ಶೃಂಗೇರಿಯ ಜಗದ್ಗುರು ಸನ್ನಿಧಾನ ಶ್ರೀ ವಿದುಶೇಖರ ಭಾರತೀ ಸ್ವಾಮಿಗಳಿಂದ ಕಾಶ್ಮೀರದ ಗಡಿಯಲ್ಲಿ ಶಾರದಾಂಬ ಪ್ರಾಣ ಪ್ರತಿಷ್ಠೆ ಮತ್ತು ಕುಂಬಾಬಿಶೇಕದಂತ ಐತಿಹಾಸಿಕ ಕಾರ್ಯಕ್ರಮ ಸಂಪನ್ನಗೊಂಡಿದೆ.

 ಶೃಂಗೇರಿಯ ಜಗದ್ಗುರು ಸನ್ನಿಧಾನ ಶ್ರೀ ವಿದುಶೇಖರ ಭಾರತೀ ಸ್ವಾಮಿಗಳಿಂದ ಕಾಶ್ಮೀರದ ಗಡಿಯಲ್ಲಿ ಶಾರದಾಂಬ ಪ್ರಾಣ ಪ್ರತಿಷ್ಠೆ ಮತ್ತು ಕುಂಬಾಬಿಶೇಕದಂತ ಐತಿಹಾಸಿಕ ಕಾರ್ಯಕ್ರಮ ಸಂಪನ್ನಗೊಂಡಿದೆ. ಶೃಂಗೇರಿಯಿಂದಲೇ ತೆರಳಿದ್ದ ಋತ್ವಿಕ ಶ್ರೇಷ್ಠರು ಇಲ್ಲಿನ ಸಂಪ್ರದಾಯದಂತೆ ಶ್ರೀಚಕ್ರ ಪ್ರತಿಷ್ಠಾಪಿಸಿ, ಹೋಮ ಹವನ ನಡೆಸಿ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಜಗದ್ಗುರು ಸನ್ನಿಧಾನ ಜೂನ್ 4ರಂದೇ ವಿಶೇಷ ವಿಮಾನದ ಮೂಲಕ ಶ್ರೀನಗರ ತಲುಪಿದ್ದಾರೆ. ಅಲ್ಲಿ ಅವರ ಮುಂದಿನ ಪ್ರಯಾಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಕಲ ಏರ್ಪಾಟನ್ನೂ ಮಾಡಿದೆ. ಪ್ರಯಾಣಿಸಲು ಬಾಂಬ್ ನಿರೋದಕ ವಾಹನ,ಗಡಿ ಸಮೀಪ ತಲುಪಲು ಮಿಲಿಟರಿ ಹೆಲಿಕ್ಯಾಪ್ಟರ್, ಸೈನ್ಯದ ರಕ್ಷಣೆ ಮುಂತಾದ ಸಕಲ ಏರ್ಪಾಟುಗಳನ್ನೂ ಉಭಯ ಸರ್ಕಾರಗಳು ಕೈಗೊಂಡು ಜಗದ್ಗುರುಗಳ ವಿಜಯಯಾತ್ರೆಗೆ ಸಕಲ ಸಹಯೋಗ ನೀಡಿದೆ.ಶ್ರೀನಗರದಲ್ಲಿ ಉಪರಾಜ್ಯಪಾಲರು ಗುರುದರ್ಷನ ಮಾಡಿ ಆಶೀರ್ವಾದ ಪಡೆದಿದ್ದಾರೆ. ದೇವಸ್ಥಾನ ಸನಿಹದ ಹೆಲಿಪ್ಯಾಡಿನಲ್ಲಿ ಇಳಿಯುತ್ತಿದ್ದಂತೆ ಜಗದ್ಗುರುಗಳನ್ನು ಅಲ್ಲಿನ ಜಿಲ್ಲಾಧಿಕಾರಿ ಪೂರ್ಣ ಕುಂಬ ಸ್ವಾಗತ ನೀಡಿ ಬರಮಾಡಿಕೊಂಡಿದ್ದಾರೆ. 
ಪಾಕ್ ಗಡಿಗೆ ಹೊಂದಿಕೊಂಡಂತೆ ಇರುವ ಈ ದೇವಸ್ಥಾನಕ್ಕೆ ಅಂದು ಅತಿಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಅಲ್ಲಿ ಹತ್ತು ಜನ ಸೇರುವುದೂ ಕಷ್ಟ. ಅಲ್ಲಗೆ ಬರಲು ಜಿಲ್ಲಾಡಳಿತ ಅನುಮತಿ ಪತ್ರ ಪಡೆಯಬೇಕು.ಹೀಗಿದ್ದೂ ಅಂದು ಸೇರಿದ್ದ ಭಕ್ತರ ಸಂಖ್ಯೆ ವಿಶೇಷ ಅನಿಸದಿರದು. ಗಡಿಯಲ್ಲಿ ಗಣಹೋಮ ಸೇರಿದಂತೆ ವಿವಿದ ಹೋಮ ಹವನ ನಡೆದಿದ್ದು ಒಂದು ವಿಶೇಷ ಅಧ್ಯಾಯಕ್ಕೆ ನಾಂದಿ ಹಾಡಿದಂತಾಯಿತು. ಭರತ ವರ್ಷದ ಚರಿತ್ರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಘಟನೆ ಇದು. 
ಬಾನುವಾರ ಒಂದು ದಿನದ ವಾಸ್ತವ್ಯದ ನಂತರ ಮತ್ತೆ ಅದೇ ಸೈನ್ಯ ಹೆಲಿಕ್ಯಾಪ್ಟರ್ ಮೂಲಕ ಜಗದ್ಗುರುಗಳು ಶ್ರೀನಗರಕ್ಕೆ ಹಿಂತಿರುಗಿ ಅಲ್ಲೇ ವಾಸ್ತವ್ಯ ಮಾಡಿದ್ದಾರೆ. ಅಂದು ಶ್ರೀನಗರದಲ್ಲಿ ಚಂದ್ರಮೌಳೇಶ್ವರ ಪೂಜೆ ನೆರವೇರಿದೆ. ಸೋಮವಾರ ಬೆಳಿಗ್ಗೆ ಶ್ರೀನಗರದ ಶಂಕರಾಚಾರ್ಯ ಬೆಟ್ಟಕ್ಕೆ ತಿರಳಿದ ಜಗದ್ಗುರುಗಳು ಅಲ್ಲಿ ಶಿವಪೂಜೆ ನೆರವೇರಿಸಿದ್ದಾರೆ. ಮಹೇಶ್ವರನಿಗೆ 1008 ರುದ್ರಾಕ್ಷಿ ಮಾಲೆ,ಕಮಲ ಪುಷ್ಪ ಮತ್ತು ರಜತ ಬಿಲ್ವಪತ್ರೆ ಸಮರ್ಪಿಸಿ ಜಗದ್ಗುರುಗಳಿಂದ ವಿಶೇಷ ಪೂಜೆ ಸಂದಿದೆ. ದೇವತಾ ಕಾರ್ಯ ಯಶಸ್ವಿಯಾಗಿ ಮುಗಿಸಿದ ನಂತರ ಜಗದ್ಗುರುಗಳು ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ ಶೃಂಗೇರಿಯತ್ತ ಪ್ರಯಾಣಿಸಿದ್ದಾರೆ. 
