ಹಳೆಯ ಮಾತೊಂದಿದೆ- ನಿಮ್ಮ ಬೆನ್ನ ಹಿಂದೆ ಗೋಡೆ ಇದ್ದಾಗ ಮುಂದಕ್ಕೆ ಹೋಗುವುದೊಂದೇ ಉಳಿದಿರುವ ಮಾರ್ಗ ಎಂದು.... | ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಇತ್ತೀಚಿನ ದಿನಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪುಟಿದೇಳುವ ಭಾರತದ ಶಕ್ತಿಯನ್ನು ಗಮನಿಸಿದಾಗ ಈ ಮಾತು ಮತ್ತೆ ಮತ್ತೆ ಕಿವಿಯಲ್ಲಿ ರಿಂಗಣಿಸಿದಂತಾಗುತ್ತದೆ. ಪ್ರತಿ ಯುದ್ಧವೂ ಮನುಕುಲಕ್ಕೆ ಪಾಠ ಎಂದು ಹೇಳಲಾಗುತ್ತದೆ.

ಯೂಕ್ರೇನ್ ವಿರುದ್ಧ ವ್ಲಾಡಿಮಿರ್ ಪುಟಿನ್ ಅವರು ನಡೆಸುತ್ತಿರುವ ಹಾಗೂ ಇನ್ನೂ ಕೊನೆಗಾಣದ ಈ ಯುದ್ಧವು ಪ್ರತಿ ದೇಶಕ್ಕೂ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ದೇಶದ ಆಡಳಿತವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ಸಂದೇಶಗಳನ್ನು ರವಾನಿಸುತ್ತಿದೆ. ಇಲ್ಲಿ ನಾವು ಗಮನಿಸಬೇಕಾದ ಎರಡು ವಿಭಿನ್ನ ಅಂಶಗಳೆಂದರೆ- ಸಂಘರ್ಷದಲ್ಲಿರುವಾಗ, ಯಾರೂ ನಿಮ್ಮ ಸ್ನೇಹಿತರಾಗಲು ಸಾಧ್ಯವಿಲ್ಲ ಮತ್ತು ಸ್ವಾವಲಂಬನೆಯೊಂದೇ ಆತ್ಮ ನಿರ್ಭರತೆಗೆ ಇರುವ ಏಕೈಕ ಮಂತ್ರವಾಗಿದೆ.

ಹಾಗಾದರೆ ಯೂಕ್ರೇನ್ ಯುದ್ಧದಿಂದ ಭಾರತ ಕಲಿತ ಪಾಠವೇನು? ಎಂದು ಪ್ರಶ್ನಿಸಿದರೆ ಉತ್ತರವಿಷ್ಟೆ: ಅನೇಕ ವಿಷಯಗಳು. ಸರ್ಕಾರವು ಎಲ್ಲವನ್ನೂ ಸಾರ್ವಜನಿಕವಾಗಿ ಚರ್ಚಿಸದಿದ್ದರೂ ಕೆಲವು ಕಟುವಾದ ಸತ್ಯಗಳು ಭಾರತವನ್ನು ತಟ್ಟಿವೆ. ತೈಲ ಆಮದು ಮತ್ತು ಶಸ್ತ್ರಾಸ್ತ್ರ ಆಮದುಗಳ ಮೇಲೆ ಭಾರತದ ಅವಲಂಬನೆಯು ಕಠಿಣ ವಾಸ್ತವವಾಗಿದೆ.

