ಯೋಗೇಶ್ವರರನ್ನು ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ದೌರ್ಬಲ್ಯ ಒಪ್ಪಿಕೊಂಡ ಕಾಂಗ್ರೆಸ್ ಪಕ್ಷ: ಸಿ.ಟಿ.ರವಿ



ಯೋಗೇಶ್ವರರನ್ನು ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ದೌರ್ಬಲ್ಯ ಒಪ್ಪಿಕೊಂಡ ಕಾಂಗ್ರೆಸ್ ಪಕ್ಷ: ಸಿ.ಟಿ.ರವಿ

ಬೆಂಗಳೂರು: ಯೋಗೇಶ್ವರ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ದುರ್ಬಲವೆಂದು ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಂತಾಗಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗಳಿಗೆ ಉತ್ತರ ನೀಡಿದರು. ಯೋಗೇಶ್ವರ್ ಅವರು ಕಾಂಗ್ರೆಸ್ಸಿಗೆ ಹೋದುದರಿಂದ ಒಂದಂತೂ ನಾವು ಊಹಿಸಬಹುದು. 136 ಶಾಸಕರಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‍ರಂಥ ಪ್ರಬಲ ನಾಯಕರನ್ನು ಹೊಂದಿದ ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿ ದುರ್ಬಲ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.
ನಿನ್ನೆ ಮೊನ್ನೆಯವರೆಗೂ ನಾನೇ ಕ್ಯಾಂಡಿಡೇಟ್ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದರು. ಪೂರ್ವತಯಾರಿ ಮಾಡಿ ಓಡಾಡುತ್ತಿದ್ದರು. ಡಿ.ಕೆ. ಸುರೇಶ್ ಅಲ್ಲಿ ಅಭ್ಯರ್ಥಿ ಎಂದು ಬಹಳ ಜನ ಅಂದುಕೊಂಡಿದ್ದರು. ಅಲ್ಲಿ ಯೋಗೇಶ್ವರ್‍ಗೇ ಟಿಕೆಟ್ ಕೊಟ್ಟು ಅಸಹಾಯಕತೆ ತೋರಿಸುತ್ತಾರೋ, ಅಥವಾ ಯೋಗೇಶ್ವರ್ ಜತೆಗಿಟ್ಟುಕೊಂಡು ಡಿ.ಕೆ.ಸುರೇಶ್ ಅಭ್ಯರ್ಥಿ ಆಗುತ್ತಾರೋ ನೋಡಬೇಕಿದೆ. ಆದರೆ, ಕಾಂಗ್ರೆಸ್ ತಾನು ಚನ್ನಪಟ್ಟಣದಲ್ಲಿ ದುರ್ಬಲ ಎಂದು ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.

ಹುಲಿ ಮಣಿಸುವರೇ? ಬಲಿ ಆಗುವರೇ?
ಯೋಗೇಶ್ವರ್ ಅವರು ಮಹತ್ವಾಕಾಂಕ್ಷೆ ಇಟ್ಟುಕೊಂಡ ರಾಜಕಾರಣಿ. ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ರಾಜಕಾರಣ ಮಾಡಿದವರು. ಡಿ.ಕೆ.ಶಿವಕುಮಾರ್ ಮತ್ತು ಅವರ ನಡುವಿನ ಶತ್ರುತ್ವ ಇವತ್ತು ನಿನ್ನೆಯದಲ್ಲ. ಹುಲಿ ಬೋನಿಗೆ ಹೋಗಿದ್ದಾರೆ. ಒಂದೋ ಹುಲಿಯನ್ನು ಮಣಿಸಬೇಕು; ಇಲ್ಲವೇ ಹುಲಿಗೆ ಬಲಿ ಆಗಬೇಕು ಎಂದು ತಿಳಿಸಿದರು.
ಇವತ್ತೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ರಾಜಕಾರಣ ಮತ್ತು ಯೋಗೇಶ್ವರ್ ರಾಜಕಾರಣದ ಚಿಂತನೆಯ ನಡುವೆ ಅಗಾಧವಾದ ಅಂತರವಿದೆ. ಯೋಗೇಶ್ವರ್ ಅವರು ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡುತ್ತಾರೆ. ಸದಾಕಾಲ ರಾಜಕೀಯ ಕ್ಷೇತ್ರದ ಲಾಭ ನಷ್ಟದ ಲೆಕ್ಕ ಹಾಕುತ್ತಾರೆ. ನಮ್ಮದು ಸೈದ್ಧಾಂತಿಕ ಬದ್ಧತೆಯ ರಾಜಕಾರಣ ಎಂದು ವಿವರಿಸಿದರು. ಲಾಭ ನಷ್ಟದ ಲೆಕ್ಕಾಚಾರಕ್ಕೆ ಅವಕಾಶವೂ ಇಲ್ಲ; ಆ ಚಿಂತನೆಯೂ ನಮ್ಮಲ್ಲಿಲ್ಲ ಎಂದು ನುಡಿದರು.

