ಮತಾಂತರ ನಿಷೇಧ ಕಾಯ್ದೆ- ಸಿಎಂಗೆ ನಳಿನ್‍ಕುಮಾರ್ ಕಟೀಲ್ ಅಭಿನಂದನೆ
ಬೆಂಗಳೂರು: ಒತ್ತಾಯ ಮತ್ತು ಬಲವಂತದ ಮತಾಂತರವನ್ನು ನಿಷೇಧಿಸುವ ಮತ್ತು ಶಿಕ್ಷೆಗೆ ಒಳಪಡಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಅಂಗೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸರಕಾರಕ್ಕೆ ತುಂಬು ಹೃದಯದ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಈ ವಿಧೇಯಕವು ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಕಾಪಾಡಲು ಸಹಾಯಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಇಂಥ ವಿಧೇಯಕವನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲೂ ಮತಾಂತರ ದೊಡ್ಡ ಪಿಡುಗಾಗಿತ್ತು. ಅದನ್ನು ತಡೆಯಲು ವಿಧೇಯಕ ಜಾರಿಗೊಳಿಸಿದ್ದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.
ಒತ್ತಾಯ, ಬಲವಂತ ಹಾಗೂ ಆಮಿಷದ ಮೂಲಕ ನಡೆಯುವ ಮತಾಂತರವನ್ನು ನಿಷೇಧಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಗೋಹತ್ಯಾ ನಿಷೇಧವನ್ನು ಈ ಹಿಂದೆಯೇ ಜಾರಿಗೊಳಿಸಲಾಗಿದೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಶಾಸಕರ ತಾಯಿಯೊಬ್ಬರು ಮತಾಂತರ ಆಗಿದ್ದು ನಮ್ಮ ಕಣ್ಣ ಮುಂದಿದೆ. ಉಡುಪಿಯಲ್ಲೂ ಈ ಸಂಬಂಧ ಒಂದು ಆತ್ಮಹತ್ಯೆ ನಡೆದಿತ್ತು. ಅನಂತರ ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಬಲವಂತದ ಮತಾಂತರಕ್ಕೆ ಶಿಕ್ಷೆ ಇರುವ ಕಾರಣ ಒತ್ತಾಯ ಹಾಗೂ ಆಮಿಷದ ಕಾರಣಕ್ಕಾಗಿ ಮತಾಂತರ ಆಗಲಾರದು ಎಂದು ಅವರು ತಿಳಿಸಿದ್ದಾರೆ.
ಬಲವಂತದ ಮತಾಂತರದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಾಗಲಿದೆ. ಬಲವಂತ ಮತ್ತು ಮತಾಂತರದ ಉದ್ದೇಶದಿಂದ ಮದುವೆಯಾದರೆ ಅದು ಅಸಿಂಧುವಾಗಲಿದೆ. ನಮ್ಮ ಶ್ರೇಷ್ಠ ಸಂಸ್ಕøತಿಯನ್ನು ಉಳಿಸಿಕೊಳ್ಳಲು ಈ ವಿಧೇಯಕ ಪೂರಕ. ಇದನ್ನು ಅಂಗೀಕರಿಸಿದ್ದು ಅತ್ಯಂತ ಸಂತಸದ ವಿಚಾರ ಎಂದು ತಿಳಿಸಿದ್ದಾರೆ.
Post a Comment