ಮಳೆಯಿಂದಾದ ಹಾನಿಯ ಹಿನ್ನೆಲೆಯಲ್ಲಿ 1102 ಕೋಟಿ ರೂ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು,ಆಗಸ್ಟ್,26-ರಾಜ್ಯದಲ್ಲಿ ಇತ್ತೀಚೆಗೆ ಮಳೆಯಿಂದಾದ ಹಾನಿಯ ಹಿನ್ನೆಲೆಯಲ್ಲಿ 1102 ಕೋಟಿ ರೂ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಈ ವಿಷಯ ತಿಳಿಸಿದರು.
ಕಳೆದ ನಾಲ್ಕು ತಿಂಗಳಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಅಪಾರ ಹಾನಿಯಾಗಿದ್ದು ಈ ಹಿನ್ನೆಲೆಯಲ್ಲಿ ಪರಿಹಾರ ಕೋರುವ ಸಂಬಂಧ ಮನವಿ ಪತ್ರ ಸಿದ್ಧವಾಗಿದೆ ಎಂದರು.
ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳಿಂದ ಆಯಾ ಜಿಲ್ಲಾಧಿಕಾರಿಗಳು ವರದಿ ಕಳಿಸಿದ್ದು,ಇದರ ಆಧಾರದ ಮೇಲೆ 1102 ಕೋಟಿ ರೂಗಳ ಪರಿಹಾರ ಕೋರಲು‌ ನಿರ್ಧರಿಸಲಾಗಿದೆ.
ಮಳೆಯಿಂದ ರಸ್ತೆ,ಸೇತುವೆ,ಕಟ್ಟಡ ಸೇರಿದಂತೆ ಹಲವು ರೀತಿಯಲ್ಲಿ ನಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಇದುವರೆಗೆ ಮಳೆಯಿಂದ ಸಂಭವಿಸಿದ ನಷ್ಟಕ್ಕೆ ಪ್ರತಿಯಾಗಿ ಪರಿಹಾರ ಕೋರಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದ ಹಲ ಜಿಲ್ಲೆಗಳಲ್ಲಿ  ಭೂಕಂಪ ಸಂಭವಿಸಿದೆ.ಗುಡ್ಡಗಳು ಕುಸಿದಿವೆ ಎಂದ ಅವರು,ಇಂತಹ ಸಮಸ್ಯೆ ಎಲ್ಲಿ ಪುನರಾವರ್ತನೆ ಆಗಬಹುದು ಎಂಬುದನ್ನು ಗಮನಿಸಲು,ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
****
ಬೆಂಗಳೂರು,ಆಗಸ್ಟ್,26-ನಿವೇಶನ,ಭೂಮಿ ಕೊಳ್ಳುವವರು ಮೋಸದ ಜಾಲಕ್ಕೆ ಸಿಲುಕದಂತೆ ರಕ್ಷಿಸಲು ಸರ್ಕಾರವೇ ಏಜೆನ್ಸಿಗಳನ್ನು ಸ್ಥಾಪಿಸಲು ಮುಂದಾಗಿದೆ.
ಈ ಏಜೆನ್ಸಿಗಳು ಭೂಮಿ,ನಿವೇಶನ ಮಾರುವವರು ಮತ್ತು ಕೊಳ್ಳುವವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಲಿದ್ದು ವಂಚನೆಯ ಜಾಲಕ್ಕೆ ಬ್ರೇಕ್ ಹಾಕಲಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಈ ನಿರ್ಧಾರ ಪ್ರಕಟಿಸಿದರು.
ರಾಜ್ಯದಲ್ಲಿ ಭೂಮಿ,ನಿವೇಶನ ಕೊಳ್ಳುತ್ತಿರುವ ಬಹುತೇಕರು ವಂಚನೆಗೆ  ಸಿಲುಕುತ್ತಿದ್ದು ಇದರಿಂದ ಪೋಲೀಸ್ ಠಾಣೆಗಳಲ್ಲಿ ದೂರು ಹೆಚ್ಚಾಗುತ್ತಿದೆ.
ಇದೇ ರೀತಿ ವಂಚನೆಗೆ ಬಲಿಯಾದವರು       ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ ಎಂದವರು ವಿಷಾದಿಸಿದರು.
ಒಂದೇ ನಿವೇಶನವನ್ನು ಹಕವರಿಗೆ ನೋಂದಣಿ ಮಾಡಿಕೊಡುವ,ತಮ್ಮದಲ್ಲದ ನಿವೇಶನವನ್ನು ಮಾರುವ,ನಿವೇಶನದ ಹೆಸರಿನಲ್ಲಿ ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ಇದೇ ರೀತಿ ಜಮೀನನ್ನು   ವರ್ಗಾವಣೆ ಮಾಡಿಸಿಕೊಳ್ಳುವಾಗ ಸಹೋದರರನ್ನು ವಂಚಿಸಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳುವವರಿಂದ ಹಿಡಿದು ಹಲವಾರು ರೀತಿಗಳಲ್ಲಿ ವಂಚನೆಗಳು ನಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರವೇ  ಏಜೆನ್ಸಿಗಳನ್ನು ತೆರೆದು ಭೂಮಿ,ನಿವೇಶನ ಖರೀದಿಸುವವರು ಮೋಸದ ಜಾಲಕ್ಕೆ ಸಿಲುಕದಂತೆ ನೋಡಿಕೊಳ್ಳಲಿದೆ.
ಈ ಏಜೆನ್ಸಿಗಳು ಮಾರಾಟ ಮಾಡುವವರು ಮತ್ತು ಕೊಳ್ಳುವವರ ಬಳಿ ದಾಖಲೆಗಳನ್ನು ಪಡೆದು  ಅದರ ಅಸಲಿಯತ್ತನ್ನು ಪರೀಕ್ಷಿಸಿ ಸಂಬಂಧಪಟ್ಟ ಕಚೇರಿಗಳಿಂದ ಅಧಿಕೃತ ದಾಖಲೆಗಳನ್ನು ಗಮನಿಸಿ ಭೂಮಿ ಅಥವಾ ನಿವೇಶನದ ಒಡೆತನ ಯಾರದು ಎಂದು ಸ್ಪಷ್ಟಪಡಿಸಿಕೊಳ್ಳುತ್ತದೆ.
ಆನಂತರ ಕೊಳ್ಳುವವರಿಗೆ ಇದರಿಂದ ಯಾವ ತಕರಾರು ಇಲ್ಲ ಎಂದು ಸಾಬೀತಾದರೆ ಅಂತಹ ವ್ಯವಹಾರ ಪತ್ರಕ್ಕೆ ಗ್ರೀನ್ ಸಿಗ್ನಲ್ ನೀಡುತ್ತದೆ.
ಹೀಗೆ ಭೂಮಿ,ನಿವೇಶನ. ಖರೀದಿಯಲ್ಲಿ ಯಾವ ಅಡಚಣೆಯೂ ಇಲ್ಲ ಅನ್ನುವುದನ್ನು ಸರ್ಕಾರದ ಏಜೆನ್ಸಿಯೇ ಸ್ಪಷ್ಟಪಡಿಸುವುದರಿಂದ ಖರೀದಿದಾರರು ಯಾವ ಆತಂಕವಿಲ್ಲದೆ ಮುಂದುವರಿಯಬಹುದು.
ಹೀಗೆ ಭೂಮಿ,ನಿವೇಶನಗಳನ್ನು ಖರೀದಿಸುವವರಿಗೆ,ಮಾರುವವರಿಗೆ ಸ್ಪಷ್ಟತೆ ಒದಗಿಸಿಕೊಡುವ ಏಜೆನ್ಸಿ ತನ್ನ ಕೆಲಸಕ್ಕಾಗಿ ನಿಗದಿತ ಶುಲ್ಕವನ್ನು ವಿಧಿಸಲಿದೆ.
ಮಾರಾಟಗಾರರು,ಖರೀದಿದಾರರು ದಾಖಲೆ ಪತ್ರಗಳಿಗಾಗಿ ಕಚೇರಿ,ಬ್ಯಾಂಕು ಅಲೆಯುವುದನ್ನು ಏಜೆನ್ಸಿಗಳು ತಪ್ಪಿಸುವುದರಿಂದ ಮೋಸದ ಜಾಲಕ್ಕೆ ಬ್ರೇಕ್ ಬೀಳುತ್ತದೆ ಎಂದರು.
ಹೀಗೆ ಭೂಮಿ,ನಿವೇಶನಗಳ ಮಾರಾಟಗಾರರು ಮತ್ತು ಖರೀದಿದಾರರಿಗೆ  ಅನುಕೂಲ ಕಲ್ಪಿಸಿಕೊಡುವ ಯೋಚನೆ ಇತ್ತೀಚೆಗೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆಸಿದ ಗ್ರಾಮವಾಸ್ತವ್ಯದ ಕಾಲದಲ್ಲಿ ಮೊಳಕೆಯೊಡೆಯಿತು ಎಂದರು.
ಯಾರದೋ ಭೂಮಿಯ ಪಹಣಿಯಲ್ಲಿ ಇನ್ಯಾರದೋ ಹೆಸರು ಸೇರುವುದು,ಒಂದೇ ನಿವೇಶನ ಹಲವರ ಹೆಸರಲ್ಲಿ ನೋಂದಣಿಯಾಗುವುದು ಸೇರಿದಂತೆ ಹಲವು ಬಗೆಯ ಮೋಸದ ಬಗ್ಗೆ ಅಲ್ಲಿ ದೂರುಗಳು ಕೇಳಿ ಬಂದವು.
ಮಾರಾಟಗಾರ ಹಾಗೂ ಖರೀದಿದಾರ ಏಕಕಾಲಕ್ಕೆ ಮೋಸಕ್ಕೆ‌ ಒಳಗಾಗಿ ನರಳುತ್ತಿರುವುದು ಖಚಿತವಾಯಿತು.
ಈ ಹಿನ್ನೆಯಲ್ಲಿ ಉಭಯತ್ರರ ಹಿತ ರಕ್ಷಿಸುವ,ಮೋಸಗಾರರನ್ನು ಹತ್ತಿಕ್ಕುವ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುವಂತೆ ಮಾಡಿತು ಎಂದರು.

Post a Comment

Previous Post Next Post