ಶತಾಯುಷಿ ಶ್ರೀ ಮುನಿಸ್ವಾಮಪ್ಪನವರು 102 ವರ್ಷಗಳ ತುಂಬು ಜೀವನವನ್ನು ಜೀವಿಸಿ ತಮ್ಮ ಕೊನೆ ಉಸಿರಿನಲ್ಲೂ ರಾಮನಾಮವ ಜಪಿಸುತ್ತಾ ಇಂದು ಬೆಳಿಗ್ಗೆ 10:15ಕ್ಕೆ ಸದ್ಗತಿ ಹೊಂದಿದರು (ಈಗಿನ ಕಾಲದ ಬಿಪಿ, ಶುಗರ್ ಅಥವಾ ಇನ್ನಾವುದೇ ಕಾಯಿಲೆಗಳಿಲ್ಲದಿದ್ದು ವಿಶೇಷ).। ಅವರ ವಿಶಿಷ್ಟ, ನಿತ್ಯ ಜೀವನ ಶೈಲಿ ಪರಂಪರೆ ಮುಂದು ವರೆಯಲಿ, ಅದು ದೀಪಾವಳಿ ಪ್ರಖರತೆ ಸಾಕ್ಷೀಯಗಲೀ।। ಮೊಮ್ಮಗ ಮುರಳಿ ಅಜ್ಜನನ್ನು ಬಣ್ಣಿಸಿದ್ದು ಹೀಗೆ। ಓದಿ ಪರಂಪರೆ ಗೌರವಿಸಿ

ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ ।
ಫಲವದೆಂತಹುದೆಂಬ ಶಂಕೆಗೆಡೆಯುಂಟೆ?।।
ಒಳಿತರೊಳೆ ನೀಂ ಬಾಳು ಪರವದೆಂತಿರ್ದೊಡೇಂ।
ಇಳೆಯೆ ಬಾಗಿಲು ಪರಕೆ – ಮಂಕುತಿಮ್ಮ।।

ನಮ್ಮ ತಾತ (ತಾಯಿಯ ತಂದೆ) ಶತಾಯುಷಿ ಶ್ರೀ ಮುನಿಸ್ವಾಮಪ್ಪನವರು 102 ವರ್ಷಗಳ ತುಂಬು ಜೀವನವನ್ನು ಜೀವಿಸಿ ತಮ್ಮ ಕೊನೆ ಉಸಿರಿನಲ್ಲೂ ರಾಮನಾಮವ ಜಪಿಸುತ್ತಾ ಇಂದು ಬೆಳಿಗ್ಗೆ 10:15ಕ್ಕೆ ಸದ್ಗತಿ ಹೊಂದಿದರು (ಈಗಿನ ಕಾಲದ ಬಿಪಿ, ಶುಗರ್ ಅಥವಾ ಇನ್ನಾವುದೇ ಕಾಯಿಲೆಗಳಿಲ್ಲದಿದ್ದು ವಿಶೇಷ).

ನಂದಿ ಬೆಟ್ಟ ರಸ್ತೆಯ ನೀಲೇರಿ ಎಂಬ ಊರಿನಿಂದ ಬೆಂಗಳೂರಿಗೆ ತಮ್ಮ ತಾಯಿ, ತಂಗಿಯೊಡನೆ ಬರಿಗೈನಲ್ಲಿ ಬಂದ ಇವರು ಆರಂಭದ ದಿನಗಳಲ್ಲಿ ಕಲ್ಲು ಒಡೆಯುವ ಕಾಯಕದಿಂದ ಬದುಕಿನ ಜೊತೆಗೆ ವೆಂಕಟ್ಟಮ್ಮನವರನ್ನು ಸಂಗಾತಿಯಾಗಿ ಕಟ್ಟಿಕೊಂಡರು. ನಂತರದ ದಿನಗಳಲ್ಲಿ ರಾಜ ಮಿಲ್‌ನಲ್ಲಿ ಕೆಲಸಕ್ಕೆ ಸೇರಿ ಮನೆಯಂಗಳದಲ್ಲಿ ದನಕರುಗಳನ್ನು ಸಾಕುತ್ತಾ, ಇನ್ನಿತರೆ ಸಣ್ಣಪುಟ್ಟ ಕೈಕೆಲಸಗಳ ಮೂಲಕ ಆರ್ಥಿಕ ಸ್ಥಿರತೆ ಹೊಂದಿದರು. ಪಂಚ ಪುತ್ರಿಯರು ಓರ್ವ ಪುತ್ರನನ್ನು ಕಷ್ಟಕಾಲದಲ್ಲೂ ಸಂಸ್ಕಾರಯುತರಾಗಿ ಬೆಳೆಸಿ‌, ಮಕ್ಕಳಿಗೆ ಒಳ್ಳೆ ಸಂಬಂಧ ಹುಡುಕಿ ಆ ಕಾಲಕ್ಕೆ ವೈಭವದ ಮದುವೆಯ ಮಾಡಿ ಅವರುಗಳ ಭವಿಷ್ಯಕ್ಕೆ ಒಂದು ನೆಲೆಯಾಗುವಂತ ಆಸ್ತಿಯನ್ನು ಮಾಡಿಟ್ಟಿದ್ದು ಅವರ ವೈಯುಕ್ತಿಕ ಸಾಧನೆಯೇ ಸರಿ. ಮಕ್ಕಳು ಮಾತ್ರರಲ್ಲದೆ ಮುಂದಿನ ಮೂರು ಪೀಳಿಗೆಗೂ (14 ಮೊಮ್ಮಗಳು, 12 ಮರಿಮಕ್ಕಳಿಗೂ) ಇವರೊಂದು ಪ್ರೇರಣಾ ಶಕ್ತಿ. ಕೇವಲ ಕುಟುಂಬಕ್ಕಾಗಿ ಮಾತ್ರವಲ್ಲದೆ ಅದೆಷ್ಟೋ ಬಂಧು-ಮಿತ್ರರಿಗೆ ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ತಮ್ಮದೇ ಆದ ಅಥವಾ ಇತರರ ಎಷ್ಟೋ ಕಷ್ಟಗಳ ಕಂಡು ಅದಕೊಳಗಾಗಿದ್ದರೂ, ಎಂದು ದೃತಿಗೆಡದೆ ಎಲ್ಲವನ್ನು ಧೈರ್ಯವಾಗಿ ಎದುರಿಸಿದವರು.

