ಸಿದ್ದರಾಮಯ್ಯರ ಆಡಳಿತಾವಧಿಯಲ್ಲಿ ರೂ. 35 ಸಾವಿರ ಕೋಟಿ ಹಣಕಾಸು ಅವ್ಯವಹಾರ: ಡಾ|| ಕೆ. ಸುಧಾಕರ್
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರ 2013- 2018ರ ನಡುವಿನ ರಾಜ್ಯದ ಆಡಳಿತದ ಅವಧಿಯಲ್ಲಿ ಸುಮಾರು 35 ಸಾವಿರ ಕೋಟಿ ರೂಪಾಯಿ ಹಣಕಾಸು ಅವ್ಯವಹಾರ ಆಗಿರುವ ಬಗ್ಗೆ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ ಎಂದು ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ|| ಕೆ. ಸುಧಾಕರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ನಮ್ಮ ಸರಕಾರದ ವಿರುದ್ಧ ಶೇ 40 ಭ್ರಷ್ಟಾಚಾರದ ಕುರಿತು ಇವರು ಆರೋಪ ಮಾಡುತ್ತಿದ್ದಾರೆ. ಅದರ ಹಿಂದೆ ಸತ್ಯಾಸತ್ಯತೆ ತಿಳಿಸುವುದಾಗಿ ಅವರು ಹೇಳಿದರು. ಅದೇ ಅವಧಿಯಲ್ಲಿ ಡಿ ನೋಟಿಫಿಕೇಶನ್ ಗೆ ರೀಡೂ ಎಂಬ ಪದವನ್ನು ಅನುಕೂಲಸಿಂಧುವಾಗಿ ಬಳಸಲಾಗಿದೆ. ಬೆಂಗಳೂರಿನ 10 ಸಾವಿರ ಕುಟುಂಬಗಳಿಗೆ ಇದರಿಂದ ಅನ್ಯಾಯವಾಗಿದೆ ಎಂದು ದೂರಿದರು. ಇವರ ಅವಧಿಯಲ್ಲಿ 900 ಎಕರೆಗೂ ಹೆಚ್ಚು ಜಾಗವನ್ನು ಡೀನೋಟಿಫಿಕೇಶನ್ ಮಾಡಿದ್ದರು. ಇದೆಲ್ಲವನ್ನೂ ಮುಚ್ಚಿ ಹಾಕಲು ಎಸಿಬಿ ರಚಿಸಲಾಯಿತು ಎಂದು ಆಕ್ಷೇಪಿಸಿದರು.
ಮಂಕುಬೂದಿ ಎರಚುವ ಕಾಂಗ್ರೆಸ್ ಪಕ್ಷದ ಪ್ರಯತ್ನಕ್ಕೆ ಫಲ ಸಿಗದು
ಕರ್ನಾಟಕದ ಜನರಿಗೆ ಮಂಕುಬೂದಿ ಎರಚುವ ಕಾಂಗ್ರೆಸ್ ಪಕ್ಷದ ಪ್ರಯತ್ನ ಯಶ ಕೊಡುವುದಿಲ್ಲ. ಬೆಂಗಳೂರಿನ ಜನರಿಗೂ ನಿಮ್ಮ ಡಿ ನೋಟಿಫಿಕೇಶನ್, ಅನ್ಯಾಯ ಗೊತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಲಾಗಿತ್ತು ಎಂದು ಬೆಂಗಳೂರಿನ ನಿವಾಸಿಗಳು ಹೇಳಿದ್ದಾರೆ. 2017ರಲ್ಲಿ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹತ್ತಿಕೊಂಡು ಮಾಲಿನ್ಯ ಆಗಿತ್ತು. ಸಿದ್ರಾಮಣ್ಣನವರು ಇದು ಪ್ರತಿ ವರ್ಷ ಆಗುತ್ತದೆ ಎಂದು ಹಾರಿಕೆ ಉತ್ತರ ಕೊಟ್ಟಿದ್ದರು. ಆಗ ಆರ್ಮಿ ಬಟಾಲಿಯನ್‍ನ 5 ಸಾವಿರ ಯೋಧರು ಬೆಂಕಿ ಆರಿಸಿದ್ದರು. ಇದು ನಿಮ್ಮ ಇತಿಹಾಸ ಎಂದು ಡಾ|| ಕೆ. ಸುಧಾಕರ್ ಅವರು ಟೀಕಿಸಿದರು.
ಹಾಸಿಗೆ, ದಿಂಬು, ಬಡವರಿಗೆ ಕೊಡುವ ಅನ್ನದಲ್ಲೂ ನಿಮ್ಮ ಭ್ರಷ್ಟಾಚಾರವನ್ನು ನೀವು ಬಿಟ್ಟಿಲ್ಲ. ಇಂದಿರಾ ಕ್ಯಾಂಟೀನ್‍ನಲ್ಲಿ 100 ಜನ ಊಟ ಮಾಡಿದರೆ ಸಾವಿರ ಜನಕ್ಕೆ ಬಿಲ್ ಮಾಡಲಾಗುತ್ತಿತ್ತು. 900 ಜನರ ದುಡ್ಡು ಯಾರಿಗೆ ಹೋಗುತ್ತಿತ್ತು ಎಂದು ಪ್ರಶ್ನಿಸಿದರು.
ಹಿಂದಿನ ಕಾಂಗ್ರೆಸ್ ಸರಕಾರದಲ್ಲಿನ ಸಿದ್ದರಾಮಯ್ಯರ ಬಲಗೈ ಬಂಟ, ಮಾಜಿ ನಗರಾಭಿವೃದ್ಧಿ ಸಚಿವÀ ಕೆ.ಜೆ.ಜಾರ್ಜ್ ಅವರು ವೈಟ್ ಟಾಪಿಂಗ್‍ನಲ್ಲಿ 39.80 ಕಿಮೀ ಉದ್ದದ ರಸ್ತೆಯ 292 ಕೋಟಿ ಕಾಮಗಾರಿ ಅಂದಾಜು ಇದ್ದುದನ್ನು, 374 ಕೋಟಿ ರೂಪಾಯಿಗೆ ಕೊಡಲಾಗಿತ್ತು. ಯಾಕೆ 25 ಶೇ ಹೆಚ್ಚಾಗಿ ಕೊಟ್ಟರು? ಹೇಳಿ ಜಾರ್ಜ್ ಅವರೇ ಎಂದು ಕೇಳಿದರು. ಆಗಿನ ಟೆಂಡರ್ ಶೂರ್ ನಿಯಮಾವಳಿಯಡಿ ಕೊಡಲಾಗಿತ್ತು. ನೀರಿಂಗದ ಎಲ್ಲ ಕಾಂಕ್ರೀಟ್ ರಸ್ತೆಗಳಿವು. 9.47 ಕಿಮೀ ರಸ್ತೆಯನ್ನು 75 ಕೋಟಿ ಎಸ್ಟಿಮೇಟ್ ಇದ್ದು, 115 ಕೋಟಿಗೆ ಮಂಜೂರಾತಿ ನೀಡಲಾಗಿತ್ತು. 53.86 ಶೇಕಡಾದಷ್ಟು ಹೆಚ್ಚುವರಿ ಮೊತ್ತಕ್ಕೆ ಯಾಕೆ ಕೊಟ್ಟರು? ಇದರ ದುರುದ್ದೇಶ ಏನು ಎಂದು ಕೇಳಿದರು.
ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರಕಾರವು ಮೇ 2022ರಲ್ಲಿ ಎಸ್ಟಿಮೇಟ್ ಮೇಲೆ ಟೆಂಡರ್ ಪ್ರೀಮಿಯಂ ಅನ್ನು ಶೇ 5ಕ್ಕೆ ಮಿತಿಗೊಳಿಸಿದೆ. ಆದರೆ, ನಮ್ಮ ಮೇಲೇ ಆರೋಪ ಮಾಡುತ್ತೀರಲ್ಲವೇ ಎಂದು ಟೀಕಿಸಿದರು. 50 ಶೇಕಡಾಕ್ಕಿಂತ ಹೆಚ್ಚು ಹಣ ಹೆಚ್ಚಿಸಿ ಮಂಜೂರಾತಿ ಕೊಟ್ಟ ನೀವು ಆರೋಪ ಮಾಡಿದ್ದು ಹೇಗೆ? ಇಂಥ ಅನೇಕ ಕೆಲಸಗಳು ಬಿಬಿಎಂಪಿ, ಬಿಡಿಎ ಮಿತಿಯಲ್ಲಿ ಅಂದಾಜಿಗಿಂತ ಹೆಚ್ಚಾಗಿ ನಡೆದಿವೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಉದ್ಧಾರಕರು ನೀವೇ ಎನ್ನುತ್ತೀರಿ. ವಕ್ಫ್ ಬೋರ್ಡಿನ 29 ಸಾವಿರ ಎಕರೆ ಆಸ್ತಿಯನ್ನು ಯಾರು ಗುಳುಂ ಮಾಡಿದ್ದಾರೆ? 2.6 ಲಕ್ಷ ಕೋಟಿ ಮೌಲ್ಯದ ಆಸ್ತಿ ಇದು. ಅಲ್ಪಸಂಖ್ಯಾತರು, ದಲಿತರಿಗೆ ನ್ಯಾಯ ಕೊಡಲಿಲ್ಲ. ಹಿಂದುಳಿದ ಜನಾಂಗ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ; ಲ್ಯಾಪ್ ಟಾಪಲ್ಲೂ ಭ್ರಷ್ಟಾಚಾರ ಆಗಿತ್ತು. ಪ್ರತಿ ಇಲಾಖೆಯಲ್ಲಿ ಭ್ರಷ್ಟಾಚಾರದಲ್ಲಿ ನೀವೇ ಮುಳುಗಿ ಹೋಗಿದ್ದಿರಿ. ಇವತ್ತು ನೀವು ಯಾವ ನೈತಿಕತೆಯಿಂದ ಹೀಗೆ ಮಾತನಾಡುತ್ತೀರಿ? ಇದರ ಹಿಂದೆ ಒಂದು ನರೇಟಿವ್, ಟೂಲ್ ಕಿಟ್ ಬಳಸಲಾಗುತ್ತಿದೆ. ವಿಷಯಾಂತರ ಮಾಡಲು, ಜನರ ಮನಸ್ಸನ್ನು ನಿಮ್ಮ ಕಡೆ ವಾಲಿಸಿಕೊಳ್ಳಲು ಪ್ರಯತ್ನ ಇದು. ಇದು ಒಳ್ಳೆಯದಲ್ಲ ಎಂದರು.
ಬಜೆಟ್‍ನಲ್ಲಿ ಹೈಕಮಾಂಡಿಗೆ ಮೀಸಲು ನಿಧಿ ಇತ್ತೇ?
ಸತ್ಯ ಹರಿಶ್ಚಂದ್ರರು ಎನ್ನುವ ಇವರು ಮತ್ತು ಹೈಕಮಾಂಡಿನವರು 2017ರಲ್ಲಿ ನಿಮ್ಮ ಬಲಗೈ ಬಂಟನ ಮನೆ ಮೇಲೆ ದಾಳಿ ಆದಾಗ ಡೈರಿ ಸಿಕ್ಕಿತಲ್ಲವೇ? 1 ಸಾವಿರ ಕೋಟಿಗೂ ಹೆಚ್ಚು ಹಣ ನಿಮ್ಮ ಹೈಕಮಾಂಡಿಗೆ ಹೋಗಿತ್ತಲ್ಲವೇ? ಯಾರದದು ಸಾವಿರ ಕೋಟಿ? ಹೇಗೆ ಹೋಗಿತ್ತು? ಧರ್ಮದ ಹಣವೇ? ಕರ್ನಾಟಕದ ಬಜೆಟ್‍ನಲ್ಲಿ ಸಾವಿರ ಕೋಟಿ ಹೈಕಮಾಂಡ್ ವಿಶೇಷ ನಿಧಿ ಎಂದು ಮೀಸಲಾಗಿ ಇಟ್ಟಿದ್ದರೇ? ಅದನ್ನೂ ಮಾಡುವಷ್ಟು ಬುದ್ಧಿವಂತಿಕೆಯ ಜನರು ಕಾಂಗ್ರೆಸ್ಸಿಗರು ಎಂದು ಡಾ|| ಕೆ. ಸುಧಾಕರ್ ಅವರು ಆರೋಪ ಮಾಡಿದರು.
