*ವಿಧಾನಸಭೆ ಸೋಲಿನ ಹೊಣೆ ಹೊತ್ತು ಲೋಕಸಭೆ ಚುನಾವಣೆಗೆ ತಯಾರಿ ಆರಂಭ**ಜನ ವಿರೋಧಿ ನೀತಿಗಳ ಜಾರಿಗೆ ಮುಂದಾದ್ರೆ ಸುಮ್ಮನಿರಲ್ಲ: ಮಾಜಿ ಸಿಎಂ ಬೊಮ್ಮಾಯಿ‌**ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ‌ ಆಕ್ರೋಶ*

*ವಿಧಾನಸಭೆ ಸೋಲಿನ ಹೊಣೆ ಹೊತ್ತು ಲೋಕಸಭೆ ಚುನಾವಣೆಗೆ ತಯಾರಿ ಆರಂಭ*

*ಜನ ವಿರೋಧಿ ನೀತಿಗಳ ಜಾರಿಗೆ ಮುಂದಾದ್ರೆ ಸುಮ್ಮನಿರಲ್ಲ: ಮಾಜಿ ಸಿಎಂ ಬೊಮ್ಮಾಯಿ‌*

*ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ‌ ಆಕ್ರೋಶ*

ಬೆಳಗಾವಿ: ವಿಧಾನಸಭೆ ಚುನಾವಣೆಯ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಇಂದಿನಿಂದಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಬೆಳಗಾವಿಯಲ್ಲಿ ಪಕ್ಷದ ಮುಖಂಡರ ಸಭೆ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಅಖಂಡ ಬೆಳಗಾವಿ ಜಿಲ್ಲೆಯ ಹಿರಿಯರು ಸಂಸತ್ ಸದಸ್ಯರು ಮತ್ತು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ಎಲ್ಲರ ಜತೆಗೆ ಇಂದು ಸೋಲಿನ ಪರಾಮರ್ಶೆ‌ ಮಾಡಿದ್ದೇವೆ. ಸೋಲಲು ಸ್ಥಳೀಯ ವಿಚಾರಗಳು ಕಾರಣವೋ? ಬೇರೆ ಯಾವ ಕಾರಣವೋ ಎನ್ನುವುದನ್ನು ಅರಿಯಲು ಸಭೆ ಮಾಡಲಾಗಿದೆ. ಇದರ ಜೊತೆಗೆ ಲೋಕಸಭೆ ಚುನಾವಣೆಗೆ ಮತ್ತೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಮತಗಳನ್ನ ಜಾಸ್ತಿ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಬಿಜೆಪಿಗೆ ಜನ ಮನ್ನಣೆ ನೀಡಲಿದ್ದಾರೆ. ಇಂದಿನಿಂದಲೇ ಲೋಕಸಭಾ ಚುನಾವಣೆಯ ತಯಾರಿ ಆರಂಭ ಎಂದರು.

ಚುನಾವಣೆಯ ವೇಳೆ ನಾವು ತಡವಾಗಿ ಸೀಟ್ ಅನೌನ್ಸ್ ಮಾಡಿದ್ದೇವು. ಹೊಸಬರಿಗೆ ಟಿಕೆಟ್ ಕೊಟ್ಟಿದ್ದು ಸಂಯೋಜನೆ ಆಗಲಿಲ್ಲ. ಸ್ಥಳೀಯವಾಗಿಯೂ ಸಹ ಕೆಲವು ತೊಂದರೆ ಆಗಿದೆ. ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಬೆಳಗಾವಿಯಲ್ಲೂ ಬಿಜೆಪಿ ಸೋಲಿಗೆ ನಾನೇ ಹೊಣೆ ಹೊರುತ್ತೇನೆ ಎಂದರು.

*ಕಾಂಗ್ರೆಸ್ ಸರ್ಕಾರದ ವಿರುದ್ಧ ಬೊಮ್ಮಾಯಿ‌ ಕಿಡಿ*

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಅಭಿವೃದ್ಧಿ ಕೆಲಸ ಸ್ಥಗಿತಗೊಳ್ಳಬಾರದು. ಹೀಗಾಗಿಯೆ ನಾನು ಸಿಎಂ ಗೆ ಪತ್ರ ಬರೆದು ನಿವೇದನೆ ಮಾಡಿಕೊಂಡಿದ್ದೇನೆ. ವಿವೇಕ ಯೋಜನೆ ನಿಲ್ಲಿಸಬಾರದು. ಅದು ಬಿಜೆಪಿಯ ಯೋಜನೆ ಅಲ್ಲ. ಇದಕ್ಕಾಗಿ ಈಗಾಗಲೇ ಎಂಟು ಸಾವಿರ  ಕೊಠಡಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಏನೂ ನಿರ್ಣಯ ಮಾಡುತ್ತಾರೆ ನೋಡೋಣ. ಅದರ ಮೇಲೆ ನಮ್ಮ ಹೋರಾಟ ನಿಶ್ಚಯ ಆಗಲಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೇವೆ ಎಂದು ಎಲ್ಲೂ ಸಹ ಸಿದ್ದರಾಮಯ್ಯ ಮಾತನಾಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೇಗೆ ಹೊಂದಿಸುತ್ತಾರೆ. ಇದರಿಂದಾಗಿ ಸರ್ಕಾರದ ಮೇಲೆ ಜನರು ಸಂಶಯ ಪಡುವಂತಾಗಿದೆ ಎಂದರು.

ಕಾಂಗ್ರೆಸ್ ಗೆ ಅಧಿಕಾರ ನಡೆಸುವ ಪಾತ್ರ ಜನರು ನೀಡಿದ್ದಾರೆ. ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತೇವೆ. ಜನ ವಿರೋಧಿ ನೀತಿ, ಯೋಜನೆಗಳನ್ನ ಜಾರಿಗೆ ಮುಂದಾದರೆ, ಅದನ್ನ ಖಂಡಿಸುವ ವಿರೋಧ ಪಕ್ಷದ ಸ್ಥಾನ ನಮಗೆ ನೀಡಿದ್ದಾರೆ ಎಂದರು.

*ಗೋಹತ್ಯೆ ಕಾಯ್ದು ಜಾರಿ ವಿರೋಧಿಸಿದ್ರೆ ಕಾಂಗ್ರೆಸ್‌ಗೆ ಆಪತ್ತು*

ಗೋಹತ್ಯೆ ನಿಷೇಧ ಕಾಯ್ದೆ ಮರುಪರಿಶೀಲನೆ ಬಗ್ಗೆ ಕಾಂಗ್ರೆಸ್ ನಾಯಕರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಪಶುಸಂಗೋಪನೆ ಸಚಿವರು ಯಾವ ಮಾಹಿತಿ ಇಟ್ಟುಕೊಂಡು ಮಾತನಾಡಿದ್ದಾರೆ ಗೊತ್ತಿಲ್ಲ. ರಾಜ್ಯದಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.
ಗೋವಿನ ಪವಿತ್ರ ಸಂಬಂಧ ಲೆಕ್ಕಿಸದೇ ಸಚಿವರು ಮಾತನಾಡಿದ್ದಾರೆ. ಅದು ಖಂಡನೀಯ. ನಾವು ತಂದ ಕಾನೂನಿನಲ್ಲಿ ಗೋಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವುದು ಇದೆ. ಗೋಹತ್ಯೆ ನಿಷೇಧ ಕಾಯ್ದೆ 1960 ರಲ್ಲೇ ಬಂದಿರುವಂಥದ್ದು, ಹೀಗಾಗಿ ಅವರೇನು ತಿದ್ದುಪಡಿ ತರ್ತಾರೆ ತರಲಿ, ನೋಡೋಣ. ಗೋಹತ್ಯೆ ನಿಷೇಧ ಕಾಯ್ದೆ ಕಾನೂನು ಟಚ್ ಮಾಡಿದ್ರೆ ಕಾಂಗ್ರೆಸ್‌ಗೆ ಆಪತ್ತು ಕಾದಿದೆ ಎಂದರು.

