ಯಾವ ಪುರುಷಾರ್ಥಕ್ಕಾಗಿ ಸಿದ್ದರಾಮಯ್ಯರ ಪ್ರತಿಭಟನೆ: ಎನ್.ರವಿಕುಮಾರ್ ಪ್ರಶ್ನೆ

 ಯಾವ ಪುರುಷಾರ್ಥಕ್ಕಾಗಿ ಸಿದ್ದರಾಮಯ್ಯರ

ಪ್ರತಿಭಟನೆ: ಎನ್.ರವಿಕುಮಾರ್ ಪ್ರಶ್ನೆ

ಬೆಂಗಳೂರು: ಕೊಡಗಿಗೆ ತೆರಳಿ 26ರಂದು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸಿದ್ದರಾಮಯ್ಯ ಹೇಳಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಸಾರವಾಗುತ್ತಿದೆ. ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಕೊಡಗಿಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಪ್ರಶ್ನಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ನೈತಿಕತೆ, ಘನತೆ, ಮಾನ- ಮರ್ಯಾದೆ ಇದ್ದರೆ ಯಾವ ಮುಖ ಇಟ್ಟುಕೊಂಡು ಪ್ರತಿಭಟನೆಗೆ ಕೊಡಗಿಗೆ ಹೋಗಲಿದ್ದಾರೆ ಎಂದು ಅವರು ಕೇಳಿದರು. ಯಾವ ಪುರುಷಾರ್ಥಕ್ಕಾಗಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ನಿಮ್ಮದೇ ಕಾಂಗ್ರೆಸ್‍ನ ಕಾರ್ಯಕರ್ತ ಸಂಪತ್, ತಾನೇ ಕಾರಿಗೆ ಮೊಟ್ಟೆ ಎಸೆದುದಾಗಿ ಹೇಳಿದ್ದಾನೆ. ಹಾಗಾಗಿ ನೈತಿಕತೆ ಇದ್ದರೆ ನಿಮ್ಮ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು. ಇಲ್ಲವಾದರೆ ನಿಮ್ಮ ಪ್ರತಿ ಮಾತು ಸುಳ್ಳೆಂದು ಸಾಬೀತಾಗಲಿದೆ ಎಂದು ತಿಳಿಸಿದರು. ಬಿಜೆಪಿ- ಆರೆಸ್ಸೆಸ್ ಕಾರ್ಯಕರ್ತರು ಮೊಟ್ಟೆ ಎಸೆದುದಾಗಿ ಸಿದ್ದರಾಮಯ್ಯ ಎದೆಯುಬ್ಬಿಸಿ ಹೇಳಿದ್ದರು ಎಂದು ವಿವರಿಸಿದರು.

ಶಿವಮೊಗ್ಗದಲ್ಲಿ ನಡೆದ ಹರ್ಷನ ಹತ್ಯೆ, ಮಂಗಳೂರಿನಲ್ಲಿ ನಡೆದ ಹತ್ಯೆ- ಇವೆಲ್ಲವುಗಳ ಬಗ್ಗೆ ನೀವು ಮಾತನಾಡಿದ್ದೀರಲ್ಲವೇ? ಎಲ್ಲ ಮಾತುಗಳೂ ಸಂಶಯವನ್ನು ವ್ಯಕ್ತಪಡಿಸುವಂತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಮಾಜದಲ್ಲಿ ನಿಮ್ಮ ಬಗೆಗಿನ ಘನತೆ- ಗಾಂಭೀರ್ಯ ಯಾವುದೂ ಉಳಿಯುವುದಿಲ್ಲ ಎಂದು ತಿಳಿಸಿದರು.

ಇದು ಕಾಂಗ್ರೆಸ್ ಟೂಲ್‍ಕಿಟ್ ಎಂದ ಅವರು, ಇದು ದೆಹಲಿಯಿಂದ ಬಂದಿದೆಯೇ? ಅಥವಾ ನೀವೇ ಹೆಣೆದಿದ್ದೀರಾ ಎಂದು ಕೇಳಿದರು. ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಸಾವರ್ಕರ್ ಈ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು. ನೇತಾಜಿ ಸುಭಾಷ್‍ಚಂದ್ರ ಬೋಸ್ ಮತ್ತು ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಸಮಸಮವಾಗಿ ನಿಲ್ಲುತ್ತಾರೆ. ಕಾಂಗ್ರೆಸ್‍ನವರು ಸಾವರ್ಕರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅವಮಾನ ಮಾಡಿದ್ದಾರೆ. ಬೂಟು ಕಾಲಿನಲ್ಲಿ ತುಳಿದಿದ್ದಾರೆ ಎಂದರಲ್ಲದೆ, ನಿಮಗೇನಾದರೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೌರವ ಇದೆಯೇ? ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಕೇಳಿದರು.

ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿ, ಅವರಿಂದಲೇ ಮೊಟ್ಟೆ ಹೊಡೆಯುವಂತೆ ಮಾಡಿ ಇದನ್ನು ಬಿಜೆಪಿ ತಲೆಗೆ ಕಟ್ಟುತ್ತೀರಾ? ಈ ಥರ ಎಷ್ಟು ಟೂಲ್‍ಕಿಟ್ ನಿಮ್ಮ ಬಳಿ ಇವೆ? ಇಂಥ ಎಷ್ಟು ಷಡ್ಯಂತ್ರ ಮಾಡಿದ್ದೀರಿ? ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತೀರಾ? ಕೋಮು ಗಲಭೆಗೆ ಷಡ್ಯಂತ್ರ ರೂಪಿಸಿದ್ದೀರಾ? ಎಂದೂ ಪ್ರಶ್ನೆಗಳನ್ನು ಮುಂದಿಟ್ಟರು. ಕಾಂಗ್ರೆಸ್ ಕಾರ್ಯಕರ್ತರಿಗೆ ನೈತಿಕತೆ, ದೇಶಭಕ್ತಿ ಇದ್ದರೆ, ಮೌಲ್ಯಗಳಿದ್ದರೆ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಸವಾಲೆಸೆದರು.

ಕೊಡಗಿನಲ್ಲಿ ಮುಸ್ಲಿಮರ ಜೊತೆಗೂಡಿ ಗಲಭೆ ಎಬ್ಬಿಸುವ ಷಡ್ಯಂತ್ರ ಇದರ ಹಿಂದಿದೆ ಎಂದು ಆಕ್ಷೇಪಿಸಿದರು.           


Post a Comment

Previous Post Next Post