ನಿಮ್ಮ ಮುಖ್ಯಮಂತ್ರಿ, ಸಚಿವರು, ಹಿರಿಯ ಅಧಿಕಾರಿಗಳ ಮೇಲೆ ಕೇವಲ ಕೇಸು ಆಗಿರಲಿಲ್ಲ. ಆದರೂ ಪಿಎಸ್‍ಐ ಹಗರಣದ ಕುರಿತು ಮಾತನಾಡುತ್ತೀರಲ್ಲವೇ? ಈ ಹಗರಣದಲ್ಲಿ ಸಿಕ್ಕಿ ಹಾಕದವರು ಯಾರು? ಅದು ಎಲ್ಲಿ ಪ್ರಾರಂಭವಾಗಿತ್ತು? ನಿಮ್ಮ ಆಡಳಿತದಿಂದ, ಗೃಹ ಇಲಾಖೆಯ ನಿಮ್ಮ ಅಡ್ವೈಸರ್ ನಿವೃತ್ತ ಅಧಿಕಾರಿ ಕೆಂಪಯ್ಯ ಅವರ ಹೆಸರಿನಲ್ಲೇ ಆರೋಪವಿದೆ ಎಂದು ದೂರಿದರು. ತ್ಯಾಜ್ಯದಲ್ಲೂ 1,066 ಕೋಟಿ ರೂಪಾಯಿ ಹಗರಣ ಆಗಿತ್ತು. ಕಸ ವಿಲೇವಾರಿ ಮಾಡುವುದರಲ್ಲಿ ಭ್ರಷ್ಟಾಚಾರ ನಡೆದಿತ್ತು. ತ್ಯಾಜ್ಯ ವಿಲೇವಾರಿಗೆ 385 ಕೋಟಿ ಖರ್ಚಾಗಿತ್ತು. 2015-16ರಲ್ಲಿ 616 ಕೋಟಿ ಜಾಸ್ತಿ ಆಗಿದೆ. ಅದು 1066 ಕೋಟಿ ಆಗಿದೆ. ಇದ್ಯಾವ ಸ್ಕೀಂ? ಇದೆಷ್ಟು ಪರ್ಸೆಂಟ್? ಗಾರ್ಬೇಜನ್ನು ಏನಾದರೂ ಮಾಯ ಮಾಡಿದ್ದೀರಾ? ಎಂದು ಕೇಳಿದರು.
ಎನ್‍ಸಿಆರ್ ವರದಿ ಆಧರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿತ್ತು. ಶೇ 28ರಷ್ಟು ಅಪರಾಧ ಹೆಚ್ಚಾಗಿತ್ತು. 2016ರಲ್ಲಿ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಿರಲಿಲ್ಲ ಎಂದು ವರದಿ ತಿಳಿಸಿದೆ. ಇದಕ್ಕಿಂತ ಹೆಚ್ಚಿನ ಸರ್ಟಿಫಿಕೇಟ್ ಬೇಕೇ? ಬಡವರಿಗೆ ಮನೆ ಕಟ್ಟುವ ಯೋಜನೆಯಡಿ 250 ಕೋಟಿ ಹಗರಣ ಆಗಿತ್ತು. 50 ಸಾವಿರ ಬಡವರಿಗೆ ಮನೆ ಕಟ್ಟಿ ಕೊಡುವುದರಲ್ಲಿ 43 ಪ್ಯಾಕೇಜ್ ಮಾಡಿ 10 ಗುತ್ತಿಗೆದಾರರನ್ನು ಆಯ್ಕೆ ಮಾಡಿದ್ದರು. ಕೆಲವರಿಗೆ ಕಾಮಗಾರಿಯ ಅನುಭವ, ಅರ್ಹತೆ ಇರಲಿಲ್ಲ. ಬಡವರನ್ನೂ ಬಿಟ್ಟಿಲ್ಲ ನೀವು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗಂಗೋತ್ರಿ ಎಂದು ನಮ್ಮ ಮುಖ್ಯಮಂತ್ರಿಗಳು ಹೇಳುತ್ತಾರೆ. ಇದೆಲ್ಲ ಕಾರಣಗಳಿಂದಲೇ ಅವರು ಹೀಗೆ ವ್ಯಾಖ್ಯಾನ ಮಾಡಿದ್ದಾರೆ. ಬೋಫೋರ್ಸ್, ಸೈನಿಕರ ಶವಪೆಟ್ಟಿಗೆಯಲ್ಲೂ ಭ್ರಷ್ಟಾಚಾರ ನಡೆದಿತ್ತು. ಇನ್ಯಾವುದನ್ನು ಬಿಡ್ತೀರಿ? ಆದರ್ಶ ಹೌಸಿಂಗ್, ಕಾಮನ್‍ವೆಲ್ತ್ ಗೇಮ್ಸ್ ಹಗರಣ ಹೇಳೋದಿಲ್ಲ. ಅನೇಕರ ಮೇಲೆ ಭ್ರಷ್ಟಾಚಾರ ಆರೋಪ ಇದೆ. 5 ವರ್ಷದಲ್ಲಿ ನೀವು ಕೇವಲ 42 ಕಿಮೀ ಮೆಟ್ರೋ ಕಾಮಗಾರಿ 13,845 ಕೋಟಿ ಹಣದಲ್ಲಿ ಮಾಡಿದ್ದೀರಿ ಅಲ್ಲವೇ? ಸುಗಮ ಸಂಚಾರಕ್ಕೆ ನೀವು ಮಾಡಿದ್ದೇನು? ನಾವು (ಮುಖ್ಯಮಂತ್ರಿಗಳು) ಕೇವಲ ಆಡಳಿತಾತ್ಮಕ ಸುಧಾರಣೆ ಮಾಡಿ ವಿಶೇಷ ಅಧಿಕಾರಿ ನೇಮಿಸಿದ್ದಾರೆ. ಮೆಟ್ರೋ 3ನೇ ಹಂತ 44 ಕಿಮೀ, 2ನೇ ಹಂತ 19.7 ಕಿಮೀ ನಾವು ಕೈಗೆತ್ತಿಕೊಂಡಿದ್ದೇವೆ. ಮೆಟ್ರೋಗೆ ವಿಶೇಷ ಅಭಿವೃದ್ಧಿ- ವೇಗದ ಸ್ಪರ್ಶವನ್ನು ನಮ್ಮ ಸರಕಾರ ಕೊಟ್ಟಿದೆ ಎಂದು ವಿವರಿಸಿದರು.
