26-08-2022
ಮಹಿಳೆಯರಿಗೆ ಅವಮಾನ ಮಾಡಿದ ಪ್ರಿಯಾಂಕ್ ಕ್ಷಮೆ ಕೇಳದಿದ್ದರೆ ಚಿತ್ತಾಪುರ ಚಲೋ – ಗೀತಾ ವಿವೇಕಾನಂದ
ಬೆಂಗಳೂರು: ಮಹಿಳೆಯರೆಲ್ಲರಿಗೆ ತಮ್ಮ ಹೇಳಿಕೆ ಮೂಲಕ ಅವಮಾನ ಮಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು, ಕ್ಷಮೆ ಕೇಳದಿದ್ದರೆ ಚಿತ್ತಾಪುರ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ ಅವರು ಎಚ್ಚರಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡಿಸಿ 17 ಜಿಲ್ಲೆಗಳಲ್ಲಿ ಈಗಾಗಲೇ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ ಆದರೆ, ಪ್ರಿಯಾಂಕ್ ಖರ್ಗೆ ಅವರು ಮನಪೂರ್ವಕವಾಗಿ ಕ್ಷಮೆ ಕೇಳಿಲ್ಲ. ಇದನ್ನು ರಾಜ್ಯ ಮತ್ತು ದೇಶದ ಮಹಿಳೆಯರೆಲ್ಲರ ಪರವಾಗಿ ಖಂಡಿಸುವುದಾಗಿ ಅವರು ತಿಳಿಸಿದರು.
ಸರಕಾರಿ ನೌಕರಿ ಪಡೆಯಲು ಮಹಿಳೆಯರು ಮಂಚ ಏರಬೇಕು ಹಾಗೂ ಯುವಕರು ಲಂಚ ಕೊಡಬೇಕೆಂದು ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಕೀಳು ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಅತ್ಯಂತ ಖಂಡನಾರ್ಹ ಎಂದು ಅವರು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಅವರು ತಮ್ಮನ್ನು ಚಾಲ್ತಿಯಲ್ಲಿ ಇಡಲು ಇಂತ ಹೇಳಿಕೆ ನೀಡುತ್ತಿದ್ದಾರೆ. ಅವರು ಮಹಿಳೆಯರ ಕುರಿತ ಗೌರವದಿಂದ ಮಾತನಾಡಬೇಕೆಂದು ಆಗ್ರಹಿಸಿದರು. ಈ ರೀತಿಯ ಅಸಭ್ಯ ಪದ ಬಳಸಿದ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಉಗ್ರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಹಾಗೆ ಮಾಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಹಿಳಾ ಸರಕಾರಿ ನೌಕರರೆಲ್ಲರೂ ಉತ್ತಮ ಕುಟುಂಬದ ಹಿನ್ನೆಲೆಯನ್ನೇ ಹೊಂದಿದ್ದಾರೆ. ಅಲ್ಲದೇ ಪರಿಶ್ರಮದ ಮೂಲಕ ಕೆಲಸ ಪಡೆದು ಉನ್ನತ ಹುದ್ದೆಗಳನ್ನೇರಿದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಅಧೀರ್ ರಂಜನ್ ಚೌಧರಿ ಕೆಲವೇ ದಿನಗಳ ಹಿಂದೆ ರಾಷ್ಟ್ರಪತಿಗಳನ್ನು ‘ರಾಷ್ಟ್ರಪತ್ನಿ’ ಎಂದು ಸಂಬೋಧಿಸಿ ಅವಮಾನ ಮಾಡಿದ್ದರು. ಇದೀಗ ಪ್ರಿಯಾಂಕ್ ಖರ್ಗೆ ಅದೇ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷದವರ ಕೀಳು ಅಭಿರುಚಿಯನ್ನು ಮುಂದುವರೆಸುತ್ತಿರುವುದು ಅತ್ಯಂತ ಬೇಸರ ತಂದಿದೆ ಹಲವಾರು ಮಹಿಳೆಯರು ತಮ್ಮನ್ನು ಸಂಪರ್ಕಿಸಿ ಈ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ವಕ್ತಾರ ಎಸ್ ಹರೀಶ್, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ಆಶಾ ರಾವ್, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಆನಂದ್ ಅವರು ಉಪಸ್ಥಿತರಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment