No title

 ಮೂರು ವರ್ಷಗಳಲ್ಲಿ ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಬೆಂಗಳೂರು, ಸೆಪ್ಟೆಂಬರ್ 15:


 ಮುಂದಿನ 3 ವರ್ಷಗಳಲ್ಲಿ ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಪೂರಕವಾದ ಶಿಕ್ಷಕವರ್ಗ, ಮೂಲಸೌಕರ್ಯ, ಲ್ಯಾಬ್ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಗಳ ಪೂರೈಕೆಗೆ ಸರ್ಕಾರ ಸಹಕಾರ ನೀಡಲಿದೆ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.


ಅವರು ಇಂದು ಯುವಿಸಿಇ ನಲ್ಲಿ ಆಯೋಜಿಸಿರುವ ವಿಶ್ವೇಶ್ವರಯ್ಯ ಇಂಜಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ ಹಾಗೂ  ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ 162ನೇ ಜನ್ಮ ದಿನೋತ್ಸವದ ಅಂಗವಾಗಿ ಅಭಿಯಂತರರ  ದಿನಾಚರಣೆಯ ಉದ್ಘಾಟಿಸಿ ಮಾತನಾಡಿದರು.


ಸಂಸ್ಥೆಯ ಸ್ವಾಯತ್ತತೆ ತನ್ನ ಸಂಶೋಧನಾತ್ಮಕ ಹಾಗೂ ಭವಿಷ್ಯದ ಅಭಿವೃದ್ಧಿಗೆ ಅಗತ್ಯವಿದ್ದುದ್ದರಿಂದ ಯುವಿಸಿಯನ್ನು ವಿಶ್ವವಿದ್ಯಾಲಯವಾಗಿ ಮಾಡಲಾಗಿದೆ. ಯುವಿಸಿಇ 105 ವರ್ಷಗಳನ್ನು ಪೂರೈಸಿದ್ದು, ವಿಶ್ವದಲ್ಲೇ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾಲಯವನ್ನಾಗಿಸುವ ಜವಾಬ್ದಾರಿ ಇಲ್ಲಿನ ವಿದ್ಯಾರ್ಥಿಗಳ ಕೈಯಲ್ಲಿದೆ. ಜಗತ್ತಿನಾದ್ಯಂತ ಈ ಸಂಸ್ಥೆಯಿಂದ ಬಂದ ಇಂಜಿನಿಯರ್ಗಳು ಸಾಧನೆಗಳನ್ನು ಮಾಡಿದ್ದಾರೆ. ಯುವಿಸಿಇಯ ಶಕ್ತಿಯ ಮೇಲೆ ನನಗೆ ನಂಬಿಕೆಯಿದೆ. ಯುವಿಸಿಇ ಸಂಸ್ಥೆ ಐಐಟಿಯಾಗಲು ಎಲ್ಲ  ಬದ್ಧತೆ, ಇಚ್ಛಾಶಕ್ತಿ ಬೇಕು. ಕರ್ನಾಟಕದಲ್ಲಿ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿಯನ್ನಾಗಿಸುವ ಕನಸು ನನ್ನದು. ಮುಂದಿನ ಐದು ವರ್ಷಗಳಲ್ಲಿ ಈ ಕೆಲಸವನ್ನು ಪೂರೈಸಲಾಗುವುದು ಎಂದರು.


ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಿಕ್ಸೂಚಿ :

ಯುವಿಸಿಇ ಎಲ್ಲ ಸಂಸ್ಥೆಗಳಿಂದ ಉನ್ನತ ಮಟ್ಟದ್ದಾಗಿದೆ. ಯುವಿಸಿ ಸಂಸ್ಥೆಯಲ್ಲಿ, ಶಿಕ್ಷಣದಲ್ಲಿ ಯಾವುದೇ ರೀತಿಯ ರಾಜಕಾರಣ ಬೇಡ. ಎಲ್ಲರ ಚಿಂತನೆಗಳನ್ನೂ ಒಗ್ಗೂಡಿಸಿ ಯುವಿಸಿಯನ್ನು ಬೆಳೆಸುವ ಸಂಕಲ್ಪವನ್ನು ಮಾಡಬೇಕು. ನಾನು ಯುವಿಸಿಇ ಸಂಸ್ಥೆಯಲ್ಲಿ ಓದುತ್ತಿದ್ದೇನೆ ಎಂಬ ಹೆಮ್ಮೆ ಎಲ್ಲ ವಿದ್ಯಾರ್ಥಿಗಳಲ್ಲಿಯೂ ಇರಬೇಕು. ಯುವಿಸಿಯನ್ನು ಐಐಟಿಯನ್ನಾಗಿಸುವ ಮೂಲಕ ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಿಕ್ಸೂಚಿಯನ್ನು ಬರೆಯಲಾಗುವುದು ಎಂದರು.


ತಾರ್ಕಿಕ ಹಾಗೂ ವಿಶ್ಲೇಷಣಾತ್ಮಕ ಚಿಂತನೆ :

ವಿದ್ಯಾರ್ಥಿಗಳ  ಭವಿಷ್ಯ ಅವರ ಕೈಯಲಿದೆ. ಬದಲಾವಣೆಯ ಭಾಗವಾಗಿರಿ. ವಿಚಾರದಲ್ಲಿ ಬದಲಾವಣೆಯಾದರೆ ಅಭಿವೃದ್ಧಿಯಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಇಂಜಿನಿಯರ್ಸಗಳು ತಾರ್ಕಿಕ ಹಾಗೂ ವಿಶ್ಲೇಷಣಾತ್ಮಕ ಚಿಂತನೆ ಹೊಂದಿರಬೇಕು. ತರ್ಕಬದ್ಧ ಪ್ರಶ್ನೆಗಳ ಮೂಲಕ ತಾರ್ಕಿಕ ಚಿಂತನೆ ಬರುತ್ತದೆ. ಒಮ್ಮೆ ವಿದ್ಯಾರ್ಥಿಯಾದರೆ ಅವರು ಜೀವನಪೂರ್ತಿ ವಿದ್ಯಾರ್ಥಿಗಳೇ. ಶಿಕ್ಷಣದಲ್ಲಿ ಮೊದಲು ಕಲಿಕೆ ನಂತರ ಪರೀಕ್ಷೆ. ಆದರೆ ನಿಜಜೀವನದಲ್ಲಿ ಮೊದಲ ಪರೀಕ್ಷೆ ನಂತರ ಕಲಿಕೆ. ಆದ್ದರಿಂದ ಕಲಿಕೆ ಬಹಳ ಮಹತ್ವವಾದುದು. 21 ನೇ ಶತಮಾನ ಜ್ಞಾನದ ಶತಮಾನ.  ಜ್ಞಾನ ಸಂಪಾದನೆಯ ಮೂಲಕ ಪ್ರಪಂಚವನ್ನು ಗೆಲ್ಲಬಹುದಾಗಿದೆ. ಸಕಾರಾತ್ಮಕ ಬದಲಾವಣೆಯ ಭಾಗವಾಗಬೇಕು ಎಂದರು.


 ಯುವಿಸಿಇ ಅತ್ಯುತ್ತಮ ಮಟ್ಟಕ್ಕೆ ಬೆಳೆಯಬೇಕು :

ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ 400 ಸಂಶೋಧನಾ ಕೇಂದ್ರಗಳಿವೆ. 500 ಪಾರ್ಚೂನ್ ಕಂಪನಿಗಳ ಪೈಕಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಇದು ನಮ್ಮಲ್ಲಿರುವ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ವಿದ್ಯಾರ್ಥಿಗಳು ಓದಿ ಮುಂದೆ ಬರಬೇಕು.   ಯುವಿಸಿಇ ಯಲ್ಲಿ ಕಲಿತ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ  ಮಿಂಚಬೇಕು. ಮುತ್ತುರಾಮನ್ ಅವರು ಟಾಟಾ ಸ್ಟೀಲ್ ಸಂಸ್ಥೆಯನ್ನು ಕಟ್ಟಿದವರು. ದೂರದೃಷ್ಟಿಯುಳ್ಳ, ಬದ್ಧತೆಯ ವ್ಯಕ್ತಿಯಾಗಿದ್ದು, ಈ ಸಂಸ್ಥೆಯಲ್ಲಿ ಅತ್ಯುತ್ತಮ ಪ್ರತಿಭೆ ಹಾಗೂ ಬೆಂಬಲವನ್ನು ಒದಗಿಸಿ ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.  ಸಡಗೋಪನ್ ಅವರಂಥ ಮೇಧಾವಿಗಳು ಈ ಸಂಸ್ಥೆಯಲ್ಲಿರುವುದು ಹೆಮ್ಮೆಯ ಸಂಗತಿ.  ಕರ್ನಾಟಕದಲ್ಲಿ ಮೂರು ಐಟಿ ಸಂಸ್ಥೆಗಳ ಪಿತಾಮಹ ಅವರು.  ಪ್ರತಿಭಾನ್ವಿತರು ಇಲ್ಲಿದ್ದು, ಯುವಿಸಿಇ ಅತ್ಯುತ್ತಮ ಮಟ್ಟಕ್ಕೆ ಬೆಳೆಯಬೇಕು ಎನ್ನುವುದು ನಮ್ಮ  ಆಶಯ ಎಂದು ತಿಳಿಸಿದರು.

Post a Comment

Previous Post Next Post