kpcc, ಇಂದು, ಪಿಎಸ್ಐ ನೇಮಕ ಅಕ್ರಮ, ಮರುಪರೀಕ್ಷೆ ಮತ್ತಿತರ ವಿಚಾರಗಳ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಶನಿವಾರ ಮಾತನಾಡಿದರು

[30/04, 1:17 PM] Ravi Gowda. Kpcc. official: ಪಿಎಸ್ಐ ನೇಮಕ ಅಕ್ರಮ, ಮರುಪರೀಕ್ಷೆ ಮತ್ತಿತರ ವಿಚಾರಗಳ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಶನಿವಾರ ಮಾತನಾಡಿದ್ದು...
[30/04, 3:48 PM] Ravi Gowda. Kpcc. official: *ಡಿ.ಕೆ. ಶಿವಕುಮಾರ್ ಅವರ ಮಾಧ್ಯಮಗೋಷ್ಠಿ ಮುಖ್ಯಾಂಶಗಳು:*

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆ ಪೂರ್ಣಗೊಳ್ಳುವ ಮುನ್ನವೇ ಪರೀಕ್ಷೆ ರದ್ದು ಮಾಡಿ, ಮರುಪರೀಕ್ಷೆಗೆ ಆದೇಶಿಸಿರುವುದು ಖಂಡನೀಯ. ಇದು ಈ ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಪಕ್ಷದ ನಾಯಕರ ರಕ್ಷಣೆಯ ಪ್ರಯತ್ನವಾಗಿದ್ದು, ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ.

ಕರ್ನಾಟಕದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ನೇಮಕಾತಿ ಸಮಿತಿ ರದ್ದು ಮಾಡಿ, ಪರೀಕ್ಷೆಯೇ ಮಾನದಂಡ ಎಂದು ಪ್ರವೇಶ ಪರೀಕ್ಷೆಗಳನ್ನು ಆರಂಭಿಸಲಾಯಿತು. ಇದು ಆರಂಭವಾದ ನಂತರ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಗೊಂದಲ ಉದ್ಭವಿಸಿದ್ದನ್ನು ನೋಡಿದ್ದೇವೆ. ಇದರ ವಿಚಾರಣೆ ನಡೆದಿದ್ದು, ಕೋರ್ಟ್ ಹಾಗೂ ಸರ್ಕಾರ ಭಿನ್ನ ತೀರ್ಮಾನ ಕೈಗೊಂಡಿರುವುದನ್ನು ನೋಡಿದ್ದೇವೆ.

ಸರ್ಕಾರದ ಎಲ್ಲ ನೇಮಕಾತಿ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ, ಅಕ್ರಮ, ಹಗರಣಗಳ ಸರಮಾಲೆ ಇದೆ. ಪಿಡಬ್ಲ್ಯೂಡಿ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮವಾಗಿದೆ. ರಾಜ್ಯದಲ್ಲಿ ಯುವಕರ, ಉದ್ಯೋಗಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ.

ಪಿಎಸ್ ಐ ನೇಮಕಾತಿ ಅಕ್ರಮ ವಿಚಾರವಾಗಿ ತನಿಖೆ ನಡೆಯುತ್ತಿದೆ. ಇಪ್ಪತ್ತು ದಿನಗಳ ನಂತರ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಯವರು ಈ ಅಕ್ರಮದ ಆರೋಪವನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ನವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಬಿಜೆಪಿಯವರು ತಾವು ಹಣ್ಣು ತಿಂದು ಬೇರೆಯವರ ಮೂತಿ ಮೇಲೆ ಸಿಪ್ಪೆ ಇಡುವ ಪ್ರಯತ್ನ ಮಾಡುತ್ತಾರೆ. ಅದು ಯಶಸ್ಸಾಗುವುದಿಲ್ಲ.

ಗೃಹಮಂತ್ರಿಗಳು ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅಧಿವೇಶನದಲ್ಲೇ ಹೇಳಿದ್ದರು. ನಮ್ಮ ಶಾಸಕರು, ನಾಯಕರು ಈ ಅಕ್ರಮದ ವಿಚಾರ ಬಹಿರಂಗ ಪಡಿಸಿದರೆ, ಅವರನ್ನು ಬೆದರಿಸಲು ನೊಟೀಸ್ ನೀಡುತ್ತೀರಿ. ಕಾಂಗ್ರೆಸ್ ಪಕ್ಷ ಇದಕ್ಕೆಲ್ಲ ಹೆದರುವುದಿಲ್ಲ.

ಈ ಪ್ರಕರಣದ ಪ್ರಮುಖ ಆರೋಪಿಯನ್ನು ನಿಮ್ಮ ಮುಂಖಂಡರೇ ಗೌಪ್ಯ ಸ್ಥಳದಲ್ಲಿ ಇಟ್ಟಿದ್ದರು ಎಂದು ನಿಮಗೆ ಗೊತ್ತಿದೆ. ಅವರ ವಿಚಾರಣೆ ಮಾಡುವ ಮುನ್ನವೇ, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಬಹಿರಂಗವಾಗುವ ಮುನ್ನವೇ ಈ ಹಿಂದೆ ನಡೆದಿರುವ ಪರೀಕ್ಷೆ ರದ್ದು ಮಾಡಿ ಮರುಪರೀಕ್ಷೆಗೆ ಆದೇಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ?

ಈ ನಿರ್ಣಯ ಕೈಗೊಳ್ಳಬೇಕಾದರೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಖಚಿತವಾಗಿರಬೇಕು. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರೇ ಈ ಪಿಎಸ್ ಐ ನೇಮಕಾತಿಯಲ್ಲಿ ಯಾರು ಅಕ್ರಮ ಮಾಡಿದ್ದಾರೋ, ಅವರನ್ನು ಹೊರತುಪಡಿಸಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಸರ್ಕಾರ ಅವರ ಹೇಳಿಕೆ ನಿರ್ಲಕ್ಷಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇದೊಂದು ಬಿಜೆಪಿ ಅಕ್ರಮವಾಗಿದ್ದು, ಬಿಜೆಪಿ ನಾಯಕರ ರಕ್ಷಣೆಗೆ ಪರೀಕ್ಷೆ ರದ್ದು ಪಡಿಸಲಾಗಿದೆ.

ಈ ಪ್ರಕರಣದಿಂದ ರಾಜ್ಯದ ಘನತೆ ಏನಾಗಿದೆ ಎಂದು ಸರ್ಕಾರ ಅರಿತಿದೆಯೇ? ಪೊಲೀಸ್ ಅಧಿಕಾರಿಯಾಗುವ ಅಭ್ಯರ್ಥಿಗಳಲ್ಲಿ ಈ ಭ್ರಷ್ಟಾಚಾರದ ಭಾವನೆ ಮೂಡಿದರೆ ಮುಂದೆ ಏನಾಗಬಹುದು ಎಂಬ ಪರಿಜ್ಞಾನ ಸರ್ಕಾರಕ್ಕೆ ಇದೆಯಾ?

ಇತರೆ ಇಲಾಖೆಗಳಲ್ಲಿ ನೇಮಕಾತಿ ಅಕ್ರಮದ ಬಗ್ಗೆ ಸಚಿವರು ಯಾಕೆ ಮಾತನಾಡುತ್ತಿಲ್ಲ. ನಮ್ಮ ವಿರೋಧ ಪಕ್ಷದ ನಾಯಕರು ಕೆಲವು ಸಚಿವರ ರಾಜೀನಾಮೆ ಕೇಳಿದ್ದಾರೆ. ಆದರೆ ಕೊಡದಷ್ಟು ಅವರು ಭಂಡರಾಗಿದ್ದಾರೆ.

ಈ ಅಕ್ರಮಕ್ಕೆ ಮುಖ್ಯಮಂತ್ರಿಗಳೂ ಜವಾಬ್ದಾರರಾಗಿದ್ದಾರೆ. ನಿಮ್ಮ ಸರ್ಕಾರ ಅಕ್ರಮಗಳ ಸರಮಾಲೆ ಧರಿಸಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ನಿಮ್ಮ ನಾಯಕರು, ಅಧಿಕಾರಿಗಳ ಹೆಸರನ್ನು ನಾವು ಬಹರಂಗ ಪಡಿಸುವ ಮುನ್ನ ನೀವೇ ಬಹಿರಂಗ ಮಾಡಬೇಕು. ಇಡೀ ನಿಮ್ಮ ಪಕ್ಷ ಈ ನೇಮಕಾತಿ ಅಕ್ರಮದ ಕೊಳಕಿನಲ್ಲಿ ಮುಳುಗಿ ಒದ್ದಾಡುತ್ತಿದೆ. 

