ಇಂದು ನಡೆದ ಮತ ಎಣಿಕೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ತಲೆಕೆಳಗಾಗಿವೆ.ಹರಿಯಾಣದಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಸಜ್ಜಾಗಿದೆ

ರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಐತಿಹಾಸಿಕವಾಗಿ ಮೂರನೇ ಬಾರಿ ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು.

ಆದರೆ ಇಂದು ನಡೆದ ಮತ ಎಣಿಕೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ತಲೆಕೆಳಗಾಗಿವೆ.

ಹರಿಯಾಣದಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಸಜ್ಜಾಗಿದೆ. ಹರಿಯಾಣ ರೈತರ ಪ್ರತಿಭಟನೆ, ಅಗ್ನಿವೀರ್ ಸೈನಿಕರ ನೇಮಕಾತಿ ವಿವಾದ, ಕುಸ್ತಿಪಡುಗಳ ಪ್ರತಿಭಟನೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹರಿಯಾಣದಲ್ಲಿ ಭಾರಿ ಹಿನ್ನಡೆಗೆ ಕಾರಣವಾಗಿದ್ದವು, ಆದರೆ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಮೇಲೆ ಮತದಾರರಿಗೆ ವಿಶ್ವಾಸ ಬರುವಂತೆ ಮಾಡುವಲ್ಲಿ 200 ದಿನಗಳ ಸಿಎಂ ನಯಾಬ್ ಸಿಂಗ್ ಸೈನಿ ಪಾತ್ರ ಪ್ರಮುಖವಾಗಿದೆ.

ಹೌದು, ಇಂದು ಹರಿಯಾಣದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಿದೆ ಎಂದರೆ ಅದರ ಹಿಂದಿರುವ ಪ್ರಮುಖ ಕಾರಣ 200 ದಿನಗಳ ಹಿಂದೆ ಹರಿಯಾಣ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಯಾಬ್ ಸಿಂಗ್ ಸೈನಿ. ತಾವು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ನೀಡಿದ ಜನಪರ ಕಾರ್ಯಕ್ರಮಗಳು ಬಿಜೆಪಿಗಗೆ ವರದಾನವಾಗಿವೆ.

200 ದಿನಗಳಲ್ಲಿ ಮ್ಯಾಜಿಕ್ ಮಾಡಿದ ಸೈನಿ

ವಿಧಾನಸಭೆ ಚುನಾವಣೆಗೆ ಇನ್ನೂ 5 ತಿಂಗಳು ಇದೆ ಎನ್ನುವಾಗ, ಮಾರ್ಚ್ ತಿಂಗಳಿನಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಕಾಂಗ್ರೆಸ್‌ ಭೂಪಿಂದರ್ ಹೂಡಾ ನಯಾಬ್ ಸಿಂಗ್ ಸೈನಿ ಅವರನ್ನು ಡಮ್ಮಿ ಸಿಎಂ ಎಂದು ಟೀಕಿಸಿದ್ದರು. ಆದರೆ ಜನಪರ ಕಾರ್ಯಕ್ರಮ ನೀಡುವತ್ತ ಗಮನ ಹರಿಸಿದ ಸೈನಿ, ಮಾಸ್ ಲೀಡರ್ ಆಗಿ ಹೊರಹೊಮ್ಮಿದ್ದಾರೆ.

Haryana Assembly Election: ಹರಿಯಾಣದಲ್ಲಿ ಹ್ಯಾಟ್ರಿಕ್: ಇದು..ಇದು ಮೋದಿ ಮ್ಯಾಜಿಕ್‌ ಎಂದ ಬಿಜೆಪಿ

ಫಲಿತಾಂಶಕ್ಕೆ ಮುನ್ನವೇ ಸೈನಿ ಅವರು, ಚುನಾವಣೆಯಲ್ಲಿ ಸೋತರೆ ಸಂಪೂರ್ಣ ಹೊಣೆಯನ್ನು ತಾನೇ ಹೊರುವುದಾಗಿ ಹೇಳಿದ್ದಾರೆ. ಆದರೆ ಗೆಲುವು ಸಂಪೂರ್ಣವಾಗಿ ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದಿದ್ದರು, ಇದು ಅವರ ಬದ್ಧತೆಗೆ, ನಾಯಕತ್ವಕ್ಕೆ ಸಾಕ್ಷಿಯಾಗಿದೆ.

ಸೈನಿ ಮಾಡಿದ ಬದಲಾವಣೆಗಳೇನು?

ಸೈನಿ ಅಧಿಕಾರಕ್ಕೆ ಬರುತ್ತಿದ್ದಂತೆ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವತ್ತ ಗಮನ ಹರಿಸಿದರು. ತಮ್ಮ ಮುಂದಿರುವ ಸವಾಲುಗಳ ಬಗ್ಗೆ ಅವರಿಗೆ ಸ್ಪಷ್ಟನೆ ಇತ್ತು, 10 ವರ್ಷಗಳ ಆಡಳಿತದ ಬಗ್ಗೆ ಜನ ಕೋಪಗೊಂಡಿರುವುದು ಸ್ಪಷ್ಟವಾಗಿದ್ದರಿಂದ, ಜನರ ಮನ ಗೆಲ್ಲುವ ಕಾರ್ಯಕ್ರಮಗಳತ್ತ ಗಮನ ಕೊಟ್ಟರು.