ಯೋಗೇಶ್ವರ್ ರಾಜೀನಾಮೆ ಕೊಟ್ಟ ಮೇಲೆ ಸೋದರಿಕೆ ಸಂಬಂಧವೇನೂ ಇಲ್ಲ. ನಾವು ಎನ್‍ಡಿಎ ಆಗಿ ಚನ್ನಪಟ್ಟಣದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ನಾವು ನಿರ್ಣಯಿಸಿ ಚರ್ಚೆ ಮಾಡುವುದಿಲ್ಲ. ಚರ್ಚಿಸಿ ನಿರ್ಣಯಕ್ಕೆ ಬರುತ್ತೇವೆ. ಒಂದೂವರೆ ಎರಡು ತಿಂಗಳ ಹಿಂದೆಯೇ ನಾವು ಚನ್ನಪಟ್ಟಣದ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿಯವರ ಜೊತೆ ಚರ್ಚಿಸಿದ್ದೇವೆ. ಚನ್ನಪಟ್ಟಣ ಕುಮಾರಸ್ವಾಮಿಯವರು ಪ್ರತಿನಿಧಿಸಿದ ಕ್ಷೇತ್ರ. ಏಕಪಕ್ಷೀಯ ನಿರ್ಣಯ ಹೇರುವುದು, ನಮ್ಮ ನಿರ್ಣಯ ಹೇರುವುದಾಗಲೀ ಮೈತ್ರಿ ಅನಿಸುವುದಿಲ್ಲ. ಇಬ್ಬರೂ ಸೇರಿ ನಿರ್ಣಯಿಸಬೇಕಾಗುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಜನಹಿತ ಮರೆತ ಸರಕಾರ
ಬೆಂಗಳೂರಿನಲ್ಲಿ ಜನರ ಬದುಕು ಬೀದಿಗೆ ಬಿದ್ದಿದೆ. ಇವತ್ತು ಜನಹಿತ ಮರೆತ ಸರಕಾರ ರಾಜ್ಯದಲ್ಲಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿಯನ್ನು ಸ್ವಾಗತ ಮಾಡುವುದು ಜನರ ಬದುಕಿಗೆ ಸ್ಪಂದಿಸುವುದಕ್ಕಿಂತ ಮುಖ್ಯವಾಗಿದೆ. ಜನರ ಸಮಸ್ಯೆಗಳಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಇಂಥ ಸರಕಾರ ಯಾಕಿರಬೇಕು ಹೇಳಿ ಎಂದು ಪ್ರಶ್ನಿಸಿದರು.
ಮಳೆಯಿಂದ ಕಟ್ಟಡ ಕುಸಿತ ಸೇರಿ ಮಳೆ ಕಾರಣಕ್ಕೆ 8ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸರಕಾರಕ್ಕೆ ಮಾನವೀಯತೆ ಇದೆಯೇ? ಸ್ಪಂದನೆ ಏನು? ಎಂದು ಕೇಳಿದರಲ್ಲದೆ, ಭ್ರಷ್ಟಾಚಾರದಲ್ಲಿ ತೊಡಗಿದ ಬದುಕಿದ್ದೂ ಸತ್ತಂತಿರುವ ಸರಕಾರ ಇಲ್ಲಿದೆ ಎಂದು ಟೀಕಿಸಿದರು.
ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು. ಆಗ ಎಲ್ಲರೂ ಸಮಾನರಾಗುತ್ತಾರೆ. ಆಗ ಸಂವಿಧಾನದ ಆಶಯವನ್ನು ಎತ್ತಿ ಹಿಡಿದಂತಾಗಲಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.


