ಕಳಸಾ-ಬಂಡೂರಿ ಕಾಲುವೆ ನಿರ್ಮಾಣ ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ಕೊನೆಗೂ ಅನುಮೋದನೆ

ವದೆಹಲಿ: ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ತಿರುಗಿಸುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಳಸಾ-ಬಂಡೂರಿ ಕಾಲುವೆ ನಿರ್ಮಾಣ ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ಕೊನೆಗೂ ಅನುಮೋದನೆ ನೀಡಿದೆ. ಈ ಮೂಲಕ ಕಳೆದೊಂದು ದಶಕದಿಂದ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕಳಸಾ-ಬಂಡೂರಿ ಯೋಜನೆ ಜಾರಿಯಾಗುವುದು ಖಚಿತವಾಗಿದೆ.ಕೇಂದ್ರ ಜಲ ಆಯೋಗವು ರಾಜ್ಯದ ಪರಿಷ್ಕೃತ ಸಮಗ್ರ ಯೋಜನಾ ವರದಿ(ಡಿಪಿಆರ್)ಗೆ ಒಪ್ಪಿಗೆ ಸೂಚಿಸಿರುವುದರನ್ನು ಪರಿಗಣಿಸಿದ ಜಲಶಕ್ತಿ ಸಚಿವಾಲಯ, ಅನುಮತಿ ನೀಡಿರುವ ನೋಟಿಫಿಕೇಷನ್ ಹೊರಡಿಸಿದೆ. ರಾಜ್ಯ ಸರ್ಕಾರದ ಅನುದಾನದಲ್ಲೇ ಯೋಜನೆ ಅನುಷ್ಠಾನವಾಗುತ್ತಿರುವುದರಿಂದ ಕೇಂದ್ರ ಸಚಿವ ಸಂಪುಟದ ಅನುಮೋದನೆ ಬೇಕಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.


ಗೋವಾ ಸರ್ಕಾರದ ವಿರೋಧಗಳ ಮಧ್ಯೆಯೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಗೃಹ ಸಚಿವ ಅಮಿತ್ ಷಾ ಮೂಲಕ ಒತ್ತಡ ಹೇರಿ ಒಪ್ಪಿಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಗಮನಾರ್ಹ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಯೋಜನೆಗೆ ಸಿಕ್ಕಿರುವುದರಿಂದ ಈ ಭಾಗದಲ್ಲಿ ತನ್ನ ಮತ ಗಳಿಕೆ ಪ್ರಮಾಣ ಹೆಚ್ಚಬಹುದು ಎಂದು ಬಿಜೆಪಿ ಭಾವಿಸಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಗುದ್ದಲಿ ಪೂಜೆ ನಡೆಸಲು ಕಮಲಪಡೆ ತಯಾರಿ ನಡೆಸಿದೆ ಎಂದು ಮೂಲಗಳು 'ವಿಜಯವಾಣಿ'ಗೆ ತಿಳಿಸಿವೆ.


2018ರಲ್ಲಿ ಮಹದಾಯಿ ನ್ಯಾಯಾಧಿಕರಣ ಐತೀರ್ಪ ನೀಡಿದ ಬೆನ್ನಲ್ಲೇ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಆದರೆ, ಡಿಪಿಆರ್​ಗೆ ಆಕ್ಷೇಪ ತೆಗೆದಿದ್ದ ಆಯೋಗ, ವ್ಯಾಪಕ ಅರಣ್ಯ ನಾಶದ ಬಗ್ಗೆ ಕಳವಳ ವ್ಯಕ್ತಪಡಿಸಿ, ಡಿಪಿಆರ್ ತಿದ್ದುಪಡಿ ಮಾಡುವಂತೆ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2022ರ ಜೂನ್ 17ರಂದು ಆಯೋಗಕ್ಕೆ ಪರಿಷ್ಕೃತ ಡಿಪಿಆರ್ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ಆಯೋಗದ ನಿರ್ದೇಶನಗಳನ್ನು ಪಾಲಿಸುವ ಬಗ್ಗೆ ರಾಜ್ಯ ಸರ್ಕಾರ ನವೆಂಬರ್ 23 (ಕಳಸಾ) ಮತ್ತು ನವೆಂಬರ್ 28ರಂದು (ಬಂಡೂರಾ) ವರದಿ ನೀಡಿತ್ತು. ಇವೆಲ್ಲವನ್ನು ಪರಿಗಣಿಸಿದ ಆಯೋಗ ತನ್ನ ಅಂತಿಮ ಅನುಮೋದನೆ ನೀಡಿತು. ಇದಾಗಿ, ಜಲಶಕ್ತಿ ಸಚಿವಾಲಯವೂ ಈಗ ರಾಜ್ಯದ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದೆ.


ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ ಸಾಕು: ಎರಡೂ ಯೋಜನೆಗಳ ಅರಣ್ಯ ಬಳಕೆ ಪ್ರಮಾಣ ತಲಾ 50 ಹೆಕ್ಟೇರ್​ಗಿಂತ ಕಡಿಮೆ ಇರುವುದರಿಂದ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಸಮ್ಮತಿ ಪಡೆದುಕೊಳ್ಳುವ ಅಗತ್ಯ ಬರುವುದಿಲ್ಲ. ರಾಜ್ಯ ಸರ್ಕಾರ ರಾಜ್ಯದ ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ಕಾಮಗಾರಿ ಆರಂಭಿಸಬಹುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ 'ವಿಜಯವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ. ಇದು ಸಣ್ಣ ಯೋಜನೆ ಆಗಿರುವುದರಿಂದ ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ ಸಾಕು ಎನಿಸುತ್ತದೆ. ಆದರೆ, ಈ ಬಗ್ಗೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಪತ್ರ ಬರೆದು, ಜಲ ಆಯೋಗ, ಜಲಶಕ್ತಿ ಸಚಿವಾಲಯದ ಒಪ್ಪಿಗೆ ಮತ್ತು ರಾಜ್ಯ ಡಿಪಿಆರ್ ಬಗ್ಗೆ ಔಪಚಾರಿಕವಾಗಿ ಮಾಹಿತಿ ನೀಡಬೇಕಾಗುತ್ತದೆ ಎಂದು ರಾಜ್ಯ ಕಾನೂನು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.


ನಾವೇ ಅಡಿಗಲ್ಲು ಹಾಕುತ್ತೇವೆ


ಕಳಸಾ-ಬಂಡೂರಿ ಪರಿಷ್ಕೃತ ಸಮಗ್ರ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೆ ಪ್ರಧಾನಿ ನರೇಂದ್ರ ಮೋದಿ ಸಿಹಿ ಸುದ್ದಿ ನೀಡಿದ್ದಾರೆ. ಕೂಡಲೇ ಕಾಮಗಾರಿ ಕೈಗೊಳ್ಳಲು ಕ್ರಮಕೈಗೊಳ್ಳುತ್ತೇವೆ. ನಾವೇ ಅಡಿಗಲ್ಲು ಹಾಕಿ, ದೊಡ್ಡ ಕಾರ್ಯಕ್ರಮ ಮಾಡಿ ಈ ಭಾಗದ ಜನರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆ ಕಲಾಪದಲ್ಲಿ ಹೇಳಿದರು.


ಯೋಜನೆಯ ವಿವರ


ಮೋದಿ, ಷಾ, ಶೆಖಾವತ್​ಗೆ ಅಭಿನಂದನೆ


ಕಳಸಾ ಬಂಡೂರಿ ಯೋಜನೆಗೆ ಅಂತಿಮವಾಗಿ ವಿಸõತ ಯೋಜನಾ ವರದಿಗೆ ಒಪ್ಪಿಗೆ ದೊರೆತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲ ಅಡಚಣೆಗಳು ದೂರವಾಗಿ ಪರಿಸರ ಹಾಗೂ ಅಂತರರಾಜ್ಯ ವ್ಯಾಜ್ಯಗಳನ್ನೂ ಗಮನದಲ್ಲಿರಿಸಿಕೊಂಡು ಡಿಪಿಆರ್ ಸಿದ್ಧಪಡಿಸಿ ಒಪ್ಪಿಗೆಯನ್ನೂ ಪಡೆಯಲಾಗಿದೆ. ಡಿಪಿಆರ್​ನಲ್ಲಿ ಹೈಡ್ರೋಲಜಿ ಮತ್ತು ಅಂತಾರಾಜ್ಯ ವ್ಯಾಜ್ಯಗಳ ಅಂಶಗಳನ್ನೂ ಕ್ಲಿಯರ್ ಮಾಡಿಕೊಳ್ಳಲಾಗಿದೆ. ನಮ್ಮ ದಾರಿ ಸುಗಮವಾಗಿದ್ದು, ಡಿಪಿಆರ್​ನ ಆದೇಶ ಬಂದಕೂಡಲೇ, ಟೆಂಡರ್ ಕರೆದು, ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.


ನಾವು ಇಂಟರ್ ಲಿಂಕ್ ಕೆನಾಲ್​ಗಳನ್ನು ಮಾಡುವಾಗ 8 ರಿಂದ 10 ಪರಿಸರ ಪ್ರಕರಣಗಳನ್ನು ಹಾಕಿದ್ದರು. ಅಷ್ಟೂ ಪ್ರಕರಣಗಳನ್ನು ರಾಜ್ಯ ಗೆದ್ದಿದೆ. ಈ ಯೋಜನೆಯನ್ನು ವನ್ಯಜೀವಿ ಸಂರಕ್ಷಣೆ ಸಂಬಂಧಿಸಿದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ರೀತಿ ಹಲವು ಸವಾಲುಗಳನ್ನು ಎದುರಿಸಿ ಡಿಪಿಆರ್ ಅನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದೇವೆ. ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ, ಕೇಂದ್ರ ಗೃಹ ಸಚಿವ, ಕೇಂದ್ರ ಜಲಸಂಪನ್ಮೂಲ ಸಚಿವ ಶೆಖಾವತ್​ಗೆ ಅಭಿನಂದನೆ ಸಲ್ಲಿಸುವುದಾಗಿ ಬೊಮ್ಮಾಯಿ ಹೇಳಿದರು.


ಸಂಘಟಿತ ಹೋರಾಟಕ್ಕೆ ಜಯ: ರಾಜ್ಯದವರೇ ಆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದಲ್ಲದೆ ರಾಜ್ಯದ ಜಲಸಂಪನ್ಮೂಲ ಸಚಿವರು, ಈ ಭಾಗದ ಸಚಿವರು ಸೇರಿ ಸಂಘಟಿತ ಹೋರಾಟಕ್ಕೆ ಜಯ ಸಂದಿದೆ. 30 ವರ್ಷದ ಹೋರಾಟಕ್ಕೆ ಜಯ ದೊರೆತಿರುವುದು ಇಡೀ ಉತ್ತರ ಕರ್ನಾಟಕದ ರೈತರಿಗೆ ಜಯ ಸಿಕ್ಕಂತಾಗಿದೆ ಎಂದರು.


ಬಿಜೆಪಿ ಸರ್ಕಾರದ ಅವಿರತ ಪ್ರಯತ್ನಗಳ ಫಲವಾಗಿ ನಾಡಿನ ಬಹುದಿನದ ಬೇಡಿಕೆಯಾಗಿದ್ದ ಕಳಸಾ-ಬಂಡೂರಿಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಅನುಮತಿ ನೀಡಿದ್ದು, ಅದಕ್ಕಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಜಲಶಕ್ತಿ ಸಚಿವರಿಗೆ ಅಭಿನಂದನೆಗಳು.

| ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ


ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿಲ್ಲ ಅಂದಿದ್ದರೆ ಈ ಯೋಜನೆಗೆ ಮುಕ್ತಿ ಸಿಗುತ್ತಿರಲಿಲ್ಲ. ಅವರ ಮಾರ್ಗದರ್ಶನದಲ್ಲಿ ಡಿಪಿಆರ್ ಪರಿಷ್ಕರಿಸಿದ್ದೇವೆ. ಜಲಾಶಯದ ಎತ್ತರ ಕಡಿಮೆ ಮಾಡಿ ನಮಗೆ ನಿಗದಿಯಾಗಿರುವ 3.9 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಡಿಪಿಆರ್ ಷರಿಷ್ಕರಿಸಲಾಯಿತು. ಹತ್ತು ಹಲವು ಬಾರಿ ದೆಹಲಿಗೆ ಹೋಗಿ ಕೇಂದ್ರದ ಒಪ್ಪಿಗೆ ಪಡೆದಿದ್ದೇವೆ. ಇದಕ್ಕೆ ಕಾರಣರಾದ ಹೋರಾಟಗಾರರು ಮತ್ತು ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.

| ಗೋವಿಂದ ಕಾರಜೋಳ ಜಲ ಸಂಪನ್ಮೂಲ ಸಚಿವ


ಕಳಸಾ-ಬಂಡೂರಿ ಯೋಜನೆಗೆ ಸಾಕಷ್ಟು ಹೋರಾಟ ನಡೆದಿದೆ. ನ್ಯಾಯಾಧಿಕರಣದ ಐತೀರ್ಪ ನಮ್ಮ ಎನ್​ಡಿಎ ಸರ್ಕಾರದ ಅವಧಿಯಲ್ಲಿ ಹೊರಬಿದ್ದು, ಈಗ ರಾಜ್ಯದ ಡಿಪಿಆರ್ ಅನ್ನೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಪ್ಪಿಕೊಂಡಿದೆ. ಯೋಜನೆ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸಾಕಷ್ಟು ಪರಿಶ್ರಮ ಹಾಕಿದ್ದರಿಂದ ಇದು ಸಾಧ್ಯವಾಗಿದೆ.

| ಪ್ರಲ್ಹಾದ ಜೋಶಿ ಕೇಂದ್ರ ಸಚಿವ


ಕನ್ನಡಿಗರ ಹೋರಾಟಕ್ಕೆ ದೊರೆತ ಫಲ


ಕಳಸಾ ಬಂಡೂರಿ ವಿಸõತ ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಇದು ಸಮಸ್ತ ಕನ್ನಡಿಗರ ಹೋರಾಟಕ್ಕೆ ದೊರೆತ ಫಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನ ಒಳಗೆ, ಹೊರಗೆ ದೊಡ್ಡ ಸಂಘರ್ಷವನ್ನೇ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದರು ಎಂದು ತಿಳಿಸಿದರು.


ಎಸ್ಸಾರ್ ಬೊಮ್ಮಾಯಿ ನೇತೃತ್ವ


ಆರ್. ಗುಂಡೂರಾವ್ ಸರ್ಕಾರ ಅಧಿಕಾರದಲ್ಲಿದ್ದಾಗ 1980ರಲ್ಲಿ ನಡೆದ ಹೋರಾಟದಲ್ಲಿ ಗೋಲಿಬಾರ್​ಗೆ ನಾಲ್ಕು ಜನ ಬಲಿಯಾದರು. ಆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಯಿತು. ಬೊಮ್ಮಾಯಿ ಅಧ್ಯಯನ ಮಾಡಿ ಮಲಪ್ರಭಾ-ಮಹದಾಯಿ ಜೋಡಣೆ ಮೂಲಕ ಕುಡಿಯುವ ನೀರು ಒದಗಿಸುವ ಬಗ್ಗೆ ವರದಿ ನೀಡಿದ್ದರು. ಎಸ್.ಆರ್. ಬೊಮ್ಮಾಯಿ ಅವರೇ 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗೋವಾದ ಜತೆ ಒಪ್ಪಂದ ಮಾಡಿಕೊಂಡಿದ್ದರು. 45 ಟಿಎಂಸಿ ನೀರು ಲಭ್ಯವಾಗಬೇಕು. ಮುಂದೆ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಎಚ್.ಕೆ. ಪಾಟೀಲ್ ಜಲ ಸಂಪನ್ಮೂಲ ಸಚಿವರಾಗಿ ಕಳಸಾ-ಬಂಡೂರಿ ಯೋಜನೆ ಎಂಬಂತೆ ಮರು ನಾಮಕರಣ ಆಯಿತು. 2000 ಏಪ್ರಿಲ್​ನಲ್ಲಿ ಕೇಂದ್ರ ಜಲ ಆಯೋಗದಿಂದ ಅನುಮತಿ ಸಿಕ್ಕಿತು. ಎಚ್.ಡಿ. ಕುಮಾರಸ್ವಾಮಿ ಭೂಮಿ ಪೂಜೆ ಸಹ ನೆರವೇರಿಸಿದ್ದರು. 2017 ರಲ್ಲಿ ನ್ಯಾಯಾಧಿಕರಣ ಕೋರ್ಟ್ ಹೊರಗೆ ಬಗೆ ಹರಿಸಿಕೊಳ್ಳುವಂತೆ ಸೂಚಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದು ಮಾತುಕತೆಗೆ ಆಹ್ವಾನಿಸಿದರು. ಆದರೆ ಆ ಎರಡು ರಾಜ್ಯಗಳಿಂದ ಉತ್ತರವೇ ಬರಲಿಲ್ಲ.


ರೈತರ ವಿರುದ್ಧದ ಕೇಸ್ ವಾಪಸ್


ಟ್ರಿಬ್ಯುನಲ್​ನಲ್ಲಿ ಆಧಿಸೂಚನೆ ಹೊರಡಿಸಿರುವುದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಹೋರಾಟದಲ್ಲಿ ಭಾಗಿಯಾಗಿರುವ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು. ಯೋಜನೆಯ ಮೂಲಸ್ವರೂಪದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಕಳಸಾ- ಬಂಡೂರಿ ಡಿಪಿಆರ್​ಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವುದು ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ. ನೀರಾವರಿ ಯೋಜನೆಗಳ ಅನುಷ್ಠಾನ ವಿಳಂಬದ ಕುರಿತು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ವ್ಯಕ್ತವಾದ ಜನಬೆಂಬಲಕ್ಕೆ ಹೆದರಿದ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಅನುಮತಿ ನೀಡಿದೆ. ಆ ಮೂಲಕ ಕಾಂಗ್ರೆಸ್ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ.

| ಕರ್ನಾಟಕ ಕಾಂಗ್ರೆಸ್


ಟೆಂಡರ್ ಕರೆಯುವುದಷ್ಟೇ ಬಾಕಿ


ಉತ್ತರ ಕರ್ನಾಟಕದ ಬಹುಮುಖ್ಯ ಯೋಜನೆಯಾದ ಕಳಸಾ-ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಅನುಮೋದನೆ ನೀಡಿರುವುದರಿಂದ ಈಗ ರಾಜ್ಯ ಸರ್ಕಾರ ಟೆಂಡರ್ ಕರೆಯುವುದಷ್ಟೇ ಬಾಕಿ ಉಳಿದಿದೆ. ಸರ್ಕಾರ ಬಜೆಟ್​ನಲ್ಲಿ 1,000 ಕೋಟಿ ರೂ.ಗಳನ್ನು ಇದಕ್ಕಾಗಿ ಮೀಸಲಿಟ್ಟಿದೆ. ಆಡಳಿತಾತ್ಮಕ ಅನುಮೋದನೆಯನ್ನು ಈಗಾಗಲೆ ನೀಡಿದೆ. ಟೆಂಡರ್ ಮೂಲಕ ಗುತ್ತಿಗೆ ಏಜೆನ್ಸಿ ನಿಗದಿ ಮಾಡಿ ಕಾಮಗಾರಿ ಆರಂಭಿಸಬೇಕಿದೆ.

Post a Comment

Previous Post Next Post