ್ಥಾನಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿವೆ. ಇಂದು ಸಂಜೆ ವೇಳೆಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ತಮ್ಮ ನಿಗದಿತ ಮತಗಟ್ಟೆಗಳಿಗೆ ತಲುಪಿದ್ದು, ಮತಗಟ್ಟೆಗಳನ್ನು ಸ್ಥಾಪಿಸಲು ಆರಂಭಿಸಿದ್ದಾರೆ. ತೌಬಲ್ ಅಸೆಂಬ್ಲಿ ಕ್ಷೇತ್ರದ ಎಲ್ಲಾ ಮತಗಟ್ಟೆಗಳು ಸೇರಿದಂತೆ ಇನ್ನೂರ ಇಪ್ಪತ್ತಮೂರು ಮತಗಟ್ಟೆಗಳನ್ನು ಮಹಿಳಾ ಪೋಲಿಂಗ್ ಅಧಿಕಾರಿಗಳು ಸಂಪೂರ್ಣವಾಗಿ ನಿರ್ವಹಿಸುತ್ತಾರೆ.


ಅಂತಿಮ ಹಂತದಲ್ಲಿ ಮೂವತ್ತೊಂಬತ್ತು ಮಾದರಿ ಮತಗಟ್ಟೆಗಳಿರುತ್ತವೆ. ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್, ವಿಡಿಯೋಗ್ರಫಿ, ಕೋವಿಡ್ ಸುರಕ್ಷಿತ ಚುನಾವಣೆ ಸೇರಿದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಸಾಕಷ್ಟು ಸಂಖ್ಯೆಯ ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


ಮಣಿಪುರದ ಹೈಕೋರ್ಟಿನ ನಿರ್ದೇಶನದ ಪ್ರಕಾರ, ಹೀರೋಕ್ ಅಸೆಂಬ್ಲಿ ಕ್ಷೇತ್ರದಲ್ಲಿ ಸುಮಾರು ಹದಿನೆಂಟು ವರ್ಷ ವಯಸ್ಸಿನ ಎಲ್ಲಾ ಯುವ ಮತದಾರರು ಮತ ಚಲಾಯಿಸುವ ಮೊದಲು ಅವರ ಜನ್ಮ ದಿನಾಂಕವನ್ನು ಪರಿಶೀಲಿಸಲಾಗುತ್ತದೆ. ಏತನ್ಮಧ್ಯೆ, ಐದು ವಿಧಾನಸಭಾ ಕ್ಷೇತ್ರಗಳ ಹನ್ನೆರಡು ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ ನಡೆಸಲು ಚುನಾವಣಾಧಿಕಾರಿಗಳು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

Post a Comment

Previous Post Next Post