ಸಾವಿರಾರು ಮರಗಳನ್ನು ಕಡಿಯಬೇಕಾದ ಫೇಮಸ್ ಸ್ಟೀಲ್ ಬ್ರಿಡ್ಜ್ ಬೇಡವೆಂದರೂ ಕೇಳಲಿಲ್ಲ. ಭ್ರಷ್ಟಾಚಾರದ ದೂರುಗಳು ಬಂದಿದ್ದವು. ಕೋರ್ಟಿನಿಂದ ಸ್ಟೇ ಬಂದಿತ್ತು. ಪಡಿತರವನ್ನೂ ನೀವು ಬಿಟ್ಟಿಲ್ಲ. ಮಂತ್ರಿಗಳ ಮೇಲೆ ವಿಡಿಯೋ ಆಗಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆ, ಪಡಿತರ ಇಲಾಖೆ, ಮೈನಿಂಗ್ (ಮಿನಿಸ್ಟರ್ ಹುದ್ದೆಯಿಂದಲೇ ವಜಾ ಮಾಡಲಾಗಿತ್ತು)- ಈ ರೀತಿ ಅನೇಕ ವಿಚಾರಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಆದರೆ, ನೀವು ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದೀರಿ. ಇದು ವ್ಯರ್ಥ ಪ್ರಯತ್ನ ಮತ್ತು ಷಡ್ಯಂತ್ರ ಎಂದು ತಿಳಿಸಿದರು.
ನಮ್ಮ ರೈತ ವಿದ್ಯಾನಿಧಿ ಸ್ಕೀಂನಡಿ 10 ಲಕ್ಷ ಮಕ್ಕಳಿಗೆ 439 ಕೋಟಿ ವಿತರಣೆ ಆಗಿದೆ. ರೈತರು, ನೇಕಾರರು, ಆಟೋ ಚಾಲಕರ ಮಕ್ಕಳಿಗೆ ಪ್ರಯೋಜನ ಆಗಿದೆ. 3 ಲಕ್ಷ ಹೊಸ ರೈತರಿಗೆ ಸಾಲ ನೀಡುವ ಪ್ರಯತ್ನ ನಡೆದಿದೆ. ರೈತ ಶಕ್ತಿ ಯೋಜನೆಯಡಿ 400 ಕೋಟಿ ರೂಪಾಯಿ ಡೀಸೆಲ್ ಸಬ್ಸಿಡಿ ಕೊಡುತ್ತಿದ್ದೇವೆ. ನಗರ ಪ್ರದೇಶದ ಬಡವರಿಗಾಗಿ 438 ನಮ್ಮ ಕ್ಲಿನಿಕ್‍ಗಳನ್ನು ತೆರೆದಿದ್ದೇವೆ. ಇಡೀ ರಾಜ್ಯದ ಜನರಿಗೆ ಕೋವಿಡ್‍ನಿಂದ ಮುಕ್ತಿ ಸಿಗುವಂಥ ಪರಿಣಾಮಕಾರಿ ಕಾರ್ಯಕ್ರಮ ಕೊಟ್ಟಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಳ, ಕಡ್ಡಾಯವಾಗಿ 2 ಡೋಸ್ ಲಸಿಕೆ ಕೊಡಲಾಗಿದೆ. 12 ಕೋಟಿಯಷ್ಟು ಲಸಿಕೆ ಕೊಟ್ಟಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ಆರು ಸಾವಿರ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ 4 ಸಾವಿರ ಸೇರಿಸಿ 9968 ಕೋಟಿಯನ್ನು 53.83 ಲಕ್ಷ ರೈತರಿಗೆ ಕೊಡಲಾಗಿದೆ ಎಂದು ವಿವರಿಸಿದರು.
ಇಂಥ ಒಂದಾದರೂ ಕಾರ್ಯಕ್ರಮವನ್ನು ಕಾಂಗ್ರೆಸ್ಸಿಗರು ಹೇಳಲಿ ಎಂದು ಸವಾಲು ಹಾಕಿದರು. ಮಾತಾಡಿದರೆ ಅಕ್ಕಿ ಕೊಟ್ಟೆ, ಅಕ್ಕಿ ಕೊಟ್ಟೆ ಅನ್ನುತ್ತೀರಲ್ಲಾ? ಅಕ್ಕಿ ಚೀಲಕ್ಕೆ ಆಗುವಷ್ಟು ಹಣ ಮಾತ್ರ ನಿಮ್ಮ ಸರಕಾರ ಕೊಟ್ಟಿದೆ. 28- 29 ರೂ. ಕೇಂದ್ರ ಸರಕಾರ ಕೊಡುತ್ತದೆ. 3 ರೂ. ಕೊಟ್ಟ ನೀವು ಕ್ರೆಡಿಟ್ ಎಲ್ಲ ಪಡೆದರೆ ಹೇಗೆ ಎಂದು ಪ್ರಶ್ನಿಸಿದರು. ಪ್ರಣಾಳಿಕೆಯಲ್ಲಿ 30 ಕೆಜಿ ಎಂದ ನೀವು ಕೊಟ್ಟದ್ದು 7 ಕೆಜಿ ಅಲ್ಲವೇ? ಮತ್ತೆ ತಿರುಗಿ 4 ಕೆಜಿ ಮಾಡಿ, ಚುನಾವಣೆ ಬಂದಾಗ 7 ಕೆಜಿ ಮಾಡಿದ್ದಲ್ಲವೇ? ಎಲ್ಲ ಗೊತ್ತಿದೆ ಎಂದು ವಿವರ ನೀಡಿದರು.
