ನವದೆಹಲಿ: ಆಗಮಶಾಸ್ತ್ರದ ಅನ್ವಯ ನಿರ್ಮಿಸಲಾದ ದೇವಾಲಯಗಳಿಗೆ ಅರ್ಚಕರನ್ನು ಆಗಮಶಾಸ್ತ್ರದಂತೆಯೇ ನೇಮಕ ಮಾಡಬೇಕೇ ಹೊರತು ಅದನ್ನು ತಮಿಳುನಾಡು ಹಿಂದೂ ಧಾರ್ಮಿಕ ಸಂಸ್ಥೆಗಳ ಉದ್ಯೋಗಿಗಳ (ಸೇವಾ ಷರತ್ತುಗಳು) ನಿಯಮಗಳು, 2020ರ ಅನ್ವಯ ಮಾಡುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ.ಜತೆಗೆ, ಆಗಮ ಶಾಸ್ತ್ರದ ಅನ್ವಯ ನಿರ್ಮಿಸಲಾದ ದೇಗುಲಗಳನ್ನು ಗುರುತಿಸಲು ಐವರು ಸದಸ್ಯರ ಸಮಿತಿ ರಚಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.
ದೇಗುಲಗಳಿಗೆ ಅರ್ಚಕರು ಮತ್ತು ಇತರೆ ಆಗಮ ಸಂಬಂಧಿ ಸಿಬ್ಬಂದಿಯ ನೇಮಕ ಸಂಬಂಧ ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅಖೀಲ ಭಾರತ ಆದಿ ಶೈವ ಶಿವಾಚಾರ್ಯರ್‌ಗಳ್ ಸೇವಾ ಸಂಘಂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಮುನೀಶ್ವರ ನಾಥ್ ಭಂಡಾರಿ ಮತ್ತು ನ್ಯಾ.ಎನ್.ಮಾಲಾ ಅವರನ್ನೊಳಗೊಂಡ ನ್ಯಾಯಪೀಠ, ದೇಗುಲಗಳಿಗೆ ಅರ್ಚಕರ ನೇಮಕಕ್ಕೆ ಇರುವ ಅರ್ಹತೆ, ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ನಿಗದಿಪಡಿಸಿರುವ ಸರ್ಕಾರದ ನಿಯಮಗಳು ಆಗಮಶಾಸ್ತ್ರದನ್ವಯ ನಿರ್ಮಿಸಲಾದ ಮತ್ತು ನಿರ್ವಹಿಸಲ್ಪಡುತ್ತಿರುವ ದೇವಾಲಯಗಳಿಗೆ ಅನ್ವಯಿಸುವುದಿಲ್ಲ ಎಂದಿದೆ.
ಆದರೆ, ತಮಿಳುನಾಡು ಹಿಂದೂ ಧಾರ್ಮಿಕ ಸಂಸ್ಥೆಗಳ ಉದ್ಯೋಗಿಗಳ ನಿಯಮಗಳಲ್ಲಿ ಬರುವ ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲು ನ್ಯಾಯಪೀಠ ನಿರಾಕರಿಸಿದೆ.
Post a Comment