*ರಾಜ್ಯ ಸರ್ಕಾರದ ವಿರುದ್ಧದ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು, ,,,,,

*ರಾಜ್ಯ ಸರ್ಕಾರದ ವಿರುದ್ಧದ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:*

*ಬಿ.ಕೆ. ಹರಿಪ್ರಸಾದ್*

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಕಾರಣ ಅವರು ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದಾರೆ. 

ಬೊಮ್ಮಾಯಿ ಅವರು ಸದಾ ಉತ್ತರ ಪ್ರದೇಶ ಮಾಡೆಲ್ ತರುವುದಾಗಿ ಹೇಳುತ್ತಿದ್ದರು. ಈಗ ಮಹದೇವಪುರ, ಬೊಮ್ಮನಹಳ್ಳಿ ಸೇರಿದಂತೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಕುಸಿದಿದೆ. ಬೆಂಗಳೂರಿನ ಇತಿಹಾಸದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನರನ್ನು ಸಾಗಿಸಲು ಟ್ರ್ಯಾಕ್ಟರ್ ಬಳಸಿರಲಿಲ್ಲ. 

ಈ ಮಳೆಯ ಮೂಲಕ ಬಿಜೆಪಿ ಸರ್ಕಾರ ಈ ರಾಜ್ಯವನ್ನು ಹಾಗೂ ಬೆಂಗಳೂರಿನ ಆಡಳಿತ ನಡೆಸಲು ತಾವುಗಳು ಯೋಗ್ಯರಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಬೆಂಗಳೂರಿನಲ್ಲಿ ಭಾರಿ ಮಳೆ ಬರುವುದು ಹೊಸತಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ರಸ್ತೆಗಳ ಪಕ್ಕದಲ್ಲಿ ಚರಂಡಿ ಮಾಡುತ್ತಿದ್ದರು. ಬಿಜೆಪಿ ಬಂದಮೇಲೆ ರಸ್ತೆಗಳ ಮೇಲೆ ಬಿಜೆಪಿಯವರು ಚರಂಡಿ ಮಾಡಿದ್ದಾರೆ ಎಂದು ಈ ಮಳೆಯ ಮೂಲಕ ತಿಳಿದಿದೆ. ಎಲ್ಲ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದು ಬೆಂಗಳೂರು ನಗರದ ಅವೈಜ್ಞಾನಿಕ ಆಡಳಿತಕ್ಕೆ ಸಾಕ್ಷಿ. 

ಇನ್ನು ವಿಶ್ವದಲ್ಲೇ ಖ್ಯಾತಿ ಪಡೆದಿರುವ ಐಟಿ ಬಿಟಿ ಕಂಪನಿಗಳು ಇರುವ ಪ್ರದೇಶಗಳಲ್ಲಿ, ಯಾವುದೇ ಮೂಲಭೂತ ಸೌಕರ್ಯವನ್ನು ಈಸರ್ಕಾರ ನೀಡಿಲ್ಲ. ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ ಅಪ್ ನಗರ, ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ಬೆಂಗಳೂರು ನಗರಕ್ಕೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿರುವುದು ನೋಡಿದರೆ ಉತ್ತರ ಪ್ರದೇಶ ಮಾಡೆಲ್ ಜಾರಿ ಆಗುತ್ತಿರುವುದು ಗೊತ್ತಾಗುತ್ತದೆ.

ಇನ್ನು ಈ ಭಾಗದ ಶಾಸಕರ ವರ್ತನೆ ನೋಡಿದರೆ ಇವರು ಅಭಿವೃದ್ಧಿ ಕಡೆ ಯೋಚಿಸುವವರಲ್ಲ ಎಂಬುದು ತಿಳಿಯುತ್ತದೆ. ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಿತ್ತು. ಅದನ್ನು ಮಾಡಿಲ್ಲ. ಮುಖ್ಯಮಂತ್ರಿಗಳು ಮೋದಿ ಹಾಗೂ ಶಾ ಅವರಿಗೆ 40% ಕಮಿಷನ್ ಹಣ ರವಾನಿಸುತ್ತಿದ್ದು, ನನಗೆ ಯಾವ ತೊಂದರೆ ಇಲ್ಲ ಎಂದು ನಿಶ್ಚಿಂತೆಯಿಂದ ಇದ್ದಾರೆ.