ತೈಲ ಆಮದು ವಿಚಾರಕ್ಕೆ ಬಂದರೆ ಭಾರತ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ. ಭಾರತದ ಕಚ್ಚಾ ತೈಲ ಆಮದು ಶೇ. 80ರಿಂದ 85ಕ್ಕಿಂತ ಕಡಿಮೆಯೇನಲ್ಲ. ಇದರಲ್ಲಿ, ಕೇವಲ ಶೇ. 2 ರಷ್ಯಾದಿಂದ ಬರುತ್ತದೆ, ಆದರೆ ಇರಾಕ್​ನ ಪಾಲು ಶೇ. 62ರಷ್ಟಿದ್ದು, ಅತಿ ಹೆಚ್ಚು ಕಚ್ಚಾತೈಲ ಪೂರೈಸುತ್ತಿರುವ ರಾಷ್ಟ್ರವಾಗಿದೆ. ಆದಾಗ್ಯೂ, ಜಾಗತಿಕ ಮಟ್ಟದಲ್ಲಿ ರಷ್ಯಾ ಅತಿ ದೊಡ್ಡ ರಫ್ತುದಾರನಾಗಿ ಉಳಿದಿದೆ. ಹೆಚ್ಚಿನ ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಮೇಲೆಯೇ ಹೆಚ್ಚು ಅವಲಂಬಿತವಾಗಿವೆ. ಇದೇ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲದ ಆಮದುದಾರ ಎಂಬ ಸ್ಥಾನಮಾನ ಹೊಂದಿದೆ.

2021ರಲ್ಲಿ, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಪ್ರಕಾರ, ಭಾರತದ ಆಮದುಗಳು ದಿನಕ್ಕೆ ಶೇ. 3.9, ಅಂದರೆ 4.2 ಮಿಲಿಯನ್ ಬ್ಯಾರೆಲ್‌ಗಳಿಗೆ ಇಳಿಕೆ ಕಂಡಿವೆ. ಇತರ ದೇಶಗಳು ಇನ್ನೂ ಹೆಚ್ಚು ಆಮದು ಮಾಡಿಕೊಂಡ ಕಾರಣ ಭಾರತದ ಪಾಲು ಕುಸಿತಕ್ಕೆ ಕಾರಣವಾಯಿತು.

'ಭಾರತೀಯ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಅಂಕಿ-ಅಂಶಗಳ' ಪ್ರಕಾರ, 2020-21ರಲ್ಲಿ ಭಾರತದ ಪೆಟ್ರೋಲಿಯಂ ಉತ್ಪನ್ನಗಳಿಗೆ ಸ್ವಾವಲಂಬಿ ಅನುಪಾತವು ಶೇ. 15.6 ಇತ್ತು. ಪರಿಸ್ಥಿತಿ ಹೀಗಿರುವಾಗ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಯಾವಾಗಲೂ ಮೇಲ್ಮುಖವಾಗಿ ಇರುತ್ತವೆ. ತೈಲ ಬೆಲೆಗೆ ಸಂಬಂಧಿಸಿದಂತೆ ದಕ್ಷಿಣ ಏಷ್ಯಾದ ದೇಶಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಜಾಗತಿಕ ನೆಲೆಯಲ್ಲಿ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಭಾರತದಲ್ಲಿ ಕಚ್ಚಾತೈಲದ ಬಳಕೆ ಹೆಚ್ಚುತ್ತಿದೆ.

ಚೀನಾ ಮತ್ತು ಅಮೆರಿಕದ ನಂತರ ಭಾರತವೇ ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕವಾಗಿದೆ. ಇದು ವಿಶ್ವದ ಶಕ್ತಿಯ ಬಳಕೆಯ ಶೇ. 5.7 ಪಾಲನ್ನು ಹೊಂದಿರುವ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂಧನ ಗ್ರಾಹಕವಾಗಿದೆ. ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ನವೀಕರಿಸಬಹುದಾದ ಇಂಧನ ಮತ್ತು ತೈಲ ಮತ್ತು ಅನಿಲದ ಮಿಶ್ರಣವು ದೇಶದ ಬೇಡಿಕೆಯನ್ನು ಪೂರೈಸುತ್ತಿದೆ.

ರಷ್ಯಾದ ಮೇಲೆ ಪಶ್ಚಿಮದ ರಾಷ್ಟ್ರಗಳ ಆರ್ಥಿಕ ನಿರ್ಬಂಧಗಳಿಂದಾಗಿ ಇಂಧನದ (ಶಕ್ತಿಯ) ವಿಷಯದಲ್ಲಿ ಯುರೋಪ್ ಅಕ್ಷರಶಃ ಕಂಗಾಲಾಗಿದೆ. ಆರ್ಥಿಕತೆಯನ್ನು ಮುನ್ನಡೆಸಲು ಅನ್ಯದೇಶಗಳ ಮೇಲೆ ಅತಿಯಾದ ಅವಲಂಬನೆ ಯಾವತ್ತೂ ಅಪಾಯಕಾರಿ. ಭಾರತ ಈಗ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲಗಳಿಂದ ಅವಲಂಬನೆಯಿಂದ ದೂರ ಸರಿಯಲು ತನ್ನ ಹಸಿರು ಶಕ್ತಿಯ ಮಾರ್ಗಗಳನ್ನು ವೇಗಗೊಳಿಸಬೇಕಾಗಿದೆ. ಇಂಧನ ಮಿಶ್ರಣ, ಅನಿಲ ಮೂಲಸೌಕರ್ಯ ಬಲಪಡಿಸುವುದು, ಸೌರಶಕ್ತಿ, ಜಲ ವಿದ್ಯುತ್‌ ಮತ್ತು ಪವನ ಶಕ್ತಿಯಂತಹ ಅಸಾಂಪ್ರದಾಯಿಕ ಶಕ್ತಿಯ ಬಳಕೆಯನ್ನು ಉತ್ತೇಜಿಸುವುದು ಮತ್ತು ಹೈಡ್ರೋಕಾರ್ಬನ್ ಸಂಪನ್ಮೂಲಗಳಿಂದ ನೈಸರ್ಗಿಕ ಅನಿಲಗಳತ್ತ ಸಾಗುವುದು ಭಾರತವು ತೆಗೆದುಕೊಳ್ಳಬೇಕಾದ ಕೆಲವು ತುರ್ತು ಕ್ರಮಗಳಾಗಿವೆ. ಚೀನಾದಂತಹ ವೈರಿ ರಾಷ್ಟ್ರವನ್ನು ಬಗಲಲ್ಲಿ ಇಟ್ಟುಕೊಂಡಿರುವ ಭಾರತಕ್ಕೆ ಯುರೋಪಿಯನ್ ರಾಷ್ಟ್ರಗಳ ಪರಿಸ್ಥಿತಿ ಬರಲಾರದು ಎಂಬ ಬಗ್ಗೆ ಖಾತ್ರಿಯೇನೂ ಇಲ್ಲ.

ಭಾರತವು ಸೂರ್ಯಕಾಂತಿ ಖಾದ್ಯ ತೈಲವನ್ನು ರಷ್ಯಾ ಮತ್ತು ಉಕ್ರೇನ್‌ನಿಂದ ಶೇ. 95ರ ವರೆಗೆ ಆಮದು ಮಾಡಿಕೊಳ್ಳುತ್ತದೆ. ಯುದ್ಧವು ಇದರ ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಮತ್ತು ಹೀಗಾಗಿ ಬೆಲೆಗಳು ಏರಿಕೆಯಾಗಿವೆ. ಈ ವಲಯದಲ್ಲೂ ಭಾರತವು ಸ್ವಾವಲಂಬಿಯಾಗಬೇಕಿದೆ.

