ಕಾಂಗ್ರೆಸ್ ಇಬ್ಭಾಗ; ಬಿಜೆಪಿಗೇ ಮತ್ತೆ ರಾಜ್ಯದಲ್ಲಿ ಅಧಿಕಾರದ ಯೋಗ- ನಳಿನ್‍ಕುಮಾರ್ ಕಟೀಲ್

24-04-2022
ಪ್ರಕಟಣೆಯ ಕೃಪೆಗಾಗಿ
ಕಾಂಗ್ರೆಸ್ ಇಬ್ಭಾಗ; ಬಿಜೆಪಿಗೇ ಮತ್ತೆ ರಾಜ್ಯದಲ್ಲಿ ಅಧಿಕಾರದ 
ಯೋಗ- ನಳಿನ್‍ಕುಮಾರ್ ಕಟೀಲ್ ವಿಶ್ವಾಸ
ಬೆಂಗಳೂರು: ಸಿದ್ರರಾಮಣ್ಣ ಮುಖ್ಯಮಂತ್ರಿಯೇ ಅಥವಾ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೇ ಎಂದು ಕಾಂಗ್ರೆಸ್‍ನಲ್ಲಿ ಸಂಗೀತ ಕುರ್ಚಿ ಆರಂಭವಾಗಿದೆ. ಅಕ್ಟೋಬರ್ ವೇಳೆಗೆ ಕಾಂಗ್ರೆಸ್ ಪಕ್ಷ ಎರಡು ಹೋಳಾಗಲಿದೆ. ಬಿಜೆಪಿ ಎದ್ದು ನಿಲ್ಲಲಿದೆ. 150 ಶಾಸಕರ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರ ಪಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಬೆಂಗಳೂರು ಮಹಾನಗರ ಬಿಜೆಪಿ ವತಿಯಿಂದ ಇಂದು ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಸಂಘಟನಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‍ಮುಕ್ತ ಕರ್ನಾಟಕ ಮಾಡಲು ನಾವು ಸಿದ್ಧರಾಗಬೇಕಿದೆ. ನವ ಭಾರತದ ನಿರ್ಮಾಣಕ್ಕೆ ನವ ಕರ್ನಾಟಕ ಸಾಕ್ಷಿ ಆಗಬೇಕು ಎಂದು ತಿಳಿಸಿದರು.
ವಿಧಾನಸಭಾ ಉಪಚುನಾವಣೆ, ವಿಧಾನಪರಿಷತ್ ಚುನಾವಣೆ, ಪಾಲಿಕೆಗಳ ಚುನಾವಣೆಗಳಲ್ಲಿ ಬಿಜೆಪಿ ಅಲೆ ಸ್ಪಷ್ಟವಾಗಿದೆ. ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಿದ್ದರಿಂದ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ಅಲೆಯನ್ನು ಕಂಡು ಕಾಂಗ್ರೆಸ್‍ಗೆ ದಿಗಿಲಾಗಿದೆ. ಡಿಜೆ. ಹಳ್ಳಿ, ಕೆ.ಜಿ.ಹಳ್ಳಿಯ ಗಲಭೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಪರ ನಿಲ್ಲದ ಆ ಪಕ್ಷದ ಮುಖಂಡರು ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತಿತರರಿಗೆ ಜೈ ಹೇಳುತ್ತಾರೆ. ದೇಶದ ಪರವಾಗಿ ಜಯಕಾರ ಕೂಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಭಾರತ್ ಮಾತಾ ಕಿ ಜೈ ಕೇವಲ ಬಿಜೆಪಿಯಲ್ಲಿದೆ ಎಂದರು.
ಅಧಿಕಾರದಲ್ಲಿ ಇಲ್ಲದಾಗ ಗಲಭೆ ಎಬ್ಬಿಸುವುದು ಕಾಂಗ್ರೆಸ್ ಪಕ್ಷದ ಇತಿಹಾಸ. ರಾಜ್ಯದಲ್ಲೂ ಅಧಿಕಾರದ ಆಸೆಗಾಗಿ ಸಿದ್ರಾಮಣ್ಣ- ಡಿ.ಕೆ.ಶಿವಕುಮಾರ್ ಗ್ಯಾಂಗ್ ಅರಾಜಕತೆಯನ್ನು ಸೃಷ್ಟಿಸಲು ಹೊರಟಿದೆ. ಸಾಫ್ಟ್ ಕಾರ್ನರ್ ಹಿಂದುತ್ವದ ಮಾತನಾಡುವ ಸಿದ್ದರಾಮಯ್ಯರ ಅಧಿಕಾರದ ಅವಧಿಯಲ್ಲಿ 23 ಜನ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಆಗ ಯಾಕೆ ನಿಮಗೆ ಕಣ್ಣೀರು ಬಂದಿಲ್ಲ ಎಂದು ಪ್ರಶ್ನಿಸಿದರು. ಆಗ ಹಿಂದೂಗಳು, ಮಹಿಳೆಯರಿಗೆ ರಕ್ಷಣೆ ಇರಲಿಲ್ಲ. ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿತ್ತು ಎಂದು ಟೀಕಿಸಿದರು.
ಹುಬ್ಬಳ್ಳಿ ಗಲಭೆ, ಹರ್ಷ ಹತ್ಯೆ ಹಿಂದೆಯೂ ಕಾಂಗ್ರೆಸ್ ಇದೆ. ಇಂಥ ಗಲಭೆ- ಹಿಂಸೆಯ ವಿರುದ್ಧ ನಮ್ಮ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಯುವ ನಾಯಕ ರಾಹುಲ್ ಗಾಂಧಿ ಜಾಮೀನಿನಲ್ಲಿ ಹೊರಗಿದ್ದಾರೆ. ವಾದ್ರಾ, ಡಿ.ಕೆ.ಶಿವಕುಮಾರ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರು ಜಾಮೀನಿನಡಿ ಹೊರಗಿದ್ದಾರೆ ಎಂದು ಸಿದ್ರಾಮಣ್ಣನಿಗೆ ನೆನಪಿಸಿದರು. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಎಂದು ಆರೋಪಿಸಿದರು.
ಸಜ್ಜನಿಕೆಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ರೈತಪರ ಹೋರಾಟಗಾರ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಇನ್ನೊಬ್ಬ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ 3 ತಂಡಗಳ ಪ್ರವಾಸ ಮಾಡಲಾಗಿದೆ. ಜಿಲ್ಲಾ ಸಮಿತಿ, ಮಂಡಲ ಸಮಿತಿ, ಮತಗಟ್ಟೆ ಸಮಿತಿಗಳ ಜೊತೆ ಸಂವಾದ ನಡೆದಿದೆ. ಪಕ್ಷದ ಅಭೂತಪೂರ್ವ ಸಾಧನೆಯ ಮುನ್ಸೂಚನೆ ಲಭಿಸಿದೆ ಎಂದರು.
ಕೋವಿಡ್ ನಡುವೆಯೂ ಯಡಿಯೂರಪ್ಪ ಅವರ ಆಡಳಿತಾವಧಿ, ಬಸವರಾಜ ಬೊಮ್ಮಾಯಿ ಅವರ ಆಡಳಿತದಲ್ಲಿ ರಾಜ್ಯವು ಅಭಿವೃದ್ಧಿ ಪಥದಲ್ಲಿ ನಿರಂತರವಾಗಿ ಮುನ್ನಡೆದಿದೆ. ಮೋದಿಯವರು ದೇಶದ ಪ್ರಧಾನ ಸೇವಕರಾಗಿದ್ದಾರೆ. ಇಲ್ಲಿನ ಮುಖ್ಯಮಂತ್ರಿ ಕಾಮನ್ ಮ್ಯಾನ್ ಆಗಿ ಕೆಲಸ ಮಾಡುತ್ತಾರೆ. ಇದು ಬಿಜೆಪಿ ಆಡಳಿತದ ಭಿನ್ನತೆ ಎಂದರು. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಅಮೃತ ಯೋಜನೆಗಳು, ಪರಿಶಿಷ್ಟ ಜಾತಿ ಪಂಗಡದವರಿಗೆ ಉಚಿತ ವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು. ಕೆಂಪೇಗೌಡರ ಕನಸನ್ನು ನನಸು ಮಾಡುವತ್ತ ಬಿಜೆಪಿ ಹೆಜ್ಜೆಗಳನ್ನು ಇಟ್ಟಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ವಿಶೇóಷ ಯೋಜನೆಗಳನ್ನು ಪ್ರಕಟಿಸಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಬೆಂಗಳೂರಿಗೆ ಗೂಂಡಾಗಿರಿಯನ್ನಷ್ಟೇ ನೀಡಿತ್ತು. ನಿಮ್ಮ ಶಾಸಕರು ತಮ್ಮನ್ನು ಪ್ರಶ್ನಿಸಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಕುರಿತು ಡಿ.ಕೆ.ಶಿವಕುಮಾರ್ ಮತ್ತು ಸಿದ್ರಾಮಣ್ಣ ಯಾಕೆ ಕೇಳುತ್ತಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. 