ನೀವು ಪರಿಶಿಷ್ಟ ವರ್ಗ, ಪಂಗಡದ ಚಾಂಪಿಯನ್ ಎಂದು ಹೇಳುತ್ತೀರಲ್ಲ? ಹಾಗೆಂದರೆ ಏನು? ಏನು ಮಾಡಿದ್ದೀರಿ? ಮೀಸಲಾತಿ ಹೆಚ್ಚಳದ ಅಹವಾಲು ಇದ್ದರೂ ಅದನ್ನು ಮಾಡಿಲ್ಲ. ಬಿಜೆಪಿ ಮೀಸಲಾತಿ ಹೆಚ್ಚಿಸಿದೆ. ವೀರಶೈವ ಲಿಂಗಾಯಿತರು, ಒಕ್ಕಲಿಗರಿಗೂ ಮೀಸಲಾತಿ ಕೊಡುತ್ತಿದ್ದೇವೆ. ನಿಮ್ಮಿಂದ ಈ ವರ್ಗದವರಿಗೆ ನ್ಯಾಯ ಸಿಕ್ಕಿದೆಯೇ ಎಂದು ಕೇಳಿದರು.
ಕೋವಿಡ್ ಬಂದ ಬಳಿಕ ಪ್ರಧಾನಿಯವರು ದೇಶದ 80 ಕೋಟಿ ಜನರಿಗೆ ಗರೀಬ್ ಕಲ್ಯಾಣ್ ಯೋಜನೆಯಡಿ ಅಕ್ಕಿ ಕೊಡುತ್ತಿದ್ದಾರೆ. ನೀವು ಮಾಡಿದ್ದೀರಾ? ಹೊರದೇಶಗಳಲ್ಲಿ ಆಹಾರ, ಲಸಿಕೆ ಇಲ್ಲದೆ ಸಮಸ್ಯೆ ಆಗಿತ್ತು. ಮೋದಿಯವರು ನಮ್ಮ ದೇಶ ಮಾತ್ರವಲ್ಲದೆ 50ರಷ್ಟು ಬೇರೆ ದೇಶದವರಿಗೂ ಲಸಿಕೆ ಕಳುಹಿಸಿಕೊಟ್ಟರು. ಕಂದಾಯ ಇಲಾಖೆಯಡಿ ದಾಖಲೆ ಕೆಲಸ ನಡೆಯುತ್ತಿದೆ. ಎಸಿ ಕಚೇರಿಗಳು ಕಲೆಕ್ಷನ್ ಸೆಂಟರ್ ಆಗಿದ್ದವು. ರೈತರು ಸಮಸ್ಯೆಯಲ್ಲಿದ್ದರು. 79 ಎಬಿಯನ್ನು ರದ್ದು ಮಾಡಿದ್ದರಿಂದ ಸುಗಮವಾಗಿ ನೋಂದಣಿ ನಡೆಯುತ್ತಿದೆ ಎಂದರು.
ಕಳೆದ ಬಾರಿ ತಾಂಡಾಗಳ ಹಕ್ಕುಪತ್ರ ಕೊಡಲಾಗಿದೆ. ಬ್ರಿಟಿಷರ ಕಾಲದಿಂದಲೂ ಈ ಸಮಸ್ಯೆ ಇತ್ತು. 100 ವರ್ಷಗಳಿಂದ ಇದ್ದ ಬೇಡಿಕೆ ಇದಾಗಿತ್ತು. 75 ವರ್ಷದಿಂದ ಕೊಟ್ಟಿದ್ದೇನು? ನಮ್ಮ ಸರಕಾರ ಬಂದು 1 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಶಾಶ್ವತವಾಗಿ ಸ್ವಾಭಿಮಾನದ ಬದುಕು ಕಲ್ಪಿಸಲು ನೆರವಾಗಿದ್ದೇವೆ ಎಂದು ವಿವರಿಸಿದರು. ಕಾಂಗ್ರೆಸ್ಸಿನಿಂದ ತಪ್ಪು ಮಾಹಿತಿ ಕೊಡುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ನಮ್ಮ ಸರಕಾರವು 100 ಅಂಬೇಡ್ಕರ್ ವಿದ್ಯಾರ್ಥಿನಿಲಯ, 50 ಕನಕದಾಸ ವಿದ್ಯಾರ್ಥಿ ನಿಲಯ ನಿರ್ಮಿಸುತ್ತಿದೆ. 134 ವರ್ಷಗಳ ಇತಿಹಾಸದಲ್ಲೇ ಗರಿಷ್ಠ ಮಳೆ, ಪ್ರವಾಹ ಬಂದಾಗ ಕ್ಷಿಪ್ರ ಗತಿಯಲ್ಲಿ ಪರಿಹಾರ ಕೊಡಲಾಗಿದೆ. ಬೆಳೆ ನಷ್ಟಕ್ಕೆ ಡಬಲ್ ಪರಿಹಾರವನ್ನು ಕೇವಲ ಒಂದು ವಾರದಲ್ಲಿ ಕೊಟ್ಟಿದ್ದೇವೆ. ಅನೇಕ ಕಾರ್ಯಕ್ರಮಗಳನ್ನು ರಚನಾತ್ಮಕವಾಗಿ ಬದ್ಧತೆಯಿಂದ ಕೊಟ್ಟಿದ್ದೇವೆ ಎಂದರು.
ಕಾಂಗ್ರೆಸ್ಸಿಗೆ ಆರೋಪ ಮಾಡುವುದಷ್ಟೇ ಗೊತ್ತಿದೆ. ಸಾಕ್ಷಿ ಕೊಡಲು ಸಾಧ್ಯವಾಗಿಲ್ಲ. ಆಪಾದನೆ ಸತ್ಯ ಆಗಿದ್ದರೆ ಸಂಬಂಧಿತ ವ್ಯವಸ್ಥಿತ ತನಿಖಾ ಸಂಸ್ಥೆಗೆ ದೂರು ಕೊಡಬೇಕಿತ್ತು. ನಮ್ಮ ಸರಕಾರದ ವಿರುದ್ಧ ದಾಖಲೆ ಇದ್ದರೆ, ಆಪಾದನೆ ಸತ್ಯವಿದ್ದರೆ ಲೋಕಾಯುಕ್ತ, ಕೋರ್ಟಿಗೆ ದೂರು ಮತ್ತು ಸಾಕ್ಷ್ಯಾಧಾರ ಕೊಡಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 50-60 ಅಧಿಕೃತ ಪ್ರಕರಣ ದಾಖಲಾದಾಗ ತನಿಖೆಯ ಭಯ ಭೀತಿಯಿಂದ ಎಸಿಬಿ ಆರಂಭಿಸಿದ ಖ್ಯಾತಿ ಕಾಂಗ್ರೆಸ್ ಪಕ್ಷದ್ದು. ಇದನ್ನು ಸದನದಲ್ಲಿ ಚರ್ಚಿಸದೆ, ಯಾರೂ ಕೇಳದೆ, ಎಲ್ಲ ಪಕ್ಷಗಳು ಸೇರಿ ಮಾಡಿದ ನಿರ್ಧಾರ ಇದಲ್ಲ. ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿದ್ದರು ಎಂದು ಆರೋಪಿಸಿದರು.