ರಕ್ಷಣಾ ವಲಯ

ಇಂದು ಪುಟಿನ್ ಅವರು ಯುದ್ಧವನ್ನು ಮುಂದುವರಿಸಲು ಸಾಧ್ಯವಾಗಿದ್ದರೆ ಮತ್ತು ನ್ಯಾಟೋ ಸದಸ್ಯರಿಂದ ಎಲ್ಲ ಬಗೆಯ ನಿರ್ಬಂಧಗಳು ಮತ್ತು ಮಿಲಿಟರಿ ಕ್ರಮಗಳನ್ನು ಎದುರಿಸಲು ಸಾಧ್ಯವಾಗಿದ್ದರೆ, ಬಲವಾದ ಆರ್ಥಿಕತೆ ಹೊಂದಿರದಿದ್ದರೂ ಬಲವಾದ ಮಿಲಿಟರಿಯನ್ನು ಹೊಂದಿರುವುದೇ ಅದಕ್ಕೆ ಕಾರಣ. ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಪ್ರಕಾರ, ಭಾರತವು ತನ್ನ ಜಿಡಿಪಿಯ (ಒಟ್ಟು ರಾಷ್ಟ್ರೀಯ ಉತ್ಪನ್ನ) ಶೇ. 2.1ರಷ್ಟನ್ನು ರಕ್ಷಣೆಗಾಗಿ ಖರ್ಚು ಮಾಡುತ್ತದೆ. ರಷ್ಯಾ ತನ್ನ ರಕ್ಷಣೆಗಾಗಿ ಮಾಡುತ್ತಿರುವ ವೆಚ್ಚ ಶೇ 4.3. ಇದಕ್ಕೆ ಹೋಲಿಸಿದರೆ, ಭಾರತವು ಸೂಪರ್ ಪವರ್ ಆಗಲು ಇನ್ನೂ ಬಹಳಷ್ಟು ದಾರಿಯನ್ನು ಕ್ರಮಿಸಬೇಕಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ರಷ್ಯಾಕ್ಕೆ ವ್ಯತಿರಿಕ್ತವಾಗಿ, 2017 ಮತ್ತು 21ರ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಐದು ದೊಡ್ಡ ಆಮದುದಾರರ ಪಟ್ಟಿಯಲ್ಲಿ ಭಾರತವೂ ಸೇರಿದೆ. ಅದರ ಹೆಚ್ಚಿನ ರಕ್ಷಣಾ ಆಮದುಗಳು ರಷ್ಯಾದಿಂದ ಆಗಿವೆ ಎಂದು ಸ್ಟಾಕ್‌ಹೋಮ್ ಇಂಟರ್​​ನ್ಯಾಷನಲ್​ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ವರದಿ ಮಾಡಿದೆ. ಇನ್ನು ಆಮದುಗಳನ್ನು 2012ರಿಂದ 2016ರವರೆಗಿನ ಅವಧಿಯಲ್ಲಿ ಶೇ. 21ರಷ್ಟು ಕಡಿಮೆ ಮಾಡಲಾಗಿದೆ, ಸ್ಥಳೀಯ ಉತ್ಪಾದನೆಗೆ ಒತ್ತು ನೀಡಿದ ಕಾರಣ ಇದು ಸಾಧ್ಯವಾಯಿತು. 2017-21ರಲ್ಲಿ ಜಾಗತಿಕ ಶಸ್ತ್ರಾಸ್ತ್ರ ಆಮದುಗಳಲ್ಲಿ ಭಾರತದ ಪಾಲು ಶೇ. 11ರಷ್ಟಿದ್ದರೆ, ಚೀನಾದ ಪಾಲು ಶೇ. 4.8ರಷ್ಟಿತ್ತು ಎಂದು ವರದಿ ಹೇಳುತ್ತದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲು ಭಾರತವು ಫ್ರಾನ್ಸ್‌ನತ್ತ ಮುಖ ಮಾಡಿದೆ. ಇದು ಮುಂದಿನ ವರ್ಷಗಳಲ್ಲಿ ಇತರ ಮೂಲಗಳ ಮೇಲೆ ಅವಲಂಬನೆಗೆ ಕಾರಣವಾಗಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತು ಪ್ರಮಾಣ ಕೇವಲ 0.2 ರಷ್ಟಿದೆ. ಮುಂದಿನ ಮೂರು ವರ್ಷಗಳಲ್ಲಿ 35,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಮಗ್ರಿಗಳ ರಫ್ತು ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನೂ ಹೊಂದಿದೆ.

ಭಾರತವು ರಕ್ಷಣಾ ಉಪಕರಣಗಳ ಸಂಗ್ರಹಣೆಗಾಗಿ ರಕ್ಷಣಾ ಬಂಡವಾಳದ ವೆಚ್ಚದ ಶೇ. 68ರಷ್ಟನ್ನು- ಅಂದರೆ 84,598 ಕೋಟಿ ರೂಪಾಯಿಗಳನ್ನು, ಸ್ಥಳೀಯವಾಗಿ ತಯಾರಿಸಿ ಶಸ್ತ್ರಾಸ್ತ್ರಗಳ ಖರೀದಿಗೆ ಮೀಸಲಿರಿಸಿದೆ. ಸ್ಥಳೀಯವಾಗಿ ಉತ್ಪಾದಿಸಿದ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳನ್ನು ಖರೀದಿಸುವುದು ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ ಮತ್ತು ಈ ವಲಯಕ್ಕೆ ಉತ್ತೇಜನವನ್ನೂ ನೀಡುತ್ತದೆ. ಹಾಗಿದ್ದರೂ, ಈ ಎಲ್ಲಾ ವರ್ಷಗಳ ಅನುಭವವನ್ನು ಗಮನಿಸಿದರೆ, ಭಾರತೀಯ ಉತ್ಪಾದನೆ ಮತ್ತು ಸಹಾಯಕ ಘಟಕಗಳು ದೇಶೀಯ ಮಾರುಕಟ್ಟೆಯ ಮತ್ತು ರಫ್ತಿನ ಬೇಡಿಕೆಗಳನ್ನು ಪೂರೈಸುವುದು ಕಠಿಣವೆಂದು ಸ್ಪಷ್ಟವಾಗುತ್ತದೆ.

ಭಾರತವು ಶಸ್ತ್ರಾಸ್ತ್ರಗಳಿಗಾಗಿ ಅಮೆರಿಕ, ರಷ್ಯಾ ಮತ್ತು ಇಸ್ರೇಲ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕಾದರೆ, ತಾನು ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಸಾಗಬೇಕು. ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಬೇಕು ಮತ್ತು ಉದ್ಯಮಿಗಳಿಗೆ ಉತ್ತೇಜನ ನೀಡಬೇಕು. ಆಮದಿನ ಮೇಲೆ ಖರ್ಚು ಮಾಡುವುದರ ಜತೆ ಜತೆಗೇ ಆತ್ಮನಿರ್ಭರವಾಗಲು ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನಹರಿಸಬೇಕಿದೆ. ಆ ಮೂಲಕ ಅನ್ವೇಷಣಾತ್ಮಕತೆಯನ್ನು ಅಳವಡಿಸಿಕೊಳ್ಳಲು ಸಕಾಲವಾಗಿದೆ.

ಭಾರತವು ಸ್ವಾವಲಂಬಿಯಾಗಲು ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಬಹಳ ದೂರ ಸಾಗಬೇಕಾಗಿದೆ. ಆತ್ಮನಿರ್ಭರ ಭಾರತವನ್ನು ಅಕ್ಷರಶಃ ವಾಸ್ತವದಲ್ಲಿ ನೋಡಬೇಕಾದರೆ, ಅಧಿಕಾರಶಾಹಿ ವಿಧಾನಗಳು, ಕೆಂಪು ಪಟ್ಟಿ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕಬೇಕು.

ಪೇಟೆಂಟ್ ಮತ್ತು ಇಂಡಕ್ಷನ್ (ಹಕ್ಕು ಮತ್ತು ಪ್ರತಿಷ್ಠಾಪನೆ)

ಇತ್ತೀಚೆಗೆ, ಭಾರತ ಸರ್ಕಾರವು 11 ವರ್ಷಗಳಲ್ಲಿ ಮೊದಲ ಬಾರಿಗೆ, ದೇಶೀಯ ಪೇಟೆಂಟ್ ಫೈಲಿಂಗ್‌ಗಳ ಸಂಖ್ಯೆಯು 2022ರ ತ್ರೈಮಾಸಿಕದಲ್ಲಿ ಅಂತಾರಾಷ್ಟ್ರೀಯ ಪೇಟೆಂಟ್ ಫೈಲಿಂಗ್‌ಗಳ ಸಂಖ್ಯೆಯನ್ನು ಮೀರಿದೆ ಎಂದು ಘೋಷಿಸಿತು. ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ದಕ್ಷತೆಗೊಳಪಡಿಸುವ ಸರ್ಕಾರದ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ.