ಜನರ ದುಡ್ಡಲ್ಲಿ 40% ಕಮಿಷನ್ ಹೊಡೆದರೆ ಬೆಂಗಲೂರು ತತ್ತರಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇವಲ ಐಟಿ- ಬಿಟಿ ಕ್ಷೇತ್ರದಲ್ಲಿ ಮಾತ್ರ ಈ ಪರಿಸ್ಥಿತಿ ಇಲ್ಲ. ಬೆಂಗಳೂರಿನ 600 ಗುಡಿಸಲು ಪ್ರದೇಶಗಳಲ್ಲಿ ಜನ ತತ್ತರಿಸಿದ್ದು, ಕುಡಿಯಲು ನೀರಿಲ್ಲ, ತಿನ್ನಲು ಅನ್ನವಿಲ್ಲದೆ ಪರದಾಡುತ್ತಿದ್ದಾರೆ. ಆದರೂ ಸರ್ಕಾರ ಮೂಕ ಪ್ರೇಕ್ಷಕರಾಗಿ ನೋಡುತ್ತಿದೆ. ಅಭಿವೃದ್ಧಿ ಮಾಡುವ ಸಂಸ್ಥೆಗಳಿಗೂ ಯಾವುದೇ ಸೌಲಭ್ಯ ನೀಡುವುದಿಲ್ಲ ಎಂಬ ಮನಸ್ಥಿತಿಗೆ ಸರ್ಕಾರ ಬಂದಿದೆ. ಐಟಿ ಬಿಟಿ ಕಂಪನೆಗಳು ಈಗಾಗಲೇ ಸರ್ಕಾರಕ್ಕೆ ಎಚ್ಚರಿಸಿದ್ದು, ನೀವು ಅಗತ್ಯ ಮೂಲಭೂತ ಸೌಕರ್ಯ ನೀಡದಿದ್ದರೆ ಬೆಂಗಳೂರು ತ್ಯಜಿಸುತ್ತೇವೆ ಎಂದು ಹೇಳಿದ್ದಾರೆ. 

ಈಗಾಗಲೇ ಅನೇಕ ಕಂಪನಿಗಳು ಬೆಂಗಳೂರಿನಿಂದ ಕಾಲ್ಕಿತ್ತು ಹೈದರಾಬಾದ್ ಹಾಗೂ ಪುಣೆಗೆ ಸ್ಥಳಾಂತರವಾಗಿದ್ದರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು, ನಾಗರೀಕ ಸಂಸ್ಥೆಗಳು ಸರ್ಕಾರದ ವಿರುದ್ಧ ಪ್ರತಿಭಟಿಸಿ, ಕುಂಭಕರ್ಣ ಸರ್ಕಾರವನ್ನು ನಿದ್ರೆಯಿಂದ ಎಬ್ಬಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

*ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ:*

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಬೆಂಗಳೂರಿಗೆ ಗಂಡಾಂತರ ಕೆಟ್ಟ ಗಳಿಗೆ ಆರಂಭವಾಗುತ್ತದೆ. 2008-13ರವರೆಗೆ ಬೆಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಾಗಲೂ ಇದೇ ಅವ್ಯವಸ್ಥೆ ತಾಂಡವವಾಡಿತ್ತು. ಕುಡಿಯುವ ನೀರಿಗಾಗಿ ಕಾವೇರಿ ನೀರನ್ನು ನಾಲ್ಕು ಹಂತಗಳಲ್ಲಿ ಪೂರೈಸಲಾಗಿತ್ತು. ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಸೇವೆ ನೀಡಿದ್ದು ಕಾಂಗ್ರೆಸ್.

ಬೆಂಗಳೂರಿನಲ್ಲಿರುವ ಎಲ್ಲ ಫ್ಲೈ ಓವರ್ ಮಾಡಿದ್ದು, ಸ್ವಚ್ಛ ಬೆಂಗಳೂರು ತಂದಿದ್ದು ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಇರುವವರೆಗೂ ಕಸದ ಸಮಸ್ಯೆ ಇರಲಿಲ್ಲ. ಬಿಜೆಪಿ ಬಂದ ದಿನದಿಂದ ಕಸದ ಸಮಸ್ಯೆ ಹೆಚ್ಚಾಯ್ತು. ಆಟದ ಮೈದಾನ, ಉದ್ಯನವನ, ಇಂದಿರಾ ಕ್ಯಾಂಟೀನ್, ಟೆಂಡರ್ ಶ್ಯೂರ್ ರಸ್ತೆಗಳು, ವೈಟ್ ಟ್ಯಾಪಿಂಗ್ ರಸ್ತೆ ಆರಂಭವಾಗಿದ್ದು ಕಾಂಗ್ರೆಸ್ ಅವಧಿಯಲ್ಲಿ.

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಬಂದಿದ್ದು ಕಾಂಗ್ರೆಸ್ ಸರ್ಕಾರದಿಂದ. ಬೆಂಗಳೂರು ಐಟಿ ಬಿಟಿ ಬಿರುದು ಪಡೆದಿದ್ದು ಕಾಂಗ್ರೆಸ್ ನಿಂದ. ಬೆಂಗಳೂರಿನಲ್ಲಿ ಕೈಗಾರಿಕ ಪ್ರದೇಶ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ರಾಜ್ಯದಲ್ಲಿ ಹೆಚ್ಎಎಲ್, ಬಿಇಎಲ್, ಸೇರಿದಂತೆ ಅನೇಕ ಸಂಸ್ಥೆ ತಂದಿದ್ದು, ವಿಧಾನ ಸೌಧ, ವಿಕಾಸ ಸೌಧ ಕಟ್ಟಿದ್ದು ಕಾಂಗ್ರೆಸ್. ನಾವು ಕಟ್ಟಿದ ಬೆಂಗಳೂರನ್ನು ಇಂದು ಬಿಜೆಪಿಯವರು ನಮ್ಮ ಮುಂದೆ ನಾಶ ಮಾಡುತ್ತಿದ್ದಾರೆ.

ಇಂದು ಐಟಿ ಕ್ಷೇತ್ರದವರು ಬೆಂಗಳೂರು ತ್ಯಜಿಸುವ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ಆದರೆ ಲಕ್ಷಾಂತರ ಜನರ ಉದ್ಯೋಗ ನಾಶವಾಗುತ್ತದೆ. ನಾವು ಈ ಹಿಂದೆ ರಾಜಕಾಲುವೆಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ಸಿದ್ದರಾಮಯ್ಯ ಅವರ ಕಾಲದಲ್ಲಿ 400 ಕಿ.ಮೀ ಉದ್ದದಷ್ಟು ರಾಜಕಾಲುವೆ ಅಭಿವೃದ್ಧಿ ಮಾಡಿದ್ದೆವು.

ಮಪಖ್ಯಮಂತ್ರಿಗಳು ಕಳೆದ ವರ್ಷ 1500 ಕೋಟಿ ಘೋಷಣೆ ಮಾಡಿದ್ದರು, ಆದರೆ ಕೊಟ್ಟಿದ್ದು 400 ಕೋಟಿ. ಇದರಲ್ಲಿ ಈಗ ಟೆಂಡರ್ ಕರೆಯುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಐದು ವರ್ಷ ಆಡಳಿತ ಮಾಡಿದ ಬಿಜೆಪಿ 14 ಕಟ್ಟಡಗಳನ್ನು ಅಡವಿಟ್ಟರು. ನಂತರ ನಮ್ಮ ಸರ್ಕಾರ ಬಂದ ನಂತರ ನಾವು ಆ ಕಟ್ಟಡ ಬಿಡಿಸಿಕೊಳ್ಳಲು ಪ್ರಾರಂಭಿಸಿದೆವು. ನಮ್ಮ ಅವಧಿಯಲ್ಲಿ ಗುತ್ತಿಗೆದಾರರಿಗೆ ಶೀಘ್ರವಾಗಿ ಬಿಲ್ ಪಾವತಿ ಆಗುತ್ತಿತ್ತು. ಆದರೆ ಇವರ ಅವಧಿಯಲ್ಲಿ 3 ವರ್ಷ ಆದರೂ ಬಿಲ್ ಪಾವತಿ ಆಗಿಲ್ಲ. ಗುತ್ತಿಗೆದಾರರಿಗೆ ಆರ್ ಟಿಜಿಎಸ್ ಮೂಲಕ ಪಾವತಿ ಮಾಡಲಾಗುತ್ತಿತ್ತು. ಈಗ ಆ ರೀತಿ ಆಗುತ್ತಿಲ್ಲ.

ರಾಜ್ಯದಲ್ಲಿ 40% ಕಮಿಷನ್ ಆರಂಭವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಚಾಚಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಆದರೆ ಇಂದು ದಿನಸಿ ಅಂಗಡಿಯಲ್ಲಿ ಬೆಲೆ ದರ ನಿಗದಿಯಂತೆ ಸರ್ಕಾರಿ ಕಚೇರಿ ಹುದ್ದೆಗಳಿಗೂ ದರ ನಿಗದಿಯಾಗಿದೆ. ಈ ಸರ್ಕಾರದಲ್ಲಿ ಲಂಗು ಲಗಾಮು ಇಲ್ಲದೆ ಭ್ರಷ್ಟಾಚಾರ ನಡೆಯುತ್ತಿದೆ. ಇದು ಇರುವವರೆಗೂ ಜನರಿಗೆ ನೆಮ್ಮದಿ ಸಿಗುವುದಿಲ್ಲ.

ಮಳೆ ಬರುವುದು ಸಹಜ. ಆದರೆ ಬಂದ ನಂತರ ಸರ್ಕಾರ ಯಾವ ರೀತಿ ವರ್ತಿಸುತ್ತದೆ ಎಂಬುದು ಮುಖ್ಯ. ಈ ಸರ್ಕಾರ ಯಾವುದೇ ಕೆಲಸ ಮಾಡದೇ, ಜನರಿಗೆ ಕಷ್ಟ ನೀಡುತ್ತಿದೆ. ಈ ಸರ್ಕಾರ ಕಿತ್ತೊಗೆಯದಿದ್ದರೆ ಬೆಂಗಳೂರಿಗೆ ಭವಿಷ್ಯ ಇರುವುದಿಲ್ಲ. ಬೆಂಗಳೂರಿನ ಘನತೆ ನಾಶವಾಗುತ್ತದೆ. ಇವರು ಬೆಂಗಳೂರನ್ನು ಸಾಯುವ ನಗರವನ್ನಾಗಿ ಮಾಡುತ್ತಿದ್ದಾರೆ. ಇವರಿಗೆ ಜನ ತಕ್ಕ ಶಿಕ್ಷೆ ನೀಡಬೇಕು.

ಇಷ್ಟೆಲ್ಲಾ ಅನಾಹುತ ಆಗಿದ್ದರೂ ಪ್ರಧಾನಿಗಳು ಸೌಜನ್ಯಕ್ಕಾದರೂ ಬೆಂಗಳೂರಿನ ಬಗ್ಗೆ ತಿರುಗಿ ನೋಡಿಲ್ಲ. ಆದರೆ ಚುನಾವಣೆಗೆ ಮಾತ್ರ ಬರುತ್ತಾರೆ. ಚುನಾವಣೆ ಹಿನ್ನೆಲೆಯಲ್ಲಿ ಇನ್ನುಮುಂದೆ ಪ್ರತಿ ತಿಂಗಳು ಮಾವನ ಮನೆಗೆ ಬಂದಂತೆ ರಾಜ್ಯಕ್ಕೆ ಬರುತ್ತಾರಂತೆ. ಜಿಎಸ್ ಟಿ ಪಾಲು ಹಂಚಿಕೆ ವಿಚಾರದಲ್ಲಿ 1 ಲಕ್ಷ ಕೋಟಿ ಮೋಸ ಮಾಡಿದ್ದಾರೆ. 25 ಸಂಸದರು ಯಾವುದೇ ಪ್ರಯೋಜನೆ ಇಲ್ಲ. ಇವರು ಬೆಂಕಿ ಹಚ್ಚುವುದು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ. 

ರಾಜ್ಯದಲ್ಲಿ ಯಾವುದೇ ಸಂಕಷ್ಟ ಎದುರಾದಾಗಲೂ ಪ್ರಧಾನಿಗಳು, ಕೇಂದ್ರ ಸರ್ಕಾರ ನೆರವಿಗೆ ಬಂದಿಲ್ಲ. ಚುನಾವಣೆಗೆ ಮಾತ್ರ ತಿಂಗಳಿಗೊಮ್ಮೆ ಬರುತ್ತೇವೆ ಎಂದು ಹೇಳುತ್ತಾರೆ. ಬೆಂಗಳೂರಿನ ಬಗ್ಗೆ ಕಾಳಜಿ ಇದ್ದರೆ, ತಕ್ಷಣ ರಾಜೀನಾಮೆ ಕೊಟ್ಟು ಹೋಗಬೇಕು.

*ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್:* 

ರಾಜ್ಯ ಸರ್ಕಾರ ಬೆಂಗಳೂರಿನ ಜನರಿಗೆ ನರಕ ದರ್ಶನ ಮಾಡಿಸುತ್ತಿದೆ. ಈ ಸರ್ಕಾರಕ್ಕೆ ಬದ್ಧತೆ ಇಲ್ಲ. ಹಲವು ದಿನಗಳಿಂದ ಬೆಂಗಳೂರಿನ ಅನೇಕ ಭಾಗಗಳಲ್ಲಿ ಮಳೆಯಿಂದ ಬೋಟಿನಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ವಿಫಲವಾಗಿದೆ. ಐಟಿ ಬಿಟಿ ಕಂಪನಿಗಳ ಸಂಸ್ಥೆ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಪತ್ರ ಬರೆದು ಬೆಂಗಳೂರು ತ್ಯಜಿಸುವುದಾಗಿ ತಿಳಿಸಿವೆ. ಆದರೂ ರಾಜ್ಯ ಸರ್ಕಾರಕ್ಕೆ ಇದು ಅರ್ಥವಾಗುತ್ತಿಲ್ಲ. ಸಚಿವರುಗಳು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಜನರ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ.

ಈ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಂದು ಬೆಂಗಳೂರಿನ ಉಸ್ತುವಾರಿ ಮಂತ್ರಿಗಳಾಗಿದ್ದಾರೆ. ತಾವು ಸರಿಯಾಗಿ ಕೆಲಸ ಮಾಡಬೇಕು ಅಥಾ ಬೇರೆಯವರಿಗೆ ಅವಕಾಶ ಮಾಡಿಕೊಳ್ಳಬೇಕು. ಅಟಲ್ ಬಿಹಾರಿ ವಾಜಪೇಯಿ ಅವರೇ ವಿಶ್ವದ ನಾಯಕರು ಬೆಂಗಳೂರಿಗೆ ಬರಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದರು. ಆದರೆ ಇಂದು ಜನ ಬೆಂಗಳೂರಿಗೆ ಬರಲು ಹೆದರುತ್ತಿದ್ದಾರೆ. 

ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯವಿಲ್ಲ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಸರ್ಕಾರ ಒಂದು ವರ್ಷದ ಸಾಧನೆಗಾಗಿ ಜನೋತ್ಸವ ಮಾಡುತ್ತಾರಂತೆ. ಇವರಿಗೆ ನಾಚಿಕೆ ಆಗಬೇಕು. ಜನೋತ್ಸವ ಬದಲು ಭ್ರಷ್ಟೋತ್ಸವ ಅಥವಾ ಜನರಿಂದ ಕ್ಷಮೋತ್ಸವ ಮಾಡಬೇಕು. ಯಾವ ಅಭಿವೃದ್ಧಿ ಮಾಡಿದ್ದೀರಿ ಎಂದು ಜನೋತ್ಸವ ಮಾಡುತ್ತಿದ್ದೀರಿ. ನಿಮ್ಮ ಕಾರ್ಯಕ್ರಮ ಭ್ರಷ್ಟಾಚಾರ, ಬೆಲೆ ಏರಿಕೆ, ಇದರ ಉತ್ಯವ ಮಾಡಬೇಕು. ಜನ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಬೆಂಗಳೂರನ್ನು ಸಂಪೂರ್ಣವಾಗಿ ನಾಶ ಮಾಡುವ ಕೆಲಸ ಬಿಜೆಪಿ ಮಾಡಿದೆ.


*ಮಾಜಿ ಸಚಿವ ಕೃಷ್ಣ ಭೈರೇಗೌಡ:*

ಬೆಂಗಳೂರು ಈ ವರ್ಷ ಮಾತ್ರವಲ್ಲ ಕಳೆದ ವರ್ಷವೂ ಭಾರಿ ಮಳೆಗೆ ಮುಳುಗಿತ್ತು. ಆದರೂ ಬಿಜೆಪಿಯಿಂದ ಬೆಂಗಳೂರು ಉಳಿಸಲು ಆಗುತ್ತಿಲ್ಲ. ಬೆಂಗಳೂರು ಉಳಿಸುವ ಬದಲು ಮುಳುಗಿಸುತ್ತಿದ್ದಾರೆ. ಬೆಂಗಳೂರು ಕೇವಲ ನೀರಿನಲ್ಲಿ ಮುಳುಗುತ್ತಿಲ್ಲ, ಬೆಂಗಳೂರಿನ ಘನತೆ, ಖ್ಯಾತಿ, ಗೌರವ ಎಲ್ಲವೂ ಮುಳುಗುತ್ತಿದೆ. ಐಟಿ ಕ್ಯಾಪಿಟಲ್, ಸಿಲಿಕಾನ್ ಕ್ಯಾಪಿಟಲ್, ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಲ್ಲವೂ ಮುಳುಗುತ್ತಿದೆ. ಬೆಂಗಳೂರು ಉದ್ಯೋಗಗಳು, ಜನರ ಜೀವನ, ಬೆಂಗಳೂರಿನಲ್ಲಿ ಉತ್ಪಾದನೆ, ತೆರಿಗೆ ಆದಾಯ ಎಲ್ಲವೂ ಮುಳುಗುತ್ತಿದೆ. ದೇಶದ ಆಸ್ತಿಯಾಗಿ, ಪ್ರಪಂಚದ ಆಕರ್ಷಕವಾಗಿದ್ದ ಬೆಂಗಳೂರು ಮುಳುಗುತ್ತಿದೆ. ಇದಕ್ಕೆ ನೇರ ಕಾರಣ ಬಿಜೆಪಿಯ ದುರಾಡಳಿತ, 40% ಸರ್ಕಾರ ಬೆಂಗಳೂರನ್ನು, ಜನರ ಜೀವನ ಬಲಿ ಪಡೆಯುತ್ತಿದೆ.

ಬೆಂಗಳೂರು ರಾತ್ರೋರಾತ್ರಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲಿಲ್ಲ. ನೆಹರೂ ಅವರು ಎಲ್ಲ ವಿಜ್ಞಾನ ತಂತ್ರಜ್ಞಾನ ಕೇಂದ್ರಗಳನ್ನು ಬೆಂಗಳೂರಿನಲ್ಲಿ ತೆರೆದರು. ಕಾರಣ ನೆಹರೂ ಅವರು ಬೆಂಗಳೂರನ್ನು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ರಾಜಧಾನಿಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು. ಹೀಗಾಗಿ ಹೆಚ್ಎಎಲ್, ಇಸ್ರೋ, ಬೆಮೆಲ್ ಬಿಇಎಲ್ ಸೇರಿದಂತೆ ಎಲ್ಲವನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದರು.


ಇಲ್ಲಿ ಇಂಜಿನಿಯರ್ ಕಾಲೇಜು ಬಂದ ನಂತರ 1991ರಲ್ಲಿ ಮನಮೋಹನ್ ಸಿಂಗ್ ಅವರು ಜಾಗತೀಕರಣಕ್ಕೆ ಅವಕಾಶ ನೀಡಿದರು. ಹೀಗೆ ಕಾಂಗ್ರೆಸ್ ಸರ್ಕಾರಗಳು ಈ ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದವು. 50-60 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರದ ಪರಿಶ್ರಮ ಕೊಡುಗೆಯಿಂದ ಹಾಗೂ ಜನರ ಪರಿಶ್ರಮದಿಂದ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿತ್ತು. 

2018ರ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆ ತೆಗೆದುನೋಡಿ. ಬೆಂಗಳೂರನ್ನು ಅಂತಾರಾಷ್ಟ್ರೀಯ ನಗರವನ್ನಾಗಿ ಮೂಲಭೂತ ಸೌಕರ್ಯ ನೀಡುವುದಾಗಿ ಭರವಸೆ ನೀಡಿದ್ದರು. ಮೂರು ವರ್ಷಗಳ ನಂತರ ಬೆಂಗಳೂರಿಗೆ ಅವರ ಕೊಡುಗೆ ದುರಾಡಳಿತ, 40% ಭ್ರಷ್ಟಾಚಾರ ಮಾತ್ರ. ಅವರು ಈ ಅವಧಿಯಲ್ಲಿ ಒಂದು ಫ್ಲೈಓವರ್, ಮೂಲಭೂತ ಸೌಕರ್ಯ, ನೀಡಿದ್ದಾರಾ? ಮುಖ್ಯಮಂತ್ರಿಗಳು ಬೆಂಗಳೂರಿಗೆ 8 ಸಾವಿರ ಕೋಟಿ ಅನುದಾನ ನೀಡಿರುವುದಾಗಿ ಹೇಳುತ್ತಾರೆ. ಆ ಅನುದಾನಗಳೆಲ್ಲವೂ ಎಲ್ಲಿ ಹೋಗಿದೆ? ಈ ಹಣ ಬಿಜೆಪಿ ಮಂತ್ರಿ, ಶಾಸಕರ ಜೇಬಿಗೆ ಹೋಗಿದೆ. 