ಈ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಲು ನೀವೇ ದಾರಿ ಮಾಡಿಕೊಡುತ್ತಿದ್ದೀರಿ. ನ್ಯಾಯಾಲಯದ ವಿಚಾರಣೆ ಹೆಸರಲ್ಲಿ ಇದು ಮುಂದಕ್ಕೆ ಹೋಗಬೇಕು ಎಂಬುದು ನಿಮ್ಮ ಕುತಂತ್ರ.

ಕಾಂಗ್ರೆಸ್ ಸರ್ಕಾರ ಸಿಇಟಿ ಆರಂಭಿಸಿ, ಒಂದು ಪ್ರಾಧಿಕಾರ ರಚಿಸಿ ಕಾಲೇಜು ಸೀಟು ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ತಂದಿತು. ಈಗಿರುವ ತಂತ್ರಜ್ಞಾನ ಬಳಸಿಕೊಂಡು ಪಾರದರ್ಶಕತೆ ಹೆಚ್ಚಿಸಬೇಕು. ಆದರೆ ನೀವು ನಿಮ್ಮ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡಿ, ಒಂದೊಂದು ಹುದ್ದೆಗೂ 80 ಲಕ್ಷ ವಸೂಲಿ ಮಾಡಿಕೊಂಡಿದ್ದೀರಿ. ವರದಿಯಲ್ಲಿ ನಿಮ್ಮವರ ಹೆಸರು ಬರಲಿದೆ ಎಂಬ ಕಾರಣಕ್ಕೆ ಮರುಪರೀಕ್ಷೆಗೆ ಆದೇಶಿಸಿದ್ದೀರಿ. ನಿಮ್ಮ ಈ ತಪ್ಪಿಗೆ ಯಾರು ಶಿಕ್ಷೆ ನೀಡಬೇಕು? ನಿಮಗೆ ರಾಜ್ಯದ ಜನತೆ, ಯುವಕರು, ರಾಜ್ಯದ ತಂದೆ ತಾಯಂದಿರು, ಮತದಾರ ಪ್ರಭುಗಳು ಶಿಕ್ಷೆ ನೀಡಲಿದ್ದಾರೆ. ನಿಮ್ಮನ್ನು ಜನರೇ ಕಿತ್ತೊಗೆಯುತ್ತಾರೆ. ಆ ಕಾಲ ಸನಿಹವಾಗುತ್ತಿದೆ.

ಇನ್ನು ಈ ನೇಮಕಾತಿ ಪ್ರಕ್ರಿಯೆ ಉಸ್ತುವಾರಿ ಹೊತ್ತಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲಿದ್ದ ಕನ್ನಡಿಗ ಹಾಗೂ ದಲಿತ ಸಮುದಾಯದ ಅಧಿಕಾರಿಗೆ ಯಾವುದೇ ಹುದ್ದೆ ನೀಡಿಲ್ಲ. ನಿಮಗೆ ಯಾವುದೇ ದಲಿತ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ, ಹೀಗಾಗಿ ಅವರನ್ನು ಆ ಸ್ಥಾನದಿಂದ ತೆಗೆದು, ಆರೋಪ ಹೊತ್ತಿರುವ ಅಧಿಕಾರಿಯನ್ನು ಕೂರಿಸಿದ್ದೀರಿ.

ನೇಮಕಾತಿ ವಿಭಾಗಕ್ಕೆ ಬೇರೆ ಅಧಿಕಾರಿಯನ್ನು ನಿಯೋಜಿಸಿದ್ದೀರಿ. ಅದರಲ್ಲಿ ನಮ್ಮ ಆಕ್ಷೇಪವಿಲ್ಲ.