 (ಕರುಣಾಕರ 

ಚನ್ನಪಟ್ಟಣದಲ್ಲಿ ಎನ್‍ಡಿಎ ಅಭ್ಯರ್ಥಿ ಗೆಲುವು: ಪ್ರೀತಂ ಗೌಡ

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರವು ಕುಮಾರಸ್ವಾಮಿಯವರ ಕ್ಷೇತ್ರವಾಗಿದ್ದು, ಅಲ್ಲಿ ಬಿಜೆಪಿ ತಂಡವು ಅವರ ಜೊತೆ ನಿಂತು ಚುನಾವಣೆಯನ್ನು ಗಟ್ಟಿಯಾಗಿ ಎದುರಿಸಿ ಖಂಡಿತವಾಗಿ ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಭ್ಯರ್ಥಿ ಯಾರೇ ಆಗಿದ್ದರೂ ಬಿಜೆಪಿಯ ರಾಜ್ಯದ ಎಲ್ಲ ಕಾರ್ಯಕರ್ತರು ಹೋಗಿ ಎನ್‍ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ನುಡಿದರು.
ನಮಗೆ ನರೇಂದ್ರ ಮೋದಿಯವರು ನಾಯಕರು. ಅವರ ನೇತೃತ್ವದ ಸಂಪುಟದಲ್ಲಿ ಕುಮಾರಸ್ವಾಮಿಯವರು ಮಂತ್ರಿಯಾಗಿದ್ದು, ಚನ್ನಪಟ್ಟಣದ ಪ್ರತಿನಿಧಿಯಾಗಿದ್ದ ಕಾರಣ ಅವರ ಮೇಲೆ ಜವಾಬ್ದಾರಿ ಇರುವುದು ಸ್ವಾಭಾವಿಕ ಎಂದು ಅಭಿಪ್ರಾಯಪಟ್ಟರು. ಅವರ ನೇತೃತ್ವದಲ್ಲೇ ಚುನಾವಣೆ ನಡೆಸಿ ಗೆದ್ದು ಎನ್‍ಡಿಎ ಧ್ವಜ ಹಾರಿಸುತ್ತೇವೆ ಎಂದರು.
ಉತ್ತಮ ಅಭ್ಯರ್ಥಿ ನಿಲ್ಲಿಸಿದರೆ, ಚನ್ನಪಟ್ಟಣದಲ್ಲಿ ಕನಿಷ್ಠ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಕುಮಾರಸ್ವಾಮಿ ಅವರು ಸ್ವಾಭಾವಿಕವಾಗಿಯೇ ಚನ್ನಪಟ್ಟಣದ ಸೀಟ್ ಬೇಕೆಂದು ಕೇಳಿದ್ದಾರೆ. ಯೋಗೇಶ್ವರ್ ಬಿಜೆಪಿ ಬಿಟ್ಟ ಕಾರಣ ಅವರಿಗೆ ಲೈನ್ ಕ್ಲಿಯರ್ ಆಗಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಕುಮಾರಸ್ವಾಮಿಯವರಿಗೆ ಶಕ್ತಿ ತುಂಬುವ ಕೆಲಸ ನಮ್ಮದಾಗಲಿದೆ ಎಂದು ಸ್ಪಷ್ಟಪಡಿಸಿದರು.


ಹಳೆ ಮೈಸೂರು ಭಾಗದಲ್ಲಿ ಪ್ರಭಾವ, ಶಕ್ತಿ ಇದ್ದ ಯೋಗೇಶ್ವರ್
ಯೋಗೇಶ್ವರ್ ಅವರು ಬಿಜೆಪಿಯ ನಾಯಕರಾಗಿದ್ದು, ಅವರದೇ ಆದ ಶಕ್ತಿ ಇತ್ತು. ಅವರು ಬಿಜೆಪಿ ತೊರೆದಿರುವುದು ವೈಯಕ್ತಿಕವಾಗಿ ನೋವನ್ನುಂಟು ಮಾಡಿದೆ. ಹಳೆ ಮೈಸೂರು ಭಾಗದಲ್ಲಿ ಅವರದೇ ಆದ ಪ್ರಭಾವ, ಶಕ್ತಿಯನ್ನು ಇಟ್ಟುಕೊಂಡು ಪಕ್ಷ ಕಟ್ಟುವ ಕಲ್ಪನೆ ಇತ್ತು. ಸ್ವಾರ್ಥ ಕಾರಣದಿಂದ ಪಕ್ಷ ತೊರೆದು ಅನ್ಯ ಪಕ್ಷಕ್ಕೆ ಸೇರಿದ್ದಾರೆ. ಪಕ್ಷದ ನಿರೀಕ್ಷೆ ಹುಸಿ ಮಾಡಿ ಅವರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.
ಕುಮಾರಸ್ವಾಮಿ ಅವರು ಕಳೆದ ಚುನಾವಣೆಯಲ್ಲಿ ಅವರ ವಿರುದ್ಧ ಗೆದ್ದಿದ್ದರು. ಬಿಜೆಪಿಯಿಂದ ಯೋಗೇಶ್ವರ್ ಅವರು ಎರಡನೇ ಸ್ಥಾನದಲ್ಲಿದ್ದರು. ಕುಮಾರಸ್ವಾಮಿ ಅವರು ಲೋಕಸಭಾ ಸದಸ್ಯರಾದ ಬಳಿಕ ಆ ಕ್ಷೇತ್ರದ ಶಾಸಕರಾಗುವ ಸಹಜ ಇಚ್ಛೆ ಯೋಗೇಶ್ವರ್ ಅವರದಾಗಿತ್ತು. ಆದರೆ, ಗೆಲ್ಲುವ ಅಭ್ಯರ್ಥಿ ಯಾರೆಂದು ಚನ್ನಪಟ್ಟಣದ ಜನಸಾಮಾನ್ಯರಿಗೆ ಕೇಳಿದರೆ ಎನ್‍ಡಿಎಯಿಂದ ಯೋಗೇಶ್ವರ್‍ರಿಗೆ ಗೆಲುವು ನೂರಕ್ಕೆ ನೂರು ಎಂಬುದು ನಮ್ಮ ಕಣ್ಮುಂದೆ ಇದ್ದ ವಿಚಾರ ಎಂದು ತಿಳಿಸಿದರು. ಈ ಬರುವ ಉಪಚುನಾವಣೆಯಲ್ಲಿ ಚನ್ನಪಟ್ಟಣದಿಂದ ಎನ್‍ಡಿಎ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು. 
      
     
      

Post a Comment

Previous Post Next Post