ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾರದ ಕೆಲಸದ ದಿನಗಳಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಧರಿಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಖಾದಿ ಎನ್ನುವುದು ಕೇವಲ ಬಟ್ಟೆಯಲ್ಲ, ಅದೊಂದು ಜೀವನ ಪದ್ಧತಿ, ಸ್ವಾವಲಂಬಿ ಬದುಕಿನ ರೂಪಕ, ಖಾದಿ ತೊಟ್ಟವರಿಗೆ ಸತ್ಯ ಮತ್ತು ಅಹಿಂಸೆ ಕೂಡ ಒಂದು ವ್ರತ ಎಂದು ಅವರು ಹೇಳಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಅಧಿಕಾರಿಗಳು, ನೌಕರರು, ನಿಗಮ ಮಂಡಳಿಯ ಅಧಿಕಾರಿಗಳು ಹಾಗೂ ನೌಕರರಿಗೆ ಕೆಲಸದ ದಿನಗಳಲ್ಲಿ ವಾರದಲ್ಲಿ ಕಡ್ಡಾಯವಾಗಿ ಒಂದು ದಿನ ಖಾದಿ ಬಟ್ಟೆಗಳನ್ನು ಧರಿಸಬೇಕೆನ್ನುವ ಆದೇಶವನ್ನು ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿ ಸೇರಿದಂತೆ ಎಲ್ಲಾ ಇಲಾಖೆಯಲ್ಲಿ ಕೆಲಸ ಮಾಡುವವರು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸಬೇಕು ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದಿರುವ ಸಂತೋಷ್ ಲಾಡ್ ಅವರು, 1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಡಿಸೆಂಬರ್ 26 ಮತ್ತು 27ಕ್ಕೆ ಬೆಳಗಾವಿಯಲ್ಲಿ ಎರಡು ದಿನಗಳ ಕಾರ್ಯಕ್ರಮ ನಡೆಯಲಿದೆ.
1924ರಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣದ ಮೊದಲ ಧ್ವನಿ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡಿನ ಮೂಲಕ ಬಲವಾಗಿ ಪ್ರತಿಪಾದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಈ ಸಮಾವೇಶ ಕನ್ನಡಿಗರ ಪಾಲಿಗೆ ಮಹತ್ವದ್ದಾಗಿದೆ. ಈ ಶತಮಾನೋತ್ಸವ ಅಂಗವಾಗಿ ವರ್ಷವಿಡೀ 'ಗಾಂಧೀ ಭಾರತ' ಹೆಸರಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ.
ಮಹಾತ್ಮ ಗಾಂಧೀಜಿಯವರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಹಾಗೂ ಸ್ವದೇಶಿ ಚಳವಳಿಯಲ್ಲಿ ಖಾದಿ ತಯಾರಿಕೆ ಮತ್ತು ಉಪಯೋಗಿಸುವುದು ಪ್ರಬಲ ಅಸ್ತ್ರವಾಗಿತ್ತು ಎಂದು ಸಂತೋಷ್ ಲಾಡ್ ಅವರು ಹೇಳಿದ್ದಾರೆ.
ಮುಂದುವರಿದು ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಬಗ್ಗೆ ದೊಡ್ಡ ಕನಸು ಕಂಡಿದ್ದರು. ಖಾದಿಯೊಂದಿಗೆ ಗಾಂಧೀಜಿ ಅವರ ಆದರ್ಶ ಹಾಗೂ ಸ್ವಾತಂತ್ರ್ಯ ಚಳುವಳಿಯ ನೆನಪುಗಳು ಎಲ್ಲೂ ಕಾಲದಲ್ಲೂ ಅಗತ್ಯ ನೈತಿಕತೆಯನ್ನು ಸೂಚಿಸುತ್ತವೆ. ಖಾದಿ ನೈಸರ್ಗಿಕ ವಸ್ತು ಬಳಸಿ ನಿರ್ಮಿಸುವುದರಿಂದ ಜನರ ಶಕ್ತಿ, ಪರಿಶ್ರಮ ಆಧರಿಸಿದ್ದರಿಂದ ಖಾದಿಗೆ ಗಾಂಧೀಜಿಯವರು ವಿಶೇಷ ಒತ್ತು ನೀಡಿದ್ದರು. ಮಹಾತ್ಮ ಗಾಂಧೀಜಿಯವರ ನೆನಪುಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದರ ಭಾಗವಾಗಿ ರಾಜ್ಯದ ಸರ್ಕಾರಿ ಅಧಿಕಾರಿ ನೌಕರರು,ನಿಗಮ ಮಂಡಳಿಯ ಅಧಿಕಾರಿಗಳು, ನೌಕರರು ಕೆಲಸದ ದಿನಗಳಲ್ಲಿ ವಾರದಲ್ಲಿ ಕಡ್ಡಾಯವಾಗಿ ಒಂದು ದಿನ ಖಾದಿ ಬಟ್ಟೆಗಳನ್ನು ಧರಿಸಬೇಕೆಂಬ ಆದೇಶವನ್ನು ಹೊರಡಿಸಿದರೆ, ಮಹಾತ್ಮ ಗಾಂಧೀಜಿಯವರ ಕನಸು ನನಸಾಗುತ್ತದೆ. 'ಖಾದಿ ಎಂಬುದು ಕೇವಲ ಬಟ್ಟೆಯಲ್ಲ. ಅದೊಂದು ಜೀವನ ಪದ್ಧತಿ. ಸ್ವಾವಲಂಬಿ ಬದುಕಿನ ರೂಪಕ, ಖಾದಿ ತೊಟ್ಟವರಿಗೆ ಸತ್ಯ ಮತ್ತು ಅಹಿಂಸೆ ಕೂಡ ಒಂದು ವ್ರತ' ಎನ್ನುವ ಹಿರಿಯರು ಹೇಳುತ್ತಾರೆ.
ಅದರಂತೆ, ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಹಾಗೂ ರಾಷ್ಟ್ರಪಿತ ಗಾಂಧೀಜಿಯವರ ಸ್ಮರಣೆಯು ಚಿರಕಾಲ ಇರಲು ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರು/ನಿಗಮ ಮಂಡಳಿಯ ಅಧಿಕಾರಿಗಳು/ ನೌಕರರಿಗೆ ಕೆಲಸದ ದಿನಗಳಲ್ಲಿ ವಾರದಲ್ಲಿ ಕಡ್ಡಾಯವಾಗಿ ಒಂದು ದಿನ ಖಾದಿ ಬಟ್ಟೆಗಳನ್ನು ಧರಿಸಬೇಕೆನ್ನುವ ಆದೇಶವನ್ನು ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅವರು ಮನವಿ ಮಾಡಿದ್ದಾರೆ.
Hitesh Y Oneindiasource: oneindia.com
Post a Comment