ದೇಹಲಿ: ಕರ್ನಾಟಕದ ಪದವಿ ಪೂರ್ವ ಕಾಲೇಜುಗಳಲ್ಲಿ 2021ರ ವರೆಗೆ ಯಾವುದೇ ವಿದ್ಯಾರ್ಥಿನಿ ಹಿಜಾಬ್ ಧರಿಸುತ್ತಿರಲಿಲ್ಲ. ಆದರೆ, ಪಾಪ್ಯುಲರ್ ಫ್ರಂಟ್ ಸಂಘಟನೆ ಸಾಮಾಜಿಕ ಜಾಲತಾಣದ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಹಾಗೂ ಕರ್ನಾಟಕ ಸರ್ಕಾರ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಹೆಸರಿನಲ್ಲಿ ಮಧ್ಯಪ್ರವೇಶಿಸುವಂತೆ ಮಾಡಲು ಚಳವಳಿ ಆರಂಭಿಸಿತು ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ಮಂಗಳವಾರ ಮುಂದುವರಿಸಿದ್ದು, ಈ ವೇಳೆ ಕರ್ನಾಟಕ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
'ಇದು ಸಹಜ ಪ್ರತಿಕ್ರಿಯೆ ಅಲ್ಲ. ಬದಲಿಗೆ ಸಾಮಾಜಿಕ ಅಶಾಂತಿ ಉಂಟು ಮಾಡಲು ಶೈಕ್ಷಣಿಕ ವರ್ಷದಲ್ಲಿ ನಡೆಸಲಾದ ದೊಡ್ಡ ಸಂಚಿನ ಭಾಗ. ಹಿಜಾಬ್ ಧರಿಸಲು ಅನುಮತಿ ನೀಡುವಂತೆ ವಿದ್ಯಾರ್ಥಿಗಳು ಏಕಾಏಕಿ ಪ್ರತಿಭಟನೆಗೆ ಇಳಿದಿದ್ದು ಸ್ವಂತ ಯೋಚನೆಯಿಂದ ಅಲ್ಲ' ಎಂದೂ ಅವರು ಹೇಳಿದರು.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರ ಫೆಬ್ರುವರಿ 5ರಂದು ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶವನ್ನು ಸಮರ್ಥಿಸಿಕೊಂಡ ಅವರು, 'ಅದೇ ವೇಳೆ ಕೇಸರಿ ಮಫ್ಲರ್, ಗಾಮ್ಚಾ ಇತ್ಯಾದಿಗಳನ್ನು ಸಹ ನಿಷೇಧಿಸಲಾಗಿತ್ತು. ಇದು ಕೇವಲ ಒಂದು ಸಮುದಾಯವನ್ನು ಗುರಿಯಾಗಿಸಿದ ಆದೇಶ ಎಂದು ಹೇಳುವುದು ತಪ್ಪು' ಎಂದರು.
ಆ ಸಂದರ್ಭದಲ್ಲಿ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ತನ್ನ ಹೊಣೆಗಾರಿಕೆಯಿಂದ ದೂರ ಸರಿದಂತೆ ಆಗುತ್ತಿತ್ತು. ಶಾಲೆಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವುದರ ಉದ್ದೇಶ ಸಮಾನತೆ, ಏಕರೂಪತೆಯನ್ನು ಖಾತರಿಪಡಿಸುವುದು ಆಗಿದೆ ಎಂದು ಅವರು ವಾದ ಮಂಡಿಸಿದರು.
'ಭಾರತ ಒಂದು ಜಾತ್ಯತೀತ ದೇಶ. ಇಸ್ಲಾಮಿಕ್ ದೇಶಗಳೆಂದು ಈಗಾಗಲೇ ಗುರುತಿಸಿಕೊಂಡಿರುವ ಇರಾನ್‌ನಂತಹ ದೇಶದಲ್ಲಿ ಸಹ ಎಲ್ಲ ಮಹಿಳೆಯರು ಹಿಜಾಬ್ ಧರಿಸುತ್ತಿಲ್ಲ. ಕೆಲವರು ಅದರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಕುರಾನ್‌ನಲ್ಲಿ ಹಿಜಾಬ್ ಕುರಿತು ಉಲ್ಲೇಖಿಸಿದ ಮಾತ್ರಕ್ಕೆ ಅದು ಧಾರ್ಮಿಕ ಪದ್ಧತಿ ಆಗುತ್ತದೆಯೇ ಹೊರತು ಅತಿ ಅಗತ್ಯ ಎಂದಲ್ಲ' ಎಂದು ಅವರು ಸಮರ್ಥಿಸಿಕೊಂಡರು.
ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ, 'ಧರ್ಮದ ಪ್ರತಿಯೊಂದು ಅಂಶಗಳನ್ನು ರಕ್ಷಿಸುವುದು ಪ್ರಾಯೋಗಿಕ ವಾಗಿ ಅಸಾಧ್ಯ. ಆದ್ದರಿಂದ, ಅಗತ್ಯ ಧಾರ್ಮಿಕ ಪದ್ಧತಿಗಳು ಎಂಬ ಸಿದ್ಧಾಂತ ವಿಕಸನಗೊಂಡಿದೆ' ಎಂದರು.
ವಿಚಾರಣೆಯ ವೇಳೆ ನ್ಯಾಯಪೀಠ, ವಿದ್ಯಾರ್ಥಿಗಳು ಸಮವಸ್ತ್ರ ಧರಿಸುವುದೇ ಇಲ್ಲ ಎಂದು ಅರ್ಜಿದಾರರು ಹೇಳುತ್ತಿಲ್ಲ. ವಿದ್ಯಾರ್ಥಿಗಳು ಚಳಿಗಾಲದಲ್ಲಿ ಮಫ್ಲರ್ ಧರಿಸುವುದನ್ನು ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿತು.
ಇದಕ್ಕೆ ತುಷಾರ್ ಮೆಹ್ತಾ ಉತ್ತರಿಸಿ, 'ನಿಯಮದ ಪ್ರಕಾರ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತನ್ನು ಧರಿಸುವಂತಿಲ್ಲ. ಸಮವಸ್ತ್ರ ಎಂದರೆ ಸಮವಸ್ತ್ರ ಅಷ್ಟೇ. ಜಾತ್ಯತೀತ ಶಾಲೆಯಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು' ಎಂದರು.
ಆಗ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್ ಅಗತ್ಯ ಧಾರ್ಮಿಕ ಪದ್ಧತಿ ಗಳ ಪರೀಕ್ಷೆಗೆ ಮುಂದಾಗಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಆಗ ತುಷಾರ್ ಮೆಹ್ತಾ, ಅಗತ್ಯ ಧಾರ್ಮಿಕ ಪದ್ಧತಿಗಳ ವಿಷಯದ ಚರ್ಚೆಯನ್ನು ಹೈಕೋರ್ಟ್ ತಡೆಯಬಹುದಿತ್ತು. ಅರ್ಜಿದಾರರೇ ಖುದ್ದಾಗಿ ಹಿಜಾಬ್ ಒಂದು ಅಗತ್ಯ ಧಾರ್ಮಿಕ ಪದ್ಧತಿ ಎಂಬ ವಾದದೊಂದಿಗೆ ಹೈಕೋರ್ಟ್ ಮೆಟ್ಟಿಲೇರಿದ್ದರು' ಎಂದರು.
ಬಳಿಕ ನ್ಯಾಯಪೀಠವು ವಿಚಾರಣೆ ಯನ್ನು ಬುಧವಾರಕ್ಕೆ ಮುಂದೂಡಿತು.
Post a Comment