ಈ ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರು ಕೇವಲ 3 ಮಂದಿ ಎಂದು ಸರ್ಕಾರ ಹೇಳಿತು. ನ್ಯಾಯಾಲಯ ಮಧ್ಯಪ್ರವೇಶಿಸಿ ತನಿಖೆ ಮಾಡಿದಾಗ ಸತ್ತವರು 37 ಮಂದಿ ಎಂಬ ಸತ್ಯ ಹೊರಗೆ ಬಂದಿತು. ಹೀಗಾಗಿ ಈ ಪ್ರಕರಣದ ತನಿಖೆಯನ್ನು ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಮಾಡಬೇಕು.

*ಪ್ರಶ್ನೋತ್ತರ:*

ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಕೆಎಎಸ್ ನೇಮಕಾತಿ ಅಕ್ರಮದ ಸಂದರ್ಭದಲ್ಲಿ ಪರೀಕ್ಷೆ ರದ್ದು ಮಾಡಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ತಪ್ಪು ಯಾರೇ ಮಾಡಲಿ, ಅದು ತಪ್ಪೇ. ನಾವು ತಪ್ಪು ಮಾಡಿದ್ದರೆ ನೀವು ಅದನ್ನೇ ಪಾಲಿಸುತ್ತೀರಾ? 2011 ರ ಪರೀಕ್ಷೆ ವಿಚಾರದಲ್ಲಿ ನ್ಯಾಯಾಲಯದ ಆದೇಶ, ಹಲವು ವಿಚಾರವಾಗಿ ಹಲವು ವರ್ಷಗಳ ಕಾಲ ಚರ್ಚೆಯಾಗಿ ಸಂಪುಟಕ್ಕೆ ವಿಷಯ ಬಂತು. ಆಗ ಅನೇಕ ಬೆಳವಣಿಗೆಗಳು ಆಗಿದ್ದವು. ಅದಕ್ಕೆ ಸಂಬಂಧಿಸಿದಂತೆ ವರದಿಗಳೂ ಬಂದಿತ್ತು, ಇದೆಲ್ಲದರ ಆಧಾರದ ಮೇಲೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಯಾವ ವರದಿ ಇದೆ ಎಂದು ನಡೆದಿರುವ ಪರೀಕ್ಷೆ ವಜಾ ಮಾಡಿ, ಮರು ಪರೀಕ್ಷೆಗೆ ಆದೇಶಿಸುತ್ತಿದ್ದೀರಿ? ಮೊದಲು ಅಕ್ರಮದಲ್ಲಿರುವ ಸರಕಾರದ ಮುತ್ತುರತ್ನಗಳನ್ನು ಬಹಿರಂಗಪಡಿಸಿ’ ಎಂದರು.

ಇಂತಹ ಪ್ರಕರಣದಲ್ಲಿ ದೇಶದ ಬೇರೆ ಬೇರೆ ಕಡೆಗಳಲ್ಲಿ ಪರೀಕ್ಷೆ ಅಕ್ರಮ ನಡೆದಾಗ ರದ್ದು ಮಾಡದೇ, ಬೇರೆ ಯಾವ ಅಯ್ಕೆಗಳಿವೇ? ಎಂಬ ಪ್ರಶ್ನೆಗೆ, ‘ನಾನು ರದ್ದು ಮಾಡಬಾರದು ಎಂದು ಹೇಳುತ್ತಿಲ್ಲ. ಆದರೆ ಸರ್ಕಾರ ಅಧಿಕೃತವಾಗಿ ಒಂದು ಸ್ಪಷ್ಟ ಚಿತ್ರಣ ಪಡೆಯದೇ ಈ ತೀರ್ಮಾನ ಕೈಗೊಂಡದ್ದು ಯಾಕೆ? ನಿಮ್ಮ ಅಧಿಕಾರಿಗಳು ಸಹಜವಾಗಿ ಈ ಅಕ್ರಮದ ಬಗ್ಗೆ ನಿಮಗೆ ಮಾಹಿತಿ ನೀಡಿರುತ್ತಾರೆ. ಆ ವಿಚಾರಗಳನ್ನು ನೀವು ಅಧಿಕೃತವಾಗಿ ಬಹಿರಂಗ ಪಡಿಸಿ. ನಂತರ ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಿ’ ಎಂದರು.

ಪ್ರಿಯಾಂಕ್ ಖರ್ಗೆ ಅವರಿಗೆ ಎರಡನೇ ನೊಟೀಸ್ ನೀಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೊಡಲಿ, ನನಗೂ ಅನೇಕ ಹುಡುಗರು ಬಂದು ಉತ್ತರ ಪತ್ರಿಕೆ ಕೊಟ್ಟಿದ್ದಾರೆ. ಯಾರು ಎಷ್ಟು ಅಂಕ ಪಡೆದಿದ್ದಾರೆ ಎಂಬುದು ತಿಳಿದಿದೆ. ಮಾಧ್ಯಮಗಳಿಗೂ ನಮ್ಮ ವಿರುದ್ಧ ಅನೇಕ ದೂರುಗಳು ಬರುತ್ತವೇ. ನೀವು ಅದನ್ನು ಪ್ರಕಟಿಸಬೇಕೇ ಬೇಡವೆ ಎಂದು ಯೋಚಿಸುತ್ತೀರಿ. ಅದು ಪರಿಪೂರಣವಾಗಿದ್ದರೆ ಬ್ರೇಕಿಂಗ್ ನ್ಯೂಸ್ ಹಾಕುತ್ತೀರಿ. ಅದು ನಂತರ ದೊಡ್ಡ ಸುದ್ದಿ ಆಗುತ್ತದೆ’ ಎಂದರು.

ಸಾಕ್ಷ್ಯಾಧಾರ ಕೇಳಿ ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಕೊಡುವ ಸರ್ಕಾರ, ಈಶ್ವರಪ್ಪನವರ ವಿರುದ್ಧ ಸಾಕ್ಷಿ ಇದ್ದರೂ ವಿಚಾರಣೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ, ‘ವಿಚಾರಣೆ ಇರಲಿ, ಅವರ ವಿರುದ್ಧದ ದೂರಿನಲ್ಲಿ ಭ್ರಷ್ಟಾಚಾರಕ್ಕೆ ವಿರುದ್ಧವಾದ ಅಂಶವಿದೆ. ಇನ್ನು ಮೃತ ವ್ಯಕ್ತಿ ಸಾಯುವ ಮುನ್ನ ಮಾಧ್ಯಮಗಳ ಸಂದರ್ಶನದಲ್ಲಿ ಆರೋಪ ಮಾಡಿದ್ದಾನೆ. ಆದರೂ ಈಶ್ವರಪ್ಪನವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿಲ್ಲ ಯಾಕೆ? ಮುಖ್ಯಮಂತ್ರಿಗಳು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಯಡಿಯೂರಪ್ಪ ಹಾಗೂ ಇತರೆ ನಾಯಕರು ಈಶ್ವರಪ್ಪನವರು ತಪ್ಪು ಮಾಡಿಲ್ಲ, ಆದಷ್ಟು ಬೇಗ ಮಂತ್ರಿ ಆಗುತ್ತಾರೆ ಎಂದು ತೀರ್ಪು ಕೊಟ್ಟಿದ್ದಾರೆ. ಇನ್ನು ಬಿಜೆಪಿ ನಾಯಕರು ಅಲ್ಪಸಂಖ್ಯಾತರ ವಿರುದ್ಧ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾರೆ. ಆದರೆ ಯಡಿಯೂರಪ್ಪನವರು ನಾವಿಬ್ಬರು ಅಣ್ಣ ತಂಮ್ಮಂದಿರು ಎಂದು ಹೇಳುತ್ತಿದ್ದಾರೆ. ಶಿವಮೊಗ್ಗ ಗಲಭೆಯಿಂದ ಮುಂದೆ ಆಗಬಹುದಾದ ಪರಿಣಾಮದ ಬಗ್ಗೆ ಯಡಿಯೂರಪ್ಪನವರಿಗೆ ಅರಿವಾಗಿದೆ. ಶಿವಮೊಗ್ಗಕ್ಕೆ ಯಾವುದೇ ಬಂಡವಾಳ ಹೂಡಿಕೆದಾರರು ಹೋಗುವುದಿಲ್ಲ, ಉದ್ಯೋಗ ಸೃಷ್ಟಿಯಾಗುವುದಿಲ್ಲ. ಹೊರಗಿನ ವಿದ್ಯಾರ್ಥಿಗಳು ಉಡುಪಿಗೆ ಹೋಗುವುದಿಲ್ಲ. ಅಲ್ಲಿ ಒಂದೇ ಪಂಚಾಯ್ತಿ ವ್ಯಾಪ್ತಿಯಲ್ಲಿ 3 ಮೆಡಿಕಲ್ ಕಾಲೇಜುಗಳಿವೆ’ ಎಂದರು.

ಈಶ್ವರಪ್ಪ ಹಾಗೂ ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯ ಮಾಡುತ್ತಿದ್ದರೂ ಸರ್ಕಾರ ಮಾಡಿಲ್ಲ ಎಂಬ ಪ್ರಶ್ನೆಗೆ, ‘ಅವರು ಮಾಡುವುದಿಲ್ಲ, ಮಾಡಿದರೆ ಅವರು ಸಿಕ್ಕಿಹಾಕಿಕೊಳ್ಳುತ್ತಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಮಿಷನ್ ವಿಚಾರವಾಗಿ ಪ್ರಧಾನಿಗೆ ಪತ್ರ ಬರೆದು 10 ತಿಂಗಳಾಗಿದೆ. ಈಗ ಅವರನ್ನು ಕರೆದು ಮಾತನಾಡಬೇಕಿತ್ತಾ? ಅವರಿಗೆ ಖರ್ಗೆ ಅವರಿಗೆ ಕೊಟ್ಟಂತೆ ನೊಟೀಸ್ ಯಾಕೆ ನೀಡಲಿಲ್ಲ? ಮುಖ್ಯಮಂತ್ರಿಗಳ ಮೇಲೆ ನಾನು ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೆ. ಆದರೆ ಅವರು ಇಷ್ಟು ದುರ್ಬಲರು ಎಂದು ಭಾವಿಸಿರಲಿಲ್ಲ. ಅವರು ನೈತಿಕ ಪೊಲೀಸ್ ಗಿರಿಗೆ ಪ್ರೋತ್ಸಾಹ ನೀಡಿದ್ದು, ಎಲ್ಲ ಗಲಭೆಕೋರರಿಗೂ ಕುಮ್ಮಕ್ಕು ನೀಡಿದ್ದಾರೆ’ ಎಂದರು.

ಹಿಂದಿ ಮಾತನಾಡದವರು ವಿದೇಶಿಗರು ಎಂಬ ಉತ್ತರ ಪ್ರದೇಶ ಬಿಜೆಪಿ ನಾಯಕನ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡಲಿ. ಭಾರತ ಹಾಗೂ ಅದರ ಪರಂಪರೆ ತಿಳಿಯದ ಜೋಕರ್ ಗಳು ನೀಡುವ ಹೇಳಿಕೆಗೆಳಿಗೆ ನಾನು ಉತ್ತರ ನೀಡುವುದಿಲ್ಲ. ಭಾರತದ ನಗದು ನೋಟಿನಲ್ಲಿ 15 ಪ್ರಾದೇಶಿಕ ಭಾಷೆಗಳನ್ನು ಮುದ್ರಿಸಲಾಗಿದ್ದು, ಅದರಲ್ಲಿ ಕನ್ನಡವೂ ಇದೆ. ಈ ನಗದು ದೇಶದ ಎಲ್ಲ ಕಡೆಗಳಲ್ಲಿ ಚಲಾವಣೆ ಆಗುತ್ತದೆ. ಆ ಜೋಕರ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ, ಗುಜರಾತಿನಿಂದ ಪಶ್ಚಿಮ ಬಂಗಾಳದವರೆಗೂ ಸುತ್ತಿಲ್ಲ. ಉತ್ತರ ಪ್ರದೇಶವೇ ಭಾರತವಲ್ಲ, ಅದು ಭಾರತದ ಒಂದು ಭಾಗವಾಗಿದ್ದು, ಅದನ್ನು ನಾವು ಗೌರವಿಸುತ್ತೇವೆ’ ಎಂದರು.

ಹುಬ್ಬಳ್ಳಿಯಲ್ಲಿ ಫುಡ್ ಕಿಟ್ ಹಂಚಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾನೂನು ಕೈಗೆತ್ತಿಕೊಳ್ಳುವವರನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಬೆಂಬಲಿಸುವುದಿಲ್ಲ. ಇದರಲ್ಲಿ ನಮ್ಮ ಪಾತ್ರವಿಲ್ಲ. ಈ ವಿಚಾರವಾಗಿ ನನ್ನ ಅಭಿಪ್ರಾಯವನ್ನು ನಿನ್ನೆಯೇ ಟ್ವೀಟ್ ಮೂಲಕ ತಿಳಿಸಿದ್ದೇನೆ. ನಾವು ಸಂವಿಧಾನ, ಕಾನೂನು ರಕ್ಷಣೆಗೆ ಬದ್ಧವಾಗಿದ್ದೇವೆ. ಯಾರಾದರೂ ಕಾಂಗ್ರೆಸ್ ನವರು ಭಾಗಿಯಾದರೆ ನಾನು ಅವರನ್ನು ಪಕ್ಷದಿಂದ ವಜಾಗೊಳಿಸುತ್ತೇನೆ. ಗಲಭೆ ಬಿಜೆಪಿ ಬೆಂಬಲದಿಂದ ಭಜರಂಗದಳ, ಎಸ್ ಡಿಪಿಐ ಹಾಗೂ ಇತರೆ ಸಂಘಘಟನೆಗಳ ಕೃತ್ಯವಾಗಿದ್ದು, ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದರು. 

*ಶಿವಕುಮಾರ್ ಬಳಿ ಅಳಲು ತೋಡಿಕೊಂಡ ಅಭ್ಯರ್ಥಿಗಳು:*

ಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬರೆದು ಪಾಸಾಗಿರುವ ಅಭ್ಯರ್ಥಿಗಳು ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು. ಈ ಪರೀಕ್ಷೆಗಾಗಿ ಐದಾರು ವರ್ಷಗಳಿಂದ ತಯಾರಿ ಮಾಡಿದ್ದೇವೆ. ಕೆಲಸ ಕಾರ್ಯಗಳನ್ನು ಬಿಟ್ಟು, ಹಗಲು ರಾತ್ರಿ ಎನ್ನದೆ ಶ್ರಮ ಹಾಕಿ ಈ ಪರೀಕ್ಷೆ ಪಾಸ್ ಮಾಡಿದ್ದೇವೆ. ಈಗ ನಮಗೆ ಈ ಕೆಲಸ ಸಿಗದಿದ್ದರೆ ನಮ್ಮ ವಯೋಮಿತಿ ದಾಟಲಿದ್ದು, ನಮ್ಮ ಪರಿಶ್ರಮವೆಲ್ಲ ವ್ಯರ್ಥವಾಗುತ್ತದೆ. ಬೇರೆಯವರು ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ? ಯಾರು ಅಕ್ರಮ ಮಾಡಿದ್ದಾರೋ ಅವರನ್ನು ಹೊರಹಾಕಲಿ, ಯಾವುದೇ ತಪ್ಪು ಮಾಡದ ನಮ್ಮ ತಲೆದಂಡ ಯಾಕೆ? ನಾವು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಸಂಜೆ ಐದು ಗಂಟೆ ಒಳಗಾಗಿ ಹೋರಾಟ ನಿಲ್ಲಿಸದಿದ್ದರೆ ನಮ್ಮ ವಿರುದ್ಧ ಎಫ್ ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಮ್ಮ ವಿರುದ್ಧ ಎಫ್ಐಆರ್ ದಾಖಲಾದರೆ ಮತ್ತೆ ಯಾವುದೇ ಸರ್ಕಾರಿ ಹುದ್ದೆಗೆ ನಾವು ಅರ್ಹತೆ ಹೊಂದಿರುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ನೀವೇ ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಶಿವಕುಮಾರ್ ಅವರು ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು. ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

Post a Comment

Previous Post Next Post