ವಿದ್ಯಾರ್ಥಿಗಳು ದೇಶ ಕಟ್ಟುವ ಎಂಜಿನೀಯರ್‍ಗಳಾಬೇಕು : ರಾಜಾರಾಮ್ ಚಿಟ್ಟಾ

 ವಿದ್ಯಾರ್ಥಿಗಳು ದೇಶ ಕಟ್ಟುವ ಎಂಜಿನೀಯರ್‍ಗಳಾಬೇಕು : ರಾಜಾರಾಮ್ ಚಿಟ್ಟಾ

ಬೀದರ, ಸೆ. 15ಃ ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಎಂಜಿನೀಯರ್‍ಗಳ ಪಾತ್ರ ಮುಖ್ಯವಾಗಿದ್ದು, ಈ ಕ್ಷೇತ್ರದಲ್ಲಿರುವವರು ಅರ್ಪಣಾ ಭಾವದ ಸೇವೆ ಸಲ್ಲಿಸುವ ಮೂಲಕ ದೇಶ ಕಟ್ಟುವುದಕ್ಕೆ ತಮ್ಮ ಕಾಣಿಕೆ ನೀಡಬೇಕಿದೆ ಎಂದು ನಗರಸಭೆಯ ಸದಸ್ಯರಾದ ರಾಜಾರಾಮ ಚಿಟ್ಟಾ ಹೇಳಿದರು.

ನಗರದ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಯುವ ಘಟಕ ಹಾಗೂ ಸಮರ್ಥ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸರ್.ಎಂ ವಿಶ್ವೇಶ್ವರಯ್ಯನವರ ಜಯಂತಿ, ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ 75 ಕಾರ್ಯಕ್ರಮಗಳಲ್ಲಿ 67ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯನವರು ತತ್ವಬದ್ಧರಾಗಿ ಹಾಗೂ ನೈತಿಕ ತಳಹದಿಯ ಮೇಲೆ ಸಮಾಜದ ಏಳಿಗೆಗಾಗಿ ಹಲವಾರು ಕ್ಷೇತ್ರಗಳಲ್ಲಿ ಕೇವಲ ಭಾರತ ದೇಶವಷ್ಟೆ ಅಲ್ಲ ವಿದೇಶಗಳಲ್ಲಿಯು ಕೂಡ ಕರ್ತವ್ಯ ನಿರ್ವಹಿಸಿ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದರು. ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯನವರ ನಡೆ ನುಡಿ ಮತ್ತು ಆದರ್ಶಗಳನ್ನು ಇಂದಿನ ಯುವ ಎಂಜಿನೀಯರ್‍ಗಳು ತಮ್ಮ ಜೀವನದಲ್ಲಿ ಮತ್ತು ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಹೆಸರಾಂತ ಎಂಜಿನೀಯರ್ ಹಾವಶೆಟ್ಟಿ ಪಾಟೀಲ ಅವರು ಮಾತನಾಡುತ್ತಾ, ವಿಶ್ವೇಶ್ವರಯ್ಯನವರು ಕೆಆರ್‍ಎಸ್ ಡ್ಯಾಂ ನಿರ್ಮಾತೃರಾಗಿ ಮೈಸೂರು ಭಾಗವನ್ನು ಹಸಿರು ಪ್ರದೇಶವನ್ನಾಗಿ ಪರಿವರ್ತಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದರು. ತುಂಗಭದ್ರಾ ಡ್ಯಾಂ ನಿರ್ಮಿಸುವ ಮೂಲಕ ನೀರಾವರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದರು. ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಅಪಾರ ಕೊಡುಗೆಯನ್ನು ನೀಡಿದ ಅವರ ಮೌಲ್ಯಯುತ ಸೇವೆ ಇಂದಿಗೂ ಪ್ರಸ್ತುತವಾಗಿದೆ.