ಲೋಕಾಯುಕ್ತ ಮುಚ್ಚಿದ್ದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಕರ್ನಾಟಕದ ಲೋಕಾಯುಕ್ತ ಸಂಸ್ಥೆ ವಿಶೇóಷ ಸ್ಥಾನಮಾನವನ್ನು ಹೊಂದಿದೆ. ಅದು ಮುಂದುವರಿಯಬೇಕು ಎಂದಿತ್ತು. ನಾವು ನಮ್ಮ ಪ್ರಣಾಳಿಕೆಯಲ್ಲೂ ಲೋಕಾಯುಕ್ತ ಪುನರ್ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದೆವು. ನಾವು ಹೈಕೋರ್ಟ್ ತೀರ್ಪನ್ನು ಒಪ್ಪಿಕೊಂಡು ಲೋಕಾಯುಕ್ತ ಪುನರ್ ಸ್ಥಾಪಿಸಿದ್ದೇವೆ. ಮೇಲ್ಮನವಿ ಸಲ್ಲಿಸಿ ಸ್ಟೇ ಪಡೆದಿಲ್ಲ. ನಾವು ಕರ್ತವ್ಯದ ಪರ ಇದ್ದೇವೆ ಎಂಬುದು ಇದರಿಂದ ಸುಸ್ಪಷ್ಟ. ಭ್ರಷ್ಟಾಚಾರ ನಿರ್ಮೂಲನೆಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಅಹರ್ನಿಶಿ ದುಡಿಯುವ ಮಾದರಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಸರಕಾರಿ ಶಾಲೆಗೆ ಗರಿಷ್ಠ ಕೊಠಡಿ ನಿರ್ಮಿಸುತ್ತಿದ್ದೇವೆ. 15 ಸಾವಿರ ಶಿಕ್ಷಕರ ನೇಮಕಾತಿ ನಡೆದಿದೆ. ಕಾಂಗ್ರೆಸ್, ಇತರ ಪಕ್ಷದವರೂ ನಮ್ಮ ಕ್ಲಿನಿಕ್ ಉದ್ಘಾಟನೆಗೆ ಬಂದಿದ್ದರು. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಉದ್ಯೋಗ, ಕೃಷಿ- ಇವೆಲ್ಲಕ್ಕೂ ವಿಶೇಷ ಅಭಿವೃದ್ಧಿಯ ಸ್ಪರ್ಶ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಕಳೆದ 60 ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು ದೇಶದಲ್ಲಿ ಭ್ರಷ್ಟಾಚಾರವನ್ನು ಹುಟ್ಟು ಹಾಕಿದೆ. ಯಾವುದೇ ಯೋಜನೆ ಮಾಡಿದರೂ ಅದರ ಹಿಂದೆ ಭ್ರಷ್ಟಾಚಾರ ಅಡಗಿತ್ತು. ಇದೆಲ್ಲವೂ ಇತಿಹಾಸ. 2013ರಿಂದ 18ರವರೆಗೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಲೋಕಾಯುಕ್ತ ಸಂಸ್ಥೆ ಮುಚ್ಚಿ ಎಸಿಬಿ ಆರಂಭಿಸಿದ್ದು ಕಾಂಗ್ರೆಸ್‍ನವರು ಎಂದು ಟೀಕಿಸಿದರು.
11,500 ಪೌರಕಾರ್ಮಿಕರ ಕೆಲಸ ಖಾಯಂ ಆಗಿದೆ. ಹಲವು ಗಂಟೆಗಳಷ್ಟು ಹೇಳಿದರೂ ಸಾಧನೆ ಮುಗಿಯದು. ನಮ್ಮ ಸರಕಾರವು ನೈತಿಕತೆಯಿಂದ ಕೂಡಿದ ಕಾರ್ಯಕ್ರಮ ಕೊಡುತ್ತಿದೆ. ಜನರೂ ನಮ್ಮ ಕಾರ್ಯಕ್ರಮಗಳನ್ನು ಮೆಚ್ಚಿದ್ದಾರೆ. ಮತ್ತೆ ಬಿಜೆಪಿ ಸರಕಾರ ಬರಲಿದೆ. ಕಾಂಗ್ರೆಸ್ ಸೋತ ಮೇಲೆ ಇದೇರೀತಿ ಇರುವ ವಿಶ್ವಾಸವಿಲ್ಲ. ಅನೇಕರು ಒಂದು ಕಾಲು ಹೊರಗೆ ಮತ್ತು ಒಂದು ಕಾಲು ಒಳಗೆ ಇಟ್ಟಿದ್ದಾರೆ. ಯಾರು ನಮ್ಮ ಪಕ್ಷಕ್ಕೆ ಬರಲಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಶವಪೆಟ್ಟಿಗೆಗೆ ಸದನದಲ್ಲಿ ಮೇಲೆ ಕುಳಿತುಕೊಳ್ಳುತ್ತಿದ್ದ ನಾಯಕರು ಮೊಳೆ ಹೊಡೆದಿದ್ದಾರೆ. ಕನಿಷ್ಠ ಎಂದರೂ ಕಾಂಗ್ರೆಸ್ ನಾಯಕರು ಮೂರರಿಂದ ನಾಲ್ಕು ತಲೆಮಾರಿಗೆ ಆಗುವಷ್ಟು ಹಣ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ರಮೇಶ್‍ಕುಮಾರ್ ಆತ್ಮಾವಲೋಕನದ ಮಾತನ್ನಾಡಿದ್ದಾರೆ. ಅದು ಅವರ ಮನದಾಳದ, ಅನುಭವದ, ಅಂತಃಕರಣದ ಮಾತು ಎಂದರು.
ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳವಾಗಿದೆ. ಭ್ರಷ್ಟಾಚಾರ, ಸಾಧನೆ ವಿಚಾರದಲ್ಲಿ ಚರ್ಚೆಗೆ ಬನ್ನಿ. ಇದನ್ನು ಬಿಟ್ಟು ನೀವು ಬಸ್ ಹತ್ತಿ ಪ್ರಯಾಣ ಮಾಡಿ ಶೇ 40 ಬಗ್ಗೆ ಹೇಳಿದರೆ ನಂಬಲು ಜನರು ಮೂರ್ಖರಲ್ಲ. ನಾ ನಾಯಕಿ ಎನ್ನಲು ಅವರನ್ನು ಕರೆಯುವುದು, ಅವರು ಹೋಗುವ ಮೊದಲು ಉತ್ತರ ಪ್ರದೇಶದಲ್ಲಿ 10 ಸೀಟಾದರೂ ಬರುತ್ತಿತ್ತು. ಅವರು ಹೋದ ಮೇಲೆ ಅದೂ ಬರದಂತಾಗಿದೆ. ಅದರ ಬಗ್ಗೆ ಜನರಿಗೆ ಹೇಳಿ ಎಂದು ಆಗ್ರಹಿಸಿದರು.
ನೂರಾರು ಬಡವರ ಮನೆ ಒಡೆದು ಹಾಕಿದ್ದೀರಲ್ಲ? ಬನ್ನೇರುಘಟ್ಟ ರಸ್ತೆಯ ಡಿಎಲ್‍ಎಫ್ ಮನೆ ಯಾಕೆ ಮುಟ್ಟಿಲ್ಲ? ಇದರ ನಿರ್ದೇಶಕರು, ಇದರ ಹಿಂದಿರುವವರು ಯಾರು? ಎಂದು ಪ್ರಶ್ನಿಸಿದರು. ನಾವು ಕಳಪೆ ರಾಜಕೀಯದಲ್ಲಿ ನಂಬಿಕೆ ಇಟ್ಟಿಲ್ಲ. ಘನತೆಯ ರಾಜಕೀಯ ಮಾಡಬೇಕು ಎಂದು ತಿಳಿಸಿದರು.
ನಮ್ಮ ಸರಕಾರ ರಚನಾತ್ಮಕವಾಗಿ ಬದ್ಧತೆಯಿಂದ ಕೆಲಸ ಮಾಡಿದೆ. ಸುಳ್ಳು ಹಬ್ಬಿಸುವುದು, ವ್ಯಕ್ತಿಯ ಚಾರಿತ್ರ್ಯ ವಧೆ ಮಾಡುವುದು ಬೇಡ. ನಿಮ್ಮ ಬೆನ್ನನ್ನು ನೀವು ನೋಡಿಕೊಳ್ಳಿ. ನಿಮ್ಮ ಮೇಲೆಷ್ಟು ಆರೋಪ, ಕೇಸುಗಳಿವೆ ಎಂದು ನೋಡಿಕೊಳ್ಳಿ. ನಿಮಗೆ ಅರ್ಹತೆ, ನೈತಿಕತೆ ಇದೆಯೇ ಎಂದು ಪ್ರಶ್ನಿಸಿಕೊಳ್ಳಿ ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು-ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರಕಾರದ ವಿರುದ್ಧ ಶೇ 40 ಕಮಿಷನ್‍ನ ಯಾವುದೇ ದಾಖಲೆಗಳಿಲ್ಲದೆ ಪೋಸ್ಟರ್ ಮಾಡಿ, ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಲು ಹೊರಟಿದ್ದಾರೆ. ಅದನ್ನು ಗಮನಿಸಿ ಬಿಜೆಪಿ ವತಿಯಿಂದ ನಾವು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧವಾಗಿ ಲೋಕಾಯುಕ್ತದಲ್ಲಿ ಇವತ್ತು ದೂರು ದಾಖಲಿಸಿದ್ದೇವೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಲೋಕಾಯುಕ್ತ ಕಚೇರಿ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ದೂರಿಗೆ ಪುರಾವೆ ಇದೆ. ಅವರ ಆಪಾದನೆಗೆ ಪುರಾವೆ ಇಲ್ಲ. ನಮ್ಮ ಮೇಲೆ ದಾಖಲೆ ಇಲ್ಲದೆ ಅಪಪ್ರಚಾರ ಮಾಡಿದ್ದಾರೆ. ಇವತ್ತಿಗೂ ದಾಖಲೆ ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದರು.
ಈ ದೂರನ್ನು ಮಾನ್ಯ ಲೋಕಾಯುಕ್ತರು ಅಂಗೀಕರಿಸಿದ್ದಾರೆ. ಏನಾದರೂ ಹೆಚ್ಚಿನ ದಾಖಲೆ ಬೇಕಿದ್ದರೆ ದೂರವಾಣಿ ಕರೆ ಮಾಡಿ ಕರೆಸಿಕೊಂಡು ಪಡಕೊಳ್ಳುವುದಾಗಿ ತಿಳಿಸಿದ್ದಾರೆ. ದಾಖಲೆ ಸಾಕಿದ್ದರೆ ನೇರವಾಗಿ ಸಿದ್ದರಾಮಯ್ಯರಿಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.
