ಇದನ್ನು ಓದಿ,,, ನಿಮಗೊಂದು ಸುದ್ದಿ,... ಇಂದು

ಎಲಾ ಇವ್ನಾ.....
ತಿಂಗಳಾದ್ರೂ ನೆಟ್ಗ್ ನಿಲ್ಲೋಕ್ ಆಗದ ಹಾಗೆ ನಮ್ಮಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡಿದ್ದ ಆತ ಮತ್ತೆ ವಾಪಸ್ ಬಂದಿದ್ದು ನೀಡಿದ ಶಾಕ್ ಗಿಂತಲೂ,
ಯಾವ ಪೊಲೀಸ್ ಅಧಿಕಾರಿಯನ್ನು ಕರೆಸಿ ಆತನ ಸುಪರ್ದಿಗೊಪ್ಪಿಸಿದ್ದೆವೋ ಆ ಅಧಿಕಾರಿಯೊಂದಿಗೇ ಆತ ಮರಳಿ ಬಂದಿರೋದು ಸೆಕ್ಯೂರಿಟಿಗಳಿಗೆಲ್ಲಾ ಮತ್ತಷ್ಟು ಆಘಾತಕ್ಕೆ ಕಾರಣವಾಗಿತ್ತು.

ನಡೆದದ್ದಿಷ್ಟು.
ಎಂದಿನಂತೆ ಮುಖ್ಯದ್ವಾರದ ಬಳಿ ತಪಾಸಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕೋರಮಂಗಲದ ಫೋರಂ ಮಾಲಿನಲ್ಲಿರೋ PVR ಸಿನಿಮಾ ಮಲ್ಟಿಫ್ಲೆಕ್ಸಿನ ಸೆಕ್ಯೂರಿಟಿ ವಿಭಾಗದವರಿಗೆ, ಅನುಮಾನಾಸ್ಪದವಾಗಿ ಓಡಾಡುತ್ತಾ ಮೆಲ್ಲನೆ ಚೆಕ್ ಪಾಯಿಂಟ್‌ನಲ್ಲಿದ್ದವರ ಕಣ್ತಪ್ಪಿಸಿ ಒಳನುಸುಳಿದ ಆತನನ್ನು ಹಿಡಿದು ಜಾಡಿಸಿದ್ದಲ್ಲದೆ, ಮನಬಂದಂತೆ ಥಳಿಸಿ ತಮ್ಮೆಲ್ಲಾ ಆಕ್ರೋಶಗಳನ್ನೂ ತಣ್ಣಗಾಗಿಸಿಕೊಂಡು ಹತ್ತಿರದ ಆಡುಗೋಡಿ ಪೊಲೀಸ್ ಠಾಣೆಗೆ ಫೋನ್ ಮಾಡಿ ಅವರ ಸುಪರ್ದಿಗೊಪ್ಪಿಸಿದ್ದರು.
ಈಗ ನೋಡಿದ್ರೆ ಆತ ಮರಳಿ ಬಂದಿದ್ದಾನೆ ಅದೂ ಪೊಲೀಸ್ ಜೊತೆಯಲ್ಲಿ.

ಆತ ಸುರೇಶ.
ಮೂಲತಃ ಉತ್ತರ ಕರ್ನಾಟಕದ, ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡು ಏನೋ ಕೂಲಿನಾಲಿ ಮಾಡುತ್ತಾ ಬದುಕು ಸಾಗಿಸುತ್ತಿದ್ದವನು, ದೊಡ್ಡ ಕನಸು ಹೊತ್ತು ಕೆಲಸ ಅರಸುತ್ತಾ ರಾಜಧಾನಿ ಬೆಂಗಳೂರಿಗೆ ಬಂದಿದ್ದನಾದರೂ ಯಾವುದೇ ಕೆಲಸ ದೊರಕದೆ ಅಲೆದಾಡೋ ಪರಿಸ್ಥಿತಿ. ಅದರ ನಡುವೆ ತನ್ನಿಷ್ಟದ ನಟ ಪ್ರಭಾಸನ ಹೊಸಾ ಮೂವಿ ಸಾಹೋ ರಿಲೀಸ್ ಆಗಿದೆ. ಕಾಲಹರಣಕ್ಕೆಂದು ಫೋರಂ ಮಾಲ್ ಹೊಕ್ಕವನಿಗೆ ಸಾಹೋ ಪೋಸ್ಟರ್ ನೋಡಿ ತಡೆಯೋಕಾಗ್ಲಿಲ್ಲ, ಹೇಗೂ ಊರಿನ ಟೆಂಟುಗಳಲ್ಲಿ ಆಗಾಗ ಹೀಗೆ ತೂರಿಕೊಂಡು ಸಿನಿಮಾ ನೋಡೋದು ಮಾಮೂಲಿಯಲ್ವಾ ಹಾಗೆಯೇ ಇಲ್ಲೂ ಮಾಡ ಹೊರಟಿದ್ದಾನೆ ಅಷ್ಟೇ....
ಸೆಕ್ಯೂರಿಟಿಗಳ ಕೈಗೆ ಸಿಕ್ಕು ಫುಟ್‌ಬಾಲಿನಂತಾಗಿ ಹೋಗಿ ಕೊನೆಗೆ ಆಡುಗೋಡಿ ಪೊಲೀಸ್ ಸ್ಟೇಷನ್ ಸೇರಿದ್ದ. 
ಸಾಮಾನ್ಯವಾಗಿ ಈ ತರಹದ ಕೇಸುಗಳಲ್ಲಿ ಆರೋಪಿಗಳ ಭವಿಷ್ಯ ಏನಾಗಬಹುದು ಅನ್ನೋದನ್ನು ಯಾರಾದ್ರೂ ಕಣ್ಮುಚ್ಚಿಕೊಂಡು ಊಹಿಸಿಬಿಡಬಹುದು. ಆದರೆ ಇಲ್ಲಿ ಅದೆಲ್ಲವನ್ನೂ ಮೀರಿದ್ದೊಂದು ಘಟನೆ ನಡೆದುಹೋಗಿತ್ತು.

ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಇನ್ಸ್‌ಪೆಕ್ಟರ್‌ ಆತನನ್ನು ಸೆಲ್‌ನೊಳಗೆ ತಳ್ಳಲಿಲ್ಲ ಬದಲಾಗಿ ಆತನ ಹಿನ್ನಲೆಗಳನ್ನೆಲ್ಲಾ ವಿಚಾರಿಸಿ, ಆತನಿಗೆ ಊಟ ನೀಡಿದ್ದೂ ಅಲ್ಲದೆ ಹೊಸ ಬಟ್ಟೆಗಳನ್ನೂ ಕೊಡಿಸಿ, ಆತನಿಗೆ ಎಲ್ಲಿ ಅವಮಾನವಾಗಿತ್ತೋ ಅದೇ PVR ಸಿನಿಮಾಗೆ ಕರೆತಂದು ತನ್ನದೇ ಖರ್ಚಿನಲ್ಲಿ ಟಿಕೆಟ್ ತೆಗೆಸಿದ್ದೂ ಅಲ್ಲದೆ ತಾನೂ ಆತನೊಂದಿಗೆ ಕುಳಿತು ಸಾಹೋ ಸಿನಿಮಾ ನೋಡಿದ್ದಾರೆ. ಇಷ್ಟೇ ಆಗಿದ್ದರೆ ಅದೇನ್ ಮಹಾ ಅನ್ನಬಹುದಿತ್ತೇನೋ.... ಸಿನಿಮಾ ಮುಗಿದ ನಂತರದಲ್ಲಿ ಮರಳಿ ಸ್ಟೇಷನ್ನಿಗೆ ಕರೆತಂದು, ತಕ್ಷಣಕ್ಕೆ ಆತನಿಗೆ ತಮ್ಮ ಸ್ಟೇಷನ್‌ನಲ್ಲಿಯೇ ಹೌಸ್ ಕೀಪಿಂಗ್ ಉದ್ಯೋಗವನ್ನೂ ನೀಡಿದ್ದಲ್ಲದೆ, ಹತ್ತಿರದ ಹೋಟೆಲ್ ಒಂದರಲ್ಲಿ ಮಾತನಾಡಿ ಆತನಿಗೊಂದು ಉದ್ಯೋಗದ ಜೊತೆಗೆ ನೆಲೆಯನ್ನೂ ಕೊಡಿಸಿ, ಮುಗಿದೇ ಹೋಗಬಹುದಾಗಿದ್ದ ಬದುಕೊಂದನ್ನು ಮರಳಿ ಕಟ್ಟಿಕೊಟ್ಟಿದ್ದಾರೆ ಆಡುಗೋಡಿಯ ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಪ್. 

ದಿನ ಬೆಳಗಾದರೆ, 
ಅಲ್ಯಾರನ್ನೋ ಥಳಿಸಿದ ಇಲ್ಯಾರನ್ನೋ ಅವಾಚ್ಯವಾಗಿ ನಿಂದಿಸಿದ ಪೊಲೀಸರ ಕುರಿತಾಗಿರೋ ನ್ಯೂಸುಗಳನ್ನೇ ಓದುತ್ತಾ ಪೊಲೀಸರ ಹಾಗೂ ಪೊಲೀಸ್ ಇಲಾಖೆಯ ಮೇಲೇ ಜನರಲ್ಲೊಂದು ಅಸಹ್ಯ ಹಾಗೂ ಅಸಹನೆ ಮೂಡುತ್ತಿರೋ ಕಾಲಘಟ್ಟದಲ್ಲಿ ಪೊಲೀಸರ ಹಾಗೂ ಇಲಾಖೆಯ ಕುರಿತಾಗಿ ಒಂದಿಷ್ಟಾದರೂ ಆಶಾಭಾವನೆ ಉಳಿಯೋಕೆ ಸಾಧ್ಯವಾಗಿದ್ದೇ ಹೌದಾದರೆ ಅದಕ್ಕೆ ಇಂತಹ ಅಧಿಕಾರಿಗಳ ಹಾಗೂ ಅವರ ಮಾನವೀಯತೆಯ ಕಾರ್ಯಗಳೇ ಕಾರಣ.
ಇಂತಹ ಜೀವಾತ್ಮಗಳ ಸಂತತಿ ನೂರಾಗಲಿ ನೂರು ಊರಾಗಲಿ.

#InspiringSouls
#ಇದುನಿಜವಾದಪೊಲೀಸ್‌ಗಿರಿ. 

✍🏻 ಸುಧೀರ್‌ಸಾಗರ್.

Post a Comment

Previous Post Next Post