ಇವರಿಗೆ ಕೊಟ್ಟ ಅನುದಾನ ರಾಜಕಾಲುವೆಗೆ ಹೋಗುತ್ತಿಲ್ಲ, ಹಳೇ ಕಲ್ಲು, ಹೊಸ ಬಿಲ್ಲು ಎಂಬಂತೆ ಹಣ ಮಾಡಲು ಅನಗತ್ಯ ಕೆಲಸಕ್ಕೆ ಬಳಸುತ್ತಿದ್ದಾರೆ. ಲೂಟಿ ಮಾಡಲು ಇವರಿಗೆ ಬೆಂಗಳೂರು ಬೇಕಾಗಿದೆ. 3 ವರ್ಷದಿಂದ ಬೆಂಗಳೂರು ಮುಳುಗುತ್ತಿದೆ. ಆದರೂ ಏನು ಮಾಡಿದ್ದಾರೆ? ಅನೇಕ ಐಟಿ ಕಂಪನಿಗಳು ಬೆಂಗಳೂರಿಗೆ ಬರದೇ, ಹೈದರಾಬಾದ್, ಪುಣೆ ಕಡೆ ಮುಖ ಮಾಡಿವೆ. ಕಾರಣ ಬಿಜೆಪಿ ದುರಾಡಳಿತಕ್ಕೆ ಸಿಲುಕಿ ಬೆಂಗಳೂರು ನರಳುತ್ತಿದೆ. ಬೆಂಗಳೂರಿನಲ್ಲಿ ನರಕ ದರ್ಶನವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಯಾರು ಬೆಂಗಳೂರಿಗೆ ಬರುತ್ತಾರೆ? ಬೆಂಗಳೂರನ್ನು ಕಾಪಾಡುವವರೆ ಇಲ್ಲದಾಗಿ ಹೊಸ ಉದ್ಯೋಗ ಸಿಗುತ್ತಿಲ್ಲ.

ರಾಜ್ಯದ ಇತಿಹಾಸದಲ್ಲಿ ಸರ್ಕಾರದ ದುರಾಡಳಿತದಿಂದ ಬೇರೆ ರಾಜ್ಯಕ್ಕೆ ಹೋಗುತ್ತೇವೆ ಎಂದು ಐಟಿ ಕಂಪನಿಗಳು ಎಚ್ಚರಿಕೆ ಕೊಟ್ಟ ಉದಾಹರಣೆ ಇಲ್ಲ. 2-3 ದಿನಗಳಲ್ಲಿ 250 ಕೋಟಿ ನಷ್ಟವಾಗಿದೆ. 6 ಮಂದಿ ಪ್ರಾಣ ಬಲಿಯಾಗಿದೆ. ಬಿಜೆಪಿ ದುರಾಡಳಿತಕ್ಕೆ ಬೆಂಗಳೂರು ಬಲಿಯಾಗುತ್ತಿದೆ. ಕಂಪನಿಗಳು ಬೆಂಗಳೂರು ಬಿಟ್ಟು ಹೋದರೆ ಬೆಂಗಳೂರಿನ ಸ್ಥಿತಿ ಏನಾಗುತ್ತದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ನಗರ ಬೆಂಗಳೂರು.

ಬೆಂಗಳೂರು ಹೊರ ದೇಶಗಳಿಂದ ನಮ್ಮ ದೇಶಕ್ಕೆ ಲಕ್ಷಾಂತರ ಕೋಟಿ ಆದಾಯ ತಂದುಕೊಡುತ್ತಿದೆ. ತೆರಿಗೆ ಪಾವತಿಯಲ್ಲೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಬಿಜೆಪಿಯವರು ಡಬಲ್ ಇಂಜಿನ್ ಆಡಳಿತ ಎಂದು ಹೇಳಿ ಬೆಂಗಳೂರು ಭವಿಷ್ಯವನ್ನೇ ನಾಶ ಮಾಡುತ್ತಿದ್ದಾರೆ. ನಾವು ಬೆಳೆಸಿದ ಬೆಂಗಳೂರನ್ನು ಪೈಶಾಚಿಕ ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ.

ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ 1500 ಕೋಟಿ ಪರಿಹಾರ ಘೋಷಣೆ ಮಾಡಿದ್ದರು. ಅದರಲ್ಲಿ ಎಷ್ಟು ಖರ್ಚಾಗಿದೆ? ಎಷ್ಟು ರಾಜಕಾಲುವೆ ಅಭಿವೃದ್ಧಿಯಾಗಿದೆ? ಬೆಂಗಳೂರು ಉಸ್ತುವಾರಿ ಸಚಿವರ ನೇಮಕ ಯಾಕೆ ಸಿಗುತ್ತಿಲ್ಲ? ಕಾರಣ ಬಿಜೆಪಿ ಆಂತರಿಕ ಕಚ್ಚಾಟ ಕಾರಣ. 