ಬೆಂಗಳೂರಿನ ಮಲ್ಲೇಶ್ವರ, ಲೊಟ್ಟೆಗೊಲ್ಲಹಳ್ಳಿ, ನಾಗಶೆಟ್ಟಿಹಳ್ಳಿಯ ಪ್ರದೇಶಗಳಲ್ಲಿ ಇವರು ಮಾಡಿರುವ ಸಾಮಾಜಿಕ ಕಾರ್ಯಗಳು ಅನೇಕ. ತಮ್ಮ ಸ್ವಂತ ಖರ್ಚಿನಲ್ಲಿ ನೂರಾರು ಬಡಕುಟುಂಬಗಳ ಮದುವೆಗಳನ್ನು ಮಾಡಿರುವುದು, ಅವರ ಹಿರಿತನ ಗೌರವಕ್ಕೆ ತಲೆಬಾಗಿದ ಜನ ನ್ಯಾಯ ಪಂಚಾಯತಿಗಳಿಗೆ ಪ್ರಮುಖರಾಗಿಸುತ್ತಿದ್ದು ಉಲ್ಲೇಖನೀಯ (ಎಷ್ಟು ವ್ಯಾಜ್ಯಗಳು ಇವರಿಂದಾಗಿ ಕೋರ್ಟ್ಗಗಳನ್ನು ಮುಟ್ಟದೇ ಬಗೆ ಹರಿದಿದೆ). ಜನರು ಇವರು ಮಾಡಿರುವ ಕಾರ್ಯಗಳ ನೆನಪಿಸಿಕೊಳ್ಳುವುದನ್ನು ಕೇಳುತ್ತಿದ್ದರೆ ಇವರ ಸತ್ಕಾರ್ಯಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು. ಮಾಡಿರುವ ಒಳ್ಳೆಕೆಲಸಗಳ ಇನ್ನೊಬ್ಬರಿಂದ ಹೊಗಳಿಸಿಕೊಳ್ಳುವುದಲ್ಲ, ಕೇಳಿಸಿಕೊಳ್ಳುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಹಾಗಾಗಿ ಆ ಬಗ್ಗೆ ಇಲ್ಲಿ ಹೆಚ್ಚು ಪ್ರಸ್ತಾಪಿಸದೆ., ನಾ ಪ್ರತ್ಯಕ್ಷ ಕಂಡಿರುವಂತೆ ಅವರರಿಂದ ಅನುಸರಿಸಬಹುದಾದ ಕೆಲವು ವಿಷಯಗಳ ನೆನಪಿಸಿಕೊಳ್ಳುತ್ತ ಅವನ್ನು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. 💐🙏

• ಸಂಸ್ಕಾಯುತ ಸರಳ ಜೀವನ.
• ಮಿತ ಆಹಾರ, ನಿತ್ಯ ವಾಯುವಿಹಾರ.
• ದುಶ್ಚಟ ರಹಿತ ಜೀವನ.
• ಅಹಂಕಾರವಿಲ್ಲ ಆದರೆ ಸ್ವಾಭಿಮಾನಿ.
• ಮಹಿಳೆಯರನ್ನು ಮಾತೃ ಸ್ವರೂಪಿಯಾಗಿ ಕಂಡಿರುವುದು.
• ತಾಳ್ಮೆ.
• ಓದು.
• ಅವಾಚ್ಯ ಶಬ್ದಗಳನ್ನು ಎಂದು‌ ಬಳಸದಿರುವುದು.
• ಪರನಿಂದೆ ಎಂದು ಇಲ್ಲ.
• ವಾರಕ್ಕೊಮ್ಮೆ ಉಪವಾಸ, ರಾಮಕಥಾ ಪಠಣ.
• ಯಾರನ್ನೂ ಎಂದಿಗೂ ಜಾತಿ, ಸಂಪತ್ತು, ಘನತೆಗಳ ದೃಷ್ಟಿಯಿಂದ ಕಂಡವರಲ್ಲ. ವ್ಯಕ್ತಿಗಳ ಒಳಿತು ಕೆಡುಕುಗಳ ಮಾತ್ರ ಪರಿಗಣಿಸುತ್ತಿದ್ದರು.
• ಗಳಿಕೆ - ಉಳಿಕೆ.
• ಎಷ್ಟೇ ಕಷ್ಟ-ನಷ್ಟಗಳಿದ್ದರೂ ಸಂಪಾದನೆಯ ಕೆಲ ಭಾಗ ಇತರರ ಒಳಿತಿಗಾಗಿ/ಸಾಮಾಜಿಕ ಕಾರ್ಯಗಳಿಗಾಗಿ ವಿನಿಯೋಗ.
• ಯಾರೊಡನೆಯ ಅತಿಯಾದ ಸ್ನೇಹವಾಗಲಿ ದ್ವೇಷವಾಗಲಿ ಇಲ್ಲ.
• ಸ್ವ ಅವಲೋಕನ.

Post a Comment

Previous Post Next Post