ವೈಚಾರಿಕತೆಯಿಂದಲೇ ಪ್ರತಿಪಾದನೆ ಅಥವಾ ವಿರೋಧ ಇರಬೇಕು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಾನೂನು ಸುವ್ಯವಸ್ಥೆ ಗೆ ಧಕ್ಕೆ ಆಗಬಾರದು: ಸಿ ಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ , ಆಗಸ್ಟ್ 21 :
ಸಾವರ್ಕರ್ ಬಗ್ಗೆ ,ಟಿಪ್ಪು ಸುಲ್ತಾನ್ ಬಗ್ಗೆಯೂ ಪರವಿರೋಧ ನಂಬಿಕೆ ಮತ್ತು ವಾದಗಳಿವೆ. ಇವು ಐತಿಹಾಸಿಕ ವಿಚಾರಗಳಾಗಿದ್ದು, ಪರ ವಿರೋಧ ವಾದಗಳಿರುತ್ತವೆ. ಯಾವುದೇ ವೈಚಾರಿಕತೆ ಇದ್ದರೆ, ವೈಚಾರಿಕ ಚಿಂತನೆಯಿಂದಲೇ ಪ್ರತಿಪಾದಿಸಬೇಕು. ವೈಚಾರಿಕತೆಯಿಂದಲೇ ವಿರೋಧಿಸಬೇಕು. ಇಂತಹ ವಿಷಯಗಳನ್ನು ಬೀದಿಗೆಳೆದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸ ಆಗಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹಾವೇರಿ ಜಿಲ್ಲೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
ಶ್ರೀಮತಿ ಇಂದಿರಾಗಾಂಧಿಯವರೂ ಸಾವರ್ಕರ್ ಅನ್ನು ದೇಶದ ಶ್ರೇಷ್ಟ ಪುತ್ರ ಎಂದೆದಿದ್ದಾರೆ. ಪ್ರಜಾಪ್ರಭುತ್ವದ ರೀತ್ಯ ಯಾವ ವೇದಿಕೆಯಲ್ಲಿ ಎಷ್ಟರ ಮಟ್ಟಿಗೆ ಪ್ರತಿಪಾದನೆ ಮಾಡಬೇಕೆನ್ನುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಇದನ್ನು ಅರಿತರೆ, ಭಿನ್ನಾಭಿಪ್ರಾಯದ ನಡುವೆಯೂ ಕೆಲಸ ಮಾಡಬಹುದು ಎಂದರು.
ಶಾಂತಿ ಸುವ್ಯವಸ್ಥೆ ಕಾಪಾಡುವುದು ರಾಜಕೀಯ ಪಕ್ಷಗಳ ಕರ್ತವ್ಯ :
ವಿರೋಧಪಕ್ಷದ ನಾಯಕರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಾವುದೇ ಘಟನೆ ನಡೆದಾಗ ಕಾನೂನುಬದ್ಧ ತನಿಖೆ ನಡೆಸಲಾಗುತ್ತದೆ. ವಿರೋಧಪಕ್ಷದ ನಾಯಕರಿಗೆ ರಕ್ಷಣೆ ನೀಡಲು ಸೂಚಿಸಲಾಗಿದೆ. ಈ ಪ್ರಕರಣಕ್ಕೆ ರಾಜಕೀಯ ಲೇಪನ ಮಾಡುವುದು ಆಯಾ ರಾಜಕೀಯ ಪಕ್ಷಕ್ಕೆ ಬಿಟ್ಟಿದ್ದು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಎಲ್ಲ ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ ಎಂದರು.
Post a Comment