ವಿಪಕ್ಷಗಳ ಕೂಗು ಹತ್ತಿಕ್ಕುವ ಸರಕಾರದಿಂದ ಸಂವಿಧಾನದ ಬಗ್ಗೆ ಭಾಷಣ
ಜನಪ್ರತಿನಿಧಿಗಳ ಕಥೆ ಹೀಗಾದರೆ ಜನಸಾಮಾನ್ಯರ
ಪರಿಸ್ಥಿತಿ ಏನು- ವಿಜಯೇಂದ್ರ ಪ್ರಶ್ನೆ
ಶಿವಮೊಗ್ಗ: ಜನಪ್ರತಿನಿಧಿಗಳ ಕಥೆ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಶಿವಮೊಗ್ಗದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ಆ ರೀತಿಯ ಮಾತನ್ನು ಹೇಳಿಲ್ಲವೆಂದು ಸಭಾಪತಿ ಹೊರಟ್ಟಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಈ ವಿಚಾರ ಅಲ್ಲಿಗೇ ಮುಗಿಯಬೇಕಿತ್ತು ಎಂದು ತಿಳಿಸಿದರು. ದೂರು ನೀಡಿದರು; ಅದರ ಬಳಿಕ ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸಿದರು. ಪೊಲೀಸರ ಅತಿರೇಕದ ವರ್ತನೆ ನಡೆದಿದೆ ಎಂದು ಆಕ್ಷೇಪಿಸಿದರು.
ಪೊಲೀಸರು ನೋಟಿಸ್ ಕೊಡದೆ ಎಫ್‍ಐಆರ್ ದಾಖಲಿಸಿದ್ದು ಸರಿಯಲ್ಲ ಎಂದು ರಾಜ್ಯ ಹೈಕೋರ್ಟ್ ತಿಳಿಸಿದೆ. ಸಭಾಪತಿಗಳು ಮತ್ತೊಮ್ಮೆ ಇವತ್ತು ಹೇಳಿಕೆ ಕೊಟ್ಟಿದ್ದು, ಸಿ.ಟಿ.ರವಿ ಅವರು ಅಂಥ ಹೇಳಿಕೆ ಕೊಟ್ಟಿಲ್ಲ ಎಂದಿದ್ದಾರೆ. ಸದನದ ಒಳಗಡೆ ಸಭಾಧ್ಯಕ್ಷರ ತೀರ್ಮಾನವೇ ಅಂತಿಮ ಎಂದು ವಿಶ್ಲೇಷಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಗಾಗ ದೂರವಾಣಿ ಕರೆ ಬರುತ್ತಿತ್ತು. ಅವರ ನಿರ್ದೇಶನದಂತೆ ಸಿ.ಟಿ.ರವಿ ಅವರನ್ನು ಕರೆದೊಯ್ಯುತ್ತಿದ್ದರು. ಹಾಗಾಗಿ ಆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಯಾವ ಅಧಿಕಾರಿ ಫೋನ್ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಆ ಅಧಿಕಾರಿಗಳಿಗೆ ಯಾವ ಸಚಿವರ ಒತ್ತಡ ಇತ್ತು? ಗೃಹ ಸಚಿವರು ಫೋನ್ ಮಾಡಿದರೇ? ಮುಖ್ಯಮಂತ್ರಿಗಳು ಫೋನ್ ಮಾಡಿದ್ದರೇ ಎಂದು ಕೇಳಿದರು. ಇವೆಲ್ಲವೂ ತನಿಖೆ ಆಗಲೇಬೇಕಾಗುತ್ತದೆ ಎಂದು ನುಡಿದರು.
ಸಿ.ಟಿ.ರವಿ ಅವರ ಮೇಲಾದುದು ನಾಳೆ ಇನ್ನೊಬ್ಬರ ಮೇಲೂ ಆಗುತ್ತದೆ. ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿಗಳಾದಿಯಾಗಿ ಇವರ್ಯಾರೂ ಟೀಕೆಗಳನ್ನು ಸಹಿಸುತ್ತಿಲ್ಲ; ಆನೆ ನಡೆದಿದ್ದೇ ದಾರಿ ಎಂಬಂತಾಗಿದೆ. ಬಾಣಂತಿಯರ ಸಾವಿನ ಬಗ್ಗೆ ಯಾರು ಚರ್ಚೆ ಮಾಡುತ್ತಿದ್ದಾರೆ ಎಂದು ಕೇಳಿದರು. ಬೇಜವಾಬ್ದಾರಿ ಸರಕಾರ ರಾಜ್ಯದಲ್ಲಿದ್ದು, ಸಮರ್ಪಕ ಹೇಳಿಕೆಯನ್ನೂ ಕೊಟ್ಟಿಲ್ಲ ಎಂದು ಟೀಕಿಸಿದರು. ಆ ಕುಟುಂಬಗಳ ನೆರವಿಗೂ ಧಾವಿಸಿಲ್ಲ ಎಂದು ದೂರಿದರು.
