*ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ನಿನ್ನೆ ಮಂಗಳವಾರ ನೀಡಿದ ಪ್ರತಿಕ್ರಿಯೆ:*

*ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಮಂಗಳವಾರ ನೀಡಿದ ಪ್ರತಿಕ್ರಿಯೆ:*

ನಮ್ಮ ಶಾಸಕರು ಹಾಗೂ ನಾಯಕರು ಇಂದು ಸಂತೋಷ್ ಪಾಟೀಲ್ ಅವರ ಮನೆಗೆ ಭೇಟಿ ನೀಡಿದ್ದೇವೆ. ಆತ ತನ್ನ ಕನಸಿನ ಪುಟ್ಟ ಮನೆ ಕಟ್ಟಿದ್ದು, ಅದರ ಗೃಹ ಪ್ರವೇಶವೂ ಆಗಿಲ್ಲ. ಧೈರ್ಯಶಾಲಿ ಯುವಕ ಯಾಕೆ ಪ್ರಾಣ ಕಳೆದುಕೊಂಡ ಎಂಬ ಪ್ರಶ್ನೆ ಕಾಡುತ್ತಿದೆ. ಈ ಸಾವಿನ ಬಗ್ಗೆ ತನಿಖೆ ನಡೆಯುತ್ತಿದ್ದು, ಇವರಿಗೆ ನ್ಯಾಯ ಒದಗಿಸಲು ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ.

ನಾನು, ನಮ್ಮ ಶಾಸಕಾಂಗ ಪಕ್ಷದ ನಾಯಕರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಕಳೆದ ವಾರ ಇಲ್ಲಿಗೆ ಬಂದಾಗ ಅವರಿಗೆ ನ್ಯಾಯ ಒದಗಿಸಿಕೊಡುವುದಾಗಿ ಮಾತು ಕೊಟ್ಟಿದ್ದು, ನಮ್ಮ ಹೋರಾಟ ರಾಜ್ಯದುದ್ದಗಲಕ್ಕೂ ಮುಂದುವರಿಯಲಿದೆ. ಪೊಲೀಸ್ ಅಧಿಕಾರಿಗಳು, ಮಂತ್ರಿಗಳ ಹೇಳಿಕೆ ಗಮನಿಸಿದ್ದೀರಿ. ನಿರಾಣಿ, ಕಾರಜೋಳ ಸಾಹೇಬರು ಇಲ್ಲಿ ಕೆಲಸ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ಕ್ಷೇತ್ರದಲ್ಲೂ ಈ ರೀತಿ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿ ನಡೆದಿವೆ ಎಂದು ಮಾಜಿ ಜಿಲ್ಲಾ ಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಆಗಿರುವ ಕಾಮಗಾರಿಗೆ ಮಂತ್ರಿಗಳು ಬಿಲ್ ಪಾವತಿ ಆಗಬೇಕು ಎಂದು ಹೇಳಿದ್ದಾರೆ. ಇನ್ನು ಪರಿಹಾರ ನೀಡುವುದಾಗಿ ಹೇಳಿದ್ದು, ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

ಕಳೆದ ಬಾರಿ ನಾನು ಇಲ್ಲಿಗೆ ಬಂದಾಗ ಪಕ್ಷದ ಪರವಾಗಿ ನೆರವು ನೀಡುವುದಾಗಿ ಮಾತು ಕೊಟ್ಟಿದ್ದೆ. ಅದರಂತೆ ಇಂದು ಪಕ್ಷದ ಪರವಾಗಿ 11 ಲಕ್ಷ ರೂ. ಚೆಕ್ ಅನ್ನು ಆ ಹೆಣ್ಣುಮಗುವಿಗೆ ಕೊಟ್ಟಿದ್ದೇವೆ. ಇನ್ನು ನಮ್ಮ ಮಾಜಿ ಮಂತ್ರಿಗಳಾದ ಪ್ರಕಾಶ್ ಹುಕ್ಕೇರಿ ಅವರು ತಮ್ಮ ಸ್ವಂತ ಹಣದಿಂದ 5 ಲಕ್ಷ ರು. ನೆರವು ನೀಡಿದ್ದಾರೆ. ಪಕ್ಷದ ಪರವಾಗಿ ಅವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. 