*ವಿದ್ಯುತ್ ಬಿಲ್ ಹೆಚ್ಚಳದಿಂದ ಜನರಿಗೆ ದೋಖಾ*

ಹಿಂದಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ದೊಡ್ಡ ಪ್ರಮಾಣದ ಹೊರೆಯನ್ನು ಹೆಸ್ಕಾಂ ಮೇಲೆ ಹಾಕಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ದೊಡ್ಡ ಪ್ರಮಾಣದ ಅನುದಾನ ನೀಡಿದ್ದೆ. 13 ಸಾವಿರ ಕೋಟಿ ರೂಪಾಯಿ ನೀಡಿ ಹೆಸ್ಕಾಂ, ಕೆಪಿಟಿಸಿಎಲ್ ಪುನಶ್ಚೇತನ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಇದು ಗೊತ್ತಿಲ್ಲ ಅಂಥೆನಿಲ್ಲ, ವಿದ್ಯುಚ್ಛಕ್ತಿ ಕ್ಷೇತ್ರ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಒಟ್ಟು ಬಿಲ್ ನಲ್ಲಿ ಐವತ್ತು ಪರ್ಸಂಟ್ ಬಿಲ್ ಸರ್ಕಾರದಿಂದ ಬರುತ್ತದೆ. ಹೆಸ್ಕಾಂ ಅಧಿಕಾರಿಗಳಿಗೆ ಬಿಲ್ ವಸೂಲಿ ಮಾಡಲು ಆರ್ಥಿಕ ಇಲಾಖೆಯಲ್ಲಿ ಖುರ್ಚಿ ಹಾಕಿ ಕುಡಬೇಕಾಗುತ್ತದೆ. ಹಳೆ ಬಾಕಿ ಅಂತಾ ಪುಕ್ಕಟೆ ಹೊರೆಯನ್ನು ಜನರ ಮೇಲೆ ಹಾಕಿದ್ದಾರೆ. ಇದು ಜನರಿಗೆ ಮಾಡಿರುವ ಒಂದು ದೋಖಾ, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದನ್ನ ಮಾಡುತ್ತಿದ್ದಾರೆ. ಜನರನ್ನ ಸಂಕಷ್ಟಕ್ಕೆ ಸಿಲುಕಿಸುವುದನ್ನು ಮಾಡುತ್ತಿದ್ದಾರೆ. ಎಷ್ಟು ವಿದ್ಯುತ್ ಬಳಕೆ ಮಾಡಬೇಕು ಎನ್ನುವ ಅಧಿಕಾರ ಪ್ರತಿ ಪ್ರಜೆಗೂ ಇದೆ. ಇವರು ಸರಾಸರಿ ಲೆಕ್ಕದಲ್ಲಿ ಅವರು ಬಳಸುವ ವಿದ್ಯುತ್ ಮೇಲೂ ಸಹ ಹಿಡಿದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

*ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ಅಮುಲು*

ಗೋಹತ್ಯೆ ನಿಷೇಧ, ಪಠ್ಯ ಪುಸ್ತಕ ಪರಿಷ್ಕೃರಣೆ, ಸರ್ಕಾರದ ವಿರುದ್ಧ ಮಾತನಾಡಿದ್ರೆ ಜೈಲಿಗೆ ಹಾಕುತ್ತೇವೆ ಎಂಬ ಕೆಲ ಸಚಿವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ, ಈ ಸರ್ಕಾರಕ್ಕೆ ಅಧಿಕಾರದ ಅಮುಲು ಬಂದಿದೆ. ಕೆಲ ಸಚಿವರ ಹೇಳಿಕೆ ನೋಡಿದ್ರೆ ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿದ್ದಾರೆ. ನಮ್ಮ ಅಭಿಪ್ರಾಯಕ್ಕೆ ಸಹಮತ ಇಲ್ಲದವರ ಧ್ವನಿಯನ್ನು ಹತ್ತಿಕ್ಕುವ ಪ್ರವೃತ್ತಿಯಲ್ಲಿ ಮಾತನಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಕರ್ನಾಟಕದಲ್ಲಿ ಎಮರ್ಜೆನ್ಸಿ ಬರುತ್ತದೆಯೇನೋ ಎಂಬುದು ಸ್ಪಷ್ಟವಾಗುತ್ತಿದೆ. ಅಧಿಕಾರಿಗಳಿಗೆ ಒಬ್ಬರು ಮಂತ್ರಿ ಹೇಳಿದ್ದಾರೆ, ಕೆಲಸ ಮಾಡದಿದ್ದರೆ ಚಾಕುವಿನಿಂದ ಹೊಡೆಯುತ್ತೇವೆ ಎನ್ನುತ್ತಾರೆ. ಜನರು ನಿಮಗೆ ಅಧಿಕಾರ ಕೊಟ್ಟಿದ್ದು ಜನರ ಸೇವೆ ಮಾಡಲೆಂದು, ರಾಜ್ಯದ ಅಭಿವೃದ್ಧಿಗಾಗಿ, ಬಡವರಿಗೆ ಸಹಾಯ ಮಾಡಲು. ಈ ಥರ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ನಿಮಗೆ ರಾಜ್ಯದ ಜನರು ಅಧಿಕಾರ ಕೊಟ್ಟಿಲ್ಲ. ನಾವು ವಿರೋಧ ಪಕ್ಷವಾಗಿ ಸುಮ್ಮನೇ ಕೂಡುವುದಿಲ್ಲ. ಯಾರ್ಯಾರಣ್ಣ ಜೈಲಿಗೆ ಹಾಕುತ್ತಿರೋ ಹಾಕಿ. ನಿಮ್ಮ‌ ನೀತಿ, ವರ್ತನೆಗಳ ವಿರುದ್ಧ ಜನರು ತಿರುಗಿ ಬಿದ್ದರೆ ನಿಮಗೆ ಜೈಲುಗಳು ಸಾಕಾಗುವುದಿಲ್ಲ. ತಾಕತ್ತಿನಿಂದ ಮಣಿಸುತ್ತೇವಂದರೆ, ನಮ್ಮದೇನು ಇಸ್ಲಾಂ ರಾಷ್ಟ್ರವಲ್ಲ. ಎಮರ್ಜೆನ್ಸಿ ‌ಹೇರಲು ಪ್ರಜಾಪ್ರಭುತ್ವದಲ್ಲಿ ಜನತೆ ಕೈಯಲ್ಲಿ ದೊಡ್ಡ ಶಕ್ತಿಯಿದೆ. ಖಂಡಿತವಾಗಿ ನಾವು ಇದಕ್ಕೆ ಅವಕಾಶ ‌ಕೊಡುವುದಿಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷ ‌ನಾಯಕನ‌ ಆಯ್ಕೆಯನ್ನು ಖಂಡಿತವಾಗಿ ಅತಿ ಶೀಘ್ರವೇ ಮಾಡುತ್ತೇವೆ. ಈ‌ ಅಧಿವೇಶನದೊಳಗೆ ಪ್ರತಿಪಕ್ಷ ನಾಯಕನ ಆಯ್ಕೆ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಇನ್ನೂ ಇದೇ ವೇಳೆ, ಸಂಪುಟದಲ್ಲಿ ಲಿಂಗಾಯತ ಸಮುದಾಯದ ಕಡೆಗಣನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಇದು ಕಾಂಗ್ರೆಸ್ ಆಂತರಿಕ ವಿಚಾರ‌. ಆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಈ ಸಲ ಲಿಂಗಾಯತ ಸಮುದಾಯದ ಹೆಚ್ಚಿನ ಶಾಸಕರು ಗೆದ್ದಿದ್ದಾರೆ. ಸಂಪುಟದಲ್ಲಿ ಇನ್ನೂ ಹೆಚ್ಚಿನ ಪ್ರತಿನಿಧಿತ್ವವನ್ನು ಲಿಂಗಾಯತ ಸಮುದಾಯಕ್ಕೆ ಕೊಡಬೇಕಿತ್ತು.
ಇದು ಸಮಾನ್ಯ ಲಿಂಗಾಯತನ ಮನಸ್ಸಿನಲ್ಲಿ ಇರುವಂಥದ್ದು ಎಂದರು.

Post a Comment

Previous Post Next Post