ಕೈಗಾರಿಕೆ, ಆಂತರಿಕ ವ್ಯಾಪಾರ ಮತ್ತು ಬೌದ್ಧಿಕ ಆಸ್ತಿಯ ಉತ್ತೇಜನ ಇಲಾಖೆಯ ಸಂಘಟಿತ ಪ್ರಯತ್ನಗಳು ಜಾಗತಿಕ ನಾವೀನ್ಯತೆಯ ಸೂಚ್ಯಂಕದಲ್ಲಿ ಭಾರತವನ್ನು ಅಗ್ರ 25 ಸ್ಥಾನಗಳಿಗೆ ಕೊಂಡೊಯ್ಯುತ್ತವೆ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ. ಕಳೆದ 7 ವರ್ಷಗಳಲ್ಲಿ ಪೇಟೆಂಟ್‌ಗಳ ಸಲ್ಲಿಕೆ ಸುಮಾರು ಶೇ. 50ರಷ್ಟು ವೃದ್ಧಿಸಿದೆ ಎಂದು ಅವರು ಹೇಳುತ್ತಾರೆ.

ಭಾರತದಲ್ಲಿ ಕಾಣುತ್ತಿರುವ ಮತ್ತೊಂದು ಸಕಾರಾತ್ಮಕ ಬೆಳವಣಿಗೆ ಎಂದರೆ ಏಪ್ರಿಲ್ 12ರಂದು ಭಾರತೀಯ ಸೇನೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ನಾಲ್ಕು ರಕ್ಷಣಾ ಸಾಧನಗಳ ಮೊದಲ ಸೆಟ್ ಅಳವಡಿಸಿಕೊಳ್ಳುತ್ತಿದೆ. ಅವುಗಳೆಂದರೆ - ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್ ಮೀಡಿಯಂ (ಕ್ಯೂಆರ್‌ಎಫ್‌ವಿ), ಇನ್‌ಫಾಂಟ್ರಿ ಪ್ರೊಟೆಕ್ಟೆಡ್ ಮೊಬಿಲಿಟಿ ವೆಹಿಕಲ್ (ಐಪಿಎಂವಿ), ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ ಲಿಮಿಟೆಡ್‌ (ಟಿಎಎಸ್‌ಎಲ್‌) ಅಭಿವೃದ್ಧಿಪಡಿಸಿದ ಅಲ್ಟ್ರಾ ಲಾಂಗ್ ರೇಂಜ್ ಅಬ್ಸರ್ವೇಶನ್ ಸಿಸ್ಟಮ್ ಮತ್ತು ಭಾರತ್ ಫೋರ್ಜ್ ಅಭಿವೃದ್ಧಿಪಡಿಸಿದ ಮೊನೊಕೊಕ್ ಹಲ್‌ (Monocoque Hull)- ಬಹು ಪಾತ್ರ ನಿರ್ವಹಣೆಯ, ನೆಲಬಾಂಬ್‌ಗಳಿಂದ ರಕ್ಷಣೆ ನೀಡುವ ಸಶಸ್ತ್ರ ವಾಹನ.

ಇಂತಹ ಬೆಳವಣಿಗೆಗಳು ಭಾರತವು ನಾವೀನ್ಯತೆಯತ್ತ ಸಾಗಲು ಮಾತ್ರವಲ್ಲದೆ ಅದನ್ನು ಕ್ರೋಡೀಕರಿಸಲು ಸಜ್ಜಾಗಿದೆ ಎಂಬುದರ ಸೂಚನೆಯಾಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಭದ್ರತೆ

