" ಸ್ವತಃ ಬಿಬಿಎಂಪಿ ಯೇ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ತನ್ನ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹ

ಮಾಧ್ಯಮದ ಆತ್ಮೀಯರೇ,

*" ಸ್ವತಃ ಬಿಬಿಎಂಪಿ ಯೇ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ತನ್ನ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಕೋರಿ"*

ಬೆಂಗಳೂರು ಮಹಾನಗರದಲ್ಲಿ ಇತ್ತೀಚೆಗೆ ಸುರಿದ ನಿರಂತರ
ಮಳೆಯಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯ, ಪೂರ್ವ ವಲಯ ಮತ್ತು ಬೊಮ್ಮನಹಳ್ಳಿ ವಲಯಗಳ ವ್ಯಾಪ್ತಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ.

 ಈ ಭಾಗಗಳಲ್ಲಿ ರಾಜಕಾಲುವೆಗಳನ್ನು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಪ್ರತಿಷ್ಟಿತ ಬಿಲ್ಡರ್ ಸಂಸ್ಥೆಗಳು ನಿರ್ಮಿಸಿದ್ದ ಬೃಹತ್ ವಸತಿ ಸಂಕೀರ್ಣಗಳು, ವಸತಿ ಸಮುಚ್ಛಯಗಳು, ವಾಣಿಜ್ಯ ಸಮುಚ್ಛಯಗಳು, Tech Park ಗಳು, IT / BT ಕಂಪೆನಿಗಳ ಕಾರಣದಿಂದಾಗಿಯೇ ಈ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು ಎಂಬುದು ಈಗಾಗಲೇ ರುಜುವಾತಾಗಿರುವ ವಿಷಯ.

ಅದೇ ರೀತಿ ಕೇವಲ ಖಾಸಗಿ ಸಂಸ್ಥೆಗಳು ಮಾತ್ರವಲ್ಲದೇ, ಸ್ವತಃ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಗಳೂ ಸಹ ತಮ್ಮ ಮಾಲೀಕತ್ವದ ಹತ್ತಾರು ಕಟ್ಟಡಗಳನ್ನು ರಾಜಕಾಲುವೆಗಳ ಮೇಲೆ ಮತ್ತು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಉದಾಹರಣೆಗಳು ನಮ್ಮ ಮುಂದೆ ಇವೆ.

ಉದಾಹರಣೆಗೆ - ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಛೇರಿಗೆ ಕೂಗಳತೆಯ ದೂರದಲ್ಲಿರುವ / ಟೌನ್ ಹಾಲ್ ಗೆ ಅತ್ಯಂತ ಸಮೀಪದಲ್ಲಿರುವ ಜೆ. ಸಿ. ರಸ್ತೆಯಲ್ಲಿ ಕೋರಮಂಗಲ ಕಣಿವೆಯ ಬೃಹತ್ ನೀರುಗಾಲುವೆ (Primary Drain) ಯನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಪಾಲಿಕೆಯೇ ಸ್ವತಃ ಮೂರು ನಾಲ್ಕು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದು, ಕಳೆದ 03 ದಶಕಗಳಿಂದ  ಕಟ್ಟಡಗಳ ಕೆಳಗಿನ ರಾಜಕಾಲುವೆಗಳಲ್ಲಿ ಹೂಳು ತೆಗೆಯಲು ಸಾಧ್ಯವಾಗದೇ ಇರುವ ಕಾರಣ, ಈ ಭಾಗಗಳಲ್ಲಿಯೂ ಸಹ ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುತ್ತಿರುವ ಸತ್ಯವನ್ನು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರಿಗೆ, ಮಾನ್ಯ ಆಡಳಿತಾಧಿಕಾರಿಗಳಿಗೆ ದಾಖಲೆಗಳ ಸಹಿತ ತಿಳಿಸಲಾಗುತ್ತಿದೆ.

ಆದ ಕಾರಣ "ಬೇಲಿಯೇ ಎದ್ದು ಹೊಲ ಮೇಯ್ದಂತೆ" ಎನ್ನುವ ಗಾದೆ ಮಾತಿನಂತೆ , ತನ್ನ ತಪ್ಪುಗಳೇ ಸಾಕಷ್ಟಿದ್ದರೂ ಸಹ ಅದನ್ನು ಮರೆಮಾಚುತ್ತಿರುವ ಪಾಲಿಕೆಯ ಬೃಹತ್ ಮಳೆ ನೀರುಗಾಲುವೆ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರಿಗೆ ಮತ್ತು ಮಾನ್ಯ ಆಡಳಿತಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ಬೃಹತ್ ನೀರುಗಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಪಾಲಿಕೆಯ ಒಡೆತನದ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರು, ಮಾನ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಅಭಿಯಂತರರು, ಬೃಹತ್ ನೀರುಗಾಲುವೆ ಇಲಾಖೆ ಅವರಿಗೆ ಮನವಿ ಪತ್ರಗಳನ್ನು ನೀಡಲಾಗಿದೆ.

     - ರಮೇಶ್ ಎನ್. ಆರ್.
             ಅಧ್ಯಕ್ಷರು,
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ
                ಹಾಗೂ
ಆಡಳಿತ ಪಕ್ಷದ ಮಾಜಿ ನಾಯಕರು, ಬಿಬಿಎಂಪಿ

Post a Comment

Previous Post Next Post