ಕೃಷಿ ಕಾನೂನುಗಳ ವಿರುದ್ಧ ಕೇಂದ್ರ ಸರ್ಕಾರ ಮತ್ತು ಹರಿಯಾಣರ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಾಗಿತ್ತು. ರಕ್ಷಣಾ ಮತ್ತು ಅರೆಸೇನಾ ಪಡೆಗಳಲ್ಲಿ ಹರಿಯಾಣದಿಂದ ಹೆಚ್ಚಿನ ಜನ ಹೋಗುತ್ತಿದ್ದರಿಂದ ಅಗ್ನಿಪಥ್ ಯೋಜನೆಗೆ ಕೂಡ ಜನರ ವಿರೋಧವಿತ್ತು. ಸೈನಿ 210 ದಿನಗಳಲ್ಲಿ ಈ ಪ್ರಮುಖ ಸಮಸ್ಯೆಗಳತ್ತ ಗಮನ ಕೊಟ್ಟರು.

ಮೊದಲನೆಯದಾಗಿ ಅವರು ಗ್ರಾಮ ಪಂಚಾಯಿತಿಗಳ ವೆಚ್ಚದ ಮಿತಿಯನ್ನು 5 ಲಕ್ಷ ರೂಪಾಯಿಗಳಿಂದ 21 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯಲು ಕಾರಣವಾದವು. ವಿದ್ಯುತ್ ಬಿಲ್‌ನಲ್ಲಿ ಕನಿಷ್ಠ ಶುಲ್ಕಗಳನ್ನು ರದ್ದುಗೊಳಿಸಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಕನಿಷ್ಠ ಶುಲ್ಕ ರದ್ದಾದ ಬಳಿಕ, ವಿದ್ಯುತ್ ಶುಲ್ಕ ಕಡಿಮೆಯಾಯಿತು. ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಅಡಿಯಲ್ಲಿ ರಾಜ್ಯದಿಂದ ಸಬ್ಸಿಡಿ ಕೊಡುವ ಯೋಜನೆ ಆರಂಭಿಸಿದರು, ಬಡ ಕುಟುಂಬಗಳಿಗೆ ಆರ್ಥಿಕ ಹೊರೆ ಇಲ್ಲದೆ ಸೌರ ವಿದ್ಯುತ್ ಸಿಗುವಂತೆ ಮಾಡಿದರು.

ಸೈನಿ ಕೆಲಸ ಮಾಡುವುದು ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೂಡ, 'ಜನರ ಕಲ್ಯಾಣಕ್ಕಾಗಿ ಸೈನಿ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ' ಎಂದು ಉಲ್ಲೇಖಿಸಿದ್ದರು.

ಅಗ್ನಿಪಥ್ ಯೋಜನೆಯ ವಿರೋಧವನ್ನು ಎದುರಿಸಲು ಬಿಜೆಪಿ ಹೊಸ ಯೋಜನೆ ಜಾರಿ ಮಾಡಿತು. ಅಗ್ನಿವೀರ್ ಗಳು ಸಶಸ್ತ್ರ ಪಡೆಗಳಲ್ಲಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅವರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ನೀಡಲು ಅಗ್ನಿವೀರ್ ನೀತಿಯನ್ನು ಹರಿಯಾಣ ಸರ್ಕಾರ ಜಾರಿ ಮಾಡಿತು. ಇದು ಕೂಡ ಬಿಜೆಪಿಗೆ ವರದಾನವಾಯಿತು.

ಹರಿಯಾಣದ ಒಟ್ಟಾರೆ ಜನಸಂಖ್ಯೆಯ ಸುಮಾರು 40% ರಷ್ಟಿರುವ ಹಿಂದುಳಿದ ವರ್ಗಕ್ಕೆ ಸೇರಿದ ನಯಾಬ್ ಸಿಂಗ್ ಸೈನಿ, ಜಾಟ್ ಸಮುದಾದ ಹೊರತುಪಡಿಸಿ ಉಳಿದ ಮತಗಳನ್ನು ಕ್ರೋಢೀಕರಿಸುವಲ್ಲಿ ಯಶಸ್ವಿಯಾದರು. ಇದರಿಂದ ಬಿಜೆಪಿ ಮತ್ತೆ ಜನರ ವಿಶ್ವಾಸವನ್ನು ಗಳಿಸಿಕೊಂಡಿತು, ಅದರ ಪರಿಣಾಮವೇ ಮೂರನೇ ಬಾರಿ ಸರ್ಕಾರ ರಚಿಸಲು ಸಜ್ಜಾಗಿದೆ.

Naveen Kumar N Oneindia

source: oneindia.com

Post a Comment

Previous Post Next Post