ಮೋದಿಯವರ ಕಾರ್ಯಕ್ರಮಗಳಿಂದ ಜನರ ಜೀವನಮಟ್ಟ ಸುಧಾರಣೆ- ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

 ಮೋದಿಯವರ ಕಾರ್ಯಕ್ರಮಗಳಿಂದ ಜನರ ಜೀವನಮಟ್ಟ 

ಸುಧಾರಣೆ- ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳು ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಅವರ ಸಶಕ್ತಗೊಳಿಸಲು ಬಳಕೆಯಾಗುತ್ತಿವೆ ಎಂದು ಕೇಂದ್ರ ಸರಕಾರದ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದರು.

ದೇವನಹಳ್ಳಿಯ ಬಳಿ ಖಾಸಗಿ ಸಂಸ್ಥೆಯಲ್ಲಿ ಇಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್, ಬೆಂಬಲ ಬೆಲೆ ಹೆಚ್ಚಳ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ನಾವು ಮಾತು ಕೊಟ್ಟಂತೆ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದೇವೆ. ಜಾಗತಿಕ ಮಟ್ಟದಲ್ಲಿ ಯುದ್ಧ, ಉಕ್ರೇನ್‍ನಿಂದ ತರಿಸಿಕೊಳ್ಳುತ್ತಿದ್ದ ಗೊಬ್ಬರ ಬರುವುದು ಸ್ಥಗಿತಗೊಂಡಿತು. ಕೋವಿಡ್ ಸಮಸ್ಯೆ ದೇಶವನ್ನು ಬಾಧಿಸಿತು. ಇದೆಲ್ಲದರ ನಡುವೆ ರೈತರಿಗೆ ಅನೇಕ ಯೋಜನೆಗಳನ್ನು ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದಿದೆ ಎಂದು ವಿವರಿಸಿದರು.

ತಮಗೆ ಅಧಿಕಾರ ಸಿಗದೆ ಇರುವ ರಾಹುಲ್ ಗಾಂಧಿ, ಸಿದ್ದರಾಮಯ್ಯರ ತಂಡವು ಮೋದಿಯವರ ವಿರುದ್ಧ ಬೈಯ್ಯುವುದನ್ನು ಕೇಳುತ್ತೇವೆ. ದಲ್ಲಾಳಿತಳು- ಮಧ್ಯವರ್ತಿಗಳಾಗಿ ಕಿಸೆ ತುಂಬಿಸಿಕೊಳ್ಳುತ್ತಿದ್ದವರು ಕೂಡ ಇದೇ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ ಎಂದ ಅವರು, ಫಲಾನುಭವಿಗಳಿಗೇ ನೇರವಾಗಿ ಸೌಲಭ್ಯ ವರ್ಗಾವಣೆ (ಡಿಬಿಟಿ) ಆಗುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್‍ನವರು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಪರಿವಾರವಾದಕ್ಕೆ ತಮ್ಮನ್ನು ಸೀಮಿತಗೊಳಿಸಿದರು. ಆದರೆ, ಬಿಜೆಪಿ ಸರಕಾರಗಳು ಅಭಿವೃದ್ಧಿಗೆ ಗರಿಷ್ಠ ಆದ್ಯತೆ ಕೊಟ್ಟಿವೆ. ಇದನ್ನು ಜನರಿಗೆ ತಿಳಿಸಿ ಮತ್ತೊಮ್ಮೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಶ್ರಮಿಸಬೇಕೆಂದು ಅವರು ಕೋರಿದರು. ಕಳೆದ 8 ವರ್ಷಗಳಲ್ಲಿ ಯಾವುದೇ ರಾಜಕೀಯ ಭ್ರಷ್ಟಾಚಾರ ಇಲ್ಲದ ಸರಕಾರ ಮೋದಿಯವರದು ಎಂದು ತಿಳಿಸಬೇಕು ಎಂದು ತಿಳಿಸಿದರು.

ಹಿಂದೆ ನಾವೇ ಸ್ವಾತಂತ್ರ್ಯ ತಂದು ಕೊಟ್ಟಿದ್ದಾಗಿ ಹೇಳಿ ಆಡಳಿತ ನಡೆಸಿದರು. ನಂತರ ಕುಟುಂಬ ರಾಜಕೀಯ ಮುಂದುವರಿಯಿತು. ನಾವು ಕೆಲಸ ಮಾಡಿದ್ದೇವೆ ಎನ್ನುವ ಆಧಾರದಲ್ಲಿ ಮತ ಕೇಳುವಂಥ ಮತ್ತು ಮುಂದೆಯೂ ಅಭಿವೃದ್ಧಿ ಮಾಡಲಿದ್ದೇವೆ ಎನ್ನುವ ಮೂಲಕ ಗೆದ್ದು ಆಡಳಿತ ನಡೆಸುವುದನ್ನು ಬಿಜೆಪಿ ಜಾರಿಗೊಳಿಸಿದೆ. ಇದರ ಕುರಿತು ದೇಶದಲ್ಲಿ ಚರ್ಚೆ ನಡೆದಿದೆ. ಅದನ್ನು ಬೇರೆಡೆ ತಿರುಗಿಸುವ ಕೆಲಸವನ್ನು ವಿರೋಧಪಕ್ಷಗಳು ಮಾಡುತ್ತಿವೆ ಎಂದು ಟೀಕಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ, ಸಾಯಿಲ್ ಹೆಲ್ತ್ ಕಾರ್ಡ್, ಆಯುಷ್ಮಾನ್ ಭಾರತ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು. ಯುಪಿಎ ಆಡಳಿತಾವಧಿಯಲ್ಲಿ 2006ರಿಂದ 2014ರವರೆಗೆ ಕೃಷಿ ಕ್ಷೇತ್ರದ ಬಜೆಟ್ ಒಟ್ಟು 1.46 ಲಕ್ಷ ಕೋಟಿ ಆಗಿತ್ತು. 2014ರಿಂದ 2022ರವರೆಗೆ ಅದು ನಮ್ಮ ಆಡಳಿತಾವಧಿಯಲ್ಲಿ 6.10 ಲಕ್ಷ ಕೋಟಿಗೆ ಏರಿದೆ. ಈ ವರ್ಷ ನಮ್ಮ ದೇಶದ ಇತಿಹಾಸದೊಳಗೆ ಅತಿ ಹೆಚ್ಚು ಕೃಷಿ ಉತ್ಪನ್ನವನ್ನು ನಾವು ರಫ್ತು ಮಾಡಿದ್ದೇವೆ ಎಂದು ತಿಳಿಸಿದರು.

ಕೃಷಿ ಉತ್ಪನ್ನ ರಫ್ತಿನಲ್ಲಿ ಜಗತ್ತಿನಲ್ಲೇ ಭಾರತ ನಂಬರ್ ವನ್ ಆಗಿದೆ. ಗೋಧಿ ರಫ್ತಿನಲ್ಲಿ 273 ಶೇಕಡಾದಷ್ಟು ಹೆಚ್ಚಳ ಆಗಿದೆ. ಬೆಂಬಲ ಬೆಲೆಯೂ ಗಮನಾರ್ಹವಾಗಿ ಹೆಚ್ಚಳವಾಗಿದೆ ಎಂದು ಅಂಕಿಅಂಶಗಳೊಂದಿಗೆ ವಿವರ ನೀಡಿದರು.

ಬೇರೆ ಪಕ್ಷಗಳಲ್ಲಿ ಚುನಾವಣೆ ಬಂದಾಗ ಕಾರ್ಯಕಾರಿಣಿ ಸಭೆ ನಡೆಸುತ್ತಾರೆ. ಆದರೆ, ಬಿಜೆಪಿಯಲ್ಲಿ ವಿವಿಧ ಮೋರ್ಚಾಗಳ ಕಾರ್ಯಕಾರಿಣಿಗಳು ನಿರಂತರವಾಗಿ ನಡೆಯುತ್ತವೆ. ಹೇಗೋ ಗೆಲ್ಲುವುದು ಮತ್ತು ಹೇಗೋ ಆಡಳಿತ ಮಾಡುವುದೇ ನಮ್ಮ ಧ್ಯೇಯವಲ್ಲ. ಆಡಳಿತವು ಸೇವೆಗಾಗಿ ಇರಬೇಕೆಂದು ಪಕ್ಷದ ಹಿರಿಯರು ಹೇಳಿದ್ದಾರೆ ಎಂದು ವಿವರಿಸಿದರು.

ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ. ಪಕ್ಷ ಸಂಘಟನೆಗೆ ನಾವು ಹೆಚ್ಚಿನ ಆದ್ಯತೆ ಕೊಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ರೈತಪರ ಕಾರ್ಯಕ್ರಮಗಳು ಮತ್ತು ರಾಜ್ಯದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದು ತಿಳಿಸಿದರು. 

ಚುನಾವಣೆ ಹೊಸ್ತಿಲಲ್ಲಿ ಈ ಪ್ರಶಿಕ್ಷಣ ವರ್ಗ ನಡೆಯುತ್ತಿದೆ. ನಮಗೆ ಗೊತ್ತಿರುವ ವಿಷಯಗಳನ್ನು ಮನನ ಮಾಡಿಸುವ ಕಾರ್ಯವನ್ನು ಪ್ರಶಿಕ್ಷಣ ವರ್ಗದಲ್ಲಿ ಮಾಡಲಾಗುತ್ತದೆ ಎಂದು ನುಡಿದರು.

ಕಾಂಗ್ರೆಸ್ ಪಕ್ಷವು ಜನರ ಭಾವನೆಗಳನ್ನು ಕೆರಳಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಾನಂತರ ರೈತರ ಪರವಾಗಿ ಏನನ್ನೂ ಮಾಡಿಲ್ಲ ಎಂಬುದನ್ನು ನಾವು ಜನರಿಗೆ ತಿಳಿಸಬೇಕು. ಕಾಂಗ್ರೆಸ್ ಆಡಳಿತದ ವಿಫಲತೆ ಹಾಗೂ ಬಿಜೆಪಿ ಮಾಡಿರುವ ಕೆಲಸ ಮತ್ತು ಜಾರಿಗೊಳಿಸಿದ ಯೋಜನೆಗಳನ್ನು ತಿಳಿಸುವ ಮಾಹಿತಿಯನ್ನು ಶೀಘ್ರವೇ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕೊಡುವುದಾಗಿ ತಿಳಿಸಿದರು.

ಕೃಷಿ ವೆಚ್ಚ ಕಡಿಮೆ ಮಾಡುವುದು ಹೇಗೆ? ಹೆಚ್ಚು ಉತ್ಪನ್ನ ಪಡೆಯಲು ಹೇಗೆ ಕಾರ್ಯಪ್ರವೃತ್ತರಾಗಬೇಕು ಎಂಬಿತ್ಯಾದಿ ವಿಚಾರಗಳನ್ನು 3 ದಿನಗಳ ಪ್ರಶಿಕ್ಷಣ ವರ್ಗದಲ್ಲಿ ತಿಳಿಸಲಾಗುತ್ತದೆ ಎಂದರು. ರೈತ ಮೋರ್ಚಾ ತಂಡವು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯ, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಅವರು ಭಾಗವಹಿಸಿದ್ದರು.

Post a Comment

Previous Post Next Post