ಸಾಗರ ರಕ್ಷಣೆ ನಮ್ಮೆಲ್ಲರ ಹೊಣೆ: ರಾಜ್ಯಪಾಲರು
ಬೆಂಗಳೂರು, ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ) :
ಸಾಗರವಿಲ್ಲದೆ ಪ್ರಪಂಚದ ನೈಸರ್ಗಿಕ ಸೌಂದರ್ಯವು ಅಪೂರ್ಣವಾಗಿದೆ, ಆದ್ದರಿಂದ ಸಾಗರವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ, ನಾವೆಲ್ಲರೂ ಒಗ್ಗೂಡಿ ಶುದ್ಧ ಸಾಗರ, ಸುರಕ್ಷಿತ ಸಾಗರ ಎಂಬ ಸಂಕಲ್ಪದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಕಾರವಾರದಲ್ಲಿ ರವೀಂದ್ರ ನಾಥ್ ಟಾಗೂರ್ ಬೀಚ್ ಬಳಿ ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ನಿಮಿತ್ತ ಉತ್ತರ ಕನ್ನಡ ಜಿಲ್ಲಾಡಳಿತ ಆಯೋಜಿಸಿದ್ದ ಕ್ಲೀನ್ ಸಾಗರ್ - ಸೇಫ್ ಸಾಗರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವದ ಅಂಗವಾಗಿ, ದೇಶಾದ್ಯಂತ 75 ದಿನಗಳ ಕಾಲ 75 ಬೀಚ್ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕರಾವಳಿ ಸ್ವಚ್ಛತಾ ಅಭಿಯಾನವನ್ನು 3ನೇ ಜುಲೈನಿಂದ 17ನೇ ಸೆಪ್ಟೆಂಬರ್, 2022 ರವರೆಗೆ ಅಂದರೆ 75 ದಿನಗಳ ಕಾಲ ದೇಶದ 75 ಸಮುದ್ರ ತೀರಗಳಲ್ಲಿ ನಡೆಸಲಾಗುತ್ತಿದೆ. ಇದು ಈ ರೀತಿಯ ಮೊದಲನೆಯದು ಮತ್ತು ದೀರ್ಘಾವಧಿಯ ಕರಾವಳಿ ಸ್ವಚ್ಛತಾ ಅಭಿಯಾನವಾಗಿದೆ, ಇದರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿರುವುದು ಶ್ಲಾಘನೀಯ ಎಂದರು.
ಕರಾವಳಿ ಪ್ರದೇಶಗಳು ಸೇರಿದಂತೆ ದೇಶದ ಇತರ ಭಾಗಗಳ ಏಳಿಗೆಗಾಗಿ "ಸ್ವಚ್ಛ ಸಾಗರ, ಸುರಕ್ಷಿತ ಸಾಗರ" ಎಂಬ ಸಂದೇಶವನ್ನು ನೀಡಲು, ಜನ ಸಾಮಾನ್ಯರ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತವು ಶ್ರೀಮಂತ ಕಡಲ ಇತಿಹಾಸವನ್ನು ಹೊಂದಿದೆ. ಸಮುದ್ರ ಚಟುವಟಿಕೆಗಳನ್ನು ಋಗ್ವೇದದಲ್ಲಿ ಮತ್ತು ಸಾಗರಗಳು, ಸಮುದ್ರಗಳು ಮತ್ತು ನದಿಗಳ ಪರಸ್ಪರ ಸಂಬಂಧಗಳ ಉಲ್ಲೇಖಗಳು ಭಾರತೀಯ ಪುರಾಣಗಳಲ್ಲಿವೆ. ಭಾರತೀಯ ಸಾಮಾಜಿಕ-ಆಧ್ಯಾತ್ಮಿಕ ಸಂಪ್ರದಾಯಗಳು, ಸಾಹಿತ್ಯ, ಕಾವ್ಯ, ಶಿಲ್ಪಕಲೆ, ಚಿತ್ರಕಲೆ ಮತ್ತು ಪುರಾತತ್ತ್ವ ಶಾಸ್ತ್ರದ ವೈವಿಧ್ಯಮಯ ಪುರಾವೆಗಳು ಭಾರತದ ಮಹಾನ್ ಕಡಲ ಸಂಪ್ರದಾಯಗಳನ್ನು ದೃಢೀಕರಿಸುತ್ತವೆ ಎಂದು ಮಾಹಿತಿ ನೀಡಿದರು.
7,500 ಕಿ.ಮೀ.ಗಿಂತಲೂ ಹೆಚ್ಚು ಭಾರತದ ಕರಾವಳಿಯು ನಮ್ಮ ವಿಶಾಲವಾದ ಸಾಗರ ಸಂಪನ್ಮೂಲಗಳನ್ನು ಪ್ರತಿಬಿಂಬಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಹಿಂದೂ ಮಹಾಸಾಗರವು ಒಂದು ದೇಶದ ಹೆಸರಿನ ಏಕೈಕ ಸಾಗರವಾಗಿದೆ. ಈ ನೈಸರ್ಗೀಕ ಸಂಪನ್ಮೂಲವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ, ಪ್ರತಿಯೊಬ್ಬ ನಾಗರಿಕರೂ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಪ್ರಕೃತಿ ರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕ್ಲೀನ್ ಸಾಗರ್ - ಸೇಫ್ ಸಾಗರ್ ಸ್ವಚ್ಛತಾ ಅಭಿಯಾನದಲ್ಲಿ ಗೌರವಾನ್ವಿತ ರಾಜ್ಯಪಾಲರು ಭಾಗವಹಿಸಿ, ನಂತರ ಸಮದ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Post a Comment