*ಡಿ.ಕೆ. ಶಿವಕುಮಾರ್ ಅವರ ಸುದ್ದಿಗೋಷ್ಠಿ ಮುಖ್ಯಾಂಶಗಳು:*
ವಿದ್ಯಾರ್ಥಿಗಳ ಸ್ವಾಭಿಮಾನಕ್ಕೆ ಇಂದು ಧಕ್ಕೆಯಾಗಿದೆ. ಒಬ್ಬ ವಿದ್ಯಾರ್ಥಿ ತನ್ನ ಪ್ರಾಣವನ್ನೇ ತೆತ್ತಿದ್ದಾನೆ. ಆದರೆ ನಮ್ಮ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು, ‘ಈ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದು ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗಿದ್ದಾರೆ’ ಎಂದು ಹೇಳಿದ್ದಾರೆ.
ಆ ಸಚಿವರು ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ದೇಶದ ಪ್ರತಿಭಾವಂತ ಯುವ ಸಮೂಹ ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದೆ. ಅಲ್ಲದೆ ಪ್ರತಿಷ್ಠಿತ ಐನೂರು ಕಂಪನಿಗಳಲ್ಲಿ ಬಹುತೇಕವನ್ನು ಅವರೇ ಮುನ್ನಡೆಸುತ್ತಿದ್ದಾರೆ.
ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕು ಎಂದು ಪೋಷಕರು ಆಸೆ ಇಟ್ಟುಕೊಂಡಿರುತ್ತಾರೆ. ಇಲ್ಲಿ 30 ಲಕ್ಷ, 1 ಕೋಟಿ, 2 ಕೋಟಿ ಕೊಟ್ಟು ಶಿಕ್ಷಣ ಕೊಡಿಸಲು ಅವರಿಗೆ ಸಾಧ್ಯವಿಲ್ಲ. ಎಲ್ಲರಿಗೂ ಆ ಆರ್ಥಿಕ ಶಕ್ತಿ ಇರುವುದಿಲ್ಲ. ಹೀಗಾಗಿ ಬೇರೆ ರಾಷ್ಟ್ರಗಳಲ್ಲಿ ಕಡಿಮೆ ಶುಲ್ಕದಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಪದವಿ ಪಡೆಯಲು ಹೋಗಿರುತ್ತಾರೆ.
ಅಮೆರಿಕ, ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ಸಾವಿರಾರು ಮಂದಿ ನಮ್ಮ ದೇಶ ಹಾಗೂ ರಾಜ್ಯಕ್ಕೆ ಬಂದು ಓದುತ್ತಿದ್ದಾರೆ. ಬೇರೆ ಕಡೆಗಳಲ್ಲಿ ಹೃದಯ ಶಸ್ತ್ರಚಿಕಿತ್ಸೆ ದುಬಾರಿ ಎಂದು ಹಲವಾರು ಕಡೆಗಳಿಂದ ನಮ್ಮ ಜಯದೇವ ಹಾಗೂ ಇತರೆ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ.
ನಮ್ಮದು ಜಾಗತಿಕ ನಗರ. ನಮ್ಮ ಯುವಕರು ಬೇರೆ ದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಿದರೆ ತಪ್ಪಿಲ್ಲ. ವಿಶ್ವದಲ್ಲೇ ಅತ್ಯುತ್ತಮ ಮಾನವ ಸಂಪನ್ಮೂಲ ಹೊಂದಿರುವ ದೇಶ ಭಾರತ. ರಾಜ್ಯದಲ್ಲೇ 63 ಮೆಡಿಕಲ್ ಕಾಲೇಜು ಇದ್ದು, ಹೊರಗಿನಿಂದ ಬಂದು ಸಾಕಷ್ಟು ಜನ ಓದುತ್ತಿದ್ದಾರೆ.
ಈ ಹಿಂದೆ ಉತ್ತರ ಭಾರತದ ಯಾವುದೇ ರಾಜ್ಯಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಇರಲಿಲ್ಲ. ನಾವು ಓದುತ್ತಿದ್ದಾಗ ಕರ್ನಾಟಕದಲ್ಲಿ ಮಾತ್ರ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಿದ್ದವು.
ನಮಗೂ ಉತ್ತಮ ಶಿಕ್ಷಣ ಸಿಗಬೇಕು, ಉತ್ತಮ ನಾಗರೀಕರಾಗಬೇಕು ಎಂಬ ಉದ್ದೇಶದಿಂದ ವಿದೇಶಕ್ಕೆ ಹೋಗಿ ಓದುತ್ತಿದ್ದಾರೆ. ಉಕ್ರೇನ್ ನಲ್ಲಿ ಯುದ್ಧಕ್ಕೆ ಬಲಿಯಾಗಿರುವ ನಮ್ಮ ಯುವಕ ನವೀನ್, ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದಾನೆ. ಕಡಿಮೆ ದರದಲ್ಲಿ ವಿದ್ಯಾಭ್ಯಾಸ ಮಾಡಲು ಆತ ವಿದೇಶಕ್ಕೆ ತೆರಳಿದ್ದ. ಎಲ್ಲರಿಗೂ ಒಂದೇ ಸಮನಾಗಿ ಆರ್ಥಿಕ ಶಕ್ತಿ ಇರುವುದಿಲ್ಲ. ನಮಗಿರುವ ಶಕ್ತಿ ನಿಮಗಿರುವುದಿಲ್ಲ, ನಿಮಗಿರುವ ಶಕ್ತಿ ಬೇರೊಬ್ಬರಿಗೆ ಇರುವುದಿಲ್ಲ. ಚಾಲಕರಿಂದ, ರೈತ, ತರಕಾರಿ ಮಾರುವವರವರೆಗೂ ಎಲ್ಲರೂ ತಮ್ಮ ಮಕ್ಕಳು ಉತ್ತಮ ಪ್ರಜೆ ಆಗಬೇಕು ಎಂದು ಅಪೇಕ್ಷಿಸುತ್ತಾರೆ.
ಆದರೆ, ಕೇಂದ್ರ ಸರ್ಕಾರದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು, ‘ಕಡಿಮೆ ಅಂಕ ಬಂದಿದೆ. ಹೀಗಾಗಿ ವಿದೇಶಕ್ಕೆ ಹೋಗಿ ಓದುತ್ತಿದ್ದಾರೆ’ ಎಂದು ಹೇಳಿದ್ದಾರೆ. ಸಚಿವರ ಮಾತಿಗೆ ಪ್ರಧಾನ ಮಂತ್ರಿಗಳು ಅನುಮೋದನೆ ನೀಡುತ್ತಾರೆ ಎಂದರೆ ಇದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ. ಹೀಗಾಗಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಕೂಡಲೇ ಕ್ಷಮೆ ಕೋರಬೇಕು.
ಬಿಜೆಪಿ ಸರ್ಕಾರಕ್ಕೆ ವಿದ್ಯಾರ್ಥಿಗಳ ತಂದೆ, ತಾಯಂದಿರ ನೋವು ಅರ್ಥವಾಗುತ್ತಿಲ್ಲ. ವಿದ್ಯಾರ್ಥಿಗಳ ಭಾವನೆ ತಿಳಿಯುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ವಿದ್ಯಾರ್ಥಿಗಳ ಪೋಷಕರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಈ ವಿಚಾರದಲ್ಲಿ ಸರ್ಕಾರ ಜಾಗೃತವಾಗದಿದ್ದರೆ ವಿದ್ಯಾರ್ಥಿಗಳು ಮುಂದೆ ಏನು ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.
ನಮ್ಮ ಪಾದಯಾತ್ರೆ ಮುಕ್ತಾಯವಾದ ಕೂಡಲೇ ನಾನು ಹಾಗೂ ನಮ್ಮ ನಾಯಕರು ಮೃತ ವಿದ್ಯಾರ್ಥಿ ಕುಟುಂಬವನ್ನು ಭೇಟಿ ಮಾಡುತ್ತೇವೆ. ನಾನು ಮೃತ ವಿದ್ಯಾರ್ಥಿ ನವೀನ್ ಸಹೋದರನ ಬಳಿ ಮಾತನಾಡಿದೆ. ನವೀನ್ ಪಾರ್ಥೀವ ಶರೀರವನ್ನು ತರಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು. ಅಲ್ಲದೆ ಅವರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದು ಹೇಳಲಿಲ್ಲ, ಬದಲಿಗೆ ರಾಯಭಾರ ಕಚೇರಿಗೆ ಒತ್ತಡ ಹಾಕುತ್ತಿದ್ದೇವೆ ಎಂದರು. ಇದು ಕೇಂದ್ರ ಸರ್ಕಾರದ ನಮ್ಮ ವಿದ್ಯಾರ್ಥಿಗಳನ್ನು ಬದುಕಿಸಿ ಕರೆತರುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿ. ಸರ್ಕಾರ ವಿದ್ಯಾರ್ಥಿಗಳನ್ನು ಹೆಣವಾಗಿ ಕರೆತರುತ್ತಿರುವುದು ಬಹಳ ನೋವುಂಟು ಮಾಡುತ್ತಿದೆ.
ಆ ಯುವಕನ ಅಗಲಿಕೆ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರಿಗೆ ಸಿಗಲಿ, ಹೊರ ರಾಷ್ಟ್ರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ನಾವು ಭಗವಂತನಲ್ಲಿ ಪ್ರಾರ್ಥಿಸುತ್ತಾ ನವೀನ್ ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ತರಬೇಕು ಎಂದು ಸರ್ಕಾರ ಹಾಗೂ ರಾಯಭಾರ ಕಚೇರಿಗೆ ಒತ್ತಡ ಹಾಕುತ್ತೇವೆ.
ಇನ್ನು ಕೇಂದ್ರ ಸಚಿವರು ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡಿ ಬಂದ ಬಹುತೇಕ ವಿದ್ಯಾರ್ಥಿಗಳು ನಮ್ಮ ದೇಶದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ, ಅಲ್ಲಿ ಕಳಪೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯವರು ನಾಗ್ಪುರ ಶಿಕ್ಷಣ ನೀತಿ ತಂದಿದ್ದಾರೆ. ಅದು ಏನು ಹೇಳುತ್ತದೆ ಎಂದರೆ, ನಾಲ್ಕು ವರ್ಷ ಓದುವ ಪದವಿಯಲ್ಲಿ ನೀವು ಒಂದು ವರ್ಷಕ್ಕೆ ಫೇಲ್ ಆದರೆ ಅದಕ್ಕೆ ಪ್ರತ್ಯೇಕ ಪ್ರಮಾಣ ಪತ್ರ ನೀಡುತ್ತಾರಂತೆ. ಇಷ್ಟು ವರ್ಷ ವಿದ್ಯಾಭ್ಯಾಸ ಮಾಡಿ ವಿಶ್ವದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದಾರೆ. ಹಾಗಾದರೆ ಆ ಶಿಕ್ಷಣ ನೀತಿ ಸರಿ ಇರಲಿಲ್ಲವೇ? ನಮ್ಮ ಶಿಕ್ಷಣದ ಪದವಿಗೆ ಮೌಲ್ಯವೇ ಇಲ್ಲದಂತೆ ಮಾಡುತ್ತಿದ್ದಾರೆ. ಮಕ್ಕಳ ಕೈಯಲ್ಲಿ ಪಕೋಡ ಮಾರಿಸಲು ಇವರು ಪ್ರಯತ್ನಿಸುತ್ತಿದ್ದಾರೆ. ಜನರ ಆಶೀರ್ವಾದದಿಂದ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಮ್ಮ ಸರ್ಕಾರ ಬರುತ್ತಿದ್ದಂತೆ ನಾಗ್ಪುರ ಶಿಕ್ಷಣ ನೀತಿಯನ್ನು ಬಂದ್ ಮಾಡಿಸುತ್ತೇವೆ. ಇದು ನಮ್ಮ ಪಕ್ಷದ ಬದ್ಧತೆ. ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶದಲ್ಲಿ ಮಾಡದೇ ಇರುವುದನ್ನು ಇಲ್ಲಿ ಮಾಡುತ್ತಿರುವುದು ಯಾಕೆ? ಶಿಕ್ಷಣ ಸಚಿವನಾಗಿದ್ದೀಯಲ್ಲಾ ನೀನು ಪಡೆದ ಶಿಕ್ಷಣ ಶಿಕ್ಷಣವಲ್ಲವೇ? ನೀವು ವೈದ್ಯ ಅಲ್ಲವೇ? ಮೊದಲಿಂದಲೂ ವೀರಪ್ಪ ಮೊಯ್ಲಿ, ರಾಮಕೃಷ್ಣ ಹೆಗಡೆ ಅವರು ಸಿಇಟಿ ವ್ಯವಸ್ಥೆ ತಂದು ನಮ್ಮ ಜನಸಾಮಾನ್ಯರೂ ಉತ್ತಮ ಶಿಕ್ಷಣ ಸಿಗುವಂತೆ ಮಾಡಿದರು. ಟಾಟಾ ಅವರು ಇಲ್ಲಿನ ಐಐಟಿಯಲ್ಲೇ ವಿದ್ಯಾಭ್ಯಾಸ ಮಾಡಿದ್ದರು. ಇಸ್ರೋ ಕೂಡ ಇಲ್ಲೇ ಇರುವುದು ಯಾಕೆ? ವಾಜಪೇಯಿ ಅವರು ಕೂಡ ಇಲ್ಲಿಗೆ ಬಂದು ನಮ್ಮಲ್ಲಿರುವ ಶಿಕ್ಷಣವನ್ನು ಹೊಗಳಿದ್ದರು. ನಮ್ಮ ಈ ಇತಿಹಾಸ ಪರಂಪರೆಯನ್ನು ಬದಲಿಸಲು ಬಿಡುವುದಿಲ್ಲ. ನಮ್ಮ ಮಕ್ಕಳ ದಾರಿ ತಪ್ಪಿಸಲು ಅವಕಾಶ ನೀಡುವುದಿಲ್ಲ. ನಮ್ಮ ರಾಷ್ಟ್ರಧ್ವಜದ ಬಗ್ಗೆ ಬಚ್ಚಲು ಬಾಯಿಯ ಸಚಿವ ಅಪಮಾನ ಮಾಡಿದಾಗ ಅದನ್ನು ತೀವ್ರವಾಗಿ ಖಂಡಿಸಿ ಅವರ ವಿರುದ್ಧ ಕೊಟ್ಟ ಸಂದೇಶಕ್ಕೆ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದರು.
ಉಕ್ರೇನ್ ನಲ್ಲಿ ನಮ್ಮ ವಿದ್ಯಾರ್ಥಿಗಳ ಪರದಾಟ ಮುಂದುವರಿದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಂದ್ರ ಸರ್ಕಾರ ಕೂಡಲೇ ಅಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.
*ನಾಳಿನ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಕಾರ್ಯಕರ್ತರಿಗೆ ಆಹ್ವಾನ:*
ಇಡೀ ರಾಜ್ಯದ ಮೂಲೆ, ಮೂಲೆಯಿಂದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸುತ್ತಿದ್ದು, ನಾಳೆ ಈ ಪಾದಯಾತ್ರೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದೊಂದಿಗೆ ಅಂತ್ಯವಾಗಲಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಮೇಕ್ರಿ ಸರ್ಕಲ್ ನಿಂದ ಯಾತ್ರೆ ಆರಂಭವಾಗಲಿದೆ. ನ್ಯಾಷನಲ್ ಕಾಲೇಜಿನಲ್ಲಿ ಈ ಹೋರಾಟ ಮುಗಿದರೂ ಇದು ರಾಜ್ಯದಲ್ಲಿನ ಹೊರಾಟದಲ್ಲಿನ ಮೊದಲ ಭಾಗ ಅಷ್ಟೇ.