ಶಂಕರಾಚಾರ್ಯರು ಕಾಶ್ಮೀರದಿಂದ ಜಗನ್ಮಾತೆ ಶಾರದೆಯನ್ನು ಶೃಂಗೇರಿಗೆ ತಂದು ಶ್ರೀಚಕ್ರ ಪ್ರತಿಷ್ಠಾಪಿಸಿ ಶಾರದೆಯನ್ನು ಇಲ್ಲಿ ನೆಲೆಗೊಳಿಸಿದಂತೆ, ಸಹಸ್ರಾರು ವರ್ಷಗಳ ನಂತರ ಶೃಂಗೇರಿಯ ಶಂಕರಾಚಾರ್ಯರು ಶೃಂಗೇರಿಯಿಂದಲೇ ಅಮ್ಮನವರನ್ನು ಕಾಶ್ಮೀರಕ್ಕೂ ಕರೆತಂದು ಶ್ರೀಚಕ್ರ ಪ್ರತಿಷ್ಠಾಪಿಸಿ ಕಾಶ್ಮೀರದಲ್ಲೆ ಜಗನ್ಮಾತೆಯನ್ನು ನೆಲೆಗೊಳಿಸಿದ್ದು ಸನಾತನ ಧರ್ಮದ ಇತಿಹಾಸದಲ್ಲೇ ಪವಿತ್ರ ಘಟನೆ. ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳು ಆಗಲೇ ಶಂಕರ ಸ್ಥಾಪಿತ ಬದರಿ ಮತ್ತು ದ್ವಾರಕಾ ಪೀಠದ ಜಗದ್ಗುರುಗಳ ಪಟ್ಟಾಭಿಷೇಕ ಮಹೋತ್ಸವ ನಡೆಸಿಕೊಟ್ಟು ಶಂಕರಾಚಾರ್ಯರ ನಂತರ ಪುನಃ ಇದನ್ನು ನಡೆಸಿದ ಪ್ರಥಮ ಗುರುಗಳೆಂಬ ಕೀರ್ತಿಗೆ ಭಾಜನರಾಗಿದ್ದರು. ಈಗ ಶಂಕರಾಚಾರ್ಯರಂತೆ ಕಾಶ್ಮೀರದಲ್ಲಿ ಭಾರತದ ಉತ್ತರದ ತುದಿಯಲ್ಲಿ ಜಗನ್ಮಾತೆಯನ್ನು ಪ್ರತಿಷ್ಠಾಪಿಸಿ ಅಭಿನವ ಶಂಕರರೆನಿಸಿದ್ದಾರೆ. ಈ ಐತಿಹಾಸಿಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾದವರೆಲ್ಲರೂ ಗುರುಕೃಪೆಗೆ ವಿಶೇಷವಾಗಿ ಪಾತ್ರರಾದವರು .ಅಪರೋಕ್ಷ ಪಾಲ್ಗೊಂಡ ನಾವೆಲ್ಲರೂ ಧನ್ಯರು.ಶ್ರೀಗಳಿಗೆ ಸನ್ಯಾಸ 
ನೀಡುವ ಸಂಧರ್ಭದಲ್ಲಿ ಮಹಾ ಸನ್ನಿಧಾನ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ನಮ್ಮ ಶಿಷ್ಯರು ಮಹತ್ಕಾರ್ಯ ಮಾಡಿ ಶೃಂಗೇರಿಯ ಕೀರ್ತಿಯನ್ನು ಜಗತ್ ಪ್ರಸಿದ್ದ ಮಾಡಲಿದ್ದಾರೆ ಎಂದು ಹೇಳಿದ್ದರು. ಅದು ಒಂದೊಂದಾಗಿ ಸತ್ಯವಾಗುತ್ತಿದೆ. ಮಹಾತ್ಮರ ಮಾತು ವ್ಯರ್ಥ ಆಗುವುದಿಲ್ಲ.ಸನ್ನಿಧಾನ ಸನಾತನ ಧರ್ಮ ಉಳಿಸಿ ಸಂರಕ್ಷಣೆ ಮಾಡುವಲ್ಲಿ ಇನ್ನಷ್ಟು ಮಹತ್ಕಾರ್ಯ ಮಾಡುವಲ್ಲಿ ಯಾವ ಸಂಶಯವೂ ಇಲ್ಲ...🙏

Post a Comment

Previous Post Next Post