ದೂರಿನ ಜೊತೆಗೇ 2013-14ರಲ್ಲಿ ನಡೆದ ಟೆಂಡರ್ ಶೂರ್ ಸಂಬಂಧಿಸಿದ ಹಲವು ಕಾಮಗಾರಿಗಳಲ್ಲಿ ಟೆಂಡರ್ ಇಟ್ಟಿದ್ದ ಹಣಕ್ಕಿಂತ 53.86 ಶೇಕಡಾ ಹೆಚ್ಚುವರಿ ಹಣ ಬಿಡುಗಡೆ ಮಾಡಿದ 10-12 ದಾಖಲೆಗಳನ್ನು ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ ಅಂಥದ್ದು ನಡೆದಿಲ್ಲ. ಇವತ್ತಿನವರೆಗೆ ಕಾಂಗ್ರೆಸ್ಸಿನವರು ತಮ್ಮ ಆಪಾದನೆಗೆ ಯಾವುದೇ ದಾಖಲೆ ನೀಡಿಲ್ಲ. ಬೀದಿಯಲ್ಲಿ ಅವರು ಆರೋಪಿಸುತ್ತಾರೆ. ಇದೇ ಕಾರಣಕ್ಕೆ ಒಂದೇ ಒಂದು ದೂರು ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿ ನಿಜವಾಗಿಯೂ ತಾಕತ್ತಿದ್ದರೆ ತಮ್ಮ ಆಪಾದನೆಯನ್ನು ಸಾಬೀತುಪಡಿಸಲು ಸಾಕ್ಷ್ಯ ಇದ್ದರೆ ತಂದು ಕೊಡಲಿ ಎಂದು ಸವಾಲು ಹಾಕುವುದಾಗಿ ತಿಳಿಸಿದರು. ದಾಖಲೆ ಕೊಡದಿದ್ದರೆ ನಿಮ್ಮ ಮುಖಕ್ಕೆ ಜನರೇ ಮಂಗಳಾರತಿ ಮಾಡುತ್ತಾರೆ. ಬೀದಿಯಲ್ಲಿ ಆಪಾದನೆ ಮಾಡುವುದಲ್ಲ. ತಾಕತ್ತಿದ್ದರೆ ಲೋಕಾಯುಕ್ತಕ್ಕೆ ಬನ್ನಿ ಎಂದು ತಿಳಿಸಿದರು.
ಸಿದ್ದರಾಮಯ್ಯರ ವಿರುದ್ಧ 65 ಕೇಸುಗಳಿದ್ದವು. ಲೋಕಾಯುಕ್ತವನ್ನೇ ಮುಚ್ಚಿ ಬಿಟ್ಟರು. 10 ಕೇಸುಗಳನ್ನು ಎಸಿಬಿಗೆ ಕೊಟ್ಟು ಖುಲಾಸೆ ಮಾಡಿಸಿಕೊಂಡರು. ಇನ್ನೂ 50 ಕೇಸುಗಳಿವೆ. ಅವುಗಳ ತನಿಖೆ ಮಾಡಬೇಕೆಂದು ಮನವಿ ಮಾಡಿದ್ದಾಗಿ ತಿಳಿಸಿದರು. ಅಲಿಬಾಬಾ 40 ಕಳ್ಳರ ಮಾದರಿಯಲ್ಲಿ ಸಿದ್ದರಾಮಯ್ಯರ ಸರಕಾರವು ಸಿದ್ದರಾಮಯ್ಯ ಮತ್ತು 40 ಕಳ್ಳರ ಸರಕಾರವಾಗಿತ್ತು. ಅಂಥವರು ಇದೀಗ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯರಿಗೆ ನೋಟಿಸ್ ಕೊಟ್ಟು, ಅವರ ಕರ್ಮಕಾಂಡವೆಲ್ಲವನ್ನೂ ಬಯಲಿಗೆ ತರುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು. ಸಿದ್ದರಾಮಯ್ಯ ಹರಿಶ್ಚಂದ್ರರೇನೂ ಅಲ್ಲ. ಅವರ ಕಾಲದಲ್ಲಿ ಮಾಡಿರುವುದು ಬಹಳಷ್ಟಿದೆ. ಆದರೆ, ಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಅವರು ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು? ಕರ್ನಾಟಕದಲ್ಲಿ 120ರಷ್ಟಿದ್ದ ಸ್ಥಾನ 80ಕ್ಕೆ ಯಾಕೆ ಬಂತು? ಎಂದು ಕೇಳಿದ ಅವರು, ಅವರು ಮಾಡಿದ ಕರ್ಮಕಾಂಡಗಳನ್ನು ಸಹಿಸಲಾರದೆ ಜನರು ಮನೆಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
5 ವರ್ಷದಲ್ಲಿ ಜನರು ಎಲ್ಲ ಮರೆತಿದ್ದಾರೆ ಎಂದು ಭಾವಿಸಿ ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರಿಗೆ ಮಾನ, ಮರ್ಯಾದೆ ಇದ್ದರೆ ಬಂದು ಇದನ್ನು ಎದುರಿಸಲಿ. ನೇರವಾಗಿ ದಾಖಲೆಗಳನ್ನು ಕೋರ್ಟಿಗಾದರೂ ನೀಡಲಿ ಎಂದು ಸವಾಲು ಹಾಕಿದರು.
ಇದಲ್ಲದೆ ಇನ್ನೂ ಹಲವಾರು ಕೇಸುಗಳಿವೆ. ಎಲ್ಲದರಲ್ಲೂ ಶೇ 25- 30ರಷ್ಟು ಹೆಚ್ಚುವರಿ ಹಣ ಕೊಟ್ಟು ಇವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪ ಮಾಡಿದರು. ಅವರು ನಮ್ಮ ಮೇಲೆ ಬೆಂಗಳೂರು ನಗರದ ವಿಚಾರವಾಗಿ ಆರೋಪಿಸಿದ್ದಾರೆ. ನಾವು ಹೊರಗಡೆ ನಡೆದ ಕಾಂಗ್ರೆಸ್ ಭ್ರಷ್ಟಾಚಾರದ ಮಾಹಿತಿಯನ್ನೂ ಲೋಕಾಯುಕ್ತಕ್ಕೆ ಕೊಡಲಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬಾಕಿ ಇರುವ 50 ಕೇಸುಗಳ ಮರುತನಿಖೆಗೆ ಆಗ್ರಹಿಸುವುದಾಗಿ ಹೇಳಿದ ಅವರು, ಕ್ರಮ ಜರುಗಿಸಲು ಒತ್ತಾಯಿಸಿದರು. ಇದರ ಸಂಪೂರ್ಣ ತನಿಖೆ ಆದರೆ ಇವರ ಕಳ್ಳತನ ಹೊರಗೆ ಬರಲಿದೆ; ಈ ಕಳ್ಳಖರೀಮರು ಹೊರಗೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಘಟ್ಟ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment