ನವದೆಹಲಿ: ಭಾರಿ ಮಳೆಯಿಂದ ದೇಶಾದ್ಯಂತ ಸಂಭವಿಸುತ್ತಿರುವ ಅವಾಂತರಗಳ ನಡುವೆ ದೆಹಲಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಳೆಯಿಂದಾಗಿ ಚರಂಡಿ ನೀರು ಮನೆಗೆ ನುಗ್ಗಿದರೆ ಅದಕ್ಕೆ ಮಹಾನಗರ ಪಾಲಿಕೆಯೇ ಹೊಣೆಯಾಗಿದ್ದು, ಪಾಲಿಕೆಯೇ ಪರಿಹಾರ ನೀಡಬೇಕು ಎಂದು ಹೇಳಿದೆ.ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸ್ಥಳೀಯ ಆಡಳಿತ, ಮುನ್ಸಿಪಲ್ ಕಾರ್ಪೊರೇಷನ್ ಜವಾಬ್ದಾರಿ. ಒಂದು ವೇಳೆ ಮಳೆ ಅವಾಂತರದ ಸಂದರ್ಭಗಳಲ್ಲಿ ಚರಂಡಿ ನೀರು ತುಂಬಿ ಹರಿದು ಮನೆಗಳಿಗೆ ನುಗ್ಗಿ ಸಮಸ್ಯೆಯಾದರೇ ಅದಕ್ಕೆ ಪಾಲಿಕೆಯೇ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದೆ.
12 ವರ್ಷಗಳ ಹಳೆಯ ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಈ ತೀರ್ಪು ನೀಡಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 9 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತಾಕೀತು ಮಾಡಿದೆ.
2010ರಲ್ಲಿ ದೆಹಲಿಯಲ್ಲಿ ಸಂಭವಿಸಿದ ಭಾರಿ ಮಳೆಯಿಂದಾಗಿ ಚರಂಡಿ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳಿಗೆ ಸಂಕಷ್ಟ ಎದುರಾಗಿತ್ತು. ಇದಕ್ಕೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ ಎಂದು ಆರೋಪಿಸಿ ಲೀಲಾ ಮಾಥುರ್ ಎಂಬುವವರು ದೆಹಲಿ ಕೋರ್ಟ್ ಮೆಟ್ಟಿಲೇರಿದ್ದರು.
ಪಾಲಿಕೆ ಅಧಿಕಾರಿಗಳು ಹಲವು ಬಾರಿ ರಸ್ತೆ ಪುನರ್ ನಿರ್ಮಾಣ ಮಾಡಿ ರಸ್ತೆಯ ಮಟ್ಟವನ್ನು ಎತ್ತರಿಸಿದ್ದರು. ಇದರಿಂದ ಮನೆ ತಗ್ಗು ಪ್ರದೇಶದಲ್ಲಿರುವಂತಾಯಿತು. ಭಾರಿ ಮಳೆಯಿಂದಾಗಿ ತಮ್ಮ ಮನೆಗೆ ಚರಂಡಿ ನೀರು ನುಗ್ಗಿ ಸಮಸ್ಯೆಯಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಈ ಬಗ್ಗೆ ಗಮನಿಸಿಲ್ಲ. ನ್ಯಾಯ ಒದಗಿಸುವಂತೆ ಕೋರ್ಟ್ ಮೊರೆ ಹೋಗಿದ್ದರು.
Post a Comment