ಈಗ ಕೆಲವರು ಸಂತೋಷ್ ಅವರ ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದರಿಂದ ಪ್ರಯೋಜನವಿಲ್ಲ. ಇಲ್ಲಿ ಮನುಷ್ಯತ್ವ ಹಾಗೂ ಮಾನವೀಯತೆ ಮುಖ್ಯ. ಆತ ಕೆಲಸ ಮಾಡಿದ್ದಾನೋ ಇಲ್ಲವೋ ಎಂಬುದು ಮುಖ್ಯ. ಆತ ಕೆಲಸ ಮಾಡಿ, ಪ್ರಧಾನಿಗಳಿಗೆ ಹೋಗಿ ಅರ್ಜಿ ಕೊಟ್ಟು, ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾನೆ. ಆ ಕೇಂದ್ರ ಸಚಿವರಿಗೆ ಕೊಟ್ಟ ಪತ್ರಕ್ಕೆ ಸಚಿವಾಲಯದಿಂದ ಪತ್ರವನ್ನು ನೀಡಲಾಗಿದೆ. ಆ ಸಚಿವಾಲಯವೂ ಕೂಡ ಸಂತೋಷ್ ಮನವಿಯನ್ನು ರಾಜ್ಯಕ್ಕೆ ಕಳುಹಿಸಿದೆ . ಈ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. 

ಆದರೆ ಸಂತೋಷ್ ನನಗೆ ಗೊತ್ತೇ ಇಲ್ಲ, ವರ್ಕ್ ಆರ್ಡರ್ ಕೊಟ್ಟಿಲ್ಲ ಎಂದರೆ ಆಗುವುದಿಲ್ಲ. ಗ್ರಾಮ ಪಂಚಾಯ್ತಿ ಅಧ್ಯಕ್ಷರೂ ಕೆಲಸ ಆಗಿರುವ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರು ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಮಾಡಲಿ, ಆತನ ಕುಟುಂಬಕ್ಕೆ 1 ಕೋಟಿ ಪರಿಹಾರ, ಸಂತೋಷ್ ಪತ್ನಿಗೆ ಒಂದು ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸುತ್ತೇವೆ. ಆಕೆಗೆ ಹೇಗೆ ಸರ್ಕಾರಿ ಕೆಲಸ ಕೊಡಬೇಕು ಎಂದು ಕೇಳಿದರೆ, ನಾವೇ ಹೇಳಿಕೊಡುತ್ತೇವೆ. ಆಕೆಗೆ ಸರ್ಕಾರಿ ಕೆಲಸ ಸಿಗುವವರೆಗೂ ನಾವೇ ನಮ್ಮ ನಾಯಕರ ಸಂಸ್ಥೆಯಲ್ಲಿ ಕೆಲಸ ನೀಡುತ್ತೇವೆ. 

ಈತ ಭ್ರಷ್ಟಾಚಾರದ ವಿರುದ್ಧ ರಾಜ್ಯ ಹಾಗೂ ದೇಶಕ್ಕೆ ಸಂದೇಶ ರವಾನಿಸಲು ಈ ಹೆಜ್ಜೆ ಇಟ್ಟಿದ್ದಾನೆ. ಆತನ ಕುಟುಂಬಕ್ಕೆ ಪರಿಹಾರ ನೀಡುವುದು ದೊಡ್ಡ ವಿಚಾರವಲ್ಲ. ಸಂತೋಷ್ ಸಾವಿನ ನಂತರ ಭ್ರಷ್ಟಾಚಾರದ ವಿಚಾರ ಬೇರೆ, ಬೇರೆ ಕವಲು ಪಡೆಯುತ್ತಿದೆ. ಈಗ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಎಲ್ಲ ಪಂಚಾಯ್ತಿಗಳಲ್ಲೂ ಇಂತಹ ಪರಿಸ್ಥಿತಿ ಇದ್ದು, ಇದನ್ನು ಬಗೆಹರಿಸಬೇಕಿದೆ. ಹೀಗಾಗಿ ನಾನೇ ಖುದ್ದಾಗಿ ಬಂದು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಕೊಟ್ಟಿದ್ದೇನೆ.

*ಪ್ರಶ್ನೋತ್ತರ*

ಸಿಡಿ ಕೇಸ್ ಮಾಡಿರುವ ಮಹಾನಾಯಕ ಈ ಪ್ರಕರಣದ ಹಿಂದೆ ಇದ್ದಾನೆ ಎಂಬ ರಮೇಶ್ ಜಾರಕಿಹೊಳಿ ಅವರ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಸತ್ಯ ಬಹಿರಂಗ ಪಡಿಸಲು ತಡ ಮಾಡುತ್ತಿರುವುದೇಕೆ? ಅದಕ್ಕೆ ಸಮಯ, ಮುಹೂರ್ತ ಯಾಕೆ ಬೇಕು? ಅವರು ಪ್ರಜ್ಞಾವಂತ, ಅನುಭವಸ್ಥರಿದ್ದು, ಜನರಿಗೆ ಸತ್ಯಾಂಶ ತಿಳುವಳಿಕೆ ಮಾಡಿದರೆ ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ಕಾಲದಲ್ಲೇ ಕೆಲಸ ಆರಂಭವಾಗಿದ್ದು, ಅವರು ಮಂತ್ರಿಯಾಗಿದ್ದಾಗ ಕೆಲಸ ಪ್ರಾರಂಭವಾಗಿರುವುದಕ್ಕೆ ದಾಖಲೆ, ಫೋಟೋ ಇವೆ. ಭೂಮಿ ಪೂಜೆ ಮಾಡಿ, ಅಭಿನಂದಿಸಿದ ಫೋಟೋ ಇವೆ. ಅವರು ಸತ್ಯಾಂಶ ಏನಿದೆಯೋ ಹೇಳಲಿ. ಅವರು ಬಹಳ ಮುಗ್ಧರಿದ್ದಾರೆ, ಅವರು ಎಂತೆಂತಾ ವಿಚಾರ ಬಿಚ್ಚಿ ತೋರಿಸಿದ್ದಾರೆ, ಈ ಪ್ರಕರಣದಲ್ಲೂ ದಾಖಲೆಗಳನ್ನು ಬಿಚ್ಚಿಡಲಿ’ ಎಂದರು.

ಅವರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರಾ ಎಂಬ ಪ್ರಶ್ನೆಗೆ, ‘ನೀವು ಈ ಪ್ರಶ್ನೆಯನ್ನು ಅವರಿಗೆ ಕೇಳಬೇಕು. ಅವರು ಜಿಲ್ಲಾ ಮಂತ್ರಿಗಳಾಗಿದ್ದಾಗ ಕೆಲಸ ಆರಂಭವಾಗಿತ್ತು ಎಂದು ಗೊತ್ತಿದ್ದರೂ ಯಾಕೆ ಮಾತನಾಡಲಿಲ್ಲ ಎಂದರೆ ಸರ್ಕಾರ ತನಿಖೆ ಮಾಡಲಿ ಎಂದು. ಆ ಬಗ್ಗೆ ನಾವು ಮಾತನಾಡಿದರೆ, ರಾಜಕೀಯ ವಿರೋಧಿ ಆರೋಪ ಎನ್ನುತ್ತಾರೆ. ಈ ಬಗ್ಗೆ ಪಿಡಿಓ, ಪಂಚಾಯ್ತಿ ಅಧ್ಯಕ್ಷರು, ಗುತ್ತಿಗೆದಾರರ ಸ್ನೇಹಿತರಿಗೆ ಮಾಹಿತಿ ಗೊತ್ತಿವೆ, ಆ ಬಗ್ಗೆ ಹೇಳಿದ್ದಾರೆ’ ಎಂದು ಉತ್ತರಿಸಿದರು.

ಯಾವುದೇ ಘಟನೆ ನಡೆದರೂ ಡಿ.ಕೆ. ಶಿವಕುಮಾರ್ ಅವರನ್ನು ಎಳೆದು ತರುತ್ತಿರುವುದೇಕೆ ಎಂಬ ಪ್ರಶ್ನೆಗೆ, ‘ಕೆಲವರಿಗೆ ನನ್ನ ನೋಡಿದರೆ ಖುಷಿ ಆಗುತ್ತದೆ, ನೆಮ್ಮದಿ ಸಿಗುತ್ತದೆ. ನನ್ನ ಹೆಸರು ಬಳಸಿಕೊಂಡರೆ ಕೆಲವರಿಗೆ ಶಕ್ತಿ ಬರುತ್ತದೆ. ಕೆಲವರಿಗೆ ರಾಮನ ಹೆಸರು, ಮತ್ತೆ ಕೆಲವರಿಗೆ ಹನುಮಂತನ ಹೆಸರು ಹೇಳಿದರೆ ಶಕ್ತಿ ಬರುತ್ತದೆ. ಅದೇ ರೀತಿ ಕೆಲವರಿಗೆ ನನ್ನ ಹೆಸರು ಹೇಳಿದರೆ ಶಕ್ತಿ ಬರುತ್ತದೆ’ ಎಂದರು.