ಭಾರತವು ತಕ್ಷಣವೇ ಗಮನಹರಿಸಬೇಕಾದ ಮತ್ತೊಂದು ಕ್ಷೇತ್ರವೆಂದರೆ ತಂತ್ರಜ್ಞಾನ-ಚಾಲಿತ ಸಂವಹನ ವ್ಯವಸ್ಥೆಗಳು. ಅದು ಸಾಮಾಜಿಕ ಮಾಧ್ಯಮವಾಗಲಿ ಅಥವಾ ಉಪಗ್ರಹ ಇಂಟರ್ನೆಟ್ ಸಂವಹನ ಸೇವೆಗಳಾಗಲಿ, ಭಾರತವು ಬಹಳ ದೂರ ಸಾಗಬೇಕಾಗಿದೆ. ರಷ್ಯಾವು ಉಕ್ರೇನ್‌ನ ಸಂವಹನ ವ್ಯವಸ್ಥೆಗಳ ಮೇಲೆ ಆಯಕಟ್ಟಿನ ದಾಳಿ ನಡೆಸಿದ್ದರಿಂದ ಆ ದೇಶವಿಂದು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕದಲ್ಲಿರಲು ತುಂಬಾ ಕಠಿಣವಾಗಿದೆ. ಆದರೆ, ಅಮೇರಿಕನ್ ಕಂಪನಿಗಳು ಸ್ವಲ್ಪ ಮಟ್ಟಿನ ನೆರವಿಗೆ ಬಂದಿದ್ದರಿಂದ ಉಕ್ರೇನ್‌ಗೆ ಅಷ್ಟರ ಮಟ್ಟಿಗೆ ಬಲ ಬಂದಂತಾಗಿದೆ.

ಯುರೋಪಿನ ತಂತ್ರಜ್ಞಾನ ಕೇಂದ್ರ (ಟೆಕ್ ಹಬ್) ಆಗಿರುವ ಉಕ್ರೇನ್, ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಉಕ್ರೇನ್ ಸುಮಾರು 5,000 ಐಟಿ ಸಂಸ್ಥೆಗಳಿಗೆ ನೆಲೆಯಾಗಿದೆ, ಇವುಗಳ ಪೈಕಿ 1,400 ಸ್ಟಾರ್ಟ್‌ ಅಪ್‌ಗಳೂ ಸೇರಿವೆ. ಈ ಕ್ಷೇತ್ರದಲ್ಲಿ ಕನಿಷ್ಠ 3 ಲಕ್ಷ ಮಂದಿ ಉದ್ಯೋಗದಲ್ಲಿದ್ದಾರೆ. ಆದರೂ, ಯುದ್ಧದ ಆರಂಭಿಕ ದಿನಗಳಲ್ಲಿ, ರಷ್ಯಾಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುವುದು ಅದಕ್ಕೆ ಕಠಿಣವಾಗಿತ್ತು. ಉಕ್ರೇನ್‌ನಲ್ಲಿನ ಈ ಪರಿಸ್ಥಿತಿಯು ಭಾರತವು ಸಂವಹನ ಮತ್ತು ಸೈಬರ್ ಕ್ಷೇತ್ರದಲ್ಲಿ ಸುರಕ್ಷಿತವಾಗಿರಲು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ.

ಭಾರತದ ಬಗ್ಗೆ ಒಂದು ಗಮನಾರ್ಹ ಮತ್ತು ಶ್ಲಾಘನೀಯ ವಿಷಯವೆಂದರೆ ಅದು ಯುದ್ಧದ ಬಗ್ಗೆ ಅತಿಯಾಗಿ ಪ್ರತಿಕ್ರಿಯಿಸಲಿಲ್ಲ. ಇಡೀ ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸಿದವು ಮತ್ತು ಯುದ್ಧವನ್ನು ಖಂಡಿಸುವಂತೆ ಭಾರತದ ಮೇಲೆ ಒತ್ತಡ ಹೇರಿದಾಗ, ಭಾರತವು ತನ್ನ ನಿಲುವಿನಲ್ಲಿ ದೃಢವಾಗಿ ಉಳಿಯಿತು. ಭಾರತವು ಬಂದೂಕುಗಳಿಗಿಂತ ಶಾಂತಿಗೆ ಒಲವು ತೋರಿತು, ಆದರೆ ಕದನಲ್ಲಿ ಮಧ್ಯಪ್ರವೇಶಿಸಲು ಬಯಸಲಿಲ್ಲ. ಭಾರತವು ಸಹಜವಾಗಿಯೇ ಔಷಧಿ ಮತ್ತು ಇತರ ಸಹಾಯವನ್ನು ಯುದ್ಧಪೀಡಿತರ ನೆರವಿಗಾಗಿ ಕಳುಹಿಸುತ್ತಿದೆ, ಆದರೆ ಅದು ರಷ್ಯಾ ಅಥವಾ ಉಕ್ರೇನ್ ಪರ ನಿಲುವು ವ್ಯಕ್ತಪಡಿಸಿಲ್ಲ. ಅಲ್ಲದೆ, ಪಾಶ್ಚಾತ್ಯ ದೇಶಗಳ ಬೆದರಿಕೆ ತಂತ್ರಗಳು ತನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಭಾರತವು ಸ್ಪಷ್ಟವಾಗಿ ತೋರಿಸಿ ಕೊಟ್ಟಿದೆ.

ಆಗ್ನೇಯ ಏಷ್ಯಾದಲ್ಲಿ, ಭಾರತವು ಸೂಪರ್ ಪವರ್ ಆಗಿದೆ. ಭಾರತ ಮತ್ತು ಅಮೇರಿಕಾಗೆ ಸಾಮಾನ್ಯ ಶತ್ರುವೆಂದರೆ ಚೀನಾ. ಆದ್ದರಿಂದ, ಯಾವುದೇ ಪ್ರಭಾವಕ್ಕೆ ಮಣಿಯದ ಭಾರತದ ನಿಲುವಿನ ನಡುವೆಯೂ ಭಾರತದೊಂದಿಗಿನ ಸಂಬಂಧವನ್ನು ಅಮೇರಿಕಾ ಎಚ್ಚರಿಕೆಯಿಂದ ನಿಭಾಯಿಸುತ್ತಿದೆ. ಜೊತೆಗೆ ಅಮೆರಿಕ ಮತ್ತು ರಷ್ಯಾಗಳೆರಡೂ ಭಾರತದೊಂದಿಗಿನ ವ್ಯಾಪಾರವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ.

ಕೋವಿಡ್-19-ಪ್ರೇರಿತ ಎರಡು ವರ್ಷಗಳ ಗರಿಷ್ಠ ಬಿಕ್ಕಟ್ಟಿನ ಸಂದರ್ಭದಲ್ಲೂ, ಭಾರತವು ಸ್ವಾವಲಂಬಿಯಾಗುವುದರ ಜತೆಗೆ ಇತರರಿಗೆ ಸಹಾಯ ಮಾಡಲೂ ತನಗೆ ಸಾಧ್ಯವಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಭಾರತ ತನ್ನದೇ ಲಸಿಕೆಗಳನ್ನು ತಯಾರಿಸಿತು ಮತ್ತು ಅಗತ್ಯವಿರುವ ದೇಶಗಳಿಗೆ ಅವುಗಳನ್ನು ರಫ್ತು ಮಾಡಿತು. ಉತ್ಪಾದನಾ ವಲಯದಲ್ಲೂ ಇದೇ ಉತ್ಸಾಹ ತೋರಿದರೆ ಚೀನಾ ಮತ್ತು ಅಮೆರಿಕದ ಆರ್ಥಿಕತೆಯನ್ನೂ ಭಾರತ ಅಲುಗಾಡಿಸಬಹುದು ಎಂಬುದರಲ್ಲಿ ಸಂದೇಹವಿಲ್ಲ.

ಹಿರಿಯ ನಟ ದತ್ತಣ್ಣಗೆ ನಾಳೆ 80 ವರ್ಷ ಪೂರ್ಣ; ಇವರಿಗೆ ಒಂದಲ್ಲ ಮೂರು ಬರ್ತ್​ಡೇ!

ಡಿ.ಕೆ.ಶಿವಕುಮಾರ್​​ರನ್ನು ನಿಂದಿಸಿದ್ದ ವ್ಯಕ್ತಿಗೆ 2 ವರ್ಷ ಜೈಲುಶಿಕ್ಷೆ!

| ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಡಿ.ಕೆ.ಶಿವಕುಮಾರ್​​ರನ್ನು ನಿಂದಿಸಿದ್ದ ವ್ಯಕ್ತಿಗೆ 2 ವರ್ಷ ಜೈಲುಶಿಕ್ಷೆ!

DailyhuntReport
Disclaimer: This story is auto-aggregated by a computer program and has not been created or edited by Dailyhunt. Publisher: Vijayvani

Post a Comment

Previous Post Next Post