ಸರ್ವಧರ್ಮ, ಜನಾಂಗ, ಪಕ್ಷಗಳಿಗೆ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಈ ದೊಡ್ಡ ಜನಸಂಖ್ಯೆಯಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರವಿಲ್ಲ. ಎಲ್ಲ ವರ್ಗಕ್ಕೆ ಸೇರಿದ ಕಾರ್ಮಿಕರು, ರೈತರು, ನಾಗರೀಕರು ಇದ್ದಾರೆ. ಬಿಜೆಪಿ ಹಾಗೂ ದಳದ ಜತೆ ಗುರುತಿಸಿಕೊಳ್ಳಲಾಗದವರೂ ಕೂಡ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಈ ಪಾದಯಾತ್ರೆಯಲ್ಲಿ ಭಾಗವಹಿಸುವುದು ಬಹಳ ಮಹತ್ವ ಪಡೆದಿದೆ. ನೀವು ಇತಿಹಾಸ ಪುಟ ಸೇರುತ್ತೀರಿ ಎಂದು ಹೇಳುತ್ತಿದ್ದೇನೆ. ನಾಳೆಯ ಪಾದಯಾತ್ರೆ ಹೋರಾಟದ ನೇತೃತ್ವವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ ಹಾಗೂ ಬೆಂಗಳೂರಿನ ಎಲ್ಲ ಶಾಸಕರು, ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಅವರು ವಹಿಸಲಿದ್ದಾರೆ.
ಅವರಿಗೆ ಜನ ಸೇರಿಸುವುದು ಕಷ್ಟವಲ್ಲ. ಆದರೆ ನಾನು ನಿಮ್ಮ ಮೂಲಕ ಪಾದಯಾತ್ರೆಗೆ ರಾಜ್ಯದ ಎಲ್ಲ ಕಾರ್ಯಕರ್ತರು ಈ ಪಾದಯಾತ್ರೆ ನೋಡುವ ಭಾಗ್ಯ, ಅನುಭವ ಪಡೆಯಲು ಅವರನ್ನು ಆಹ್ವಾನಿಸುತ್ತಿದ್ದೇನೆ. ಅವರಿಗೆ ರಾಜಕೀಯ ಜೀವನದಲ್ಲಿ ಹೋರಾಟ ಮಾಡುವುದು ಹೇಗೆ ಎಂಬುದನ್ನು ಇದು ಕಲಿಸಿಕೊಡಲಿದೆ. ಹೀಗಾಗಿ ರಾಜ್ಯದ ಎಲ್ಲ ಸಂಘಟನೆಗಳು, ರಾಜಕಿಯೇತರ ಸಂಘಟನೆ, ಕನ್ನಡಪರ, ರೈತ, ಕಲಾವಿದರ, ಹೊಟೇಲ್ ಮಾಲೀಕರು, ಅಪಾರ್ಟ್ಮೆಂಟ್ ಸಂಘಟನೆಗಳು ಎಲ್ಲರನ್ನು ಆಹ್ವಾನಿಸುತ್ತಿದ್ದೇನೆ.
ನಾಳಿನ ಕಾರ್ಯಕ್ರಮಕ್ಕೆ ಸುಮಾರು 12 ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರುಗಳು ಆಗಮಿಸುತ್ತಿದ್ದಾರೆ. ನಾನು ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೆ ರಾಜ್ಯದಲ್ಲಿ ಹೇಗೆ ಹೋರಾಟವನ್ನು ಸಂಘಟನೆ ಮಾಡಲಾಗುತ್ತಿದೆ ಎಂದು ನೋಡಲು ಆಗಮಿಸುತ್ತಿದ್ದಾರೆ. ನಾನು ಕೆಲವು ರಾಷ್ಟ್ರ ನಾಯಕರಿಗೆ ಆಹ್ವಾನ ನೀಡಿದ್ದೇನೆ.’
Post a Comment