ಖುಷಿ ಬಂದಂತೆ ಸರಕಾರ ನಡೆಸುತ್ತಿರುವ ಧಾಟಿ ಇವರದು. ಖಂಡಿತ ಇದು ಸರಿಯಲ್ಲ; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ವಿಪಕ್ಷಕ್ಕೂ ಇದೆ. ವಿಪಕ್ಷಗಳ ಕೂಗು ಹತ್ತಿಕ್ಕುವುದು, ಜನರ ಪರವಾಗಿ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಸರಕಾರ, ಆಡಳಿತ ಪಕ್ಷದವರು ಸಂವಿಧಾನದ ಬಗ್ಗೆ ಭಾಷಣ ಬಿಗಿಯುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಫ್‍ಎಸ್‍ಎಲ್ ವರದಿ ಬಂದೇ ಇಲ್ಲ; ಅಷ್ಟರೊಳಗೆ ಕ್ಷಮೆ ಕೇಳಲು ಆತುರವೇಕೆ? ಸಿ.ಟಿ.ರವಿ ಮತ್ತು ಸಭಾಪತಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ತನಿಖೆ ನಡೆದು ವರದಿ ಬರಲಿ ಎಂದು ಅವರು ತಿಳಿಸಿದರು. ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ವಾಹನದಲ್ಲಿ ತಿರುಗಾಡಿಸಿದ್ದಾರೆ. ಅವರೇನು ಉಗ್ರಗಾಮಿಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಸಿ.ಟಿ.ರವಿಯವರಿಗೆ ಯಾಕೆ ನೀವು ಈ ಥರ ಚಿತ್ರಹಿಂಸೆ ಕೊಟ್ಟಿದ್ದೀರಿ
ಕಾಂಗ್ರೆಸ್ಸಿನವರು ಬಿಡುಗಡೆ ಮಾಡಿದ ವಿಡಿಯೋಕ್ಕೆ
ಯಾವುದೇ ಆಧಾರ, ಬೆಲೆ ಇಲ್ಲ- ಎನ್.ರವಿಕುಮಾರ್
ಬೆಂಗಳೂರು: ಕಾಂಗ್ರೆಸ್ಸಿನವರು ಬಿಡುಗಡೆ ಮಾಡಿದ ವಿಡಿಯೋಕ್ಕೆ ಯಾವುದೇ ಬೆಲೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಧಾನಪರಿಷತ್ತಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಆ ರೀತಿಯ ವಿಡಿಯೋ ದಾಖಲೆ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಬೈದಿರುವ ಅಥವಾ ಅಂಥ ಮಾತನಾಡಿದ ವಿಡಿಯೋ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇವರು ಬಿಡುಗಡೆ ಮಾಡುವ ವಿಡಿಯೋಗೆ ಯಾವುದೇ ಆಧಾರ ಇಲ್ಲ; ಬೆಲೆಯೂ ಇಲ್ಲ ಎಂದು ತಿಳಿಸಿದರು.
ಬಸವರಾಜ ಹೊರಟ್ಟಿ ಅವರು ಹೇಳಿದ್ದಕ್ಕೆ ಮಾತ್ರ ಬೆಲೆ ಇದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಹೈಕೋರ್ಟ್ ಕೂಡಲೇ ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡಲು ಹೇಳಿರುವುದರಲ್ಲಿ ನಮಗೆ ಅರ್ಧ ಜಯ ಲಭಿಸಿದೆ ಎಂದು ತಿಳಿಸಿದರು.
ಸಿ.ಟಿ.ರವಿ ಅವರನ್ನು ಇಷ್ಟೆಲ್ಲ ಓಡಾಡಿಸಿದ್ದು ಯಾಕೆ? ಕಾಡಿನಲ್ಲಿ, ಕಬ್ಬಿನ ಗದ್ದೆಯಲ್ಲಿ, ಧಾರವಾಡ, ಗದಗ, ಚಿಕ್ಕೋಡಿ ಜಿಲ್ಲೆ, ಬಾಗಲಕೋಟೆ ಜಿಲ್ಲೆ ಗಡಿ ಭಾಗ, ಈ ಥರ ನಾಲ್ಕೈದು ಜಿಲ್ಲೆಗಳಲ್ಲಿ ಕರೆದುಕೊಂಡು ಹೋಗಿ ರಾತ್ರಿಯೆಲ್ಲ ಊಟ, ನೀರು ನೀಡದೆ, ನಿದ್ರೆ ಇಲ್ಲದಂತೆ ಅತ್ಯಂತ ವಿಚಿತ್ರ ಹಿಂಸೆ ಕೊಟ್ಟಿದ್ದಾರೆ. ತಲೆಗೆ ಪೆಟ್ಟಾದರೂ ಚಿಕಿತ್ಸೆ ನೀಡಿಲ್ಲ. ಯಾಕೆ ನೀವು ಈ ಥರ ಚಿತ್ರಹಿಂಸೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡಲು ನೂರಾರು ಜನರು ಸುವರ್ಣಸೌಧದ ಒಳಗೆ ಹೇಗೆ ಬಂದರು ಎಂದು ಕೇಳಿದರು. ಒಳಗಡೆ ಬರಲು ಕಾರಣ ಯಾರು ಎಂದು ಪ್ರಶ್ನೆಯನ್ನೂ ಮುಂದಿಟ್ಟರು. ಯಾರ ಪತ್ರದೊಂದಿಗೆ ಒಳಗಡೆ ಬಂದಿದ್ದಾರೆ ಎಂದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment