ಉನ್ನತ ಶಿಕ್ಷಣಕ್ಕೆ ತಳಹದಿ ಹಾಗೂ ವೃತ್ತಿಪರ ಕೋರ್ಸ್ಗಳಿಗೆ ದಿಕ್ಸೂಚಿಯಾಗಬೇಕಾದ ಪಿಯುಸಿ ವ್ಯಾಸಂಗ ಸದ್ದಿಲ್ಲದಂತೆ ಮಹತ್ವ ಕಳೆದುಕೊಳ್ಳುವಂತಹ ವಾತಾವರಣ ಗೋಚರಿಸಿದೆ. ಪದವಿ ಪ್ರವೇಶಕ್ಕೂ ಇನ್ಮುಂದೆ ರಾಷ್ಟ್ರೀಯ ಪ್ರವೇಶ ಪರೀಕ್ಷೆ ವ್ಯವಸ್ಥೆ ಜಾರಿಯಾಗುತ್ತಿದೆ.
ಇದರಿಂದ ಡಿಗ್ರಿ ಪ್ರವೇಶಾತಿ ವೇಳೆ ಪಿಯುಸಿ ಅಂಕಗಳ ಮಹತ್ವ ಇಲ್ಲವಾಗಲಿದೆ. ಹೀಗಾಗಿ, ಪ್ರವೇಶ ಪರೀಕ್ಷೆಗಳ ಭರಾಟೆಯಲ್ಲಿ ಪಿಯುಸಿ ಮೌಲ್ಯ ಕಳೆದು ಹೋಗುತ್ತಿದೆಯೇ? ಎರಡು ವರ್ಷಗಳ ಕೋರ್ಸ್ ನಿಷ್ಪ›ಯೋಜಕವೇ? ಎಂಬ ಚರ್ಚೆ ಶೈಕ್ಷಣಿಕ ವಲಯದಲ್ಲಿ ಶುರುವಾಗಿದೆ.
ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಕಡ್ಡಾಯವಾಗಿರುವ ಪ್ರವೇಶ ಪರೀಕ್ಷೆ-ಸಿಯುಇಟಿಗೆ ರಾಜ್ಯದ ಸರ್ಕಾರಿ ವಿವಿಗಳು ಸಮ್ಮತಿಸುತ್ತಿವೆ. ಈ ವ್ಯವಸ್ಥೆ ಜಾರಿಯಾದರೆ ಸರ್ಕಾರಿ ಕಾಲೇಜುಗಳು, ವಿವಿಗಳಲ್ಲಿ ಪಿಯು ಅಂಕಗಳ ಆಧಾರದ ಮೇಲೆ ಸೀಟು ಗಿಟ್ಟಿಸಿಕೊಳ್ಳುವ ವ್ಯವಸ್ಥೆ ಕೊನೆಗೊಳ್ಳಲಿದೆ. ಸಿಇಟಿ, ಜೆಇಇ, ನೀಟ್ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳೇ ಮುಖ್ಯವಾಗಲಿವೆ.
ಬಿಎ, ಬಿಕಾಂ ಹಾಗೂ ಬಿಎಸ್ಸಿಯಂತಹ ತಾಂತ್ರಿಕೇತರ ಶಿಕ್ಷಣಕ್ಕೂ ಕೇಂದ್ರ ಸರ್ಕಾರ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ಸೆಂಟ್ರಲ್ ಯುನಿವರ್ಸಿಟಿ ಎಂಟ್ರೆನ್ಸ್ ಎಕ್ಸಾಂ (ಸಿಯುಇಟಿ) ಮಾದರಿಯನ್ನು ರಾಜ್ಯ ಸರ್ಕಾರಿ ಅಧೀನದ, ಖಾಸಗಿ ಹಾಗೂ ಡೀಮ್್ಡ ವಿವಿಗಳಿಗೂ ವಿಸ್ತರಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಕಾರ್ಯತತ್ಪರವಾಗಿದೆ.
ಈ ನಿಟ್ಟಿನಲ್ಲಿ ಸೋಮವಾರ ರಾಜ್ಯ ಸರ್ಕಾರಿ ಅಧೀನದ 25 ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಯುಜಿಸಿ ಸಂವಾದ ನಡೆಸಿದೆ. ಇದರಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ಸಿಯುಇಟಿ ಪ್ರಕ್ರಿಯೆ ಮೂಲಕ ಪದವಿ ಕೋರ್ಸ್ಗಳ ಪ್ರವೇಶಕ್ಕೆ ಬೆಂಬಲ ವ್ಯಕ್ತವಾಗಿದೆ. ಜತೆಗೆ, ಬಿಎ, ಬಿಕಾಂ ಹಾಗೂ ಬಿಎಸ್ಸಿ ಹಾಗೂ ಇದೇ ಮಾದರಿಯ ಇತರ ಕೋರ್ಸ್ಗಳಿಗೂ ಸಿಯುಇಟಿ ಅಂಕಗಳನ್ನು ಪರಿಗಣಿಸಲು ಸಮ್ಮತಿಸಿದ್ದಾರೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶಕುಮಾರ್ ತಿಳಿಸಿದ್ದಾರೆ.
ಆರಂಭಿಕ ಹಂತ: ಎನ್ಸಿಇಆರ್ಟಿ ಪಠ್ಯಕ್ರಮದ ಆಧಾರದಲ್ಲಿ ನಡೆಸಲಾಗುವ ಈ ಪರೀಕ್ಷೆಯನ್ನು ಸದ್ಯ ತಾಂತ್ರಿಕೇತರ ಕೋರ್ಸ್ಗಳಿಗೆ ಪರಿಗಣಿಸುವ ಬಗ್ಗೆ ಚರ್ಚೆಯಾಗಿದೆ ಎನ್ನುತ್ತಾರೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತುಳಸಿಮಾಲಾ. ಇದು ಆರಂಭಿಕ ಹಂತದಲ್ಲಿದ್ದು, ಆಯಾ ವಿಶ್ವವಿದ್ಯಾಲಯಗಳು ಡೀನ್, ಅಕಾಡೆಮಿಕ್ ಕೌನ್ಸಿಲ್ ಮಟ್ಟದಲ್ಲಿ ಈ ಪ್ರಸ್ತಾವನೆಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಯಾವುದೇ ಹೊಸ ಪ್ರಸ್ತಾವನೆಗೆ ಸಾಧಕ-ಬಾಧಕಗಳು ಇದ್ದೇ ಇರುತ್ತವೆ ಎಂದು ಅವರು ಹೇಳುತ್ತಾರೆ.
ರಾಜ್ಯದ ಅಭ್ಯರ್ಥಿಗಳಿಗೆ ಹಿನ್ನಡೆ: ರಾಜ್ಯದಲ್ಲಿ ಸಿಇಟಿಯನ್ನು ಇನ್ನೂ ಆಫ್ಲೈನ್ ಮೋಡ್ನಲ್ಲಿ ನಡೆಸಲಾಗುತ್ತದೆ. ಆದರೆ ನೀಟ್, ಜೆಇಇ ಮೇನ್ ಪರೀಕ್ಷೆಗಳು ಆನ್ಲೈನ್ ಮೋಡ್ನಲ್ಲಿ ಕಂಪ್ಯೂಟರ್ ಆಧಾರಿತವಾಗಿರುತ್ತವೆ. ರಾಜ್ಯದ ಅಭ್ಯರ್ಥಿಗಳಿಗೆ ಇದೊಂದು ಹಿನ್ನಡೆಯಾಗಿ ಸದಾ ಕಾಡುತ್ತಿದೆ. ಇನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಂತೂ ಇಂಥದ್ದೊಂದು ಪೈಪೋಟಿಗೆ ಸಜ್ಜಾಗಿರುವುದಿಲ್ಲ. ಹೀಗಾಗಿ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನು ತಾಂತ್ರಿಕೇತರ ಪದವಿ ಕೋರ್ಸ್ಗಳಿಗೂ ಪ್ರವೇಶ ಪರೀಕ್ಷೆಯಾದರೆ, ಉನ್ನತ ಶಿಕ್ಷಣವೇ ಕೈತಪುಪವ ಆತಂಕ ಕಾಡಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಸ್ಥಾಪಿಸಲಾಗುತ್ತಿರುವ ನ್ಯಾಷನಲ್ ಅಕ್ರೆಡಿಷನ್ ಬ್ಯಾಂಕ್ ಮೂಲಕ ವಿವಿಧ ವಿವಿಗಳ ನಡುವೆ ವಿದ್ಯಾರ್ಥಿಗಳ ವರ್ಗಾವಣೆ ಅಥವಾ ವ್ಯಾಸಂಗ ಸುಲಭವಾಗಲಿದೆ. ಜತೆಗೆ ರಾಷ್ಟ್ರಮಟ್ಟದ ಪರೀಕ್ಷೆ ಎಂದ ಮೇಲೆ ಅದಕ್ಕೆ ತಯಾರಿ ನಡೆಸಲೇಬೇಕಾಗುತ್ತದೆ.
| ಪ್ರೊ. ತುಳಸಿಮಾಲಾ, ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ
ಗುಣಮಟ್ಟದ ಶಿಕ್ಷಣಕ್ಕೆ, ಉತ್ತಮ ಅಭ್ಯರ್ಥಿಗಳನ್ನು ರೂಪಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಯೋ, ವೃತ್ತಿಪರ ಶಿಕ್ಷಣವೋ ಎಂಬುದನ್ನು ಆರಂಭಿಕ ಹಂತದಲ್ಲಿಯೇ ನಿರ್ಧರಿಸಬೇಕಾಗುತ್ತದೆ. ಇಂಥ ವಿಧಾನವನ್ನೇ ಎನ್ಇಪಿಯಲ್ಲಿ ಅಳವಡಿಸಲಾಗುತ್ತಿದೆ.
| ಬಿ.ಎ. ರಾಜಶೇಖರ, ಆರ್ಎಂಎಸ್ಎ ನಿವೃತ್ತ ರಾಜ್ಯ ನಿರ್ದೇಶಕ
ಜೆಇಇ ಮೇನ್ ಹಾಗೂ ನೀಟ್ಗಳಲ್ಲಿ ದ್ವಿತೀಯ ಪಿಯು ಅಥವಾ 12ನೇ ತರಗತಿಯ ಅಂಕ ಅರ್ಹತಾದಾಯಕವಷ್ಟೇ. ಜೆಇಇ ಮೇನ್ ನೋಂದಣಿಗೆ ಶೇ.75 ಹಾಗೂ ನೀಟ್ಗೆ ಶೇ.50 ಅಂಕ ಗಳಿಸಿರಬೇಕು. ಆದರೆ, ರಾಜ್ಯ ಸರ್ಕಾರ ನಡೆಸುವ ಸಿಇಟಿಯಲ್ಲಿ ಶೇ.50 ಅಂಕ ರ್ಯಾಂಕಿಂಗ್ಗೆ ಪರಿಗಣಿಸಲಾಗುತ್ತದೆ. ಇಂಥದ್ದೇ ಪದ್ಧತಿ ಸಿಯುಇಟಿಗೂ ಬರಲಿ ಎನ್ನುವುದು ನಮ್ಮ ಸಂಘದ ಅಭಿಮತ. ಇಲ್ಲವಾದರೆ ಪಿಯು ಓದಿದರೆ ಪ್ರಯೋಜನವೇನು ಎಂಬ ಭಾವನೆ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಮೂಡಲಿದೆ.
| ಎ.ಎಚ್. ಲಿಂಗೇಗೌಡ ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ
ಪಿಯುಸಿ ಶಿಕ್ಷಣವನ್ನೇ ಇದು ಅಪ್ರಸ್ತುತಗೊಳಿಸುತ್ತದೆ. ಕೋಚಿಂಗ್ ಸಂಸ್ಕೃತಿ ಬೆಳೆಸುತ್ತದೆ. ಸಾಮಾನ್ಯವಾಗಿ ಇಂಜಿನಿಯರಿಂಗ್, ಮೆಡಿಕಲ್ ಹೊರತಾದ ಶೇ.90ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕೆ ಅವರದೇ ರಾಜ್ಯದ, ನೆರೆಹೊರೆಯ ಶಿಕ್ಷಣ ಸಂಸ್ಥೆಗಳನ್ನೇ ಆಧರಿಸಿರುತ್ತಾರೆ. ಇವರಿಗೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯ ಅಗತ್ಯವಾದರೂ ಏನು?
| ಸತ್ಯನಾರಾಯಣ ಪಿಇಎಸ್ ಕಾಲೇಜು ಪ್ರಾಂಶುಪಾಲ
ಸಿಯುಇಟಿ ಯಾರಿಗೆ ಕಡ್ಡಾಯ?: ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವೂ ಸೇರಿ ದೇಶದಲ್ಲಿರುವ 40ಕ್ಕೂ ಅಧಿಕ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್ ಪ್ರವೇಶಕ್ಕೆ ಸಿಯುಇಟಿ ಕಡ್ಡಾಯ ಮಾಡಲಾಗಿದೆ. ಈ ಮೊದಲು ಕೆಲವೇ ಕೇಂದ್ರೀಯ ವಿವಿಗಳು ಒಗ್ಗೂಡಿ ಸಾಮಾನ್ಯ ಪ್ರವೇಶ ಪರೀಕ್ಷೆ ಆಯೋಜಿಸುತ್ತಿದ್ದವು. ಇದನ್ನೇ ವಿಸ್ತರಿಸಿ ಎಲ್ಲ ಕೇಂದ್ರೀಯ ವಿದ್ಯಾಲಯಗಳಿಗೂ ಅನ್ವಯಿಸಲಾಗುತ್ತಿದೆ. ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿದ್ದ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯಗಳೂ ಈ ಬಾರಿ ಸಿಯುಇಟಿ ನಿಯಮ ಪಾಲಿಸಬೇಕಾಗಿದೆ. ಇದಲ್ಲದೆ, ಖಾಸಗಿ ಹಾಗೂ ಡೀಮ್್ಡ ವಿವಿಗಳೂ ಈ ಪ್ರವೇಶ ಪರೀಕ್ಷೆಯ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವ ನಿಯಮಗಳನ್ನು ಸಡಿಲಿಸಿವೆ.
ನಾಳೆಯಿಂದ ನೋಂದಣಿ ಪ್ರಕ್ರಿಯೆ: ಸಿಯುಇಟಿಗೆ ಬುಧವಾರದಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಮೇ 6 ಕೊನೆಯ ದಿನವಾಗಿರಲಿದೆ. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಿರುವುದಾಗಿ ಎನ್ಟಿಎ ತಿಳಿಸಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಈಗಿರುವ ವ್ಯವಸ್ಥೆ ಏನು?: ಸಿಇಟಿ, ಜೆಇಇ ಮೇನ್, ನೀಟ್ ಹೊರತಾಗಿ ಪ್ರತಿಷ್ಠಿತ ಕಾಲೇಜುಗಳು ಅಥವಾ ಸ್ವಾಯತ್ತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಪದವಿ ಕೋರ್ಸ್ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿವೆ. ಅರ್ಜಿಗಳ ಸಂಖ್ಯೆ ಕಡಿಮೆಯಾಗಿದ್ದಲ್ಲಿ ಪಿಯು ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿಯನ್ನು ಪ್ರಕಟಿಸುತ್ತವೆ. ಆದರೆ, ಸಿಯುಇಟಿ ಅನುಷ್ಠಾನಗೊಂಡರೆ ಪಿಯು ವಿದ್ಯಾರ್ಹತೆಯಾಗಿ ಉಳಿಯಲಿದ್ದು, ಅಂಕಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ.
ಸಮರ್ಥಕರ ವಾದವೇನು?: ಖಾಸಗಿ ಕಾಲೇಜು, ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲಿ ಮನಸೋಇಚ್ಛೆ ಅಂಕ ನೀಡಲಾಗುತ್ತಿದೆ. ಕೇರಳದ ಉದಾಹರಣೆ ನೀಡುವುದಾದರೆ, ಶೇಕಡ ನೂರು ಅಂಕ ಪಡೆದ ವಿದ್ಯಾರ್ಥಿಗಳು, ಪೂರ್ಣಪ್ರಮಾಣದ ಉತ್ತೀರ್ಣತೆ ದಾಖಲಿಸುವ ಶಾಲೆಗಳ ಸಂಖ್ಯೆಯೇ ಸಾವಿರಗಟ್ಟಲೆ ಇರುತ್ತದೆ. ಈ ವಿದ್ಯಾರ್ಥಿಗಳು ಯಾವುದೇ ಕಾಲೇಜಿನಲ್ಲಿ ಸುಲಭವಾಗಿ ಸೀಟು ಗಿಟ್ಟಿಸುತ್ತಾರೆ. ಕಟ್ಟುನಿಟ್ಟಿನ ಪರೀಕ್ಷೆ ಎದುರಿಸಿ ಬಂದವರು ಸಹಜವಾಗಿಯೇ ಕಡಿಮೆ ಅಂಕ ಪಡೆದಿರುತ್ತಾರೆ. ಪದವಿ ಸ್ನಾತಕೋತ್ತರ ಕೋರ್ಸ್ಗಳಲ್ಲೂ ಈ ಪ್ರವೃತ್ತಿ ಕಾಣಬಹುದು. ಪ್ರವೇಶ ಪರೀಕ್ಷೆಗಳು ಎಲ್ಲರಿಗೂ ಸಮಾನ ವೇದಿಕೆಯಾಗಿರುತ್ತವೆ ಎಂಬುದು ಸಮರ್ಥಕರ ವಾದ.
ಇನ್ನು ಮ್ಯಾಂಗೋ ವಾರ್!?: ಹಲಾಲ್-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ..
ಬೆಂಗಳೂರು ಬಿಟ್ಟು ಹೈದರಾಬಾದ್ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್
| ರಮೇಶ್ ಮೈಸೂರು ಬೆಂಗಳೂರು
| ಪ್ರೊ. ತುಳಸಿಮಾಲಾ, ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ
| ಬಿ.ಎ. ರಾಜಶೇಖರ, ಆರ್ಎಂಎಸ್ಎ ನಿವೃತ್ತ ರಾಜ್ಯ ನಿರ್ದೇಶಕ
| ಎ.ಎಚ್. ಲಿಂಗೇಗೌಡ ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ
| ಸತ್ಯನಾರಾಯಣ ಪಿಇಎಸ್ ಕಾಲೇಜು ಪ್ರಾಂಶುಪಾಲ
Post a Comment