*ಸಂಸದ ಡಿ.ಕೆ. ಸುರೇಶ್*

ಬೆಂಗಳೂರು ಸ್ಥಿತಿ ನೋಡಿದರೆ ಏನೆಂದು ಹೇಳಬೇಕು ತೋಚುತ್ತಿಲ್ಲ. ಹೀಗಾಗಿ ನಮ್ಮ ಅಧ್ಯಕ್ಷರು ಬೆಂಗಳೂರಿನ ಸ್ಥಿತಿ ಗೋವಿಂದಾ ಗೋವಿಂದ ಎಂದು ಕರೆದಿದ್ದಾರೆ. ಅಯ್ಯಯ್ಯೋ ಎಂದು ಬಾಯಿ ಬಡೆದುಕೊಂಡರೂ ಈ ಬಿಜೆಪಿ ಸರ್ಕಾರಕ್ಕೆ ಅರ್ಥವಾಗುವುದಿಲ್ಲ ಅಂತಹ ಸ್ಥಿತಿಗೆ ತಲುಪಿದ್ದೇವೆ. ಬೆಂಗಳೂರಿಗೆ ಇದ್ದ ಕೀರ್ತಿಯನ್ನು ಮಣ್ಣು ಪಾಲು ಮಾಡಿರುವುದರ ವಿರುದ್ದ ಹೋರಾಟ ಮಾಡುತ್ತಿದ್ದೇವೆ. 

ಬೆಂಗಳೂರಿನ ಇತಿಹಾಸ, ಯಾವ ಸರ್ಕಾರಗಳೇ ಆದರೂ ಬೆಂಗಳೂರನ್ನು ಹೃದಯದಂತೆ ಕಾಪಾಡಿಕೊಂಡು ಬಂದಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರ ಹಗರಣ, ಕಮಿಷನ್ ಗಾಗಿ ಬೆಂಗಳೂರು ಮಾರಾಟಕ್ಕೆ ಇಟ್ಟಿದ್ದಾರೆ. ಅವರು ಅದಿಕಾರದಲ್ಲಿ ಶಾಶ್ವತವಾಗಿ ಇರುವುದಿಲ್ಲ ಎಂದು ಗೊತ್ತಿದೆ. ಆದರೆ ಬೆಂಗಳೂರು ಭವಿಷ್ಯ, ನಾಗರೀಕರು, ಯುವಕರ ಭವಿಷ್ಯವನ್ನು ಮಣ್ಣುಪಾಲು ಮಾಡುತ್ತಿದ್ದಾರೆ ಎಂದು ಈ ಹೋರಾಟದ ಮೂಲಕ ಎಛ್ಚರಿಕೆ ನೀಡಬೇಕಿದೆ. ನಮ್ಮ ಶಾಸಕರು ಆಗಾಗ್ಗೆ ನಮಗೆ ಅನುದಾನದಲ್ಲಿ ಅನ್ಯಾಯ ಆಗಿದೆ ಎಂದು ಹೇಳುತ್ತಾರೆ. 

ಕಾಂಗ್ರೆಸ್ ಶಆಸಕರು ಕಡಿಮೆ ಅನುದಾನ ಪಡೆದರು ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಿಜೆಪಿ ಶಾಸಕರು 40, 50% ಕಮಿಷನ್ ಪಡೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಕಮಿಷನ್ ಹಿಂದೆ ಬಿದ್ದಿಲ್ಲ. ಇಂದು ಬೆಂಗಳೂರು ಸಂಪೂರ್ಣವಾಗಿ ಮುಳಗಡೆ ಆಗುವ ಪರಿಸ್ಥಿತಿ ನಿರ್ಮಿಸಿದ್ದು, ಒಥ್ತುವರಿ ತೆರವುಗೊಳಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ರಾಜಕಾಲುವೆಗಳನ್ನು ಅಭಿವೃದ್ಧಿ ಮಾಡಿದ ನಂತರ ಈ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಬೆಂಗಳೂರು ಫೌಂಡೇಶನ್ ಸಂಸ್ಥೆ ನಮ್ಮ ಸರ್ಕಾರದ ಅವಧಿಯಲ್ಲಿ ಸೇತುವೆ ಕಟ್ಟಲು ಹೋದರೆ ವಿರೋಧ ವ್ಯಕ್ತಪಡಿಸುತ್ತಿತ್ತು. ರಸ್ತೆ ಗುಂಡಿ ಲೆಕ್ಕ ಹಾಕುತ್ತಿದ್ದರು. ಈಗ ಬೆಂಗಳೂರು ಮುಳುಗಿದೆ ಯಾರನ್ನು ಕೇಳುತ್ತೀರಿ? ನಿಮ್ಮ ಬೆಂಗಳೂರಿನ ಪ್ರೀತಿ ಎಲ್ಲಿ ಹೋಗಿದೆ? ಬೆಂಗಳೂರಿನ ಬಗ್ಗೆ ನಿಮ್ಮ ಕಾಳಜಿ ಏನು? ಮಾನ್ಯ ಪ್ರಧಾನಿಗಳಿಗಾಗಿ ಎಲ್ಲ ಶಾಸಕರು ಸಂಸದರು ಕಸ ಎತ್ತಿ ಪೋಟೋ ಹಾಕಿಕೊಳ್ಳುತ್ತಿದ್ದರು. 

ನಿಮ್ಮ ಸ್ವಚ್ಛ ಬೆಂಗಳೂರು ಹೆಸರಲ್ಲಿ ಮಾಧ್ಯಮಗಳ ಮುಂದೆ ಪ್ರಚಾರ ಪಡೆದಿದ್ದರು. ಈಗ ಬೆಂಗಳೂರು ಮುಳುಗಿ ಕಸ ಕೊಳೆತು ನಾರುತ್ತಿದೆ. ಈಗ ಎಲ್ಲಿ ಹೋಗಿದ್ದೀರಿ? ಕಳೆದ 2 ವರ್ಷದಿಂದ ನೀವು ಪ್ರಶ್ನೆ ಮಾಡುತ್ತಿಲ್ಲ ಯಾಕೆ? ಶಾಸಕರು, ಬಿಬಿಎಂಪಿ ಸದಸ್ಯರನ್ನು ಬಿಜೆಪಿ ಹರಾಜು ಮಾಡಿ ಖರೀದಿ ಮಾಡಿದ್ದರು. ಈಗ ನಿಮ್ಮನ್ನು ಹರಾಜು ಹಾಕಿದ್ದಾರಾ? ಮಾಧ್ಯಮ ಸ್ನೇಹಿತರು ಎಚ್ಛೆತ್ತು ಬೆಂಗಳೂರು ರಕ್ಷಿಸಬೇಕಿದೆ. ನೀವು ನಮಗೆ ಆಧಾರಸ್ತಂಭ, ನೀವು ಜವಾಬ್ದಾರಿ ಅರಿತು ಬೆಂಗಳೂರಿಗೆ ಅಂಟಿರುವ ಕಳಂಕವನ್ನು ತೊಡೆದುಹಾಕಬೇಕು.

ಬೆಂಗಳೂರು ಗಾರ್ಬೇಜ್ ಸಿಟಿ, ಭ್ರಷ್ಟಾಚಾರ ಸಿಟಿ ಎಂದರೆ ಅದು ಬೆಂಗಳೂರಿನ ನಾಗರೀಕರಿಗೆ ಆಗುವ ಅಪಮಾನ. ಹಾಗಾಗಿ ಎಲ್ಲರೂ ಎಛ್ಛೆತ್ತು ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ನಾವು ಉತ್ತಮ ಆಡಳಿತ ನೀಡುತ್ತೇವೆ. 

ಬಿಜೆಪಿ ಕಸದಲ್ಲಿ, ರಸ್ತೆ, ರಸ್ತೆ ಗುಂಡಿ, ಸತ್ತ ಹೆಣ ಸುಡಲು ಕಮಿಷನ್ ಪಡೆಯುತ್ತಿದೆ. ಒಂದೆಡೆ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಆದಾಯ ಕುಸಿತ ಸಮಸ್ಯೆಗಳಿವೆ. ಈ ಮಧ್ಯೆ ಈ ಭ್ರಷ್ಟ ವ್ಯವಸ್ಥೆ ಇದೆ. ಈ ಸರ್ಕಾರ ತೆಗೆಯಬೇಕಾದ ಸ್ಥಿತಿ ಇದೆ. 

ಬೆಂಗಳೂರಿನ ಆಡಳಿತದ ಬಗ್ಗೆ, ಮೂಲಸೌಕರ್ಯದ ಬಗ್ಗೆ ಐಟಿ ಕಂಪನಿಗಳು 3 ಪತ್ರ ಬರೆದಿದ್ದು, ಬೆಂಗಳೂರು ತೊರೆಯುವ ಎಚ್ಚರಿಕೆ ನೀಡಿದ್ದಾರೆ. ಆದರೂ ಪ್ರಧಾನಮಂತ್ರಿಗಳ ಕಿವಿಗೆ ಬೀಳುತ್ತಿಲ್ಲ. ಪ್ರಧಾನಿಗಳಾಗಲಿ, ಬಿಜೆಪಿ ನಾಯಕರಾಗಲಿ ಉತ್ತರ ನೀಡಲಿಲ್ಲ. ಪ್ರಧಾನಿಗಳು 400% ಕಮಿಷನ್ ಬಗ್ಗೆ ಮಾತನಾಡಲಿಲ್ಲ. ಕೇಂದ್ರಕ್ಕೆ ಇದರಲ್ಲಿ ಪಾಲು ಇದೆಯಾ? ಆರ್ ಎಸ್ ಎಸ್ ಗೆ ಇದರಲ್ಲಿ ಪಾಲಿದೆಯಾ? ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. 

ಈ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಮಸ್ಯೆ ಉದ್ಭವಿಸಿರುವ ಕಡೆಗಳಲ್ಲಿ ಸ್ವಯಂಪ್ರೇರಿತರಾಗಿ ನೆರವು ನೀಡಬೇಕು ಎಂದು ಮನವಿ ಮಾಡುತ್ತೇನೆ.

Post a Comment

Previous Post Next Post