ವಿಶ್ವೇಶ್ವರಯ್ಯನವರು ಕೃಷಿ, ನೀರಾವರಿ, ಸಾಹಿತ್ಯ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಆಳವಾದ ಅದ್ಯಯನ ನಡೆಸಿ ಎಲ್ಲಾ ಕ್ಷೇತ್ರದಲ್ಲಿಯು ಸೇವೆಗೈದಿರುವ ವ್ಯಕ್ತಿಯಾಗಿದ್ದವರು. ಎಂಜಿನಿಯರ್‍ಗಳಿಗೆ ಆದರ್ಶ ಪುರುಷ ಅವರು. ಅವರ ಜನ್ಮ ದಿನವೆಂದರೆ ಹಬ್ಬದ ದಿನ. ಕೇವಲ ಭಾರತವಷ್ಟೆ ಅಲ್ಲ ಕೆಲ ದೇಶಗಳಲ್ಲಿಯು ಕೂಡ ಇವತ್ತಿನ ದಿನ ಹಬ್ಬದ ದಿನದಂತೆ ಆಚರಿಸುತ್ತಾರೆ ಅದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಶಿವಶಂಕರ ಟೋಕರೆ ಅವರು ಮಾತನಾಡುತ್ತಾ, ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮ ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡೊರುವುದು ಅವಿಸ್ಮರಣೀಯವಾದದ್ದು. ಇಂದಿನ ಯುವ ಪಿಳಿಗೆಗೆ ಈ ತರಹದ ಆದರ್ಶ ಪುರುಷರ ಜೀವನದ ಬಗ್ಗೆ ಮನವರಿಕೆ ಮಾಡಿಕೊಡುವುದು ಬಹಳ ಅವಶ್ಯವಾಗಿದೆ ಈ ನಿಟ್ಟಿನಲ್ಲಿ ಮಾತೃಭೂಮಿ ಸಂಸ್ಥೆಯವರು ಬಹಳ ಒಳ್ಳೆಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ನಡೆಸಿಕೊಂಡು ಬರುವುದರ ಜೊತೆಗೆ ಹಳ್ಳಿಗಳಲ್ಲಿ ವಿಶೇಷವಾಗಿ ಯುವಕರಲ್ಲಿ ದೇಶಪ್ರೇಮ ಮೂಡಿಸುತ್ತಿರುವ ಒಳ್ಳೆಯ ಕೆಲಸ ಎಂದು ಹೇಳಿದರು.

ಮಾತೃಭೂಮಿ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಗುರುನಾಥ ರಾಜಗೀರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಜಿಲ್ಲೆಯಾದ್ಯಂತ 75 ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 67ನೇ ಉಪನ್ಯಾಸ ಕಾರ್ಯಕ್ರಮ ಹಾಗೂ ಸರ್.ಎಂ ವಿಶ್ವೇಶ್ವರಯ್ಯ ಜನ್ಮದಿನದ ನಿಮಿತ್ತ ಎಂಜಿನೀಯರ್ ದಿನಾಚಾರಣೆ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಸರಕಾರಿ ಐ.ಟಿ.ಐ ಕಾಲೇಜಿನಲ್ಲಿ ನಡೆದಿದೆ. 75ನೇ ಕಾರ್ಯಕ್ರಮ ಬಹಳ ವಿಶೇಷವಾಗಿ & ಅರ್ಥಪೂರ್ಣವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬಾಬುರಾವ  ಪ್ರಭಾಜಿ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಾಬು ಕಾರ್ಯಕ್ರಮ ನಿರೂಪಿಸಿದರು ಮತ್ತು ರಮೇಶ ಪೂಜಾರಿ ವಂದಿಸಿದರು.

ಕಾಲೇಜಿನ ಎಲೆಕ್ಟ್ರಾನಿಕ್ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕೂಡಿ ತಯಾರಿಸಿದ ಎಲೆಕ್ಟ್ರಿಕ್ ವೈರ್‍ಲೆಸ್ ವೆಹಿಕಲ್ ಚಾರ್ಜರ್ ( ಹೊಸ ಆವಿಷ್ಕಾರ) ಹೊಸ ವಾಹನವನ್ನು ಲೋಕಾರ್ಪಣೆಗೊಳಿಸುವ ಮೂಲಕ ಎಂಜಿನೀಯರ್ ದಿನಾಚಾರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು

Post a Comment

Previous Post Next Post