ಕೇವಲ ಅಧಿಕಾರಕ್ಕಾಗಿ ಬಿಜೆಪಿಯನ್ನು ರಚಿಸಿಲ್ಲ. ಜಗದ್ವಂದ್ಯ ಭಾರತ ನಿರ್ಮಾಣದ ಚಿಂತನೆಯೊಂದಿಗೆ ಪಕ್ಷ ರಚಿಸಲಾಯಿತು. ವ್ಯಕ್ತಿಗಿಂತ ಪಕ್ಷ ಶ್ರೇಷ್ಠ. ಪಕ್ಷಕ್ಕಿಂತ ದೇಶ ಶ್ರೇಷ್ಠ ಎಂಬ ಚಿಂತನೆಯೂ ಇದರಲ್ಲಿ ಸೇರಿದೆ. ಇದೇ ಆಧಾರದಲ್ಲಿ ಪಕ್ಷ ಮುನ್ನಡೆದಿದೆ ಎಂದು ನುಡಿದರು. ಇದೇ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದಾಗ ಜಗತ್ತಿನಲ್ಲಿ ಪರಿವರ್ತನೆ ತರಲು ನಮಗೆ ಸಾಧ್ಯವಾಯಿತು ಎಂದರು.
2014ರಲ್ಲಿ ನರೇಂದ್ರ ಮೋದಿಯವರ ಸರಕಾರ ಕೇಂದ್ರದಲ್ಲಿ ರಚನೆಯಾಯಿತು. ಆಗ ಜಗದ್ವಂದ್ಯ ಭಾರತ ನಿರ್ಮಾಣದ ಸಂಕಲ್ಪ ಮಾಡಿದ ಮೋದಿಯವರು ಅದನ್ನು ಸಾಕಾರಗೊಳಿಸುವತ್ತ ದೃಢವಾಗಿ ಮುನ್ನಡೆದಿದ್ದಾರೆ ಎಂದರು. ಜಗತ್ತಿನ ದೇಶಗಳು ಭಾರತವನ್ನು ಕೊಂಡಾಡುತ್ತಿವೆ. ಸಹಾಯಕ್ಕಾಗಿ ಭಾರತದತ್ತ ನೋಡುತ್ತಿವೆ. ಅಮೇರಿಕದ ಅಧ್ಯಕ್ಷರು ಭಾರತವನ್ನು ಆತ್ಮೀಯ ಮಿತ್ರದೇಶ ಎಂದು ಕರೆಯುತ್ತಾರೆ. ಅಮೆರಿಕ, ಬ್ರಿಟನ್ ಮತ್ತಿತರ ದೇಶಗಳ ಮುಖಂಡರು ನರೇಂದ್ರ ಮೋದಿಯವರನ್ನು ಮಿತ್ರರನ್ನಾಗಿ ಗೌರವದಿಂದ ಕಾಣುತ್ತಿದ್ದಾರೆ ಎಂದು ತಿಳಿಸಿದರು.
ರಷ್ಯಾ- ಉಕ್ರೇನ್ ಯುದ್ಧ ನಡೆದಾಗ ಎರಡೂ ರಾಷ್ಟ್ರದ ಮುಖಂಡರ ಜೊತೆ ಮಾತನಾಡಿದ ಏಕೈಕ ಪ್ರಧಾನಿ ನಮ್ಮ ಮೋದಿಯವರು. ಕೋವಿಡ್ ಅವಧಿಯಲ್ಲೂ ಜಗತ್ತು ಭಾರತದತ್ತ ನೋಡಿತ್ತು ಎಂದು ನುಡಿದರು. ಭಾರತದ ಕೀರ್ತಿ ಎತ್ತರಿಸುವ ಕೆಲಸವನ್ನು ನಮ್ಮ ಕೇಂದ್ರ ಸರಕಾರ ಮತ್ತು ಪ್ರಧಾನಿ ಮಾಡುತ್ತಿದ್ದಾರೆ. ಯುದ್ಧದ ವೇಳೆ 19,500 ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಯಿತು ಎಂದು ವಿವರಿಸಿದರು.
ಸುಮಾರು 7 ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಚಿದಂಬರಂ, ಸಿದ್ದರಾಮಣ್ಣ, ಖರ್ಗೆ ಕುಟುಂಬದ ಗರೀಬಿ ಹಠಾವೋ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಮನೆಯವರ ಗರೀಬಿ ಹಠಾವೋ ಆಗಿದೆ. ಆದರೆ, ಈ ದೇಶದ ಬಡವರ ಗರೀಬಿ ಹಠಾವೋ ಆಗಲಿಲ್ಲ ಎಂದು ಟೀಕಿಸಿದರು. ಈ ದೇಶದ ಬಡವರ ಗರೀಬಿ ಹಠಾವೋ ಮಾಡಿದ್ದು ನರೇಂದ್ರ ಮೋದಿ ಸರಕಾರ ಎಂದು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆಯ ಮೂಲಕ ಸಿಲಿಂಡರ್ ನೀಡಿಕೆ, ಶೌಚಾಲಯಗಳ ಮೂಲಕ ಬಡಮಹಿಳೆಯರ ಕಣ್ಣೀರು ಒರೆಸಿದ ಕೀರ್ತಿ ನಮ್ಮ ಪ್ರಧಾನಿಯವರದು. 17 ಸಾವಿರ ಕತ್ತಲೆಯ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಿದ ಮತ್ತು ಬಡವರ ಕಲ್ಯಾಣ ಮಾಡಿದ ಸರಕಾರ ನಮ್ಮದು. ಕಿಸಾನ್ ಸಮ್ಮಾನ್ ಜಾರಿ ಮಾಡಿದೆ ಎಂದರು.
ಕೇಂದ್ರದಿಂದ ಬಿಡುಗಡೆ ಮಾಡಿದ 100 ರೂಪಾಯಿಯಲ್ಲಿ 99 ರೂಪಾಯಿ ಸೋರಿಕೆಯಾಗುತ್ತದೆ. ಕೇವಲ ಒಂದು ರೂಪಾಯಿ ಫಲಾನುಭವಿಗೆ ಸಿಗುತ್ತದೆ ಎಂದು ರಾಜೀವ್ ಗಾಂಧಿ ಹೇಳಿದ್ದರು. ಆದರೆ, ಬಿಜೆಪಿ ಸರಕಾರವು ಆವಾಸ್ ಯೋಜನೆ, ಜನ್‍ಧನ್ ಸೇರಿ ಎಲ್ಲ ಯೋಜನೆಗಳನ್ನು ಭ್ರಷ್ಟಾಚಾರರಹಿತವಾಗಿ ಜಾರಿಗೊಳಿಸಿದೆ. ಬಡವರ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳ ತ್ವರಿತ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗುತ್ತಿಲ್ಲ. ಸ್ವಾತಂತ್ರ್ಯಾನಂತರದಿಂದ ಇಂದಿನವರೆಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಹೊರತುಪಡಿಸಿ ಉಳಿದೆಲ್ಲ ಪ್ರಧಾನಿಗಳು ಭ್ರಷ್ಟರಾಗಿದ್ದರು. ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಪಕ್ಷ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷವು ಈ ದೇಶಕ್ಕೆ ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ಕೊಡುಗೆಯನ್ನು ನೀಡಿದೆ. ಕಾಂಗ್ರೆಸ್, ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡಿತು. ದಾವೂದ್ ಇಬ್ರಾಹಿಂ ಕಾಂಗ್ರೆಸ್ ಪಕ್ಷದ ಕೊಡುಗೆ. ನಿರಂತರವಾಗಿ ಬಾಂಬ್ ಸ್ಫೋಟ ಆಗ ನಡೆಯುತ್ತಿದ್ದರೆ ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಬಾಂಬ್ ಸ್ಫೋಟ ಆಗಿಲ್ಲ ಎಂದು ಮೆಚ್ಚುಗೆ ಸೂಚಿಸಿದರು.
ಕಾಂಗ್ರೆಸ್‍ನ ಇನ್ನೊಂದು ಮುಖವೆನಿಸಿದ ಭ್ರಷ್ಟಾಚಾರದಿಂದ ಮುಕ್ತ ಭಾರತದ ಕನಸನ್ನು ಮೋದಿಯವರು ನನಸಾಗಿ ಮಾಡುತ್ತಿದ್ದಾರೆ. ಮೋದಿಯವರ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲ. ಮೋದಿಯವರ ಸರಕಾರ ಅದ್ಭುತವಾಗಿ ಕೆಲಸ ಮಾಡಿದೆ ಎಂದರು. ನಕ್ಸಲ್ ಚಟುವಟಿಕೆ, ಭಯೋತ್ಪಾದನೆ ನಿಗ್ರಹ ಬಿಜೆಪಿ ಸರಕಾರದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣದ ಕೆಲಸ ಮುಂದುವರಿದಿದೆ. ಹಿಂದೂಗಳ ಶ್ರದ್ಧಾಕೇಂದ್ರ ಕಾಶಿ ಪರಿವರ್ತನೆಯ ಹಾದಿಯಲ್ಲಿದೆ. ಅರಬ್ ದೇಶದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ದೇಶದ ಇತಿಹಾಸ ನಿರ್ಮಾಣ, ಪರಿವರ್ತನೆ ನಡೆದಿದೆ ಎಂದರು.
ಮಂಗಳೂರಿನಲ್ಲಿ ಅರಬ್ಬೀ ಸಮುದ್ರದ ಅಲೆಯನ್ನು ಕಂಡಿದ್ದೇನೆ. ಇಲ್ಲಿ ಬೆಂಗಳೂರಿನ ಕೇಸರಿ ಅಲೆಯು ಅದಕ್ಕಿಂತ ಪ್ರಬಲವಾಗಿದೆ. ಇದಕ್ಕಾಗಿ ಅಭಿನಂದನೆಗಳು ಎಂದರು. ಬಹಳಷ್ಟು ಜನರು ಮುಂದಿನ ಬಾರಿ ನಾವೇ ಎನ್ನುತ್ತಿದ್ದಾರೆ. ತುಂಬಿ ತುಳುಕಿದ ಸಭಾಂಗಣ, ಬಾಗಿಲ ಬದಿಯ ಜನಸಮುದಾಯ ಹಾಗೂ ಹೊರಗಡೆ ಇರುವ ಕಿಕ್ಕಿರಿದ ಜನಸಂದಣಿ ನೋಡಿದಾಗ ಬಿಜೆಪಿ ತುಂಬಿದ ಮನೆಯಾಗಿರುವುದು ಗೊತ್ತಾಗುತ್ತದೆ. ವಿರೋಧ ಪಕ್ಷಗಳ ಮನೆ ಖಾಲಿಯಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.
ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಏರ್ಪಡಿಸಿದ 3 ತಂಡಗಳ ಪ್ರವಾಸವು ಯಶಸ್ವಿಯಾಗಿದೆ. ಬಿಜೆಪಿ ಶಕ್ತಿಯನ್ನು ಅದು ಅನಾವರಣಗೊಳಿಸಿದೆ. ನಮ್ಮ ಸರಕಾರಗಳ ಯೋಜನೆಗಳು ಜನರನ್ನು ತಲುಪಿವೆಯೇ? ನಮ್ಮ ಶಾಸಕರು ಇರುವಲ್ಲಿ ಪಕ್ಷದ ಶಕ್ತಿ ಏನು? ಇಲ್ಲದಿರುವ ಕಡೆ ನಮ್ಮ ಶಕ್ತಿ ಏನೆಂಬ ಅವಲೋಕನ, ಕಾರ್ಯಕರ್ತರ ಜೊತೆ ಸಂವಾದ ಸಾಧ್ಯವಾಗಿದೆ ಎಂದು ನುಡಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ರಾಜ್ಯದ ಸಚಿವರಾದ ಎಸ್.ಟಿ. ಸೋಮಶೇಖರ್, ಎನ್. ಮುನಿರತ್ನ, ಕೆ. ಗೋಪಾಲಯ್ಯ, ಭೈರತಿ ಬಸವರಾಜ, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದರಾದ ತೇಜಸ್ವಿಸೂರ್ಯ, ರಾಜ್ಯಸಭಾ ಸದಸ್ಯರಾದ ಕೆ.ಸಿ. ರಾಮಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಶಾಸಕರಾದ ಎಸ್. ರಘು, ಸತೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಮುನಿರಾಜು ಗೌಡ, ಅ. ದೇವೇಗೌಡ, ರಾಜ್ಯ ಕೋಶಾಧ್ಯಕ್ಷರಾದ ಸುಬ್ಬನರಸಿಂಹ, ಬೆಂಗಳೂರು ಮಹಾನಗರದ ಜಿಲ್ಲಾಧ್ಯಕ್ಷರಾದ ಬಿ. ನಾರಾಯಣ, ಜಿ. ಮಂಜುನಾಥ್ ಮತ್ತು ಎನ್.ಆರ್. ರಮೇಶ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
  
                                                                  
         
                                                                    
  ಕರುಣಾಕರ ಖಾಸಲೆ
 ಮಾಧ್ಯಮ ಸಂಚಾಲಕರು
    ಬಿಜೆಪಿ ಕರ್ನಾಟಕ

Post a Comment

Previous Post Next Post