ರಾಜ್ಯ ಸರ್ಕಾರದ 40% ಕಮಿಷನ್ ವಿಚಾರ ಒಂದೆಡೆಯಾದರೆ ಸಂತೋಷ್ ಪಾಟೀಲ್ ಅವರ ಕಾಮಗಾರಿ 4 ಕೋಟಿ ಬಿಲ್ ಪಾವತಿಯಾಗದಿರುವುದು ಮತ್ತೊಂದು ಕಡೆ ಇದೆ. ಇವೆರಡರಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆಗೆ, ‘ನಮಗೆ ಮೊದಲು ಬಿಲ್ ಪಾವತಿ ಆಗಬೇಕು. ಯಾವ ಕಾಮಗಾರಿ ಆಗಿದೆಯೋ ಅದರ ಬಿಲ್ ಪಾವತಿ ಆಗಬೇಕು. ಈಗ ಆತನ ಪ್ರಾಣ ಹೋಗಿದೆ, ಆತನ ಕುಟುಂಬಕ್ಕಾದರೂ ನ್ಯಾಯ ಒದಗಿಸಿಕೊಡಬೇಕಲ್ಲವೇ?’ ಎಂದು ಕೇಳಿದರು.

ಎಫ್ ಐಆರ್ ದಾಖಲಾಗಿ ಇಷ್ಟು ದಿನವಾದರೂ ಆರೋಪಿಗಳ ವಿಚಾರಣೆಯಾಗಿಲ್ಲ ಎಂಬ ಪ್ರಶ್ನೆಗೆ, ‘ಈ ಕಾರಣಕ್ಕೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಈ ದಪ್ಪ ಚರ್ಮದ ಸರ್ಕಾರ ಇಂತಹ ಕೆಲಸ ಮಾಡಬಾರದು ಎಂದು ಆಗ್ರಹಿಸುತ್ತಿದ್ದೇವೆ. ಒಬ್ಬ ಮುಖ್ಯಮಂತ್ರಿಗಳಾಗಿ ನೀವೇ ತಪ್ಪು ಮಾಡಿಲ್ಲ ಎಂದು ಪ್ರಮಾಣ ಪತ್ರ ನೀಡಿದರೆ ಪ್ರಕರಣ ಯಾವ ದಿಕ್ಕಿನಲ್ಲಿ ಸಾಗುತ್ತದೆ’ ಎಂದು ಉತ್ತರಿಸಿದರು.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 30% ಕಮಿಷನ್ ಇತ್ತು, ಅದರ ಬಗ್ಗೆ ತನಿಖೆ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ತನಿಖೆ ಮಾಡಲು ಯಾಕೆ ತಡ ಮಾಡುತ್ತಿದ್ದೀರಿ? ತಕ್ಷಣವೇ ತನಿಖೆ ಮಾಡಬಹುದಿತ್ತಲ್ಲವೇ? 4 ವರ್ಷ ಸಮಯ ಬೇಕಾಯಿತೇ?’ ಎಂದು ಉತ್ತರಿಸಿದರು.

ಹುಬ್ಬಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ಹುಬ್ಬಳ್ಳಿ ಗಲಾಟೆಗೂ ಕಾಂಗ್ರೆಸ್ ಗೂ ಸಂಬಂಧವಿಲ್ಲ. ಈ ಘಟನೆ ಸಮಯದಲ್ಲಿ ನಮ್ಮ ನಾಯಕರು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯ ನಿಭಾಯಿಸಿದ್ದು, ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಅವರ ಕರ್ತವ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ. ನಾನು ಈಗ ಅವರನ್ನು ಅಭಿನಂದಿಸಲು ಹೋಗುತ್ತಿದ್ದೇನೆ’ ಎಂದು ಉತ್ತರಿಸಿದರು.

Post a Comment

Previous Post Next Post